ಭಾನುವಾರ, ಏಪ್ರಿಲ್ 11, 2021
29 °C
3ನೇ ಹಂತದ ಅಭಿಯಾನ ಆರಂಭ, ಕೋವಿನ್‌ 2.0 ಪೋರ್ಟಲ್‌ನಲ್ಲಿ ಹೆಸರು ನೋಂದಣಿ ಅವಶ್ಯ

ಜನಸಾಮಾನ್ಯರಿಗೂ ಕೋವಿಡ್‌ ಲಸಿಕೆ ಲಭ್ಯ: ಮಂಡ್ಯ ಜಿಲ್ಲಾಧಿಕಾರಿ ಎಸ್‌.ಅಶ್ವಥಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಮೂರನೇ ಹಂತದ ಕೋವಿಡ್‌ ಲಸಿಕೆ ಅಭಿಯಾನ ಆರಂಭವಾಗಿದ್ದು ಸೋಮವಾರ ಹಿರಿಯ ನಾಗರಿಕರು ಬಹಳ ಉತ್ಸಾಹದಿಂದ ಲಸಿಕೆ ಪಡೆದರು. ವಿವಿಧ ತಾಲ್ಲೂಕು ಆಸ್ಪತ್ರೆ, ಇತರ ಲಸಿಕಾ ಕೇಂದ್ರಗಳಲ್ಲೂ ಅಭಿಯಾನ ಆರಂಭವಾಯಿತು.

ಮಾರ್ಚ್‌ 1ರಿಂದ ಜನಸಾಮಾನ್ಯರಿಗೂ ಲಸಿಕೆ ನೀಡುವ ಪ್ರಕ್ರಿಯೆ ಆರಂಭವಾಗಿದ್ದು ನಗರದ ಮಿಮ್ಸ್‌ ಆಸ್ಪತ್ರೆ ಕೋವಿಡ್‌–19 ಲಸಿಕಾ ಕೇಂದ್ರದಲ್ಲಿ 30ಕ್ಕೂ ಹೆಚ್ಚು ಮಂದಿ ಲಸಿಕೆ ಪಡೆದರು. ಮಧ್ಯಾಹ್ನ 12.30ರ ನಂತರ ಸ್ಥಳದಲ್ಲೇ ಹೆಸರು ನೋಂದಣಿ ಮಾಡಿಕೊಂಡು ಲಸಿಕೆ ಪಡೆದರು. ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಹಿರಿಯ ನಾಗರಿಕರು ಸ್ವಯಂಪ್ರೇರಿತರಾಗಿ ಲಸಿಕೆ ಪಡೆದರು. ಕೊರೊನಾ ಸೋಂಕಿನ ಕಾರಣದಿಂದ ಮನೆಯಲ್ಲೇ ಇದ್ದ ವಯೋವೃದ್ಧರು ಲಸಿಕೆ ಪಡೆಯಲು ಮೊದಲ ದಿನವೇ ಹಾಜರಿದ್ದರು.

ಲಸಿಕೆ ಅಭಿಯಾನಕ್ಕೆ ಜಿಲ್ಲಾಧಿಕಾರಿ ಎಸ್‌.ಅಶ್ವಥಿ ಚಾಲನೆ ನೀಡಿದರು. ಈಸಂದರ್ಭದಲ್ಲಿ ಮಾತನಾಡಿದ ಅವರು ‘ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ, ಎರಡನೇ ಹಂತದಲ್ಲಿ ಮುಂಚೂಣಿ ಕಾರ್ಯಕರ್ತರಾದ ಪೊಲೀಸರು, ಕಂದಾಯ, ಪಂಚಾಯತ್‌ ರಾಜ್‌ ಇಲಾಖೆಯ, ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಲಸಿಕೆ ನೀಡಲಾಗಿತ್ತು. ಮೂರನೇ ಹಂತದಲ್ಲಿ ಹಿರಿಯ ನಾಗರಿಕರಿಗೆ, ಜನಸಾಮಾನ್ಯರಿಗೆ ಲಸಿಕೆ ನೀಡಲಾಗುತ್ತಿದೆ’ ಎಂದರು.

‘ಜನಸಾಮಾನ್ಯರು ಲಸಿಕೆ ಪಡೆಯಲು ಕೋವಿನ್‌ 2.0 ಪೋರ್ಟಲ್‌ನಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಬೇಕು. ಹಿರಿಯರು ವೈದ್ಯಕೀಯ ಪ್ರಮಾಣಪತ್ರದೊಂದಿಗೆ ಹೆಸರು ನೋಂದಣಿ ಮಾಡಿಕೊಳ್ಳಬಹುದು. ಮಾರ್ಚ್‌ 1–4ರವರೆಗೆ ಜನರಿಗೆ ಲಸಿಕೆ ನೀಡಲಾಗುತ್ತಿದ್ದು ಜಿಲ್ಲೆಯ 9 ಕೇಂದ್ರಗಳಲ್ಲಿ ಲಸಿಕೆ ಹಾಕಲಾಗುವುದು’ ಎಂದು ಹೇಳಿದರು.

‘6 ತಾಲ್ಲೂಕು ಆಸ್ಪತ್ರೆ, ಮಿಮ್ಸ್‌ ಆಸ್ಪತ್ರೆ, ಆದಿಚುಂಚನಗಿರಿ, ಸ್ಯಾಂಜೋ ಆಸ್ಪತ್ರೆಯಲ್ಲಿ ಮಧ್ಯಾಹ್ನ 12 ರಿಂದ ಸಂಜೆ 5 ರವರೆಗೆ ಲಸಿಕೆ ಹಾಕಲಾಗುವುದು. ಮಾರ್ಚ್‌ 4ರ ನಂತರ ಬೆಳಿಗ್ಗೆಯಿಂದಲೇ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುವುದು. ಒಂದು ಮೊಬೈಲ್‌ ನಂಬರ್‌ನಲ್ಲಿ ನಾಲ್ವರ ಹೆಸರುಗಳನ್ನು ಕೋವಿನ್‌ 2.0 ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬಹುದು. ವಿಳಾಸ ಪುರಾವೆ ನೀಡಬೇಕು’ ಎಂದರು.

‘ಲಸಿಕೆ ಪಡೆದ 28 ದಿನಗಳ ನಂತರ ಮೊದಲ ಡೋಸ್‌, 42 ದಿನಗಳ ಒಳಗೆ ಎರಡನೇ ಡೋಸ್‌ ಪಡೆಯಬಹುದು. ಯಾವ ದಿನ, ಸಮಯಕ್ಕೆ ಹೋಗಬಹುದು ಎಂಬುದನ್ನು ಪೋರ್ಟಲ್‌ನಲ್ಲಿ ಆಯ್ಕೆ ಮಾಡಿಕೊಳ್ಳಬಹುದು. ಎಲ್ಲರೂ ಇದನ್ನು ಸದುಪಯೋಗಪಡಿಸಿಕೊಳ್ಳಬಹುದು’ ಎಂದು ಹೇಳಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್‌.ಪಿ.ಮಂಚೇಗೌಡ ಮಾತನಾಡಿ ‘ಜಿಲ್ಲೆಯಲ್ಲಿ 1.48 ಲಕ್ಷ ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಆಸ್ಪತ್ರೆಯಲ್ಲಿ ದಿನಕ್ಕೆ  200 ಮಂದಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. 45 ವರ್ಷದ ಮೇಲ್ಪಟ್ಟ, ಆನಾರೋಗ್ಯ ಹೊಂದಿರುವವರು ಲಸಿಕೆ ಪಡೆಯಬಹುದು. ಖಾಸಗಿ ಆಸ್ಪತ್ರೆಯಲ್ಲಿ ₹250 ಶುಲ್ಕ ನೀಡಿ ಲಸಿಕೆ ಪಡೆಯಬಹುದು’ ಎಂದರು.

‘ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಲಸಿಕೆ ನೀಡಲಾಗುವುದು. ಮುಂದಿನ ದಿನಗಳಲ್ಲಿ ಎಲ್ಲಾ ಸರ್ಕಾರಿ ಆಸ್ಪತ್ರೆ, ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುವುದು. ಸಾಕಷ್ಟು ಹೆಸರಾಂತ ವೈದ್ಯರೂ ಲಸಿಕೆ ಪಡೆದಿದ್ದು, ಯಾವುದೇ ತೊಂದರೆ ಉಂಟಾಗಿಲ್ಲ. ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಕೈ ನೋವು, ಸಣ್ಣ ಜ್ವರ ಉಂಟಾಗಬಹುದು ಅದರ ಹೊರತಾಗಿ ಯಾವುದೇ ತೊಂದರೆ ಉಂಟಾಗಿಲ್ಲ’ ಎಂದರು.

ಲಸಿಕೆ ಪಡೆದ ನಿವೃತ್ತ ಪ್ರಾಧ್ಯಾಪಕ ಎಸ್‌. ಪಾಪಣ್ಣ ಮಾತನಾಡಿ ‘ಲಸಿಕೆ ಪಡೆದಿದ್ದು, ಯಾವುದೇ ತೊಂದರೆಯಾಗಿಲ್ಲ. ಯಾವುದೇ ನೋವು ಉಂಟಾಗಿಲ್ಲ. ಯಾವುದೇ ವದಂತಿಗಳಿಗೆ ಕಿವಿಗೊಡದೆ ಎಲ್ಲರೂ ಧೈರ್ಯದಿಂದ ಲಸಿಕೆ ಪಡೆಯಬಹುದು’ ಎಂದರು.

ಲಸಿಕೆ ಪಡೆಯಲು ಹಿಂಜರಿಕೆ ಬೇಡ

ಕೋವಿಡ್‌ ಲಸಿಕೆ ಪಡೆಯುವಲ್ಲಿ ಕಳೆದ ಎರಡೂ ಹಂತಗಳಲ್ಲಿ ಆರೋಗ್ಯ ಕಾರ್ತಯಕರ್ತರು ಹಾಗೂ ಮುಂಚೂಣಿ ಕಾರ್ಯಕರ್ತರು ಹಿಂದೇಟು ಹಾಕಿರುವುದು ಸ್ಪಷ್ಟವಾಗಿದೆ. ಎರಡೂ ಹಂತಗಳಲ್ಲಿ ಶೇ 70– 80ರಷ್ಟು ಸಾಧನೆಯಾಗಿದೆ. ಅಡ್ಡ ಪರಿಣಾಮ ಉಂಟಾಗಬಹುದು ಎಂಬ ಭಯದಿಂದ ಕೆಲವರು ಲಸಿಕೆ ಪಡೆದಿದೆ. ಯಾವುದೇ ತೊಂದರೆ ಆಗುವುದಿಲ್ಲ ಎಂಬ ಪ್ರಚಾರ ನಡೆಯುತ್ತಿದ್ದರೂ ಕೆಲವರು ಲಸಿಕೆ ಪಡೆಯಲು ಹಿಂಜರಿದಿದ್ದಾರೆ.

‘ಯಾವುದೇ ಹಿಂಜರಿಕೆ ಇಲ್ಲದೆ ಸಾರ್ವಜನಿಕರು ಲಸಿಕೆ ಪಡೆಯಬಹುದು. ಲಸಿಕೆ ನೀಡಿದ ನಂತರ ಅರ್ಧಗಂಟೆ ಆರೋಗ್ಯದ ಮೇಲೆ ನಿಗಾ ವಹಿಸಲಾಗುತ್ತದೆ. ಹೀಗಾಗಿ ಯಾವುದೇ ಭಯ ಇಲ್ಲದೇ ಲಸಿಕೆ ಪಡೆಯಬೇಕು. ಅಭಿಯಾನವನ್ನು ಯಶಸ್ವಿಗೊಳಿಸಬೇಕು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್‌.ಪಿ.ಮಂಚೇಗೌಡ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು