ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಕಾಂಗ್ರೆಸ್‌ನತ್ತ ನಾರಾಯಣಗೌಡ ಬೆಂಬಲಿಗರು?

ಮೈತ್ರಿಗೆ ಅಸಮಾಧಾನ, ಬಿಜೆಪಿ ಜಿಲ್ಲಾಧ್ಯಕ್ಷರ ವರ್ತನೆಗೆ ಮುಖಂಡರ ಆಕ್ರೋಶ
Published 25 ಮಾರ್ಚ್ 2024, 6:34 IST
Last Updated 25 ಮಾರ್ಚ್ 2024, 6:34 IST
ಅಕ್ಷರ ಗಾತ್ರ

ಮಂಡ್ಯ: ಜೆಡಿಎಸ್‌– ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಎಚ್‌.ಡಿ.ಕುಮಾರಸ್ವಾಮಿ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿರುವಾಗಲೇ ಬಿಜೆಪಿ ಮುಖಂಡ ಕೆ.ಸಿ.ನಾರಾಯಣಗೌಡರ ಬೆಂಬಲಿಗರು ಪಕ್ಷ ತ್ಯಜಿಸಿ ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ ಎಂಬ ವಿಷಯ ಕುತೂಹಲ ಮೂಡಿಸಿದೆ.

ಜೆಡಿಎಸ್‌ ತ್ಯಜಿಸಿ ಬಿಜೆಪಿ ಸೇರಿದ್ದ ಕೆ.ಸಿ.ನಾರಾಯಣಗೌಡರು ಜಿಲ್ಲೆಯಲ್ಲಿ ಮೊದಲ ಬಾರಿಗೆ ಕಮಲ ಅರಳಿಸಿದ್ದರು. ಕೆ.ಆರ್‌.ಪೇಟೆ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಇತಿಹಾಸ ನಿರ್ಮಾಣ ಮಾಡಿದ್ದರು. ಆ ಮೂಲಕ ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನವನ್ನೂ ಅಲಂಕರಿಸಿದ್ದರು. ಜೆಡಿಎಸ್‌ ಜೊತೆಗಿನ ಮೈತ್ರಿಯನ್ನು ಆರಂಭದಿಂದಲೂ ವಿರೋಧಿಸಿದ್ದ ನಾರಾಯಣಗೌಡರು ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡದಂತೆ ಒತ್ತಾಯಿಸಿದ್ದರು.

ತಮಗೆ ಅಥವಾ ಸಂಸದೆ ಸುಮಲತಾ ಅವರಿಗೆ ಬಿಜೆಪಿ ಟಿಕೆಟ್‌ ನೀಡಬೇಕು ಎಂದು ಅವರು ಒತ್ತಾಯಿಸಿದ್ದರು. ಆದರೆ, ಮಾತಿಗೆ ಮನ್ನಣೆ ಸಿಗದ ಕಾರಣ ಅವರು ಮೌನಕ್ಕೆ ಶರಣಾಗಿದ್ದರು. ನಾರಾಯಣಗೌಡರ ಜೊತೆಯಲ್ಲಿ ಬಿಜೆಪಿಗೆ ಬಂದಿದ್ದ ಮುಖಂಡರು ಹಾಗೂ ಕಾರ್ಯಕರ್ತರನ್ನು ಪಕ್ಷದ ನಾಯಕರು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂಬ ಆರೋಪ ಕೇಳಿಬಂದಿದ್ದು ಅವರೆಲ್ಲರೂ ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ನೇತೃತ್ವದಲ್ಲಿ ಕಾಂಗ್ರೆಸ್‌ ಮುಖಂಡರು ಜಿಲ್ಲೆಯಾದ್ಯಂತ ಜೆಡಿಎಸ್‌ ಹಾಗೂ ಬಿಜೆಪಿ ಎರಡೂ ಪಕ್ಷಗಳ ಮುಖಂಡರನ್ನು ಸೆಳೆಯುತ್ತಿದ್ದಾರೆ. ನಾರಾಯಣಗೌಡರ ಬೆಂಬಲಿಗರನ್ನೂ ಕಾಂಗ್ರೆಸ್‌ ನಾಯಕರು ಸಂಪರ್ಕಿಸಿದ್ದು ಶೀಘ್ರದಲ್ಲಿ ಅವರೆಲ್ಲರೂ ಕಾಂಗ್ರೆಸ್‌ ಪಕ್ಷ ಸೇರುವುದು ಖಚಿತ ಎಂದೇ ಹೇಳಲಾಗುತ್ತಿದೆ.

‘ನಾರಾಯಣಗೌಡ ಮಾತ್ರವಲ್ಲದೇ ಜೆಡಿಎಸ್‌ ತ್ಯಜಿಸಿ ಬಿಜೆಪಿಗೆ ಸೇರಿದ್ದ ಮುಖಂಡರೆಲ್ಲರೂ ಮೈತ್ರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಮುಖಂಡರ ಜೊತೆ ಚರ್ಚೆ ಮಾಡದೇ ಕ್ಷೇತ್ರ ಬಿಟ್ಟು ಕೊಡುವ ನಿರ್ಣಯ ಕೈಗೊಳ್ಳಲಾಗಿದೆ. ಕುಮಾರಸ್ವಾಮಿ ಅಭ್ಯರ್ಥಿಯಾದರೆ ಜೆಡಿಎಸ್‌ನಿಂದ ಬಂದವರೆಲ್ಲರೂ ಕಾಂಗ್ರೆಸ್‌ ಸೇರ್ಪಡೆಯಾಗುತ್ತಾರೆ’ ಎಂದು ನಾರಾಯಣಗೌಡ ಬೆಂಬಲಿಗರೊಬ್ಬರು ತಿಳಿಸಿದರು.

ಜಿಲ್ಲಾಧ್ಯಕ್ಷರ ವಿರುದ್ಧ ಆಕ್ರೋಶ: ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಇಂದ್ರೇಶ್‌ ವಿರುದ್ಧ ಪಕ್ಷದ ಮುಖಂಡರು, ಕಾರ್ಯಕರ್ತರಲ್ಲೇ ಅಸಮಾಧಾನವಿದ್ದು ಇದು ಕೂಡ ಕೆಲ ಮುಖಂಡರು ಕಾಂಗ್ರೆಸ್‌ನತ್ತ ಮುಖ ಮಾಡಲು ಕಾರಣವಾಗಿದೆ. ಈಚೆಗೆ ಪುನರ್‌ ರಚನೆಯಾದ ವಿವಿಧ ಮೋರ್ಚಾಗಳ ರಚನೆಯಲ್ಲಿ ನಾರಾಯಣಗೌಡರ ಬೆಂಬಲಿಗರಿಗೆ ಅವಕಾಶ ನೀಡಿಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ.

ಮುಖಂಡರನ್ನು ವಿಶ್ವಾಸಕ್ಕೆ ಪಡೆಯದೇ ಮೋರ್ಚಾಗಳ ಆಯ್ಕೆ ನಡೆದಿದೆ. ಪಕ್ಷಕ್ಕೆ ದುಡಿಯುತ್ತಿರುವ ಮುಖಂಡರನ್ನು ನಿರ್ಲಕ್ಷ್ಯ ಮಾಡಿ ಬೇಕಾದವರಿಗೆ ಸ್ಥಾನ ನೀಡಲಾಗಿದೆ. ಅಧ್ಯಕ್ಷರ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು ಅದು ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರುತ್ತದೆ ಎಂದು ಕೆಲ ಕಾರ್ಯಕರ್ತರು ಆರೋಪಿಸಿದ್ದಾರೆ.

‘ಚುನಾವಣೆ ಸಮೀಪಿಸುತ್ತಿದ್ದರೂ ಜಿಲ್ಲಾ ಘಟಕದ ಅಧ್ಯಕ್ಷಕರು ಇಲ್ಲಿಯವರೆಗೂ ಸರಿಯಾಗಿ ಸಭೆ ನಡೆಸಿಲ್ಲ. ಮೂಲ ಹಾಗೂ ವಲಸಿಗ ಬಿಜೆಪಿಗರು ಎಂಬ ತಾರತಮ್ಯ ಮಾಡುತ್ತಿದ್ದಾರೆ. ಜೆಡಿಎಸ್‌ ಮುಖಂಡರ ಜೊತೆ ಸಮನ್ವಯ ಸಾಧಿಸುವ ಯಾವುದೇ ಸಭೆಗಳು ನಡೆದಿಲ್ಲ. ಚುನಾವಣೆಗೆ ಸಿದ್ಧತೆಗಳನ್ನೇ ಮಾಡಿಕೊಂಡಿಲ್ಲ’ ಎಂದು ಬಿಜೆಪಿ ಕಾರ್ಯಕರ್ತರೊಬ್ಬರು ಆರೋಪಿಸಿದರು. ಡಾ.ಇಂದ್ರೇಶ್‌ ಪ್ರತಿಕ್ರಿಯೆಗೆ ಪ್ರಯತ್ನಿಸಿದಾಗ ಅವರು ಪೋನ್‌ ಕರೆ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT