ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ವಕ್ರತುಂಡನ ಪೂಜೆಗೆ ಕ್ಷಣಗಣನೆ

* ಎಲ್ಲೆಡೆ ಗೌರಿ ಗಣೇಶ ಹಬ್ಬದ ಸಂಭ್ರಮ ಪರಿಸರ ಸ್ನೇಹಿ ಮೂರ್ತಿಗಳ ಪ್ರತಿಷ್ಠಾಪನೆಗೆ ಸಿದ್ಧತೆ
Published 17 ಸೆಪ್ಟೆಂಬರ್ 2023, 13:45 IST
Last Updated 17 ಸೆಪ್ಟೆಂಬರ್ 2023, 13:45 IST
ಅಕ್ಷರ ಗಾತ್ರ

ಮಂಡ್ಯ: ‘ವಕ್ರತುಂಡ ಮಹಾಕಾಯ‘ನ ಗುಣಗಾನದೊಂದಿಗೆ ಜಿಲ್ಲೆಯಲ್ಲಿ ಹಬ್ಬದ ಸಿದ್ಧತೆಯು ಭಾನುವಾರ ಭರದಿಂದ ಸಾಗಿತ್ತು.

ಈ ಬಾರಿ ಗಣೇಶ ಚತುರ್ಥಿಯು ಸೆ.18 ರಿಂದ ಪ್ರಾರಂಭವಾಗುತ್ತಿದೆ.  ಈ ಹಬ್ಬದ ಶುಭ ಸಂದರ್ಭದಲ್ಲಿ ಶುಭಾಶಯಗಳನ್ನು ಸ್ನೇಹಿತರೊಂದಿಗೆ, ಪ್ರೀತಿ ಪಾತ್ರರೊಂದಿಗೆ ಹಂಚಿಕೊಳ್ಳಲು ಬಯಸುವ ಯುವ ಸಮೂಹವು ಗೌರಿ ಗಣೇಶನನ್ನು ಪ್ರತಿಷ್ಠಾಪಿಸಿ ಸಂಗೀತ, ಭಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸುವ ಮೂಲಕ ವಿಜೃಂಭಣೆಯಿಂದ ಹಬ್ಬಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವುದು ವಿಶೇಷವಾಗಿ ಕಂಡು ಬಂದಿತು.

ಈ ಹಿನ್ನಲೆಯಲ್ಲಿ ನಗರದ ಸೇರಿದಂತೆ ಪಟ್ಟಣ ಪ್ರದೇಶಗಳ ಪೇಟೆ, ಸಂತೆಗಳಲ್ಲಿ ಹೂವು ಹಣ್ಣು ಹಾಗೂ ವಿಶೇಷವಾಗಿ ಗೌರಿ ಸಾಮಾನು ಕೊಂಡುಕೊಳ್ಳುವ ದೃಶ್ಯ ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ಕಂಡು ಬಂದಿತು, ಬಾಳೆದಿಂಡು, ಮಾವಿನ ಎಲೆ, ಕಬ್ಬಿನ ಗರಿ ಮಾರಾಟವು ಪ್ರಮುಖ ರಸ್ತೆ ಬದಿಯಲ್ಲಿ ಬಲು ಜೋರಾಗಿಯೇ ನಡೆದಿತ್ತು.

ಗೌರಿ ಮತ್ತು ಗಣೇಶ ಮೂರ್ತಿಗಳನ್ನು ತೆಗೆದುಕೊಂಡು ಹೋಗುತ್ತಿದ್ದುದು ಸಾಮಾನ್ಯವಾಗಿತ್ತು. ಗೌರಿ ಪೂಜಿಸಲು, ಅರಿಶಿನ, ಕುಂಕುಮ, ಬಳೆ, ರವಿಕೆ ಕಣ, ಬಿಚ್ಚೋಲೆ ಸೇರಿದಂತೆ ಇನ್ನಿತರ ಪೂಜಾ ಸಾಮಗ್ರಿಗಳನ್ನು ಖರೀದಿಸುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

ಹೂ, ತರಕಾರಿ ಬೆಲೆ ಸ್ಥಿರವಾಗಿದ್ದರೆ, ಹಣ್ಣು ದುಬಾರಿಯಾಗಿ ಕಂಡು ಬಂದಿತು. ಹಬ್ಬಕ್ಕೆ ಹಣ್ಣು, ಹೂವಿನ ಬೆಲೆ ಹೆಚ್ಚಳವಾಗಿದೆ. ಪ್ರತಿ ಕೆಜಿ ಕ್ಯಾರೆಟ್ ₹40, ಬೀನ್ಸ್‌ ₹80, ಬದನೆಕಾಯಿ ₹30, ದಪ್ಪ ಮೆಣಸಿನಕಾಯಿ ₹40, ಗೆಡ್ಡೆಕೋಸು ₹80, ಟೊಮೆಟೊ ₹20, ಬೀಟ್‌ರೂಟ್‌ ₹40, ಅವರೆಕಾಯಿ ₹60, ಈರೇಕಾಯಿ ₹20, ಸೇವಂತಿಗೆ ಹೂವು ಪ್ರತಿ ಮಾರಿಗೆ ₹15 ರಿಂದ ₹30 ವರೆಗೆ ಮಾರಾಟ ಮಾಡಲಾಗುತ್ತಿತ್ತು.

ಮಲ್ಲಿಗೆ, ಕಾಕಡ, ಸುಗಂಧ ರಾಜ ಹೂವಿನ ಹಾರಗಳಿಗೆ ಬೇಡಿಕೆ ಹೆಚ್ಚಾಗಿಯೇ ಇದ್ದು, ₹120 ರಿಂದ ₹150 ರವರೆಗೆ ಒಂದು ಹಾರಕ್ಕೆ ಮಾರಾಟ ಮಾಡಲಾಗುತ್ತಿತ್ತು. ವಿಶೇಷವಾಗಿ ರುದ್ರಾಕ್ಷಿ ಮಾಲೆಗೆ ₹500 ರಿಂದ ₹600 ರವರೆಗೆ ಮಾರಾಟ ಮಾಡುತ್ತಿದ್ದರು.

ಗೌರಿ ಗಣೇಶ ಹಬ್ಬದ ದಿನಗಳಲ್ಲಿ ಹಣ್ಣುಗಳಿಗೆ ಎಲ್ಲಿಲ್ಲದ ಬೇಡಿಕೆ ಹೆಚ್ಚುತ್ತದೆ, ಏಕೆಂದರೆ ಗೌರಿ ಗಣೇಶ ಪ್ರತಿಷ್ಠಾಪನೆಯಲ್ಲಿ ಪ್ರತಿ ಹಣ್ಣುಗಳಿಗೂ ದಾರವನ್ನು ಕಟ್ಟಿ ತೂಗು ಬಿಡುವ ಮೂಲಕ ವಿಶೇಷವಾಗಿ ಮಂಟಪದಲ್ಲಿ ಅಲಂಕಾರ ಮಾಡಲಾಗಿರುತ್ತದೆ. ಹಾಗಾಗಿ ಬೆಲೆಯೂ ಸಾಮಾನ್ಯ ದಿನಗಳಿಗಿಂತ ಸ್ವಲ್ಪ ಮಟ್ಟಿಗೆ ಹೆಚ್ಚಿತ್ತು. ಪ್ರತಿ ಕೆಜಿ ಮೂಸಂಬಿ ₹80, ಸೇಬು ₹100 ರಿಂದ ₹160, ದಾಳಿಂಬೆ ₹140, ಕಿತ್ತಳೆ ₹80, ದ್ರಾಕ್ಷಿ ₹200, ಏಲಕ್ಕಿಬಾಳೆ ₹100 ರಿಂದ ₹120, ಪಚ್ಚಬಾಳೆ ₹50 ರಿಂದ ₹60, ಮರಸೇಬು ₹80 ರಂತೆ ಮಾರಾಟ ಮಾಡಲಾಗುತ್ತಿತ್ತು.

ಗೌರಿ ಗಣೇಶ ಮೂರ್ತಿಗಳನ್ನು ಕೊಂಡುಕೊಳ್ಳಲು ಬೇಡಿಕೆ ಹೆಚ್ಚಾಗಿ ಕಂಡು ಬಂದಿತು. ನಗರಸಭೆ ವತಿಯಿಂದ ಒಳಾಂಗಣ ಕ್ರೀಡಾಂಗಣ ಬಳಿ ಮಾರಾಟಕ್ಕೆ ವ್ಯವಸ್ಥೆ ಮಾಡಿದ್ದರೆ, ಕೆಲ ವ್ಯಾಪಾರಿಗಳು ತಮ್ಮದೇ ಆದ ಅಂಗಡಿಗಳನ್ನು ಬಾಡಿಗೆಗೆ ಪಡೆದು ಮಾರಾಟ ಮಾಡುತ್ತಿದ್ದರು.

ಕೆಲವು ಗೌರಿ ಗಣೇಶ ಮೂರ್ತಿ ತಯಾರಕರು ಪರಿಸರ ಸ್ನೇಹಿ ಮೂರ್ತಿಗಳನ್ನು ಕಳೆದ ಹದಿನೈದು ದಿನಗಳಿಂದಲೇ ಮಾರಾಟಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ನಗರ ಮತ್ತು ಗ್ರಾಮೀಣ ಭಾಗದಿಂದ ಆಗಮಿಸಿದ ಯುವ ಸಮೂಹವು ಮುಂಗಡ ಹಣ ಕೊಟ್ಟು ಬುಕ್ಕಿಂಗ್‌ ಮಾಡಿಕೊಂಡಿದ್ದರು, ಹಬ್ಬದ ಮುನ್ನ ದಿನವೂ ಬುಕ್ಕಿಂಗ್‌ ಜೋರಾಗಿಯೇ ನಡೆದು ಸೋಮವಾರ ಮೂರ್ತಿಗಳನ್ನು ತೆಗೆದುಕೊಳ್ಳುವ ಸಿದ್ಧತೆಯ ಸಂಭ್ರಮದ ಮಂದಹಾಸಕ್ಕೆ ಪಾರವೇ ಇರಲಿಲ್ಲ.

ಸಡಗರದಿಂದ ಗೌರಿ, ಗಣೇಶ ಪೂಜಿಸಲು ಸಿದ್ದರಾದ ಜನಸ್ತೋಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT