ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಸೋಂಕಿತ ಸಾವು; ವೈದ್ಯೆ ಮೇಲೆ ಹಲ್ಲೆ, ಕೋವಿಡ್‌ ವಾರ್ಡ್‌ಗೆ ನುಗ್ಗಿದ ಜನ

ಸಾವಿಗೆ ವಿದ್ಯುತ್‌ ಏರಿಳಿತ ಕಾರಣ ಆರೋಪ, ತೀವ್ರ ನಿಗಾ ಘಟಕದಲ್ಲಿ ಗೊಂದಲದ ವಾತಾವರಣ
Last Updated 4 ಮೇ 2021, 13:26 IST
ಅಕ್ಷರ ಗಾತ್ರ

ಮಂಡ್ಯ: ಮಿಮ್ಸ್‌ ಆಸ್ಪತ್ರೆ ಕೋವಿಡ್‌ ವಾರ್ಡ್‌ನಲ್ಲಿ ಯುವಕ ಮೃತಪಟ್ಟ ಕಾರಣ ಆತನ ಸಂಬಂಧಿಕರು ಮಂಗಳವಾರ ಆಕ್ರೋಶಗೊಂಡು ವೈದ್ಯೆಯೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ. ಕೋವಿಡ್‌ ವಾರ್ಡ್‌ಗೆ ನುಗ್ಗಿ ಗೊಂದಲ ಸೃಷ್ಟಿಸಿದ್ದಾರೆ.

ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿನಿ ಡಾ.ಆಯಿಶಾ ಹಲ್ಲೆಗೊಳಗಾಗಿದ್ದು ಅಪಾಯದಿಂದ ಪಾರಾಗಿದ್ದಾರೆ. ವಾರ್ಡ್‌ನ ಇತರ ಸಿಬ್ಬಂದಿ ಅವರನ್ನು ರಕ್ಷಿಸಿದ್ದಾರೆ. ಮೃತಪಟ್ಟ 29 ವರ್ಷದ ಯುವಕ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಂಗಳವಾರ ಮಧ್ಯಾಹ್ನ ವಾರ್ಡ್‌ನಲ್ಲಿ ಕ್ಷಣಕಾಲ ವಿದ್ಯುತ್‌ ಏರಿಳಿತ ಉಂಟಾಯಿತು. ಸ್ಥಗಿತಗೊಂಡಿದ್ದ ವಿದ್ಯುತ್‌ (ಫ್ಲಕ್ಚುಯೇಷನ್‌) ತಕ್ಷಣವೇ ಬಂದಿದೆ.

ವಿದ್ಯುತ್‌ ಶಾರ್ಟ್‌ಸರ್ಕಿಟ್‌ನಿಂದ ವೆಂಟಿಲೇಟರ್‌ ಸ್ಥಗಿತಗೊಂಡು ಯುವಕ ಮೃತಪಟ್ಟಿದ್ದಾನೆ ಎಂದು ಆತನ ಸಂಬಂಧಿಕರು ವಾರ್ಡ್‌ಗೆ ನುಗ್ಗಿ ಗಲಾಟೆ ನಡೆಸಿದರು. ಯುವಕನಿಗೆ ಚಿಕಿತ್ಸೆ ನೀಡತ್ತಿದ್ದ ವೈದ್ಯೆಯ ಮೇಲೆ ಹಲ್ಲೆ ನಡೆಸಿದರು. ವಾರ್ಡ್‌ನಲ್ಲಿ ಗೊಂದಲ ಉಂಟಾಗುತ್ತಿದ್ದಂತೆ ಚಿಕಿತ್ಸೆ ಪಡೆಯುತ್ತಿದ್ದ ಇತರ ರೋಗಿಗಳ ಸಂಬಂಧಿಕರೂ ನುಗ್ಗಿದರು. ವಿದ್ಯುತ್‌ ಸಮಸ್ಯೆಯಿಂದ ತಮ್ಮ ರೋಗಿಗೂ ಸಮಸ್ಯೆ ಆಗಿರಬಹುದು ಎಂಬ ಭಯ ಅವರನ್ನು ಕಾಡಿತು.

ಜನರು ಒಳಗೆ ತೆರಳಿ ತಮ್ಮ ಸಂಬಂಧಿಕರ ಆರೋಗ್ಯ ವಿಚಾರಿಸುತ್ತಿದ್ದರು. ಆತಂಕದಿಂದ ರೋಗಿಯ ಹೆಸರು ಕೂಗುತ್ತಿದ್ದ ಕಾರಣ ಇಡೀ ವಾರ್ಡ್‌ ಗೊಂದಲದ ಗೂಡಾಯಿತು. ಪರಿಸ್ಥಿತಿ ನಿಭಾಯಿಸಲು ಸಾಧ್ಯವಾಗದೇ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದರು. ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸರು ಜನರನ್ನು ಹೊರಗೆ ಎಳೆದು ತಂದು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.

‘ವಾರ್ಡ್‌ನಲ್ಲಿ ಐದಾರು ಸೆಕೆಂಡ್‌ ಮಾತ್ರ ವಿದ್ಯುತ್‌ ಏರಿಳಿತವಾಗಿದೆ, ಇದು ಸಾಮಾನ್ಯ ಸಮಸ್ಯೆ. ಇದರಿಂದ ವೆಂಟಿಲೇಟರ್‌ನಲ್ಲಿರುವ ಇತರ ರೋಗಿಗಳಿಗೆ ಯಾವುದೇ ತೊಂದರೆ ಆಗಿಲ್ಲ. ಯುವಕ ಬೆಂಗಳೂರಿನಲ್ಲಿ ಚಿಕಿತ್ಸೆ ಸಿಗದೇ ಕಡೆಗೆ ಇಲ್ಲಿಗೆ ಬಂದು ದಾಖಲಾಗಿದ್ದರು. ಸೋಂಕಿನಿಂದ ಶ್ವಾಸಕೋಶ ಹಾಳಾಗಿದ್ದು ಬದುಕುವ ಸಾಧ್ಯತೆ ಕ್ಷೀಣ ಎಂದು ನಾವು ನಿನ್ನೆಯೇ ತಿಳಿಸಿದ್ದೆವು. ಅವರು ಸೋಂಕಿನಿಂದ ಮೃತಪಟ್ಟಿದ್ದಾರೆ, ವಿದ್ಯುತ್‌ ಏರಿಳಿತದಿಂದ ಅಲ್ಲ’ ಎಂದು ವೈದ್ಯರು ತಿಳಿಸಿದರು.

ಪ್ರತಿಭಟನೆ: ಡಾ.ಆಯಿಶಾ ಮೇಲಿನ ಹಲ್ಲೆ ಖಂಡಿಸಿ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಪ್ರತಿಭಟನೆ ನಡಸಿದರು. ಜಿಲ್ಲಾಧಿಕಾರಿ ಎಸ್‌.ಅಶ್ವಥಿ ಸ್ಥಳಕ್ಕೆ ಭೇಟಿ ನೀಡಿ, ವೈದ್ಯರು ಹಾಗೂ ಇತರ ಸಿಬ್ಬಂದಿಗೆ ರಕ್ಷಣೆ ನೀಡುವುದಾಗಿ ಭರವಸೆ ನೀಡಿದರು.

ಹಲ್ಲೆ ನಡೆಸಿದವರ ಮೇಲೆ ಎಫ್‌ಐಆರ್‌ ದಾಖಲು ಮಾಡಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಅಶ್ವಿನಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT