ಗುರುವಾರ , ಜುಲೈ 29, 2021
21 °C
ಸಿಪಿಐ(ಎಂ) ಕಾರ್ಯಕರ್ತರ ಆರೋಪ, ಜಿಲ್ಲೆಯ ವಿವಿಧೆಡೆ ಪ್ರತಿಭಟನೆ, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ

‘ಕೊರೊನಾ ಸೋಂಕು ತಡೆಗಟ್ಟಲು ಕೇಂದ್ರ ವಿಫಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ‘ಕೊರೊನಾ ಸೋಂಕು ತಡೆಗಟ್ಟುವಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಂಪೂರ್ಣವಾಗಿ ವಿಫಲವಾಗಿದೆ. ಜನರರಿಗೆ ಉದ್ಯೋಗ, ಆಹಾರ, ಆರೋಗ್ಯ ಸುರಕ್ಷತೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಆರೋಪಿಸಿ ಸಿಪಿಐ(ಎಂ) ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಆದಾಯ ತೆರಿಗೆ ವ್ಯಾಪ್ತಿಯಲ್ಲಿ ಇಲ್ಲದ ಎಲ್ಲ ಕುಟುಂಬಗಳಿಗೆ ಮಾಸಿಕ ₹7,500 ಹಣವನ್ನು ಆರು ತಿಂಗಳವರೆಗೆ ನೀಡಬೇಕು. ಪ್ರತಿ ವ್ಯಕ್ತಿಗೆ ತಿಂಗಳಿಗೆ 10 ಕೆ.ಜಿ.ಯಂತೆ ಆರು ತಿಂಗಳವರೆಗೆ ಉಚಿತ ಆಹಾರ ಧಾನ್ಯಗಳನ್ನು ವಿತರಣೆ ಮಾಡಬೇಕು. ಉದ್ಯೋಗ ಖಾತರಿ ಯೋಜನೆಯಡಿ ಮಾನವ ದಿನಗಳನ್ನು ಹೆಚ್ಚಿಸಬೇಕು. ವರ್ಷದಲ್ಲಿ ಕನಿಷ್ಠ 200 ದಿನಗಳ ಉದ್ಯೋಗ ನೀಡಬೇಕು. |ನಗರ ಪ್ರದೇಶದಲ್ಲಿನ ಬಡವರಿಗೆ ನರೇಗಾ ಯೋಜನೆಯನ್ನು ವಿಸ್ತರಿಸಬೇಕು. ನಿರುದ್ಯೋಗಿಗಳಿಗೆ ತಕ್ಷಣ ನಿರುದ್ಯೋಗ ಭತ್ಯೆಯನ್ನು ನೀಡಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ಜೂನ್ 3ರಂದು ಕೇಂದ್ರ ಸರ್ಕಾರದ ಕ್ಯಾಬಿನೆಟ್ ಅಂಗೀಕರಿಸಿರುವ ಕೃಷಿ ಉತ್ಪನ್ನಗಳ ಮಾರಾಟ ಮತ್ತು ಸೇವೆಗಳ ಕುರಿತ ಎರಡು ಸುಗ್ರೀವಾಜ್ಞೆಗಳನ್ನು ಹಾಗೂ ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆಗಳನ್ನು ವಾಪಸ್‌ ಪಡೆಯಬೇಕು. ರಾಜ್ಯ ಸರ್ಕಾರ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

‘ಮೈಷುಗರ್ ಖಾಸಗೀಕರಣ ನಿಲ್ಲಿಸಿ’
ರಾಷ್ಟ್ರೀಯ ಆಸ್ತಿಗಳ ಲೂಟಿಯನ್ನು ತಡೆಯಬೇಕು. ಸಾರ್ವಜನಿಕ ವಲಯದ ಖಾಸಗೀಕರಣ ಮತ್ತು ಕಾರ್ಮಿಕ ಕಾನೂನುಗಳ ರದ್ದತಿಯನ್ನು ನಿಲ್ಲಿಸಬೇಕು. ಕರ್ನಾಟಕದಲ್ಲಿ ಆರೋಗ್ಯ ಪರಿಕರಗಳು, ವೆಂಟಿಲೇಟರ್‌ಗಳು, ಅಗತ್ಯ ಔಷಧಿಗಳ ತೀವ್ರ ಕೊರತೆ ಇದ್ದು, ಅವುಗಳನ್ನು ಗರಿಷ್ಠ ಪ್ರಮಾಣದಲ್ಲಿ ಪೂರೈಸಬೇಕು. ಮೈಷುಗರ್ ಖಾಸಗೀಕರಣ ನಿಲ್ಲಿಸಬೇಕು. ಸರ್ಕಾರದ ಒಡೆತನದಲ್ಲಿ ಉಳಿಸಿ, ಪುನಶ್ಚೇತನಗೊಳಿಸಿ ಕಬ್ಬು ಅರೆಯಲು ಪ್ರಾರಂಭಿಸಬೇಕು. ಕಬ್ಬಿನ ಸಾಗಣೆ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಿಪಿಐ(ಎಂ) ಮಂಡ್ಯ ಘಟಕದ ಕಾರ್ಯದರ್ಶಿ ಸಿ.ಕುಮಾರಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಂ.ಪುಟ್ಟಮಾದು, ಚಂದ್ರಶೇಖರಮೂರ್ತಿ, ನಾರಾಯಣ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು