ಬುಧವಾರ, ಮಾರ್ಚ್ 29, 2023
29 °C
ಬಣ್ಣದ ದೀಪಗಳ ಆಕರ್ಷಣೆ, ಮಣ್ಣಿನ ಹಣತೆಗಳಿಗೂ ಬೇಡಿಕೆ, ವಿವಿಧೆಡೆ ಆಕಾಶಬುಟ್ಟಿಯ ಬೆಳಕು

ದೀಪಾವಳಿ ಹಬ್ಬಕ್ಕೆ ಖರೀದಿಯ ಭರಾಟೆ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಈ ಬಾಗಿ ಕೋವಿಡ್‌ ಭಯವಿಲ್ಲದೇ ದೀಪಾವಳಿ ಆಚರಿಸುವ ಅವಕಾಶವಿದೆ, ಆದರೆ ಬೆಲೆ ಏರಿಕೆಯ ಭೂತ ಸಾರ್ವಜನಿಕರನ್ನು ಕಾಡುತ್ತಿರುವ ಕಾರಣ ಖರೀದಿಯ ಭರಾಟೆ ಕಡಿಮೆಯಾಗಿದೆ.

ಪ್ರತಿ ವರ್ಷ ದೀಪಾವಳಿ ಆರಂಭವಾಗುತ್ತಿದ್ದಂತೆ ಮಾರುಕಟ್ಟೆಗಳಲ್ಲಿ ಜನರು ತುಂಬಿ ತುಳುಕುತ್ತಿದ್ದರು. ದೀಪ, ಹಣ್ಣು, ಹೂವು ಸೇರಿ ಇತರ ಅವಶ್ಯಕ ವಸ್ತುಗಳ ಖರೀದಿಗೆ ಜನರು ಮಾರುಕಟ್ಟೆಗಳತ್ತ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು. ಆದರೆ ಈಗ ಯಾವುದೇ ವಸ್ತು ಖರೀದಿಸಿದರೂ ಬೆಲೆ ಗಗನಕ್ಕೇರಿದೆ. ಎಲ್ಲದಕ್ಕೂ ಪೆಟ್ರೋಲ್‌, ಡೀಸೆಲ್‌ ಬೆಲೆಯನ್ನೇ ಕಾರಣವಾಗಿಟ್ಟುಕೊಂಡು ಬೆಲೆ ಏರಿಕೆ ಮಾಡಲಾಗಿದೆ. ಹೀಗಾಗಿ ಜನರಲ್ಲಿ ಖರೀದಿ ಉತ್ಸಾಹ ಕಡಿಮೆಯಾಗಿದೆ.

ಸಾಂಪ್ರದಾಯಿಕವಾಗಿ ಜನರು ದೀಪ ಹಚ್ಚುವುದರಿಂದ ಹಣತೆ ಮಾರಾಟ, ಖರೀದಿಯಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ. ಬಗೆಬಗೆಯ ದೀಪಗಳು ಮಾರುಕಟ್ಟೆಗೆ ಬಂದಿವೆ. ಅಚ್ಚು ಬಳಸಿ ತಯಾರಿಸಿದ ದೀಪ ಖರೀದಿ ಜೊತೆಗೆ ಕುಂಬಾರರ ಮನೆಯಲ್ಲಿ ಕೈಯಿಂದ ತಯಾರಾದ ಮಣ್ಣಿನ ಹಣತೆಗಳನ್ನೂ ಜನರು ಖರೀದಿ ಮಾಡುತ್ತಿದ್ದಾರೆ. ನಗರದ ವಿ.ವಿ ರಸ್ತೆ, ನೂರು ಅಡಿ ರಸ್ತೆ, ತರಕಾರಿ ಮಾರುಕಟ್ಟೆ, ಪೇಟೆಬೀದಿ, ಗುತ್ತಲು ಮುಂತಾದೆಡೆ ವ್ಯಾಪಾರಿಗಳು ತಳ್ಳುವ ಗಾಡಿಯಲ್ಲಿ ಇಟ್ಟುಕೊಂಡು ಹಣತೆಗಳನ್ನು ಮಾರಾಟ ಮಾಡುತ್ತಿದ್ದಾರೆ.

ಜಿಲ್ಲೆಯಲ್ಲಿ ಮಳವಳ್ಳಿ ತಾಲ್ಲೂಕಿನ ಚಿಕ್ಕಮುಲಗೂಡು, ಹೊನಗಾನಹಳ್ಳಿ, ಬಳಗೆರೆ, ಕೆ.ಆರ್‌.ಪೇಟೆ ತಾಲ್ಲೂಕಿನ ಬೂಕನಕೆರೆ, ಮಾಕವಳ್ಳಿ, ಮದ್ದೂರು ತಾಲ್ಲೂಕಿನ ಕೊಕ್ಕರೆಬೆಳ್ಳೂರು ಗ್ರಾಮದಲ್ಲಿ ಕುಂಬಾರರು ಮಣ್ಣಿನ ಹಣತೆ ತಯಾರಿಸುತ್ತಾರೆ. ಹಬ್ಬಕ್ಕೆ ತಿಂಗಳಿದ್ದಾಗಲೇ ಶುದ್ಧ ಜೇಡಿಮಣ್ಣು ತಂದು ಹದ ಮಾಡಿಕೊಂಡು ಹಣತೆಗಳ ತಯಾರಿಕೆ ಆರಂಭಿಸುತ್ತಾರೆ. ಯಾವುದೇ ಅಚ್ಚು ಬಳಸದೇ ಶುದ್ಧ ಮಣ್ಣಿನಿಂದಲೇ ತಯಾರಿಸುತ್ತಾರೆ. ದೀಪಕ್ಕೆ ಯಾವುದೇ ರೀತಿಯಿಂದಲೂ ಬಣ್ಣ ತಾಕಿಸುವುದಿಲ್ಲ.

ಸಾಂಪ್ರದಾಯಿಕವಾಗಿ ದೀಪಾವಳಿ ಆಚರಣೆ ಮಾಡುವವರು ಶುದ್ಧ ಮಣ್ಣಿನ ದೀಪಗಳನ್ನೇ ಮನೆಯಲ್ಲಿ ಬೆಳಗುತ್ತಾರೆ. ದೀಪಾವಳಿ ಮುಗಿಸಿ ಕಾರ್ತೀಕ ಮಾಸ ಮುಗಿಯುವವರೆಗೂ ಮನೆಯ ಮುಂದೆ, ಕಾಂಪೌಂಡ್‌ ಮುಂದೆ ಮಣ್ಣಿನ ದೀಪಗಳನ್ನೇ ಹಚ್ಚುತ್ತಾರೆ. ಆದರೆ ಕೆಲವರು ಅಚ್ಚುಬಳಸಿ, ಬಣ್ಣ ಹಚ್ಚಿರುವ ದೀಪಗಳನ್ನು ಹಚ್ಚುತ್ತಾರೆ. ಟೆರಾಕೋಟದಿಂದ ಮಾಡಿರುವ ದೀಪಗಳೂ ಮಾರುಕಟ್ಟೆಗೆ ಬಂದಿದ್ದು ನೋಡಲು ಸುಂದರವಾಗಿ ಕಾಣುತ್ತವೆ.

‘ಬಣ್ಣದ ದೀಪಗಳನ್ನು ವ್ಯಾಪಾರಿಗಳು ತಮಿಳುನಾಡು, ಆಂಧ್ರಪ್ರದೇಶದಿಂದ ತರಿಸುತ್ತಾರೆ. ಅಂತಹ ದೀಪಗಳನ್ನು ಸ್ಥಳೀಯ ಕುಂಬಾರರು ತಯಾರಿಸುವುದಿಲ್ಲ. ದೀಪಾವಳಿ ಸಮಯದಲ್ಲಿ ದೀಪ ತಯಾರಿಸುವುದು ನಮ್ಮ ಉದ್ಯೋಗ. ಬಣ್ಣದ ದೀಪಗಳು ಮಾರುಕಟ್ಟೆಗೆ ಬಂದಿದ್ದರೂ ನೈಸರ್ಗಿಕ ದೀಪ ತಯಾರಿಸುವುದನ್ನು ನಾವು ನಿಲ್ಲಿಸುವುದಿಲ್ಲ. ಮಣ್ಣಿನ ದೀಪಗಳನ್ನೇ ಕೇಳಿ ಪಡೆಯುವ ಗ್ರಾಹಕರೂ ಇದ್ದಾರೆ’ ಎಂದು ಎಂದು ಚಿಕ್ಕಮುಲಗೂಡು ಗ್ರಾಮದ ನಾಗೇಶ್‌ ಹೇಳಿದರು.

ಆಕಾಶಬುಟ್ಟಿ: ವಿವಿಧೆಡೆ ಅಂಗಡಿಗಳಲ್ಲಿ ಆಕಾಶಬುಟ್ಟಿ ಮಾರಾಟ ಮಾಡಲಾಗುತ್ತದೆ. ಬುಕ್‌ಸ್ಟಾಲ್‌ಗಳಲ್ಲಿ ಹೆಚ್ಚಾಗಿ ಆಕಾಶಬುಟ್ಟಿ ಮಾರಾಟಕ್ಕಿಡಲಾಗಿದೆ. ಸ್ಥಳೀಯವಾಗಿ ಆಕಾಶಬುಟ್ಟಿ ಬೆಳಗುವ ಸಂಪ್ರದಾಯವಿಲ್ಲ, ಆದರೆ ಬೇರೆ ರಾಜ್ಯಗಳಿಂದ, ಉತ್ತರ ಕರ್ನಾಟಕದಿಂದ ಬಂದ ವಲಸಿಗರು ಮನೆಯ ಮುಂದೆ ಆಕಾಶಬುಟ್ಟಿ ಬೆಳಗಿಸುತ್ತಿದ್ದಾರೆ. ವಿವಿಧ ಮಾದರಿಯ ಆಕರ್ಷಕ ಆಕಾಶಬುಟ್ಟಿಗಳು ಗಮನ ಸೆಳೆಯುತ್ತಿವೆ.

ಪ್ರತಿ ವರ್ಷದಂತೆ ವಿ.ವಿ ರಸ್ತೆ, ನೂರು ಅಡಿ ರಸ್ತೆ, ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾವಿನ ಸೊಪ್ಪು, ಬಾಳೆ ದಿಂಡು, ಕಬ್ಬಿನ ಗರಿ ಮಾರಾಟ ಮಾಡಲಾಗುತ್ತಿದೆ. ಆಯುಧ ಪೂಜೆ ಸಂದರ್ಭದಲ್ಲಿ ಅಂಗಡಿ ಪೂಜೆ ಮಾಡದ ವ್ಯಾಪಾರಿಗಳು ಈಗ ಮಾಡುತ್ತಾರೆ. ಈ ವಸ್ತುಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ₹ 20ಕ್ಕೆ 2 ಬಾಳೆ ದಿಂಡು, 2 ಕಬ್ಬಿನ ಗರಿ ದೊರೆಯುತ್ತಿವೆ.

ಹಬ್ಬದ ಅಂಗವಾಗಿ ಹೂವಿನ ಬೇಡಿಕೆ ಗಗನಕ್ಕೇರಿದೆ. ಸೇವಂತಿಗೆ ಹೂವು ಮಾರಿಗೆ ₹ 60ಕ್ಕೆ ಏರಿಕೆಯಾಗಿದೆ. ಮಾರು ಮಲ್ಲಿಗೆ ₹ 100ಕ್ಕೆ ತಲುಪಿದೆ. ಗುರುವಾರ, ಶುಕ್ರವಾರ ಹೂವಿನ ಬೆಲೆ ಇನ್ನಷ್ಟು ಹೆಚ್ಚಾಗಲಿದೆ ಎಂದು ವ್ಯಾಪಾರಿಗಳು ತಿಳಿಸಿದರು.

********

ಪಟಾಕಿ ಮಾರಾಟಕ್ಕೆ ಮಳೆ ಅಡ್ಡಿ

ಈ ವರ್ಷವೂ ಹಸಿರು ಪಟಾಕಿ ಮಾರಾಟಕ್ಕಷ್ಟೇ ಅನುಮತಿ ನೀಡಲಾಗಿದೆ. ರಾಸಾಯನಿಕ ಪಟಾಕಿಗಳ ಮಾರಾಟ ನಿಷೇಧಿಸಲಾಗಿದೆ. ವರ್ತಕರು ತಮಿಳುನಾಡಿನ ಶಿವಕಾಶಿಯಲ್ಲಿ ತಯಾರಾಗುವ ಹಸಿರು ಪಟಾಕಿ ತಂದು ಮಾರಾಟ ಮಾಡುತ್ತಿದ್ದಾರೆ. ನಗರದ ಒಳಾಂಗಣ ಕ್ರೀಡಾಂಗಣದ ಸಮೀಪದ ಮೈದಾನದಲ್ಲಿ ಪಟಾಕಿ ಸ್ಟಾಲ್‌ ಹಾಕಿ ಮಾರಾಟ ಮಾಡಲಾಗುತ್ತಿದೆ.

‘ಈ ವರ್ಷ ಪ್ರತಿದಿನ ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಕಾರಣ ಪಟಾಕಿ ಖರೀದಿಗೆ ಜನರು ಹೆಚ್ಚು ಉತ್ಸಾಹ ತೋರಿಸುತ್ತಿಲ್ಲ. ಒದೆರಡು ದಿನ ಮಳೆ ಬಿಡುವು ಕೊಟ್ಟರೆ ಹಾಕಿದ ಬಂಡವಾಳವಾದರೂ ವಾಪಸ್‌ ಬರುತ್ತದೆ. ಇಲ್ಲದಿದ್ದರೆ ನಮಗೆ ನಷ್ಟವಾಗುತ್ತದೆ’ ಎಂದು ಗುರು ಪಟಾಕಿ ಸ್ಟಾಲ್‌ನ ಮಾಲೀಕ ಭರತ್‌ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.