ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ | ಜಿಲ್ಲೆಯಲ್ಲಿ 99ಕ್ಕೆ ಇಳಿದ ಕೋವಿಡ್‌ ಸಕ್ರಿಯ ಪ್ರಕರಣಗಳ ಸಂಖ್ಯೆ

ವೈದ್ಯೆ ಡಾ.ರುಕ್ಮಿಣಿ ಸೇರಿ 13 ಮಂದಿ ಬಿಡುಗಡೆ, ರೋಗ ಜಯಿಸಿದವರಿಗೆ ಹೂವಿನ ಅಭಿಷೇಕ
Last Updated 9 ಜೂನ್ 2020, 15:26 IST
ಅಕ್ಷರ ಗಾತ್ರ

ಮಂಡ್ಯ: ಕೋವಿಡ್‌ನಿಂದ ಗುಣಮುಖರಾದ ಕೊರೊನಾ ವಾರಿಯರ್‌, 68 ವರ್ಷದ ವೈದ್ಯೆ ಡಾ.ರುಕ್ಮಿಣಿ ಸೇರಿ 13 ಮಂದಿ ಮಂಗಳವಾರ ಜಿಲ್ಲಾಸ್ಪತ್ರೆಯಿಂದ ಬಿಡುಗಡೆಯಾದರು. ಗುಣಮುಖರಾದವರ ಸಂಖ್ಯೆ 255ಕ್ಕೆ ಏರಿಕೆಯಾಗಿದ್ದು ಸಕ್ರಿಯ ಪ್ರಕರಣಗಳ ಸಂಖ್ಯೆ 99ಕ್ಕೆ ಇಳಿಕೆಯಾಗಿದೆ.

ಕೆ.ಆರ್‌.ಪೇಟೆ ತಾಲ್ಲೂಕಿನ ಕ್ವಾರಂಟೈನ್‌ ಕೇಂದ್ರಗಳಲ್ಲಿ ಕೆಲಸ ಮಾಡುತ್ತಿದ್ದ ಡಾ.ರುಕ್ಮಿಣಿ ಅವರಿಗೆ ಕೋವಿಡ್‌–19 ಪತ್ತೆಯಾಗಿತ್ತು. ಕೋವಿಡ್‌ ವಾರಿಯರ್‌ಗೆ ಸೋಂಕು ಪತ್ತೆಯಾದ ಕಾರಣ ಆತಂಕ ಮನೆ ಮಾಡಿತ್ತು. ಆದರೆ 14 ದಿನಗಳಲ್ಲಿ ಅವರು ಕೋವಿಡ್‌ ವಿರುದ್ಧ ಗೆಲುವು ಸಾಧಿಸಿದ್ದಾರೆ. ಅವರಿಗೆ ಸಕಲ ಗೌರವಗಳ ಮೂಲಕ ಜಿಲ್ಲಾಡಳಿತ ಬೀಳ್ಕೊಡುಗೆ ನೀಡಿತು. ರುಕ್ಮಿಣಿ ಸೇರಿ ಬಿಡುಗಡೆಯಾದ ಎಲ್ಲರಿಗೂ ಹೂವಿನ ಅಭಿಷೇಕ ಮಾಡುವ ಮೂಲಕ ಮನೆಗೆ ಕಳುಹಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ‘ಸರ್ಕಾರದ ಕಾರ್ಯಸೂಚಿಯಂತೆ 55 ವರ್ಷ ಮೇಲ್ಪಟ್ಟವರು ಕೋವಿಡ್‌ ಕರ್ತವ್ಯದಲ್ಲಿ ಪಾಲ್ಗೊಳ್ಳುವಂತಿಲ್ಲ. ಆದರೆ ಡಾ.ರುಕ್ಮಿಣಿ ಅವರು ಸ್ವಯಂ ಪ್ರೇರಿರಾಗಿ ಕೆಲಸ ಮಾಡುತ್ತಿದ್ದರು. ಅವರಿಗೆ ನೆಗೆಟಿವ್‌ ಬಂದಿರುವುದು ಎಲ್ಲರಿಗೂ ಸ್ಫೂರ್ತಿ ಬಂದಿದೆ. ಅವರ ಕಾರ್ಯ ಮಾದರಿಯಾಗಿದ್ದು ಜಿಲ್ಲೆಯ ವೈದ್ಯರಿಗೆ ಮಾನಸಿಕ ಸ್ಥೈರ್ಯ ತುಂಬಿದ್ದಾರೆ’ ಎಂದು ಹೇಳಿದರು.

‘ರುಕ್ಮಿಣಿ ಅವರನ್ನು 68 ವರ್ಷ ವಯಸ್ಸಿನ ಯುವತಿ ಎಂದು ಹೇಳಬಹುದು. ವಯಸ್ಸಾದವರಿಗೆ ಕೋವಿಡ್‌ ಬಂದರೆ ಅಪಾಯ ಎಂದು ಹೇಳಲಾಗುತ್ತದೆ. ಆದರೆ ಅವರು ರೋಗವನ್ನು ಬಹಳ ಆತ್ಮವಿಶ್ವಾಸದಿಂದ ಎದುರಿಸಿದ್ದಾರೆ. ಆ ಮೂಲಕ ಜಿಲ್ಲೆಯ ಜನರಿಗೆ ಸ್ಫೂರ್ತಿ ತುಂಬಿದ್ದಾರೆ. ಅಷ್ಟೇ ಅಲ್ಲದೇ ಕೋವಿಡ್‌ ವಿರುದ್ಧ ಹೋರಾಟ ಮಾಡುತ್ತಿರುವ ಎಲ್ಲಾ ವೈದ್ಯರು ಹಾಗೂ ಸಿಬ್ಬಂದಿಗೆ ಧೈರ್ಯ ತುಂಬಿದ್ದಾರೆ’ ಎಂದು ಹೇಳಿದರು.

‘ಸಕ್ರಿಯ ಪ್ರಕರಣಗಳ ಸಂಖ್ಯೆ ಈಗ ಎರಡಂಕಿಗೆ ಇಳಿದಿದೆ. ಇನ್ನು ಕೆಲವೇ ದಿನಗಳಲ್ಲಿ ಪ್ರತಿಯೊಬ್ಬರೂ ಸಂಪೂರ್ಣವಾಗಿ ಗುಣಮುಖರಾಗುತ್ತಾರೆ. ಹೀಗಾಗಿ ಜಿಲ್ಲೆಯ ಜನರು ಸೋಂಕಿನ ಬಗ್ಗೆ ಯಾವುದೇ ಭಯಪಡಬಾರದು. ತಮ್ಮ ಎಚ್ಚರಿಕೆಯಲ್ಲಿ ತಾವು ಇರಬೇಕು. ವೈಯಕ್ತಿಕ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು’ ಎಂದು ಸಲಹೆ ನೀಡಿದರು.

ವೈದ್ಯೆ ಡಾ.ರುಕ್ಮಿಣಿ ಮಾತನಾಡಿ ‘ಕೋವಿಡ್‌ ಪಾಸಿಟಿವ್‌ ಬಂದ ನಂತರ ನನಗೂ ಗಾಬರಿಯಾಗಿತ್ತು. ಆದರೆ ನಾನು ಧೈರ್ಯ ಕಳೆದುಕೊಳ್ಳಲಿಲ್ಲ. ನಗುನಗುತ್ತಲೇ ರೋಗವನ್ನು ಎದುರಿಸಿದ್ದೇನೆ. ಕೊರೊನಾ ಸೋಂಕು ಸದ್ಯಕ್ಕೆ ನಿಲ್ಲುವಂಥದ್ದಲ್ಲ. ಎಲ್ಲರೂ ಇದನ್ನು ಭಯಪಡದೇ ಎದುರಿಸಬೇಕು. ಸೋಂಕಿನ ಜೊತೆಯಲ್ಲೇ ಬದುಕಬೇಕಾಗಿದೆ. ಹೀಗಾಗಿ ಜನರು ಭಯಪಡದೇ ರೋಗದ ವಿರುದ್ಧ ಹೋರಾಟ ನಡೆಸಬೇಕು’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸಿಇಒ ಕೆ.ಯಾಲಕ್ಕಿಗೌಡ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್‌.ಪಿ.ಮಂಚೇಗೌಡ ಇದ್ದರು.

ಮಂಗಳವಾರ ಒಂದೂ ಪ್ರಕರಣ ಇಲ್ಲ
ಮಂಗಳವಾರ ಮಂಡ್ಯ ಜಿಲ್ಲೆಯಲ್ಲಿ ಒಂದೂ ಕೋವಿಡ್‌ ಪ್ರಕರಣ ಕಂಡು ಬಂದಿಲ್ಲ. ಮುಂಬೈ ವಲಸಿಗರು ಬಹುತೇಕ ಮಂದಿ ಕ್ವಾರಂಟೈನ್‌ ಅವಧಿ ಮುಗಿಸಿ ಮನೆಗೆ ತೆರಳಿದ್ದಾರೆ. ಕೆ.ಆರ್‌.ಪೇಟೆಯ ಸ್ಕೂಲ್‌ ಆಫ್‌ ಇಂಡಿಯಾದಲ್ಲಿ ಮಾತ್ರ ವಲಸಿಗರನ್ನು ಇರಿಸಲಾಗಿದೆ.

ಕ್ವಾರಂಟೈನ್‌ನಲ್ಲಿ ಉಳಿದವರನ್ನು ಮಾತ್ರ ಪರೀಕ್ಷೆ ಮಾಡಲಾಗುತ್ತಿದೆ. ಕೆಲವರನ್ನು ಮರು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಇನ್ನೂ 354 ಮಂದಿಯ ವರದಿ ಬರಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT