ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಂಗಪಟ್ಟಣಕ್ಕೆ ಟಿಪ್ಪು ಸುಲ್ತಾನ್‌ ನಗರ ಎಂದು ಹೆಸರಿಡಿ: ಲಲಿತಾ ನಾಯಕ್‌

‘ಟಿಪ್ಪು ಸುಲ್ತಾನ್‌ ಇತಿಹಾಸದ ಅನಾವರಣ’ ಕಾರ್ಯಕ್ರಮದಲ್ಲಿ ಬಿ.ಟಿ.ಲಲಿತಾ ನಾಯಕ್‌ ಆಗ್ರಹ
Last Updated 8 ಆಗಸ್ಟ್ 2022, 3:06 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ‘ಟಿಪ್ಪು ಸುಲ್ತಾನ್‌ ಬ್ರಿಟಿಷರ ವಿರುದ್ಧ ಹೋರಾಡಿ ಪ್ರಾಣಾರ್ಪಣೆ ಮಾಡಿದ್ದಾರೆ. ಶ್ರೀರಂಗ ಪಟ್ಟಣಕ್ಕೆ ಟಿಪ್ಪು ಸುಲ್ತಾನ್‌ ನಗರ ಎಂದು ಮರುನಾಮಕರಣ ಮಾಡಬೇಕು’ ಎಂದು ಲೇಖಕಿ ಬಿ.ಟಿ.ಲಲಿತಾ ನಾಯಕ್‌ ಆಗ್ರಹಿಸಿದರು.

ಪಟ್ಟಣ ಸಮೀಪದ ಟಿಪ್ಪು ಸಮಾಧಿ ಸ್ಥಳ ಗುಂಬಸ್‌ ಎದುರು ಕರ್ನಾಟಕ ಟಿಪ್ಪು ಸುಲ್ತಾನ್‌ ಸೌಹಾರ್ದ ವೇದಿಕೆ ಭಾನುವಾರ ಏರ್ಪಡಿಸಿದ್ದ ‘ಟಿಪ್ಪು ಸುಲ್ತಾನ್‌ ಇತಿಹಾಸದ ಅನಾವರಣ’ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಪಟ್ಟಣ ಮತ್ತು ನಗರಗಳ ಹೆಸರುಗಳನ್ನು ಬದಲಿಸುತ್ತಿವೆ. ಟಿಪ್ಪು ಸುಲ್ತಾನ್‌ ಸಮಾಜ ಸುಧಾರಣೆಗೆ ವಿಶೇಷ ಕೊಡುಗೆ ನೀಡಿದ್ದಾರೆ. ಮಹಿಳೆಯರು, ರೈತರು, ಹಿಂದುಳಿದ ವರ್ಗದ ಜನರು ಸ್ವಾಭಿಮಾನದಿಂದ ಬದುಕುವಂತೆ ಮಾಡಿದ್ದಾರೆ. ಅವರು ಸಮಾಜ ವಿಜ್ಞಾನಿಯೂ ಹೌದು. ಹಾಗಾಗಿ ಅವರ ರಾಜಧಾನಿಯಾಗಿದ್ದ ಈ ಊರಿಗೆ ಟಿಪ್ಪು ಸುಲ್ತಾನ್‌ ನಗರ ಎಂದು ಹೆಸರಿಡಬೇಕು’ ಎಂದು ಒತ್ತಾಯಿಸಿದರು.

‘ಟಿಪ್ಪುವಿನಂತಹ ನಿಜವಾದ ಮೇರು ವ್ಯಕ್ತಿಗಳನ್ನು ಮೂಲೆಗುಂಪು ಮಾಡುತ್ತಿರುವ ಸರ್ಕಾರಗಳು ಯುವಕ ರನ್ನು ಗುಲಾಮರನ್ನಾಗಿ ಮಾಡುವ ಅಗ್ನಿಪಥ ಯೋಜನೆ, ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಲು ಮುಂದಾಗಿವೆ’ ಎಂದು ಟೀಕಿಸಿದರು.

ಎಸ್‌ಡಿಪಿಐ ರಾಜ್ಯ ಘಟಕದ ಅಧ್ಯಕ್ಷ ಅಬ್ದುಲ್‌ ಮಜೀದ್‌ ಮಾತನಾಡಿ, ‘ಟಿಪ್ಪು ಸುಲ್ತಾನ್‌ ದೇಶದ್ರೋಹಿ,‌ ಕನ್ನಡ ವಿರೋಧಿ, ಹಿಂದೂ ವಿರೋಧಿ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಇತಿಹಾಸವನ್ನು ತಿರುಚಿ ಹೇಳಲಾಗುತ್ತಿದೆ. ಆದರೆ, ಸತ್ಯ ಸತ್ಯವಾಗಿಯೇ ಇರುತ್ತದೆ. ರೈತರಿಗೆ ಭೂಮಿ ಹಂಚಿಕೆ, ಕೃಷಿ ಸಾಲ, ಮದ್ಯಪಾನ ನಿಷೇಧ, ಹಿಂದೂ ದೇವಾಲಯ ಮತ್ತು ಮಠಗಳಿಗೆ ದಾನ ದತ್ತಿಗಳು ಸೇರಿದಂತೆ ಅನೇಕ ಕಾರ್ಯಕ್ರಮಗಳು ಜನ ಮೆಚ್ಚುಗೆ ಗಳಿಸಿವೆ. ಅಂತಹ ವೀರನನ್ನು ಸಮಾಜ ಹಳದಿ ಕಣ್ಣಿನಿಂದ ನೋಡಬಾರದು’ ಎಂದರು.

ಪಿಎಫ್‌ಐ ಸಂಘಟನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಹಮದ್‌ ಶಕೀರ್‌ ಮಾತನಾಡಿ, ‘ಟಿಪ್ಪು ಮುಸ್ಲಿಂ ಸಮಾಜಕ್ಕೆ ಸೇರಿದವರು ಎಂಬ ಒಂದೇ ಕಾರಣಕ್ಕೆ ಬಿಜೆಪಿ ಸರ್ಕಾರ ಮತ್ತು ಕೆಲವು ಸಂಘಟನೆಗಳು ಅವರನ್ನು ಖಳನಾಯಕರಂತೆ ಬಿಂಬಿಸುತ್ತಿವೆ. ಪಿಎಫ್‌ಐ ಸಂಘಟನೆ ಟಿಪ್ಪುವಿನ ಸಾಧನೆಗಳನ್ನು ಮನೆ ಮನೆಗೆ ಮುಟ್ಟಿಸುವ ಕೆಲಸ ಮಾಡಲಿದೆ’ ಎಂದು ಹೇಳಿದರು.

ಟಿಪ್ಪು ಸುಲ್ತಾನ್‌ ಆಡಳಿತ ಮತ್ತು ಸಾಧನೆ ಕುರಿತ ಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಟಿಪ್ಪು ಸುಲ್ತಾನ್‌ ಸೌಹಾರ್ದ ವೇದಿಕೆ ಅಧ್ಯಕ್ಷ ತಬ್ರೇಜ್‌ ಸೇಟ್‌, ಉಪಾಧ್ಯಕ್ಷ ಡಾ.ಚನ್ನಕೇಶವಮೂರ್ತಿ, ಗಾಂಧಿವಾದಿ ಡಾ.ಬಿ. ಸುಜಯಕುಮಾರ್‌, ಮಹಮದ್‌ ನದೀಮ್‌, ದಲಿತ ಸಂಘರ್ಷ ಸಮಿತಿಯ ಚೋರನಹಳ್ಳಿ ಶಿವಣ್ಣ, ವಕೀಲರಾದ ಸಿ.ಎಸ್‌. ವೆಂಕಟೇಶ್‌, ಬಸವರಾಜು. ಬಿ.ಟಿ. ವಿಶ್ವನಾಥ್‌, ಟಿಪ್ಪು ವಕ್ಫ್‌ ಎಸ್ಟೇಟ್‌ ಕಾರ್ಯದರ್ಶಿ ಮಹಮದ್‌ ಇರ್ಫಾನ್‌, ಮಜರ್‌ ಪಾಷ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT