ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರೀರಂಗಪಟ್ಟಣ | ಬಿಳಿಯ ಬಣ್ಣಕ್ಕೆ ತಿರುಗಿದ ಚಿಕ್ಕದೇವರಾಯಸಾಗರ ನಾಲೆ ನೀರು!

ಸಿಡಿಎಸ್‌ ನಾಲೆಗೆ ಜಲ್ಲಿ ಕ್ರಷರ್‌ ತ್ಯಾಜ್ಯ
Published : 16 ಆಗಸ್ಟ್ 2024, 13:24 IST
Last Updated : 16 ಆಗಸ್ಟ್ 2024, 13:24 IST
ಫಾಲೋ ಮಾಡಿ
Comments

ಶ್ರೀರಂಗಪಟ್ಟಣ: ತಾಲ್ಲೂಕಿನ ಹಂಗರಹಳ್ಳಿ ಸಮೀಪದಲ್ಲಿರುವ ಜಲ್ಲಿ ಕ್ರಷರ್‌ನಿಂದ ತ್ಯಾಜ್ಯವನ್ನು ನೇರವಾಗಿ ಚಿಕ್ಕದೇವರಾಯಸಾಗರ (ಸಿಡಿಎಸ್‌) ನಾಲೆಗೆ ಬಿಡುತ್ತಿದ್ದು, ನೀರು ಬಿಳಿ ಬಣ್ಣಕ್ಕೆ ತಿರುಗಿದೆ.

ಕ್ರಷರ್‌ನಲ್ಲಿ ಕಲ್ಲನ್ನು ಪುಡಿ ಮಾಡಿ ಜಲ್ಲಿ ಮತ್ತು ಎಂ– ಸ್ಯಾಂಡ್‌ ತಯಾರಿಸಿದ ಬಳಿಕ ಉಳಿಯುವ ತ್ಯಾಜ್ಯವನ್ನು ನಾಲೆಗೆ ಬಿಡಲಾಗುತ್ತಿದೆ. ಶುಕ್ರವಾರವೂ ಮುಂಜಾನೆ 6ರಿಂದ ಮಧ್ಯಾಹ್ನ 12 ಗಂಟೆಯವರೆಗೂ ತ್ಯಾಜ್ಯವನ್ನು ನಾಲೆಗೆ ಬಿಡಲಾಗಿದೆ. ಹಂಗರಹಳ್ಳಿ, ಮುಂಡುಗದೊರೆ, ವಡಿಯಾಂಡಹಳ್ಳಿ, ಅರಕೆರೆ ಮಾರ್ಗವಾಗಿ ಬನ್ನೂರು ಕಡೆಗೆ ಹರಿಯುವ ನಾಲೆಯಲ್ಲಿ ಹಾಲು ಹರಿಯುತ್ತಿರುವಂತೆ ಕಂಡು ಬಂತು.

ತ್ಯಾಜ್ಯವನ್ನು ನೇರವಾಗಿ ಹರಿಸುತ್ತಿರುವುದರಿಂದ ನೀರು ಕಲುಷಿತವಾಗಿದ್ದು, ನಾಲೆಯ ಉದ್ದಕ್ಕೂ ಮೀನುಗಳು ಸತ್ತು ತೇಲುತ್ತಿವೆ. ಕೃಷಿ ಜಮೀನಿಗೂ ನೀರು ಹರಿಯುತ್ತಿದ್ದು, ಬೆಳೆಗಳು ನಾಶವಾಗುವ ಭಯ ರೈತರನ್ನು ಕಾಡುತ್ತಿದೆ. ಜಾನುವಾರುಗಳಿಗೆ ನಲ್ಲಿ ನೀರನ್ನು ಕುಡಿಸಲಾಗುತ್ತಿದೆ. 

‘ಹಂಗರಹಳ್ಳಿ ಬಳಿ, ನಾಲೆ ಏರಿಯ ಪಕ್ಕದಲ್ಲೇ ಇರುವ ಕ್ರಷರ್‌ನಿಂದ ತ್ಯಾಜ್ಯವನ್ನು ರಾತ್ರಿ ವೇಳೆ ಬಿಡಲಾಗುತ್ತಿತ್ತು. ಈಗ ಹಗಲಲ್ಲೇ ಹರಿಸಲಾಗುತ್ತಿದೆ. ನೀರು ನೋಡಿದರೆ ಭಯವಾಗುತ್ತದೆ. ಹತ್ತಾರು ಗ್ರಾಮಗಳ ರೈತರು ಈ ನೀರನ್ನೇ ನೆಚ್ಚಿಕೊಂಡು ವ್ಯವಸಾಯ ಮಾಡುತ್ತಿದ್ದಾರೆ. ಬೆಳೆ ನಷ್ಟವಾದರೆ ಯಾರು ಹೊಣೆ? ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ದಿನಪೂರ್ತಿ ನಾಲೆಯ ನೀರು ಬಿಳಿ ಬಣ್ಣಕ್ಕೆ ತಿರುಗಿದ್ದರೂ ಗಮನಕ್ಕೆ ಬಂದಿಲ್ಲವೆ? ಎಂದು ಅರಕೆರೆ ಗ್ರಾಮದ ರೈತ ಕೃಷ್ಣೇಗೌಡ, ವಡಿಯಾಂಡಹಳ್ಳಿಯ ಕುಮಾರ ಆಕ್ರೋಶ ವ್ಯಕ್ತಪಡಿಸಿದರು.

‘ನಾಲೆಗೆ ತ್ಯಾಜ್ಯ ಬಿಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ತ್ಯಾಜ್ಯ ಸೇರಿದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ತಾಲ್ಲೂಕು ಕಚೇರಿ ಮತ್ತು ನೀರಾವರಿ ಇಲಾಖೆ ಕಚೇರಿ ಎದುರು ಧರಣಿ ನಡೆಸುತ್ತೇವೆ’ ಎಂದು ವಡಿಯಾಂಡಹಳ್ಳಿ, ಗೊಬ್ಬರಗಾಲ, ಅರಕೆರೆ ಗ್ರಾಮಗಳ ರೈತರು ಎಚ್ಚರಿಸಿದ್ದಾರೆ.

ನಾಲೆಗೆ ಕ್ರಷರ್‌ನಿಂದ ತ್ಯಾಜ್ಯವನ್ನು ಬಿಡುತ್ತಿರುವ ವಿಷಯ ಗೊತ್ತಾಗಿಲ್ಲ. ಕಂದಾಯ ನಿರೀಕ್ಷಕರು ಮತ್ತು ಸಿಬ್ಬಂದಿಯನ್ನು ಕಳುಹಿಸಿ ಮಾಹಿತಿ ಪಡೆಯುತ್ತೇನೆ. ನಾಲೆಗೆ ತ್ಯಾಜ್ಯ ಬಿಡುತ್ತಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು
ಪರಶುರಾಮ ಸತ್ತಿಗೇರಿ, ತಹಶೀಲ್ದಾರ್ ಶ್ರೀರಂಗಪಟ್ಟಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT