ಗುರುವಾರ , ಏಪ್ರಿಲ್ 9, 2020
19 °C
ಕೊರೊನಾ ವೈಸರ್‌ ತಡೆಯಲು ಜಿಲ್ಲಾಡಳಿತ ಕ್ರಮ

ಹೊರಬರಲು ನಿರ್ಬಂಧ: ಕೂಲಿಕಾರರ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀರಂಗಪಟ್ಟಣ: ಕೊರೊನಾ ವೈಸರ್‌ ಹರಡುವುದನ್ನು ತಡೆಯಲು ಜಿಲ್ಲಾಡಳಿತ ಮನೆಯಿಂದ ಹೊರಗೆ ಹೋಗದಂತೆ ನಿರ್ಬಂಧ ವಿಧಿಸಿರುವುದರಿಂದ ದಿನನಿತ್ಯದ ಕೂಲಿಯನ್ನೇ ನೆಚ್ಚಿಕೊಂಡಿರುವ ಕೂಲಿ ಕಾರ್ಮಿಕರಲ್ಲಿ ಪರದಾಟ ಶುರುವಾಗಿದೆ.

ತಾಲ್ಲೂಕಿನ ಚಿನ್ನಾಯಕನಹಳ್ಳಿ ಹೊಸ ಬಡಾವಣೆ, ಮೊಗರಹಳ್ಳಿ ಮಂಟಿ, ಮಹದೇವಪುರ ಬೋರೆ, ಅರಕೆರೆ ಹೊಸ ಬಡಾವಣೆ, ಅಚ್ಚಪ್ಪನಕೊಪ್ಪಲು ಬಳಿಯ ವಿದ್ಯಾನಗರ, ಬಲ್ಲೇನಹಳ್ಳಿ ಸಮೀಪದ ಹನುಮಂತನಗರ, ಗರುಡನಉಕ್ಕಡ, ಕಾಳೇನಹಳ್ಳಿ ಶೆಡ್ಡು, ಶ್ರೀರಾಂಪುರ ಇತರ ಗ್ರಾಮಗಳ ಜನರು ದಿನಗೂಲಿಯನ್ನೇ ನಂಬಿ ಬದುಕುತ್ತಾರೆ. ಆದರೆ, ಕಳೆದ ಮೂರ್ನಾಲ್ಕು ದಿನಗಳಿಂದ ಮನೆಗಳಿಂದ ಹೊರಗೆ ಬರಲು ಅವಕಾಶ ಇಲ್ಲದ ಕಾರಣ ಉಪ್ಪು ಮೆಣಸಿನಕಾಯಿಗೂ ಪರದಾಡುವ ಸ್ಥಿತಿ ಬಂದಿದೆ.

ಟಿವಿ, ಬೀರು, ಮೊಪೆಡ್‌, ಮೊಬೈಲ್‌, ಸಣ್ಣ ಪುಟ್ಟ ಒಡವೆ– ವಸ್ತ್ರಗಳು ಇನ್ನಿತರ ಸರಕು ಸರಂಜಾಮು ಕೊಳ್ಳಲು ಮೈಕ್ರೊ ಫೈನಾನ್ಸ್‌ಗಳಿಂದ ಹಣ ಪಡೆದವರು ಹಣ ಕಟ್ಟಲು ತಿಣುಕಾಡುತ್ತಿದ್ದಾರೆ. ವಾರದ ಕಂತಿನ ಲೆಕ್ಕದಲ್ಲಿ ಹಣ ನೀಡಿರುವ ಫೈನಾನ್ಸ್‌ ಕಂಪನಿಗಳು ಮುಲಾಜಿಲ್ಲದೆ ಹಣ ವಸೂಲಿಗೆ ಮುಂದಾಗಿವೆ. ಒಂದು ದಿನ ತಡವಾದರೂ ದಂಡ ಸಹಿತ ಹಣ ವಸೂಲಿ ಮಾಡುತ್ತಿವೆ. ಈ ನಡುವೆ ಸ್ಥಳೀಯ ಬಡ್ಡಿ ವ್ಯವಹಾರ ಮಾಡುವ ಲೇವಾದೇವಿಗಾರರು ಕೂಡ ಸಾಲ ಮರುಪಾವತಿಗೆ ಒತ್ತಾಯಿಸುತ್ತಿದ್ದಾರೆ.

‘ಚಿನ್ನಾಯಕನಹಳ್ಳಿ ಹೊಸ ಬಡಾವಣೆಯಲ್ಲಿ 100ಕ್ಕೂ ಹೆಚ್ಚು ಕುಟುಂಬಗಳಿದ್ದು ಎಲ್ಲರೂ ಕೂಲಿಯನ್ನೇ ನೆಚ್ಚಿ ಬದುಕುತ್ತಿದ್ದೇವೆ. ಕಬ್ಬು ಕಡಿಯುವುದು, ಕಲ್ಲು ಕ್ವಾರಿ, ಹೋಟೆಲ್‌ ಸ್ವಚ್ಛತೆ, ಕಟ್ಟಡ ನಿರ್ಮಾಣ ಇತರ ಕೆಲಸ ಮಾಡಿಕೊಂಡು ಬದುಕುತ್ತಿದ್ದೇವೆ. ಸರ್ಕಾರ ಬಡವರ ಬಂಧು ಯೋಜನೆಯ ಫಲಾನುಭವಿಗಳ ಸಾಲಮನ್ನಾ ಮಾಡಿದಂತೆ ನಮ್ಮ ಸಾಲವನ್ನೂ ಮನ್ನಾ ಮಾಡಬೇಕು’ ಎಂದು ಬಡಾವಣೆಯ ಲೀಲಮ್ಮ, ಲಕ್ಷ್ಮಮ್ಮ, ಮಹದೇವು, ಬಸವರಾಜು ಇತರರು ಮನವಿ ಮಾಡಿದ್ದಾರೆ.

ಚಾಲಕರ ಸಂಕಷ್ಟ

ಪಟ್ಟಣದ ಖಾಸಗಿ ಬಸ್‌ ನಿಲ್ದಾಣದಲ್ಲಿ ತಾವು ಮಾಡಿಕೊಂಡಿರುವ ಆಟೊ, ಕಾರು, ಟೆಂಪೊ ಟ್ರಾವೆಲ್ಸ್‌, ಖಾಸಗಿ ಬಸ್‌ಗಳ ಚಾಲಕರು ಮತ್ತು ಕ್ಲೀನರ್‌ಗಳು ಕೂಡ ಕೆಲಸ ಇಲ್ಲದೆ ತೊಂದರೆಗೆ ಸಿಲುಕಿದ್ದಾರೆ. ಕಳೆದ ಹದಿನೈದು ದಿನಗಳಿಂದ ಬಾಡಿಗೆ ಸಿಗದೆ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಬ್ಯಾಂಕ್‌ ಸಾಲ ಕಟ್ಟುವುದು ಹೇಗೆ ಎಂದು ಭಯವಾಗುತ್ತಿದೆ ಎಂದು ಬಾಡಿಗೆ ಕಾರಿನ ಮಾಲೀಕ ಲೋಕೇಶ್‌ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು