ಬುಧವಾರ, ಮೇ 25, 2022
23 °C
ದಿನಸಿ ವ್ಯಾಪಾರ, ಟಿವಿ ಶೋರೂಂ ಬಿಟ್ಟು ಸಮಗ್ರ ಕೃಷಿಯತ್ತ ವಾಲಿದ ಮನಸ್ಸು

ಮಳವಳ್ಳಿ: ವ್ಯಾಪಾರ ಬಿಟ್ಟು ಸಾವಯವ ಕೃಷಿಯತ್ತ ಮರಳಿದ ಶಿವನಂಜೇಗೌಡ

ಟಿ.ಕೆ.ಲಿಂಗರಾಜು Updated:

ಅಕ್ಷರ ಗಾತ್ರ : | |

Prajavani

ಮಳವಳ್ಳಿ: ಲಾಭ ತರುವ ದಿನಸಿ ಅಂಗಡಿ, ನಂತರ ಟಿವಿ ಶೋರೂಂ ನಡೆಸುತ್ತಿದ್ದರೂ ಮನಸ್ಸು ವಾಲಿದ್ದು ಮಾತ್ರ ಕೃಷಿಯ ಕಡೆಗೆ. ಪ್ರಾರಂಭದಲ್ಲಿ ಪ್ರಗತಿಪರ ರೈತರಾಗಿ ನಂತರ ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡಿರುವ ತಾಲ್ಲೂಕಿನ ನಿಡಘಟ್ಟದ ಶಿವನಂಜೇಗೌಡರು ಮಾದರಿಯಾಗಿದ್ದಾರೆ.

ಪಟ್ಟಣದಲ್ಲಿ 10 ವರ್ಷ ದಿನಸಿ ಅಂಗಡಿ, ನಂತರ 5 ವರ್ಷಗಳ ಕಾಲ ಟಿವಿ ಶೋರೂಂ ನಡೆಸಿದ್ದರೂ ಶಿವನಂಜೇಗೌಡ ವ್ಯವಸಾಯದ ಕಡೆಗೆ ಮುಖ ಮಾಡಿ ಈಗ ಸಂಪೂರ್ಣವಾಗಿ ಕೃಷಿಯಲ್ಲಿಯೇ ತೊಡಗಿಸಿಕೊಂಡಿದ್ದಾರೆ. ಸಾವಯವ, ಸಮಗ್ರ ಕೃಷಿಗೆ ಒತ್ತು ನೀಡಿರುವ ಅವರು ರಾಜ್ಯದ ವಿವಿಧ ಕಡೆಗಳಲ್ಲಿನ ಮಾದರಿ ರೈತರ ಜಮೀನುಗಳಿಗೆ ತೆರಳಿ ಅಲ್ಲಿನ ವಿನೂತನ ಪ್ರಯೋಗಗಳನ್ನು ಗಮನಿಸಿ ತಮ್ಮ ಜಮೀನಿನಲ್ಲೂ ಅಳವಡಿಸಿಕೊಂಡಿದ್ದಾರೆ.

ತಮಗಿರುವ 8 ಎಕರೆ ಭೂಮಿಯಲ್ಲಿ ಹಲವು ರೀತಿಯ ಬೆಳೆ ಬೆಳೆಯುತ್ತ ಸಮಗ್ರ ಕೃಷಿಯಲ್ಲಿ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ. ಬೆಲೆಯಲ್ಲಿನ ಏರುಪೇರು, ಹವಾಮಾನ ವೈಪರೀತ್ಯ ಸೇರಿದಂತೆ ಸಮಸ್ಯೆಗಳ ನಡುವೆಯೂ ವಿವಿಧ ಬೆಳೆಗಳನ್ನು ಬೆಳೆದು ಲಾಭ ಗಳಿಸುತ್ತಿದ್ದಾರೆ. ಎರಡು ಎಕರೆ ಪ್ರದೇಶದಲ್ಲಿ ಬಾಳೆ ಬೆಳೆದು ಖರ್ಚು ಕಳೆದು ಸುಮಾರು ಐದು ಲಕ್ಷ ಆದಾಯ ಗಳಿಸಿದ್ದಾರೆ. ಅಲ್ಲದೇ ಮೂರು ಎಕರೆಯಲ್ಲಿ ಭತ್ತ ಬೆಳೆದಿದ್ದರು. ಈಗ ನಾಲ್ಕು ಎಕರೆಯಲ್ಲಿ ಬಾಳೆ ಬೆಳೆಯ ಮಧ್ಯೆ ಖಾಲಿ ಜಾಗದಲ್ಲಿ ಕಲ್ಲಂಗಡಿ ಬೆಳೆದು ಎರಡು ಲಕ್ಷದವರೆಗೆ ಆದಾಯ ಗಳಿಸಿದ್ದಾರೆ. ಒಂದು ಎಕರೆಯಲ್ಲಿ ಅಡಿಕೆ ಗಿಡ ನೆಟ್ಟಿದ್ದಾರೆ. ಇರುವ ಜಾಗದಲ್ಲೇ ವಿವಿಧ ಬೆಳೆ ಬೆಳೆಯುವ ಮೂಲಕ ಏಕಬೆಳೆ ಕೃಷಿಗೆ ಇತಿಶ್ರೀ ಹಾಡಿದ್ದಾರೆ.

ಸಾವಯವ ಗೊಬ್ಬರ: ಅತಿಯಾದ ರಸಗೊಬ್ಬರ, ಕೀಟನಾಶಕ ಮತ್ತು ನೀರು ಬಳಸುವ ಕೃಷಿಯಿಂದ ರೈತರು ಕೈಸುಟ್ಟಿಕೊಂಡಿದ್ದೇ ಹೆಚ್ಚು. ಇಂಥ ಕೃಷಿಯಿಂದ ಉತ್ಪಾದನಾ ವೆಚ್ಚ ಹೆಚ್ಚಾಗುವ ಜೊತೆಗೆ ಭೂಮಿಯ ಸತ್ವವೂ ಕಡಿಮೆಯಾಗುತ್ತದೆ. ಇವೆಲ್ಲವನ್ನೂ ತಪ್ಪಿಸುವ ಸಲುವಾಗಿ ಕಡಿಮೆ ಬಂಡವಾಳದಲ್ಲಿ ಸಾವಯವ ಕೃಷಿ ಕೈಗೊಂಡು ಹೆಚ್ಚಿನ ಆದಾಯ ಗಳಿಸುವ ಜೊತೆಗೆ ಭೂಮಿಯ ಫಲವತ್ತತೆಯನ್ನೂ ಕಾಪಾಡಿಕೊಳ್ಳಬಹುದು ಎಂಬುದನ್ನು ಅವರು ತೋರಿಸಿದ್ದಾರೆ. ಹನಿ ನೀರಾವರಿ ಪದ್ಧತಿ ಮೂಲಕ ಸಹ ಬೆಳೆಗಳಿಗೆ ನೀರು ಹಾಯಿಸುತ್ತಿದ್ದಾರೆ.

ಬೆಳೆಗಳಿಗೆ ಕೀಟನಾಶಕ ಸಿಂಡಣೆ ಮಾತೇ ಇಲ್ಲ. ಆದರೂ, ಅವರ ಹೊಲದಲ್ಲಿ ಬೆಳೆಯುವ ಬೆಳೆಗಳು ಉತ್ತಮ ಇಳುವರಿ ನೀಡುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಬೆಳೆಗಳಿಗೆ ಅಗತ್ಯ ಪ್ರಮಾಣದಲ್ಲಿ ನೀರು ಮತ್ತು ಸಾವಯವ ಉತ್ತೇಜಕ ಗೊಬ್ಬರ ನೀಡುತ್ತಾರೆ. ಬೆಳೆಗಳಿಗೆ ರಾಸಾಯನಿಕ ರಹಿತ ಗೊಬ್ಬರ, ಶಿವಗಂಗಾ ಮಠದಲ್ಲಿ ತಯಾರಾಗುವ ಸಾವಯವ ಗೊಬ್ಬರ ಮತ್ತು ದ್ರಾವಣಯನ್ನು ಹನಿ ನೀರವಾರಿ ಪದ್ಧತಿಯ ಮೂಲಕ ಬಳಸುತ್ತಾರೆ.

ಹಲವು ವರ್ಷಗಳ ಹಿಂದೆ ತಾವಾಯಿತು ತಮ್ಮ ವ್ಯಾಪಾರವಾಯಿತು ಎಂಬಂತೆ ಇದ್ದರು. ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯಿಂದ ದೊರೆಯುವ ಮಾಹಿತಿ ಹಾಗೂ ಪ್ರಗತಿಪರ ರೈತರ ಸಲಹೆಯಂತೆ ಕೃಷಿ ಮಾಡುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು