ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಗಾಲದ ಹೊಡೆತ; ಅಂತರ್ಜಲ ಕುಸಿತ: ನೀರಿಲ್ಲದೆ ಒಣಗುತ್ತಿವೆ ಬೆಳೆಗಳು

ಅಣ್ಣೂರು ಜಗದೀಶ್‌
Published 26 ಏಪ್ರಿಲ್ 2024, 6:54 IST
Last Updated 26 ಏಪ್ರಿಲ್ 2024, 6:54 IST
ಅಕ್ಷರ ಗಾತ್ರ

ಭಾರತೀನಗರ: ಜಿಲ್ಲೆಯಲ್ಲಿ ಬರಗಾಲ ಆವರಿಸಿದ್ದು, ಮಂಡ್ಯ ಜಿಲ್ಲೆಯ ಪ್ರಮುಖ ಆರ್ಥಿಕ ಬೆಳೆಯಾದ ಕಬ್ಬು ಸೇರಿದಂತೆ ಎಲ್ಲಾ ರೀತಿಯ ಬೆಳೆಗಳು ಒಣಗಿ ಹೋಗಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ತಾಲ್ಲೂಕಿನಲ್ಲಿ ಅಂತರ್ಜಲ ನೂರಾರು ಅಡಿ ಕುಸಿತ ದಾಖಲಿಸಿದ್ದು, ಬೋರ್‌ವೆಲ್‌ಗಳನ್ನು ಆಶ್ರಯಿಸಿದ್ದ ರೈತರೂ ಕೂಡ ಬೆಳೆದ ಬೆಳೆಗಳನ್ನು ಕಳೆದು ಕೊಳ್ಳುವಂತಾಗಿದ್ದು ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ.

ಕೆಆರ್‌ಎಸ್‌ ಜಲಾಶಯದಿಂದ ನೀರನ್ನು ನಾಲೆಗಳಿಗೆ ಬಿಟ್ಟಿದ್ದರೆ ಒಂದೆರಡು ಕಟ್ಟು ನೀರಿನಿಂದ ರೈತರು ತಮ್ಮ ಕೈಗೆ ಬಂದ ಬೆಳೆಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿತ್ತು ಎಂದು ರೈತರ ಅಳಲು ತೋಡಿಕೊಂಡಿದ್ದಾರೆ.

ಈ ಭಾಗದ ಕಾಡುಕೊತ್ತನಹಳ್ಳಿ, ಯಲಾದಹಳ್ಳಿ, ಯಡಗನಹಳ್ಳಿ, ಬಿದರಹೊಸಹಳ್ಳಿ, ಬಿದರಹಳ್ಳಿ, ಗುಡಿಗೆರೆ, ಕೆ.ಪಿ.ದೊಡ್ಡಿ, ಮಣಿಗೆರೆ, ಅಣ್ಣೂರು, ಕಾರ್ಕಹಳ್ಳಿ, ಆಲಭುಜನಹಳ್ಳಿ, ಮುಟ್ಟನಹಳ್ಳಿ ಕರಡಕೆರೆ, ಕೆ.ಶೆಟ್ಟಹಳ್ಳಿ, ಮಾದರಹಳ್ಳಿ, ಕಡಿಲುವಾಗಿಲು, ಲಕ್ಷ್ಮೇಗೌಡನದೊಡ್ಡಿ, ಕ್ಯಾತಘಟ್ಟ, ತೊರೆಚಾಕನಹಳ್ಳಿ, ಕಳ್ಳಿಮೆಳೆದೊಡ್ಡಿ, ಚಿಕ್ಕಅರಸಿನಕೆರೆ, ಗರುದೇವರಹಳ್ಳಿ, ಮೆಣಸಗೆರೆ, ದೇವೇಗೌಡನದೊಡ್ಡಿ, ಬೊಪ್ಪಸಮುದ್ರ, ಬೊಮ್ಮನಹಳ್ಳಿ, ಹಾಗಲಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಶೇ.30 ರಿಂದ 40 ಭಾಗದ ಅಚ್ಚುಕಟ್ಟು ಪ್ರದೇಶದಲ್ಲಿ ಮಾತ್ರ ಬೆಳೆಗಳನ್ನು ರೈತರು ಒಡ್ಡಿದ್ದರು.

ಕಳೆದ ಮಳೆಗಾಲದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಾರದ ಕಾರಣ ಉಳಿದ ಶೇಕಡಾ 60 ರಷ್ಟು ಜಮೀನಿನಲ್ಲಿ ರೈತರು ಬೆಳೆ ಒಡ್ಡಲು ಹಿಂದೇಟು ಹಾಕಿದ್ದರು. ಜೂನ್‌ ತಿಂಗಳ ಕಬ್ಬಿನ ಫಸಲು, ಸ್ವಲ್ಪ ತಡವಾಗಿ ನಾಟಿ ಮಾಡಿದ್ದ ಭತ್ತ, ರಾಗಿ ಸೇರಿದಂತೆ ಇತರೆ ಎಲ್ಲಾ ಬೆಳೆಗಳು, ಅದರಲ್ಲೂ ಕೊಳವೆ ಬಾವಿ ಆಶ್ರಿತ ಪ್ರದೇಶಗಳಲ್ಲಿನ ಬೆಳೆಗಳು ಕಳೆದ ತಿಂಗಳಿನವರೆಗೂ ಹಚ್ಚ ಹಸಿರಾಗಿದ್ದವು. ನಾಲೆಗಳಲ್ಲಿ ನೀರು ಹರಿಸದ ಕಾರಣ ಕೆರೆ, ಕಟ್ಟೆ, ಹಳ್ಳಗಳಲ್ಲಿ ನೀರಿಲ್ಲದೆ ಎಲ್ಲಾ ಒಣಗಿ ಬರಿದಾಗಿವೆ.

ಮಾರ್ಚ್‌, ಏಪ್ರಿಲ್‌ ತಿಂಗಳಿನಲ್ಲಿ ವಾಡಿಕೆಯಂತೆ ಬೀಳಬೇಕಿದ್ದ ಮಳೆ ಕೈಕೊಟ್ಟಿದ್ದರಿಂದ ಕಟಾವಿನ ಹಂತಕ್ಕೆ ಬಂದಿರುವ ಜೂನ್‌ ತಿಂಗಳ ಕಬ್ಬಿನ ಬೆಳೆ, ಹಿಂದುಳಿದು ಬಿತ್ತನೆ ಮಾಡಿದ್ದ ಜನವರಿ ತಿಂಗಳಿ ಕಬ್ಬಿನ ಬೆಳೆ, ಭತ್ತ, ರಾಗಿ ಸೇರಿದಂತೆ ಮೇವಿನ ಬೆಳಗಳೂ ಕೂಡ ಸಂಪೂರ್ಣ ಒಣಗಿ ಹೋಗುವಂತಾಗಿದೆ. ಇತ್ತ ಕೊಳವೆ ಬಾವಿಗಳಲ್ಲಿ ಅಂತರ್ಜಲ ಕುಸಿತದಿಂದ ನೀರು ಸಿಗದಂತಾಗಿದ್ದು ರೈತರು ಕೈಗೆ ಬಂದ ಬೆಳೆಗಳನ್ನು ಕಳೆದುಕೊಳ್ಳುವ ಆತಂಕಕ್ಕೆ ಸಿಲುಕಿದ್ದಾರೆ.

ಭಾರತೀನಗರ ಸಮೀಪದ ಕಾಡನಪುರದದೊಡ್ಡಿ ಗ್ರಾಮದ ರೈತ ಮಹಿಳೆ ಗೌರಮ್ಮ ಅವರ ಕಟಾವಿನಹಂತದಲ್ಲಿನ ಕಬ್ಬು ನೀರಿಲ್ಲದೆ ಒಣಗುತ್ತಿರುವುದು
ಭಾರತೀನಗರ ಸಮೀಪದ ಕಾಡನಪುರದದೊಡ್ಡಿ ಗ್ರಾಮದ ರೈತ ಮಹಿಳೆ ಗೌರಮ್ಮ ಅವರ ಕಟಾವಿನಹಂತದಲ್ಲಿನ ಕಬ್ಬು ನೀರಿಲ್ಲದೆ ಒಣಗುತ್ತಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT