ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸರತ್ತಿನ ನಂತರ BJP-JDS ಅಭ್ಯರ್ಥಿ ಘೋಷಣೆ: ಸಚಿವ ಚಲುವರಾಯಸ್ವಾಮಿ ವ್ಯಂಗ್ಯ

Published 26 ಮಾರ್ಚ್ 2024, 15:58 IST
Last Updated 26 ಮಾರ್ಚ್ 2024, 15:58 IST
ಅಕ್ಷರ ಗಾತ್ರ

ಮಂಡ್ಯ: ‘ಬಿಜೆಪಿ ಮತ್ತು ಜೆಡಿಎಸ್‌ ಮುಖಂಡರು ಒಂದು ತಿಂಗಳಿಂದ ಅಳೆದು ತೂಗಿ ಅಂತಿಮವಾಗಿ ಹೆಸರು ಘೋಷಣೆ ಮಾಡಿದ್ದಾರೆ. ಮೈತ್ರಿ ಅಭ್ಯರ್ಥಿ ಘೋಷಣೆಗೆ ಇಷ್ಟು ದಿನ ಬೇಕಿತ್ತಾ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಪ್ರಶ್ನಿಸಿದರು.

ನಗರದ ಸಿಲ್ವರ್ ಜ್ಯೂಬಿಲಿ ಉದ್ಯಾನದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಇಷ್ಟು ದಿನ ಸಿ.ಎಸ್‌.ಪುಟ್ಟರಾಜು ಅವರೇ ಅಭ್ಯರ್ಥಿ ಎಂದು ಹೇಳಲಾಗುತ್ತಿತ್ತು. ಆದರೆ ಈಗ ಅಭ್ಯರ್ಥಿ ಬದಲಾವಣೆ ಮಾಡಲಾಗಿದೆ. ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳ ನಂತರ ಮಂಡ್ಯಕ್ಕೆ ಬರುತ್ತಿದ್ದಾರೆ. ನಾವು ಜಿಲ್ಲೆಯ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇವೆ. ನೀವು ನಮ್ಮ ಜಿಲ್ಲೆಗೆ ಬರುವುದು ಬೇಡ’ ಎಂದು ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಪರೋಕ್ಷವಾಗಿ ಟೀಕಿಸಿದರು.

‘ಕುಮಾರಸ್ವಾಮಿ ಅವರು ಹೋದ ಕಡೆಯೆಲ್ಲಾ ಅದೇ ನನ್ನ ಕರ್ಮಭೂಮಿ ಎಂದು ಹೇಳುತ್ತಾರೆ. ಮಂಡ್ಯ, ಹಾಸನ, ಕೋಲಾರ ಮೂರು ಆದರೆ ಪರವಾಗಿಲ್ಲ, ಚಿಕ್ಕಬಳ್ಳಾಪುರಕ್ಕೂ, ತುಮಕೂರಿಗೂ ಹೋಗಿ ಬಂದಿದ್ದಾರೆ, ಒಂದು ತಿಂಗಳಿನಿಂದ ಅಳೆದು ತೂಗಿ ಹೆಸರು ಘೋಷಣೆ ಮಾಡುತ್ತಿದ್ದಾರೆ. ಯಾರೇ ಅಭ್ಯರ್ಥಿಯಾದರೂ ನಮ್ಮ ನಿಲುವು ಸ್ಪಷ್ಟವಾಗಿದ್ದು ನಮ್ಮ ಪರ ಜಿಲ್ಲೆಯಾದ್ಯಂತ ಅಪಾರ ಬೆಂಬಲ ವ್ಯಕ್ತವಾಗುತ್ತಿದೆ’ ಎಂದರು.

‘ಎಚ್.ಡಿ.ದೇವೇಗೌಡ ಅವರನ್ನು ಕಾಂಗ್ರೆಸ್ ಪ್ರಧಾನಮಂತ್ರಿ ಮಾಡಿದಾಗ ಅವರು ಧನ್ಯವಾದ ಹೇಳಲಿಲ್ಲ. ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದಾಗಲೂ ಧನ್ಯವಾದ ಹೇಳಲಿಲ್ಲ. ನೀವು ಅವರಿಗೆ ಬುದ್ಧಿ ಕಲಿಸಲಿಲ್ಲ, ನಾವು ಬುದ್ಧಿ ಕಲಿಸುತ್ತೇವೆ ಅಂತ ಬಿಜೆಪಿ ಅವರು ಹೇಳುತ್ತಿದ್ದಾರೆ. ಜಿಲ್ಲೆಯ ಅಭಿವೃದ್ಧಿ, ರೈತರ ಪ್ರಗತಿಗಾಗಿ ರೈತ ಕುಟುಂಬದಿಂದ ಬಂದ ವೆಂಕಟರಮಣೇಗೌಡ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದೇವೆ’ ಎಂದರು.

ಶಾಸಕ ಗಣಿಗ ರವಿಕುಮಾರ್‌ ಮಾತನಾಡಿ ‘ಸ್ಟಾರ್‌ ಚಂದ್ರು ಅವರು ಈಗಾಗಲೇ ಕ್ಷೇತ್ರದಾದ್ಯಂತ ಪ್ರವಾಸ ಮಾಡಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಜನರು ಅವರ ಪರವಾಗಿ ಪ್ರೀತಿ ತೋರಿಸುತ್ತಿದ್ದು ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷ ಜಯಭೇರಿ ಬಾರಿಸಲಿದೆ. ಕಾಂಗ್ರೆಸ್‌ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳಿಂದ ಉತ್ತಮ ಫಲಿತಾಂಶ ಬರಲಿದೆ’ ಎಂದು ಹೇಳಿದರು.

‘ಮಂಡ್ಯ ನಗರದ ಅಭಿವೃದ್ಧಿಗಾಗಿ ಈ ಬಾರಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗೆ ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸವಿದೆ. ನಗರವನ್ನು ಹೈಟೆಕ್‌ ಮಾಡುವುದು ನನ್ನ ಮೊದಲ ಆದ್ಯತೆಯಾಗಿದ್ದು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರ ಬೆಂಬಲದಿಂದ ಜಿಲ್ಲೆ ಅಭಿವೃದ್ಧಿಯಾಗುತ್ತಿದೆ’ ಎಂದರು.

ಇದೇ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಹೊಸಬೂದನೂರು ಬಿ.ಎನ್.ರಘು, ಬೆಂಬಲಿಗರಾದ ಶಿವಲಿಂಗು, ರಾಮರಾಜು, ಅರುಣ್, ವಿದೀಪ, ಲೋಕೇಶ್, ಜಗದೀಶ್, ಬೂದನೂರು ಗ್ರಾಪಂ ಸದಸ್ಯೆ ಶಿಲ್ಪಾ, ನಗರಸಭೆ ಮಾಜಿ ಸದಸ್ಯರಾದ ಆಯಿಷಾ ತಬಸಂ, ಶಿವಪ್ರಕಾಶ್ ಬಾಬು ಜೆಡಿಎಸ್‌ ಮತ್ತು ಬಿಜೆಪಿ ಮುಖಂಡರು ಕಾಂಗ್ರೆಸ್ ಸೇರ್ಪಡೆಯಾದರು.

ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ(ಸ್ಟಾರ್ ಚಂದ್ರು), ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ಕೆ.ಎಂ.ಉದಯ್, ದಿನೇಶ್ ಗೂಳಿಗೌಡ, ಮರಿತಿಬ್ಬೇಗೌಡ, ಮುಖಂಡರಾದ ಎಂ.ಎಸ್.ಆತ್ಮಾನಂದ, ಬಿ.ಎಸ್‌.ಶಿವಣ್ಣ, ಸಿ.ಡಿ.ಗಂಗಾಧರ, ಎಂ.ಎಸ್.ಚಿದಂಬರ್‌, ಸಿ.ತ್ಯಾಗರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT