ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚೆ ಗುವಾರ ವಿಶ್ವದ ದಮನಿತರ ದನಿ: ಎಚ್‌.ಬಿ. ಬೆಟ್ಟಸ್ವಾಮಿ

Published 22 ಜೂನ್ 2024, 14:04 IST
Last Updated 22 ಜೂನ್ 2024, 14:04 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ‘ಅರ್ಜೆಂಟೀನಾದಲ್ಲಿ ಹುಟ್ಟಿ, ಕ್ಯೂಬಾದಲ್ಲಿ ಜನಪರ ಸರ್ಕಾರ ರಚನೆಗೆ ಕಾರಣನಾದ ಚೆ ಗುವಾರ ವಿಶ್ವದಾದ್ಯಂತ ದಮಿನಿತರ ದನಿಯಾಗಿದ್ದರು’ ಎಂದು ಮೈಸೂರು ಬಿಜಿಎಸ್‌ ಬಿ.ಇಡಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಎಚ್‌.ಬಿ. ಬೆಟ್ಟಸ್ವಾಮಿ ತಿಳಿಸಿದರು.

ಪಟ್ಟಣದಲ್ಲಿ ಸಂಜಯ ಪ್ರಕಾಶನ ಶುಕ್ರವಾರ  ಏರ್ಪಡಿಸಿದ್ದ ‘ಚೆ ಗುವಾರ ಸ್ಮರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರ್ಥಿಕ ಅಸಮಾನತೆ ನಿವಾರಣೆ ಆಗಬೇಕು ಎಂಬುದು ಚೆ ಗುವಾರ ಅವರ ಮುಖ್ಯ ಉದ್ದೇಶವಾಗಿತ್ತು. ದುಡಿಯುವ ವರ್ಗದ ಶ್ರಮಕ್ಕೆ ತಕ್ಕ ಫಲ ಸಿಗಬೇಕು ಎಂಬ ಆಶಯ ಹೊಂದಿದ್ದ ಅವರು ಬಂಡವಾಳಶಾಹಿಗಳ ವಿರುದ್ಧ ದಕ್ಷಿಣ ಅಮೆರಿಕ ದೇಶಗಳಲ್ಲಿ ಪ್ರಬಲವಾದ ಚಳವಳಿ ರೂಪಿಸಿದರು. ಶೋಷಣೆಗೆ ಒಳಗಾದವರನ್ನು ಒಗ್ಗೂಡಿಸಿ ಕ್ರಾಂತಿಯ ಕಹಳೆ ಮೊಳಗಿಸಿದರು. ಪ್ರಾಣದ ಹಂಗು ತೊರೆದು ಹೋರಾಡಿದರು. ಆದರೆ, ಅವರನ್ನು ಅಮೆರಿಕದ ಗುಪ್ತಚರ ದಳ ಬೊಲಿವಿಯಾದಲ್ಲಿ ನಿರ್ದಯವಾಗಿ ಹತ್ಯೆ ಮಾಡಿತು. ಆದರೂ ಜಗತ್ತಿನ ಯಾವುದೇ ಮೂಲೆಯಲ್ಲಿ ನಡೆಯುವ ಮಾನವಪರ ಹೋರಾಟಗಳಲ್ಲಿ ‘ಚೆ ಗುವಾರ’ ಅವರ ಪ್ರಭಾವ ಇರುತ್ತದೆ. ಮನುಕುಲದ ಒಳಿತಿಗಾಗಿ ಹೋರಾಡಿದ ಚೆ ಗುವಾರ ಕೊಲ್ಕತ್ತಾ ನಗರಕ್ಕೂ ಬಂದಿದ್ದರು. ಹಾಗಾಗಿ ಈ ದೇಶದ ಚಳವಳಿಗಳಲ್ಲೂ ಅವರ ಪ್ರಭಾವ ಇದೆ’ ಎಂದರು.

ಗಾಂಧಿವಾದಿ ಡಾ.ಬಿ. ಸುಜಯಕುಮಾರ್‌ ಮಾತನಾಡಿ, ‘ಚೆ ಗುವಾರ ಬದಲಾವಣೆಗಾಗಿ ಕ್ರಾಂತಿಯ ಹಾದಿ ಹಿಡಿದರೂ ಅವರ ಹೋರಾಟದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳಿದ್ದವು. ವೈಯಕ್ತಿಕ ಹಿತಾಸಕ್ತಿಗಳು ಇಲ್ಲದಿದ್ದರೆ ಹೋರಾಟಗಳು ಯಶಸ್ವಿಯಾಗುತ್ತದೆ ಎಂಬುದಕ್ಕೆ ಅವರೇ ಉತ್ತಮ ಉದಾಹರಣೆ’ ಎಂದು ಹೇಳಿದರು.

ಕ್ಯಾತನಹಳ್ಳಿ ಚಂದ್ರಣ್ಣ, ರೈತ ಮುಖಂಡ ಪಾಂಡು, ವಕೀಲರಾದ ಸಿ.ಎಸ್‌. ವೆಂಕಟೇಶ್‌, ಎಸ್‌.ಆರ್‌. ಸಿದ್ದೇಶ್‌, ಸಂಜಯ ಪ್ರಕಾಶನದ ಎಸ್‌.ಎಂ. ಶಿವಕುಮಾರ್‌, ಅಬ್ದುಲ್ಲಾ ಬೇಗ್‌, ಡಾ.ಕೆ.ವೈ. ಶ್ರೀನಿವಾಸ್‌, ಇಲ್ಯಾಸ್‌ ಅಹಮದ್‌ಖಾನ್‌, ಕಡತನಾಳು ಜಯಶಂಕರ್‌, ಕೆ.ಶೆಟ್ಟಹಳ್ಳಿ ಅಪ್ಪಾಜಿ, ಡಿ. ಕುಮಾರ್‌, ನಂಜುಂಡಯ್ಯ, ಪ್ರಿಯಾ ರಮೇಶ್‌, ಪ.ಮ. ನಂಜುಂಡಸ್ವಾಮಿ, ಅಮಿತ್‌ ಕೃಷ್ಣ, ಕೆ.ಸಿ. ಮಾದೇಶ್‌, ಸುರೇಶ್‌ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT