ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಚ; ಸಮಾಜ ಬದಲಾಗದಿದ್ದರೆ ಕಂಟಕ: ನ್ಯಾ.ಎನ್‌.ಸಂತೋಷ್‌ ಹೆಗ್ಡೆ

ಪ್ರಶಸ್ತಿ ಪ್ರದಾನ ಸಮಾರಂಭ: ನಿವೃತ್ತ ಲೋಕಾಯುಕ್ತ ನ್ಯಾ.ಎನ್‌.ಸಂತೋಷ್‌ ಹೆಗ್ಡೆ ಅಭಿಮತ
Last Updated 18 ಅಕ್ಟೋಬರ್ 2021, 7:17 IST
ಅಕ್ಷರ ಗಾತ್ರ

ಮಂಡ್ಯ: ‘ಇಂದು ಎಲ್ಲ ಹಗರಣಗಳೂ ಬೆಳಕಿಗೆ ಬರುವುದಿಲ್ಲ. ಅವು ಬಂದರೂ ಅಥವಾ ಕೋಟಿ ಕೋಟಿ ರೂಪಾಯಿ ಕೊಳ್ಳೆ ಹೊಡೆದರೂ ಅವರಿಗೆ ಶಿಕ್ಷೆ ಆಗುವುದಿಲ್ಲ’ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಬೇಸರ ವ್ಯಕ್ತಪಡಿಸಿದರು.

ನಗರದ ಕರ್ನಾಟಕ ಸಂಘದ ಕುವೆಂಪು ಬಯಲು ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಮುಖ್ಯ ನ್ಯಾಯಮೂರ್ತಿ ಎಚ್‌.ಹೊಂಬೇಗೌಡ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಲಂಚ ತೆಗೆದುಕೊಳ್ಳಲು ಬಿಡು ವುದಿಲ್ಲ. ನಾವು ತೆಗೆದುಕೊಳ್ಳುವುದಿಲ್ಲ ಎಂದು ಸಮಾಜದಲ್ಲಿ ಕೆಲವರು ಹೇಳುತ್ತಾರೆ. ಹಾಗಾಗಿ ಇಡೀ ಸಮಾಜವೇ ಬದಲಾಗಬೇಕು. ಇಲ್ಲದಿದ್ದರೆ ಮುಂದೊಂದು ದಿನ ದೊಡ್ಡ ಕಂಟಕವೇ ಎದುರಾಗುತ್ತದೆ. ಜೈಲಿಗೆ ಹೋಗಿ ಬಂದ ವ್ಯಕ್ತಿಗಳಿಗೆ ಹಾರ ತುರಾಯಿ ಹಾಕಲು ಸಾಲುಗಟ್ಟಿ ನಿಂತಿರುತ್ತೇವೆ. ಇದು ದುರಂತ’ ಎಂದು ಅವರು ಹೇಳಿದರು.

‘ಎಲ್ಲ ಹಗರಣಗಳೂ ಬೆಳಕಿಗೆ ಬರುವುದಿಲ್ಲ. ಮಿಲಿಟರಿ ಜೀಪ್‌ ಹಗರಣದಲ್ಲೂ ಕೋಟ್ಯಂತರ ರೂಪಾಯಿ ದುರುಪಯೋಗವಾಯಿತು. ಕಲ್ಲಿದ್ದಲು ಖರೀದಿ ಹಗರಣ ಬಯಲಿಗೆ ಬಂದರೂ ಕೊಳ್ಳೆ ಹೊಡೆದವರಿಗೆ ಶಿಕ್ಷೆ ಆಗಲಿಲ್ಲ. 2021ನೇ ವರ್ಷದಲ್ಲಿದ್ದರೂ ದುರಾಸೆ ಕಡಿಮೆ ಆಗಿಲ್ಲ. ನನಗ್ಯಾಕೆ ಎಂಬ ಭಾವನೆ ಇಟ್ಟುಕೊಂಡರೆ ಸಮಾಜ ಬದಲಾಗಲು ಸಾಧ್ಯವಿಲ್ಲ’ ಎಂದರು.

‘ಶಾಂತಿಯುತ ಬದಲಾವಣೆ ಬರಲು ಕೆಲವು ತಡೆಗಳಿವೆ. ಧರ್ಮ ಮತ್ತು ಭಾಷೆ ದುರ್ಬಳಕೆ ಆದರೆ, ಶಾಂತಿಯುತ ಬದಲಾವಣೆ ಆಗದು. ದುರಾಸೆಗೆ ಮಟ್ಟಹಾಕಿದರೆ ದೇಶದಲ್ಲಿ ಶಾಂತಿ ಸೌಹಾರ್ದ ಹೆಚ್ಚಾಗಿ ಮಾನವೀಯತೆ ಹೆಚ್ಚುತ್ತದೆ. ನನ್ನ ವೃತ್ತಿ ಅನುಭವದಲ್ಲಿ ಲಂಚ ಪಡೆಯುವವರ ವಿರುದ್ಧ ದೂರು ಬಂದಿದೆ. ಲಂಚಕೋರರು ದುರಾಸೆ ಬಿಟ್ಟು ತೃಪ್ತಿ ಎನ್ನುವ ಗುಣ ಇಟ್ಟುಕೊಳ್ಳಬೇಕು’ ಎಂದು ತಿಳಿಸಿದರು.

ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ಅವರು ಮಾಡಿದ ಸೇವೆ ಉತ್ತಮವಾಗಿದೆ. ನಿವೃತ್ತಿ ನಂತರವೂ ಅವರು ಮಾಡಿದ ಯೋಜನೆಗಳು ದಶಕ ಕಳೆದರೂ ಕಾರ್ಯಗತವಾಗಿಲ್ಲ ಎಂಬುದು ಬೇಸರದ ವಿಚಾರ. ಎ.ಜೆ.ಸದಾಶಿವ ಅವರಂಥ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುವುದು ಉತ್ತಮ ಬೆಳವಣಿಗೆ ಎಂದರು.

ಹೈಕೋರ್ಟ್‌ ನ್ಯಾಯಮೂರ್ತಿ ಇ.ಎಸ್.ಇಂದಿರೇಶ್‌ ಮಾತನಾಡಿ, ಮುಖ್ಯ ನ್ಯಾಯಮೂರ್ತಿ ಎಚ್.ಹೊಂಬೇಗೌಡ ಅವರ ಸ್ಮರಣಾರ್ಥ ಪ್ರಶಸ್ತಿ ನೀಡುತ್ತಿರುವುದು ಉತ್ತಮ ಕೆಲಸವಾಗಿದೆ. ಕರ್ನಾಟಕ ಸಂಘದ ವತಿಯಿಂದ ಮತ್ತಷ್ಟು ಸಮಾಜಮುಖಿ ಕೆಲಸಗಳು ಆಗಲಿ ಎಂದು ಹಾರೈಸಿದರು.

ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ಅವರಿಗೆ ಮುಖ್ಯ ನ್ಯಾಯಮೂರ್ತಿ ಎಚ್‌.ಹೊಂಬೇಗೌಡ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಾಸಕ ಎಂ.ಶ್ರೀನಿವಾಸ್, ಜಿಲ್ಲಾ ಪ್ರಧಾನ ಸೆಷನ್ಸ್‌ ನ್ಯಾಯಾಧೀಶ ಎಸ್‌.ಬಿ.ವಸ್ತ್ರಮಠ, ವಕೀಲರ ಸಂಘದ ಅಧ್ಯಕ್ಷ ಸಿ.ಎಲ್‌.ಶಿವಕುಮಾರ್, ಹಿರಿಯ ವಿಜ್ಞಾನಿ ಡಾ.ಎಚ್.ಶರತ್‌ಚಂದ್ರ, ಸಂಚಾಲಕ ಚಿಕ್ಕಹಾರೋಹಳ್ಳಿ ಸಿ.ಪುಟ್ಟಸ್ವಾಮಿ, ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT