ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗಮಂಗಲ: ಎಲ್‌ಆರ್‌ಎಸ್‌ಗೆ ಬಿಜೆಪಿ ಟಿಕೆಟ್‌?

ಫೈಟರ್‌ ರವಿ ದೂರ ಇಟ್ಟ ಬಿಜೆಪಿ, ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಶಿವರಾಮೇಗೌಡ ಘೋಷಣೆ
Last Updated 19 ಮಾರ್ಚ್ 2023, 16:23 IST
ಅಕ್ಷರ ಗಾತ್ರ

ಮಂಡ್ಯ: ಜೆಡಿಎಸ್‌ನಿಂದ ಉಚ್ಛಾಟನೆಗೊಂಡಿರುವ ಮಾಜಿ ಸಂಸದ ಎಲ್‌.ಆರ್‌.ಶಿವರಾಮೇಗೌಡ ಬಿಜೆಪಿ ಸೇರುವುದಾಗಿ ಘೋಷಣೆ ಮಾಡಿದ್ದು ಅವರು ನಾಗಮಂಗಲ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.

ಬೆಂಗಳೂರಿನಲ್ಲಿ ನಡೆದ ನಾಗಮಂಗಲ ಕ್ಷೇತ್ರದ ಮತದಾರರ ಸಭೆಯಲ್ಲಿ ಶಿವರಾಮೇಗೌಡ ಬಿಜೆಪಿ ಸೇರುವ ತೀರ್ಮಾನ ತಿಳಿಸಿದ್ದಾರೆ. ಅವರ ಪುತ್ರ ಹಾಗೂ ಬೆಂಬಲಿಗರೊಂದಿಗೆ ಮುಂದಿನ ವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸಮ್ಮುಖದಲ್ಲಿ ಕೇಸರಿ ಬಾವುಟ ಹಿಡಿಯಲಿದ್ದಾರೆರೆ. ಹೀಗಾಗಿ ನಾಗಮಂಗಲ ಕ್ಷೇತ್ರ ಮುಂದಿನ ಚುನಾವಣೆಯಲ್ಲಿ ರೋಚಕ ಬೆಳವಣಿಗೆಗಳಿಗೆ ಸಾಕ್ಷಿಯಾಗುವ ಲಕ್ಷಣಗಳು ಗೋಚರಿಸುತ್ತಿವೆ.

ಜೆಡಿಎಸ್‌ನಿಂದ ಉಚ್ಛಾಟನೆಗೊಂಡ ನಂತರ ಶಿವರಾಮೇಗೌಡ ಅವರು ಪಕ್ಷೇತರವಾಗಿ ಸ್ಪರ್ಧಿಸುವುದಾಗಿ ಪ್ರಕಟಿಸಿದ್ದರು. ಆದರೆ ಬೆಂಬಲಿಗರ ಸಭೆಯಲ್ಲಿ ಬಿಜೆಪಿ ಸೇರುವ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಅವರು ಬಿಜೆಪಿ ಸೇರುವ ನಿರ್ಧಾರ ಕೈಗೊಂಡಿದ್ದಾರೆ. ಸಭೆಯಲ್ಲಿ ಪಾಲ್ಗೊಂಡಿದ್ದ ತೋಟಗಾರಿಕೆ ಸಚಿವ ಮುನಿರತ್ನ ಅವರು ಅಧಿಕೃತವಾಗಿ ಬಿಜೆಪಿಗೆ ಆಹ್ವಾನಿಸಿರುವುದು ಮಹತ್ವ ಪಡೆದುಕೊಂಡಿದೆ.

ಮಲ್ಲಿಕಾರ್ಜುನ್‌ (ಫೈಟರ್‌ ರವಿ) ಅವರಿಗೆ ಬಿಜೆಪಿ ಟಿಕೆಟ್‌ ದೊರೆಯಲಿದೆ ಎಂದೇ ಬಿಂಬಿತವಾಗಿತ್ತು. ಆದರೆ ಅವರು ರೌಡಿಶೀಟರ್‌ ಆರೋಪ ಹೊತ್ತಿರುವ ಕಾರಣ ರಾಜ್ಯಮಟ್ಟದಲ್ಲಿ ಬಿಜೆಪಿಗೆ ಮುಜುಗರ ಉಂಟಾಗಿದೆ. ಪ್ರಧಾನಿ ಮೋದಿ ಅವರು ಮಂಡ್ಯಕ್ಕೆ ಬಂದಾಗ ಸ್ವಾಗತಿಸುವ ತಂಡದಲ್ಲಿ ಫೈಟರ್‌ ರವಿ ಇದ್ದದ್ದು, ಪ್ರಧಾನಿ ಮೋದಿ ಫೈಟರ್‌ ರವಿಗೆ ನಮಸ್ಕಾರ ಮಾಡಿದ್ದು ಚರ್ಚೆಗೆ ಗ್ರಾಸವಾಗಿತ್ತು.

ಬೆಂಗಳೂರಿನ ವಯ್ಯಾಲಿಕಾವಲ್‌ ಪೊಲೀಸ್‌ ಠಾಣೆ ರೌಡಿಪಟ್ಟಿಯಲ್ಲಿ ಫೈಟರ್‌ ರವಿ ಅವರ ಹೆಸರು ಇರುವುದು ಕೂಡ ಬಿಜೆಪಿ ಮುಖಂಡರ ಮುಜುಗರಕ್ಕೆ ಕಾರಣವಾಗಿದೆ. ಫೈಟರ್‌ ರವಿ ಅವರನ್ನು ದೂರ ಇಡುವುದು ಬಿಜೆಪಿಗೆ ಅನಿವಾರ್ಯವಾಗಿದೆ. ಹೀಗಾಗಿ ಕ್ಷೇತ್ರಕ್ಕೆ ಪರ್ಯಾಯ ಅಭ್ಯರ್ಥಿಯ ಹುಡುಕಾಟದಲ್ಲಿದ್ದ ಬಿಜೆಪಿ ಮುಖಂಡರಿಗೆ ಎಲ್‌.ಆರ್‌.ಶಿವರಾಮೇಗೌಡ ಸಿಕ್ಕಿದ್ದಾರೆ ಎಂಬ ಮಾತು ಕ್ಷೇತ್ರದಲ್ಲಿದೆ.

***

ಬಿಜೆಪಿ ಕುರುಹು ಎಬ್ಬಿಸೋಣ; ಎಲ್ಆರ್‌ಎಸ್‌

ಮಂಡ್ಯ: ‘ನಾನು ನಿಷ್ಠಾವಂತ ಬಿಜೆಪಿ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ಇನ್ನೂ 3–4 ದಿನಗಳಲ್ಲಿ ಪುತ್ರ ಹಾಗೂ ಬೆಂಬಲಿಗರೊಂದಿಗೆ ಬಿಜೆಪಿ ಸೇರುತ್ತೇನೆ’ ಎಂದು ಎಲ್.ಆರ್.ಶಿವರಾ‌ಮೇಗೌಡ ಹೇಳಿದರು.

ಬೆಂಗಳೂರಿನಲ್ಲಿ ಆಯೋಜಿಸಿದ್ದ ನಾಗಮಂಗಲ ವಿಧನಾಸಭಾ ಕ್ಷೇತ್ರದ ನಿವಾಸಿಗಳ ಎಲ್ ಆರ್ ಎಸ್ ಸ್ವಾಭಿಮಾನಿ ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿದರು.

‘ನಾಗಮಂಗಲ ಕ್ಷೇತ್ರದ ಜನರು ನನ್ನ ಜೊತೆ ಇರಬೇಕು. ಮುಖ್ಯಮಂತ್ರಿ ಅವರಿಗೆ ತಲೆಬಾಗಿ ಬಿಜೆಪಿ ಸೇರ್ಪಡೆಗೊಳ್ಳುತ್ತೇನೆ. ಯಾವುದೇ ಷರತ್ತು ಹಾಕಿಲ್ಲ. ನಿಮ್ಮ ಪಾದ ಮುಟ್ಟಿ ನಮಸ್ಕಾರ ಮಾಡುತ್ತೇನೆ. ಈ ಬಾರಿ ಮಂಡ್ಯ ನೆಲದಲ್ಲಿ ಬಿಜೆಪಿ ಕುರುಹು ಎಬ್ಬಿಸಬೇಕು. ಹಾಗಾಗಿ ಎಲ್ಲರೂ ಕಂಕಣ ಬದ್ದರಾಗಬೇಕು’ ಎಂದರು.

‘ರಾಜ್ಯ ನಾಯಕರ ಹಾಗೂ ಮುಖ್ಯಮಂತ್ರಿ ಸಮ್ಮುಖದಲ್ಲಿ ಬಿಜೆಪಿ ಸೇರುತ್ತೇನೆ. ಇದಕ್ಕೆ ಬೆಂಗಳೂರಿನಲ್ಲಿ ನೆಲೆಸಿರುವ ನಾಗಮಂಗಲ ಜನರ ಒಪ್ಪಿಗೆಯನ್ನು ಪಡೆದು ಸೇರ್ಪಡೆಗೊಳ್ಳಲು ನಿರ್ಧರಿಸಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT