ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ| ಕಸದಿಂದ ಗೊಬ್ಬರ ತಯಾರಿಕೆ; ರೈತರಿಂದ ಬೇಡಿಕೆ

ಕಾಳೇನಹಳ್ಳಿ ಕಸ ಸಂಗ್ರಹಣಾ ಘಟಕದಲ್ಲಿ 50 ಟನ್‌ ಕಾಂಪೋಸ್ಟ್‌ ಮಾರಾಟಕ್ಕೆ ಲಭ್ಯ
Published 25 ಜೂನ್ 2023, 5:25 IST
Last Updated 25 ಜೂನ್ 2023, 5:25 IST
ಅಕ್ಷರ ಗಾತ್ರ

ಎಂ.ಎನ್.ಯೋಗೇಶ್‌

ಮಂಡ್ಯ: ಮನೆಮನೆಯಿಂದ‌‌ ಸಂಗ್ರಹಿಸಿದ್ದ‌ ಹಸಿ ಕಸ- ಒಣ ಕಸ ಈಗ ಕಾಂಪೋಸ್ಟ್ ಗೊಬ್ಬರವಾಗಿ‌ ಸಿದ್ಧಗೊಂಡಿದೆ.‌ ಕೃಷಿ ಭೂಮಿಗೆ ಸಂಜೀವಿನಿಯಂತಿರುವ ಈ ಗೊಬ್ಬರಕ್ಕೆ ರೈತರಿಂದ ಅಪಾರ ಬೇಡಿಕೆ ಸೃಷ್ಟಿಯಾಗಿದೆ.

ನಗರ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಕಸವನ್ನು ವೈಜ್ಞಾನಿಕ ರೀತಿಯಲ್ಲಿ ಕರಗಿಸಿ, ಹದಗೊಗೊಳಿಸಿ ಗೊಬ್ಬರ ರೂಪ ನೀಡಲಾಗಿದೆ. ಕೃಷಿ ಇಲಾಖೆ ತಜ್ಞರ ಸಲಹೆಯ‌ ಮೇರೆಗೆ ಗೊಬ್ಬರಕ್ಕೆ ಅವಶ್ಯವಿರುವ ‌ಪೋಷಕಾಂಶಗಳನ್ನು ಸೇರ್ಪಡೆ ಮಾಡಿ ಹೆಚ್ಚು ರಸಪೂರಣಗೊಳಿಸಲಾಗಿದೆ.

ನಗರದ ಹೊರ ವಲಯದಲ್ಲಿರುವ ಕಾಳೇನಹಳ್ಳಿ ಕಸ ಸಂಗ್ರಹ ಘಟಕದಲ್ಲಿ ಕಸವನ್ನು‌ ಹದಗೊಳಿಸಿ ಗೊಬ್ಬರ ತಯಾರಿಸಲಾಗಿದೆ. ಸದ್ಯ ಪ್ರಾಂಗಣದಲ್ಲಿ 50 ಟನ್ ಗೊಬ್ಬರ ಲಭ್ಯವಿದೆ.‌ ಪ್ರತಿ ಕೆ.ಜಿ‌ ಗೊಬ್ಬರಕ್ಕೆ ₹ 3 ದರ ನಿಗದಿಗೊಳಿಸಲಾಗಿದ್ದು ರೈತರಿಗೆ‌ ಮಾರಾಟ‌ ಮಾಡಲಾಗುತ್ತಿದೆ.

ನಗರಸಭೆ ಕಚೇರಿಯಲ್ಲಿ ಹಣ ಪಾವತಿಸಿ ಕಸ ಸಂಗ್ರಹ ಪ್ರಾಂಗಣಕ್ಕೆ‌ ತೆರಳಿ‌ ಗೊಬ್ಬರ ಪಡೆಯಬಹುದು.‌ ಹೆಚ್ಚಿನ ಸಂಖ್ಯೆಯ ರೈತರು ತಮಗೆ ಅವಶ್ಯಕತೆ ಇರುವಷ್ಟು ಕಸವನ್ನು ಚೀಲದಲ್ಲಿ‌ ತುಂಬಿಸಿಕೊಂಡು ತೆರಳುತ್ತಿದ್ದಾರೆ. ಕೆಲವರು ತಮ್ಮದೇ ವಾಹನಗಳಲ್ಲಿ‌ ಕಸ ಸಾಗಿಸುತ್ತಿದ್ದರೆ ಹಲವರು ನಗರಸಭೆ ವಾಹನದ ಮೂಲಕವೇ ತಮ್ಮ ಜಮೀನುಗಳಿಗೆ ಕಸ ಸಾಗಿಸುತ್ತಿದ್ದಾರೆ.

‘ಹಲವು ಪೋಷಕಾಂಶಗಳ ಮೂಲಕ ತಯಾರಾಗಿರುವ ಈ ಗೊಬ್ಬರ ಕಬ್ಬು, ತರಕಾರಿ, ಹೂವಿನ ಬೆಳೆಗೆ ಹೇಳಿ ಮಾಡಿಸಿದಂತಿದೆ. ರಾಸಾಯನಿಕ ಗೊಬ್ಬರದಿಂದ ಭೂಮಿ ಹಾಳಾಗುವುದನ್ನು ತಪ್ಪಿಸಲು ಕಾಂಪೋಸ್ಟ್ ಗೊಬ್ಬರ ಉತ್ತಮ ಔಷಧವಾಗಿದೆ’ ಎಂದು ಪಾಂಡವಪುರ ತಾಲ್ಲೂಕು, ಮೆನಾಗಾರ ಗ್ರಾಮದ ಹೂವಿನ ಕೃಷಿಕ ಸುರೇಶ್‌ ತಿಳಿಸಿದರು.

ಸ್ಥಗಿತಗಿಂಡಿದ್ದ ಪ್ರಕ್ರಿಯೆ: ಕಸದಿಂದ ರಸವತ್ತಾದ ಕಾಂಪೋಸ್ಟ್ ತಯಾರಿಕೆ ಇಂದು, ನಿನ್ನೆಯಿಂದ ನಡೆಯುತ್ತಿಲ್ಲ, ಹಲವು ವರ್ಷಗಳಿಂದ ಗೊಬ್ಬರ ತಯಾರಿಕೆ ನಡೆಯುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಗೊಬ್ಬರ ತಯಾರಿಕಾ ಕಾರ್ಯ ಸ್ಥಗಿತಗೊಂಡಿತ್ತು.

ಆದರೆ, ನಗರಸಭೆ ಪೌರಾಯುಕ್ತ ಆರ್.ಮಂಜುನಾಥ್ ವಿಶೇಷ ಆಸಕ್ತಿ ವಹಿಸಿ ಕಸ ತಯಾರಿಕೆ ಪ್ರಕ್ರಿಯೆಗೆ ಮತ್ತೆ ಚಾಲನೆ ನಿಡಿದ್ದಾರೆ. ಕಳೆ‌ದೊಂದು ವರ್ಷದಿಂದ ನಡೆಯುತ್ತಿದ್ದ ಗೊಬ್ಬರ ಪ್ರಕ್ರಿಯೆಗೆ ಫಲ‌ ದೊರೆತಿದ್ದು, ಕಾಂಪೋಸ್ಟ್ ಗೊಬ್ಬರ ಸಿದ್ಧಗೊಳಿಸಿ ರೈತರಿಗೆ ಮಾರಾಟ ಮಾಡಲಾಗುತ್ತಿದೆ.

ಕಾಳೇನಹಳ್ಳಿ ಹೊರವಲಯದಲ್ಲಿ 24 ಎಕರೆ ವಿಶಾಲ ಪ್ರದೇಶದಲ್ಲಿ ಕಸ ನಿರ್ವಹಣಾ ಘಟಕ ನಿರ್ಮಾಣ ಮಾಡಲಾಗಿದೆ. ಅದರಲ್ಲಿ ಹಸಿ ಕಸ, ಒಣ ಕಸ ಬೇರ್ಪಡಿಸಿ ಸಿಮೆಂಟ್‌ ಪ್ರಾಂಗಣದಲ್ಲಿ ಹದಗೊಳಿಸಿ ಕಸ ತಯಾರಿಸಲಾಗುತ್ತಿದೆ. ಸದ್ಯ 2 ವಿಧಾನದಲ್ಲಿ ರೂಪಿಸಲಾಗಿರುವ ಕಾಂಪೋಸ್ಟ್‌ ಗೊಬ್ಬರ ಮಾರಾಟಕ್ಕೆ ಸಿದ್ಧವಿದೆ.

ಸಿಮೆಂಟ್‌ ಪ್ರಾಂಗಣದಲ್ಲಿ (ವಿಂಡೋ ಫ್ಲಾಟ್‌ಫಾರ್ಟ್‌) ಕಸ ಸಂಗ್ರಹಿಸಿ, ಕರಗಿಸಿ, ಅದರೊಂದಿಗೆ ಸಗಣಿಯನ್ನು ಸೇರಿಸಿ ಒಂದೂವರೆ– 2 ತಿಂಗಳವರೆಗೆ ಕರಗಿಸಲಾಗಿದೆ. ಅದನ್ನು ಜರಡಿ ಮಾಡಿದ ನಂತರ ಕಾಂಪೋಸ್ಟ್‌ ಗೊಬ್ಬರವಾಗಿ ಸಿದ್ಧಗೊಳಿಸಲಾಗಿದೆ. ಇನ್ನೊಂದು ಮಾದರಿಯಲ್ಲಿ ಹಸಿ– ಒಣ ಕಸವನ್ನು ಸ್ಕ್ರೀನಿಂಗ್‌ ಯಂತ್ರದ ಮೂಲಕ ಸೋಸಿ (ಫಿಲ್ಟರ್‌) ಕಾಂಪೋಸ್ಟ್‌ ಸಿದ್ಧಪಡಿಸಲಾಗಿದೆ.

ಆರ್‌.ಮಂಜುನಾಥ್‌
ಆರ್‌.ಮಂಜುನಾಥ್‌

ರೈತರಿಗಾಗಿ ಕಸದಿಂದ ರಸ ತಯಾರಿಗೆ ಪ್ರತಿ ಕೆ.ಜಿ ಗೊಬ್ಬರಕ್ಕೆ ₹ 3 ದರ ನಿಗದಿ ಪೋಷಕಾಂಶಗಳಿಂದ ತಯಾರಿಸಿದ ಗೊಬ್ಬರ

ರೈತರಿಗೆ ಸಹಾಯ: ಪೌರಾಯುಕ್ತ ‘ಕೃಷಿ ಇಲಾಖೆ ಅಧಿಕಾರಿಗಳ ಸಲಹೆ ಮೇರೆಗೆ ಕಾಂಪೋಸ್ಟ್‌ ತಯಾರಿಸಲಾಗಿದೆ. ಮುಂಗಾರು ಮಳೆ ಆರಂಭವಾಗಿದ್ದು ಕೃಷಿ ಕಾರ್ಯಗಳೂ ಆರಂಭವಾಗಿವೆ. ಈ ಸಂದರ್ಭದಲ್ಲಿ ರೈತರು ನಮ್ಮ ಕಾಂಪೋಸ್ಟ್‌ ಗೊಬ್ಬರವನ್ನು ಬಳಸಿದರೆ ಉತ್ತಮ ಬೆಳೆ ಪಡೆಯಲು ಸಾಧ್ಯವಾಗುತ್ತದೆ. ರೈತರ ಹೊಲಗಳಿಗೆ ಗೊಬ್ಬರ ಸಾಗಿಸಲು ನಗರಸಭೆಯಿಂದ ಎಲ್ಲಾ ರೀತಿಯ ಸಹಾಯ ಮಾಡಲಾಗುವುದು’ ಎಂದು ನಗರಸಭೆ ಪೌರಾಯುಕ್ತ ಆರ್‌.ಮಂಜುನಾಥ್‌ ಹೇಳಿದರು.

ಸಾವಯವ ಗೊಬ್ಬರ ಸಂಜೀವಿನಿ ‘ಮಂಡ್ಯ ಜಿಲ್ಲೆಯ ರೈತರು ಬೆಳೆಗಳಿಗೆ ರಾಸಾಯನಿಕ ಗೊಬ್ಬರ ಬಳಸುತ್ತಿರುವ ಕಾರಣ ಭೂಮಿಯ ಗುಣಮಟ್ಟ ಹಾಳಾಗುತ್ತಿದೆ. ರೈತರು ಎಚ್ಚೆತ್ತುಕೊಂಡು ಸಾವಯವ ಗೊಬ್ಬರ ಬಳಕೆಯತ್ತ ಚಿಂತಿಸಬೇಕು. ನಗರಸಭೆ ಮಾಡಿರುವ ಕಾಂಪೋಸ್ಟ್‌ ಗೊಬ್ಬರ ಉತ್ತಮವಾಗಿದ್ದು ಕಬ್ಬು ಭತ್ತ ರಾಗಿ ತೆಂಗು ತರಕಾರಿ ಹೂವಿನ ಬೆಳೆಗೆ ಬಳಸಬಹುದು’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿ.ಎಸ್‌.ಅಶೋಕ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT