ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಿಯಂತ್ರಣ ತಪ್ಪಿದ ಮಗನಿಗಾಗಿ ಅಸಹಾಯಕ ತಂದೆಯಾದ ದೇವೇಗೌಡರು: ದೇವನೂರ ಮಹಾದೇವ

Published 22 ಏಪ್ರಿಲ್ 2024, 14:19 IST
Last Updated 22 ಏಪ್ರಿಲ್ 2024, 14:19 IST
ಅಕ್ಷರ ಗಾತ್ರ

ಮಂಡ್ಯ: ‘ನಿಯಂತ್ರಣ ತಪ್ಪಿದ ಮಗನಿಗಾಗಿ ಎಚ್‌.ಡಿ.ದೇವೇಗೌಡರು ಅಸಹಾಯಕ ತಂದೆಯಂತೆ ಕಾಣಿಸುತ್ತಿದ್ದಾರೆ. ಎಲ್ಲಿ ಬಿದ್ದು ಪೆಟ್ಟು ಮಾಡಿಕೊಳ್ಳುತ್ತಾನೋ ಎಂಬ ಭೀತಿಯಿಂದ ಇಳಿ ವಯಸ್ಸಿನಲ್ಲೂ ಮಗನ ಹಿಂದೆ ಧಾವಿಸುತ್ತಿದ್ದಾರೆ’ ಎಂದು ಚಿಂತಕ ದೇವನೂರ ಮಹಾದೇವ ಸೋಮವಾರ ಹೇಳಿದರು.

‘ಕುಮಾರಸ್ವಾಮಿ ಅವರು 2006ರಲ್ಲಿ ಎಲ್ಲರನ್ನೂ ಧಿಕ್ಕರಿಸಿ ಬಿಜೆಪಿ ಜೊತೆಗೆ ಸೇರಿ ಮುಖ್ಯಮಂತ್ರಿಯಾದಾಗಲೂ ದೇವೇಗೌಡರು ಹೀಗೆಯೇ ನಡೆದುಕೊಂಡಿದ್ದರು. ‘ನಾನೇನ್‌ ಮಾಡ್ಲಪ್ಪ, ನನ್ ಮಗ ಮಾತು ಕೇಳ್ತಿಲ್ಲ, ಎಲ್ಲಿ ಎಡವಟ್ಟು ಮಾಡಿಕೊಂಡು ಜೈಲು ಸೇರುತ್ತಾನೋ ಎಂಬ ಭಯ ನನಗೆ’ ಎಂದು ಆಗ ಭೀತಿ ವ್ಯಕ್ತಪಡಿಸಿದ್ದರಂತೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘2023ರ ಚುನಾವಣೆಯಲ್ಲಿ ನನ್ನನ್ನೂ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಬಿಜೆಪಿ ಸೋಲಿಸುವವರಿಗೆ ಮತ ಕೊಡಿ ಎಂದು ಕೇಳಿಕೊಂಡಿದ್ದೆವು. ಆಗ ನಮ್ಮ ಬೆಂಬಲ ಕೆಲವು ಕಡೆಗಳಲ್ಲಿ ಜೆಡಿಎಸ್‌ಗೂ ಇತ್ತು. ಆದರೆ ಈಗ ಚುನಾವಣೆಗೂ ಮೊದಲೇ ಬಿಜೆಪಿ–ಜೆಡಿಎಸ್‌ ಕೂಡುವಳಿಯಾಗಿರುವುದರಿಂದ ಬಿಜೆಪಿ ಜೊತೆಗೆ ಜೆಡಿಎಸ್‌ ಪಕ್ಷವನ್ನೂ ಸೋಲಿಸಿ ಎನ್ನುತ್ತಿದ್ದೇವೆ’ ಎಂದರು.

‘ತೆನೆ ಹೊತ್ತ ಮಹಿಳೆಯರ ಚಿತ್ರದಲ್ಲಿ ಕಾಯಕ ಜೀವಿಯ ಘನತೆ ಇತ್ತು. ಆದರೆ ಬಿಜೆಪಿ ಸಹವಾಸ ಮಾಡಿದ ಕೂಡಲೇ ಜಾತ್ಯತೀತ ಪದ ಕಳಚಿ ಬಿದ್ದಿದ್ದು ಹೊರೆಯ ತೆನೆಗಳನ್ನು ಬಿಜೆಪಿ ಕತ್ತರಿಸಿಕೊಂಡಿದೆ, ಕಾಯಕ ಜೀವಿಯಾಗಿದ್ದ ಮಹಿಳೆ ಸೇವಕಿಯಾಗಿದ್ದಾಳೆ. ಮೋದಿ ಅವರು 2047ಕ್ಕೆ ಕನಸು ಕಾಣುತ್ತಿರುವ ವಿಕಸಿತ ಭಾರತ, ಹಿಂದುತ್ವ ಭಾರತ ಇದೇ ಆಗಿದೆ’ ಎಂದರು.

‘2047ರ ವೇಳೆಗೆ ದೇವರ ಸಾಕ್ಷಾತ್ಕಾರಕ್ಕಾಗಿ ಮೋದಿಯವರು ಹೆಜ್ಜೆ ಇಡಲಿದ್ದಾರೆ. ಅದಕ್ಕೆ ಅಡೆತಡೆಯೊಡ್ಡುವ ಸಂವಿಧಾನವನ್ನು ಬುಡಮೇಲು ಮಾಡಲಿದ್ದಾರೆ. ಒಕ್ಕೂಟ ವ್ಯವಸ್ಥೆ, ಸ್ವಾಯತ್ತ ಸಂಸ್ಥೆಗಳನ್ನು ಹಾಳುಗೆಡವಲಿದ್ದಾರೆ. ಇಂತಹ ಅನರ್ಥಗಳಿಗೆ ಜೆಡಿಎಸ್‌ ಸಾಥ್‌ ಕೊಡುತ್ತಿದೆ. ಹೀಗಾಗಿ ಬಿಜೆಪಿ– ಜೆಡಿಎಸ್‌ ಎರಡೂ ಸೋಲಬೇಕು, ಆಗ ಮಾತ್ರ ಬಹುತ್ವ ಭಾರತದ ಸಹನೆ, ಸಹಬಾಳ್ವೆ, ನ್ಯಾಯ ಸಮಾನತೆ ಉಳಿಯಲಿವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT