ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳವಳ್ಳಿ | ಮಕ್ಕಳಿಗೆ ಮನೆಯ ಬಳಿಯೇ ಪಾಠ

ನಿಟ್ಟೂರು, ಕೆಂಪಯ್ಯನದೊಡ್ಡಿ ಶಾಲೆ ಶಿಕ್ಷಕರಿಂದ ಬೋಧನೆ
Last Updated 23 ಜುಲೈ 2020, 3:55 IST
ಅಕ್ಷರ ಗಾತ್ರ

ಮಳವಳ್ಳಿ: ಕೊರೊನಾ ಸೋಂಕು ಹರಡುತ್ತಿರುವ ಕಾರಣ ಶಾಲೆಗಳು ಆರಂಭವಾಗದೇ ಇರುವುದರಿಂದತಾಲ್ಲೂಕಿನ ಎರಡು ಶಾಲೆಯ ಶಿಕ್ಷಕರು ಮಕ್ಕಳಿಗೆ ಅವರ ಮನೆಯ ಬಳಿಯೇ ತೆರಳಿಪಾಠ ಮಾಡುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ತಾಲ್ಲೂಕಿನ ನಿಟ್ಟೂರು ಮತ್ತು ಕೆಂಪಯ್ಯನದೊಡ್ಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಮನೆ-ಮನೆಗೆ ತೆರಳಿ ಪಾಠ ಮಾಡುವುದರ ಜತೆಗೆ ಗ್ರಾಮದಲ್ಲಿ ಜನರಿಗೆ ಕೊರೊನಾ ಸೋಂಕಿನ ಬಗ್ಗೆ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಕೆಂಪಯ್ಯನದೊಡ್ಡಿ ಶಾಲೆಯಲ್ಲಿ 1ರಿಂದ 7 ತರಗತಿಯವರೆಗೆ 47 ಮಕ್ಕಳಿದ್ದು, ಶಿಕ್ಷಕರಾದ ಸುಂದ್ರರಪ್ಪ, ಪಿ.ಪವಿತ್ರಾ ಮತ್ತು ಟಿ.ವೀಣಾ ಬೋಧನೆ ಮಾಡುತ್ತಿದ್ದರೆ, ನಿಟ್ಟೂರು ಶಾಲೆಯ 5, 6 ಮತ್ತು 7ನೇ ತರಗತಿ ಮಕ್ಕಳಿಗೆ ಮುಖ್ಯಶಿಕ್ಷಕ ಬೋರೇಗೌಡ ನೇತೃತ್ವದಲ್ಲಿ ನಾಗರಾಜು ಮತ್ತು ಪವಿತ್ರಾ ಪಾಠ ಮಾಡುತ್ತಿದ್ದಾರೆ.

ಗ್ರಾಮದಲ್ಲಿನ ಹೊಟೆಲ್, ಕಟ್ಟೆಗಳ ಬಳಿ ಕುಳಿತುಕೊಳ್ಳುವ ಜನರಿಗೆ ಕೊರೊನಾ ಸೋಂಕು ಬರದಂತೆ ಹೇಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂದು ಸಲಹೆಯನ್ನೂ ನೀಡುತ್ತಾರೆ. ಮಕ್ಕಳ ಮನೆಗೆ ಹೋಗಿ 7-8 ಮಕ್ಕಳನ್ನು ಒಂದೆಡೆ ಸೇರಿಸಿ ಮಾಸ್ಕ್ ಮತ್ತು ಸ್ಯಾನೀಟೇಜರ್ ನೀಡಿ ಪಾಠ, ಪ್ರವಚನ ಮಾಡುತ್ತಾರೆ.

ಹಿರಿಯ ಪ್ರಾಥಮಿಕ ತರಗತಿ ಮಕ್ಕಳಿಗೆ ಓದು, ಬರಹ, ಗಣಿತದ ಸರಳ ಲೆಕ್ಕಗಳನ್ನು ಮಾಡಿಸಿ, ಪಠ್ಯದಲ್ಲಿನ ಕಠಿಣ ಶಬ್ದಗಳನ್ನು ಪಟ್ಟಿ ಮಾಡಿ ಅದನ್ನು ಕಲಿಯಲು ಹೇಳುತ್ತೇವೆ. ಮರುದಿನ ಅದನ್ನು ಮೊದಲು ಹೇಳಿಸಿ ನಂತರ ಕನ್ನಡ, ಹಿಂದಿ, ಇಂಗ್ಲಿಷ್ ಬರೆಸುವುದು, ಓದಿಸುವುದು ಮಾಡಿ ಇಷ್ಟು ದಿನ ಶಾಲೆಯಲ್ಲಿ ಕಲಿತ ಪಾಠವನ್ನು ಮರೆಯದಂತೆ ನೋಡಿಕೊಳ್ಳುತ್ತಿದ್ದೇವೆ ಎನ್ನುತ್ತಾರೆ ಶಿಕ್ಷಕಿಯರಾದ ಪವಿತ್ರಾ, ವೀಣಾ.

ಪೋಷಕರಿಗೆ ಕೋವಿಡ್ ಪಾಠ: ಗ್ರಾಮದಲ್ಲಿನ ಮಕ್ಕಳ ಪೋಷಕರಿಗೆ ಮನೆಯಲ್ಲಿ ಯಾವ ಅಂತರ ಕಾಯ್ದುಕೊಳ್ಳಬೇಕು, ವೃದ್ಧರಿಗೆ ಸೋಂಕು ಹರಡದಂತೆ ಹೇಗೆ ನೋಡಿಕೊಳ್ಳಬೇಕು, ಮಾಸ್ಕ್, ಸ್ಯಾನೀಟೈಜರ್ ಬಳಸುವ ವಿಧಾನ ಸೇರಿದಂತೆ ಹಲವು ಜಾಗೃತಿ ಮೂಡಿಸುತ್ತೇವೆ. ಮೊದಲಿಗೆ ಒಂದೆರಡು ಮಕ್ಕಳನ್ನು ಸೇರಿ ಪಾಠ ಮಾಡುತ್ತಿದ್ದೆವು. ನಂತರ ದಿನಗಳಲ್ಲಿ ಪೋಷಕರು ಸ್ವಯಂಪ್ರೇರಿತವಾಗಿ ಶಾಲೆಗೆ ಬಂದು ಮನೆಗೆ ಬಂದು ಮಕ್ಕಳಿಗೆ ಪಾಠ ಮಾಡಿ ಎಂದು ಮನವಿ ಮಾಡಿದ ಹಿನ್ನಲೆಯಲ್ಲಿ ಈ ಕಾರ್ಯದಲ್ಲಿ ತೊಡಗಿದ್ದೇವೆ ಎನ್ನುತ್ತಾರೆ ನಿಟ್ಟೂರು ಶಾಲೆಯ ಮುಖ್ಯಶಿಕ್ಷಕ ಬೋರೇಗೌಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT