‘ಬಿಜೆಪಿ ಸರ್ಕಾರದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ’

ಶ್ರೀರಂಗಪಟ್ಟಣ: ‘ಜನರು ಕೊರೊನಾ ವೈರಸ್‌ನಿಂದ ನಲುಗುತ್ತಿರುವ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಜನರ ಸಂಕಷ್ಟಕ್ಕೆ ಸ್ಪಂದಿಸದೆ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳುಗಿದೆ’ ಎಂದು ಕಾಂಗ್ರೆಸ್ ಮುಖಂಡ ರಮೇಶ ಬಂಡಿಸಿದ್ದೇಗೌಡ ವಾಗ್ದಾಳಿ ನಡೆಸಿದರು.
ಪಟ್ಟಣದ ಸುಬ್ರಹ್ಮಣ್ಯಸ್ವಾಮಿ ಕಲ್ಯಾಣ ಮಂಟಪದಲ್ಲಿ ಬುಧವಾರ ಬ್ಲಾಕ್ ಕಾಂಗ್ರೆಸ್ ಸಮಿತಿ ಬುಧವಾರ ಏರ್ಪಡಿಸಿದ್ದ ‘ಆರೋಗ್ಯ ಹಸ್ತ’ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
‘ಕೋವಿಡ್ ನಿಯಂತ್ರಣ ಪರಿಕರ ಖರೀದಿಯಲ್ಲಿ ಸರ್ಕಾರ ದೊಡ್ಡಮಟ್ಟದ ಭ್ರಷ್ಟಾಚಾರ ನಡೆಸಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ದಾಖಲೆ ಸಹಿತ ಹೇಳಿದ್ದಾರೆ. ಆದರೆ, ಮುಖ್ಯಮಂತ್ರಿ ಮತ್ತು ಸಚಿವ ಸಂಪುಟದ ಸದಸ್ಯರು ಆರೋಪಕ್ಕೆ ಉತ್ತರಿಸಲಾಗದೆ ಪಲಾಯನವಾದ ಅನುಸರಿಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ವರ್ಗಾವಣೆ, ಕಾಮಗಾರಿಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಬೊಕ್ಕಸದ ಹಣ ಲೂಟಿಯಾಗುತ್ತಿದೆ’ ಎಂದು ಟೀಕಿಸಿದರು.
‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅನಿವಾರ್ಯತೆ ಬಗ್ಗೆ ಚರ್ಚೆ ನಡೆಯುತ್ತಿದೆ. ದಿನದಿಂದ ದಿನಕ್ಕೆ ಪಕ್ಷದ ವರ್ಚಸ್ಸು ಹೆಚ್ಚುತ್ತಿದೆ. ಜಿಲ್ಲೆಯಲ್ಲಿ ಕೂಡ ಕಾಂಗ್ರೆಸ್ ಗಟ್ಟಿಯಾಗುತ್ತಿದೆ. ಪಕ್ಷದ ಕಾರ್ಯಕರ್ತರು ಜನರಿಗೆ ಹತ್ತಿರವಾಗಿ ಕೆಲಸ ಮಾಡಬೇಕು. ಕೊರೊನಾ ಸೋಂಕಿನಿಂದ ದೂರ ಇರುವಂತೆ ಅರಿವು ಮೂಡಿಸಬೇಕು’ ಎಂದು ಸಲಹೆ ನೀಡಿದರು.
ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿ ಎಚ್.ಆರ್. ಭಾಸ್ಕರ್, ಮಾಧ್ಯಮ ವಿಭಾಗದ ಜಿಲ್ಲಾ ಸಂಚಾಲಕ ಡಾ.ಎಂ. ಪುಟ್ಟೇಗೌಡ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್. ಪ್ರಕಾಶ್, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿತ್ರ ರಮೇಶ್ ಮಾತನಾಡಿದರು.
ಡಾ.ದೀಪ್ತಿ ಭಾವ ಅವರು ಕೊರೊನಾ ವೈಸರ್ ತಡೆಗೆ ಮುನ್ನೆಚ್ಚರಿಕೆ ಕ್ರಮಗಳ ಕುರಿತು ತರಬೇತಿ ನೀಡಿದರು.
ಕೆಪಿಸಿಸಿ ಸದಸ್ಯರಾದ ಎನ್. ಗಂಗಾಧರ್, ನಾಗರಾಜು, ಮಾಜಿ ಸದಸ್ಯ ಮರಳಾಗಾಲ ಭಾಸ್ಕರ್, ಪಕ್ಷದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸುಂಡಹಳ್ಳಿ ಮಂಜುನಾಥ್, ಯುವ ಘಟಕದ ಅಧ್ಯಕ್ಷ ಗುಣವಂತ, ಮುಖಂಡರಾದ ಮೇಳಾಪುರ ಶ್ರೀನಿವಾಸ್, ಸುದರ್ಶನ್, ರಾಮಸ್ವಾಮಿ, ಎಂ.ಎಲ್. ದಿನೇಶ್, ದಯಾನಂದ್ ಇತರರು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.