ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧನೆ, ದಕ್ಷತೆಯ ಸೇವೆ ತೃಪ್ತಿ ಕೊಟ್ಟಿದೆ: ಡಾ.ಎಂ.ವಿ.ವೆಂಕಟೇಶ್‌ ಭಾವುಕ ನುಡಿ

ನೂತನ ಜಿಲ್ಲಾಧಿಕಾರಿ ಎಸ್‌.ಅಶ್ವಥಿ ಅಧಿಕಾರ ಸ್ವೀಕಾರ
Last Updated 16 ಫೆಬ್ರುವರಿ 2021, 2:20 IST
ಅಕ್ಷರ ಗಾತ್ರ

ಮಂಡ್ಯ: ‘ಜಿಲ್ಲಾಧಿಕಾರಿಯಾಗಿ ಒಂದೂವರೆ ವರ್ಷ ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದ್ದು, ಜೀವನದ ಮರೆಯಲಾಗದ ಕ್ಷಣಗಳಾಗಿದೆ. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿರುವುದು ಆತ್ಮ ತೃಪ್ತಿ ತಂದಿದೆ’ ಎಂದು ಹೇಳುತ್ತಾ ನಿರ್ಗಮಿತ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಭಾವುಕರಾದರು.

ಸೋಮವಾರ ನೂತನ ಜಿಲ್ಲಾಧಿಕಾರಿ ಎಸ್‌.ಅಶ್ವಥಿ ಅವರಿಗೆ ಅಧಿಕಾರ ಹಸ್ತಾಂತರಿಸಿ ಅವರು ಮಾತನಾಡಿದರು.

‘ಅಧಿಕಾರ ವಹಿಸಿಕೊಂಡ ಐದು ದಿನಗಳಲ್ಲೇ ಕೆಆರ್‌ಎಸ್‌ ಅಣೆಕಟ್ಟೆ ತುಂಬಿತ್ತು. ಜಿಲ್ಲೆಯ ಸಮಸ್ಯೆಗಳೆಲ್ಲವೂ ಮಂಜಿನಂತೆ ಕರಗಿ ಹೋಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಅಂತೆಯೇ ಕಬ್ಬು ಬೆಳೆಗಾರರ ಸಮಸ್ಯೆ ಉಲ್ಬಣವಾಗಿತ್ತು. ಅಧಿಕಾರಿಗಳ ಸಹಕಾರದೊಂದಿಗೆ ಬೇರೆ ಕಾರ್ಖಾನೆಗೆ ಕಬ್ಬು ಸಾಗಿಸುವ, ನಿಗದಿತ ಸಮಯದಲ್ಲಿ ಹಣ ಸಂದಾಯ ಮಾಡಿಸುವ ಕೆಲಸ ಮಾಡಲಾಯಿತು’ ಎಂದರು.

‘ವಿವಿಧ ಇಲಾಖೆಗಳ ಸಿಬ್ಬಂದಿ ದಕ್ಷತೆ, ಕಾರ್ಯಕ್ಷಮತೆಯಿಂದಾಗಿ ‘ಸಕಾಲ’ದಲ್ಲಿ ಜಿಲ್ಲೆ 1ನೇ ಸ್ಥಾನ ಗಳಿಸಿತ್ತು. ಇದಲ್ಲದೆ ಭೂಮಿ ಶಾಖೆಗೆ ಸಂಬಂಧಿಸಿದಂತೆ ರೈತರ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಲು ಕ್ರಮ ಕೈಗೊಳ್ಳಲಾಗಿತ್ತು. ಜಿಲ್ಲೆಯ ಜನರ ಮಾತು ಒರಟಾದರೂ ಹೃದಯ ಸಕ್ಕರೆಯಂತಿದೆ. ವರ್ಗಾವಣೆ ಸುದ್ದಿ ಬಂದ ನಂತರ ನೂರಾರು ರೈತರು ಕರೆ ಮಾಡಿ ಬೇಸರ ವ್ಯಕ್ತಪಡಿಸಿದರು’ ಎಂದು ಅವರು ಹೇಳಿದರು.

‘ಕೋವಿಡ್‌ ಸಂಕಷ್ಟದಲ್ಲಿ ಎಲ್ಲಾ ವೈದ್ಯಕೀಯ ಸಿಬ್ಬಂದಿ, ಕಂದಾಯ, ಪೊಲೀಸ್‌ ಇಲಾಖೆ ಸಿಬ್ಬಂದಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿಯಂತ್ರಿಸಲು ಶ್ರಮಿಸಿದ್ದೆವು. ಪ್ರಾರಂಭದಲ್ಲಿ ಮುಂಬೈ ಪ್ರಕರಣಗಳು ಸಾಕಷ್ಟು ತಲ್ಲಣ ಉಂಟು ಮಾಡಿತ್ತು. ಇದನ್ನು ನಿಯಂತ್ರಿಸುವಲ್ಲಿ ನನ್ನ ವೈದ್ಯಕೀಯ ಶಿಕ್ಷಣವೂ ಸಾಕಷ್ಟು ನೆರವಾಗಿತ್ತು. ಸಾವಿನ ಪ್ರಮಾಣ 152 ಇದ್ದರೂ ಕೋವಿಡ್‌ನಿಂದಾಗಿ ಸಾವನ್ನಪ್ಪಿದ್ದು 100 ಮಂದಿ ಮಾತ್ರ’ ಎಂದರು.

‘ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿಯಿಂದ ನಿವೇಶನ ರಹಿತರಿಗೆ 2 ಸಾವಿರ ಹಕ್ಕುಪತ್ರಗಳನ್ನು ಕೊಡಲು ಪ್ರಾರಂಭ ಮಾಡಿದ್ದೆವು. ಈಗಾಗಲೇ 1 ಸಾವಿರ ಹಕ್ಕು ಪತ್ರಗಳು ತಯಾರಾಗಿದ್ದು, ಸಿಎಂ ಅವರ ಮೂಲಕ ವಿತರಣೆ ಮಾಡಿಸಬೇಕಿತ್ತು. ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ರಾಸಾಯನಿಕ ಮುಕ್ತ ಬೆಲ್ಲ ಉತ್ಪಾದನೆ ಮೂಲಕ ಜಿಲ್ಲೆಯನ್ನು ಬೆಲ್ಲದ ತವರೂರು ಮಾಡಲು ಕಂಕಣ ಬದ್ಧರಾಗಿದ್ದೇವೆ. ಮುಂದಿನ ಜಿಲ್ಲಾಧಿಕಾರಿ ಅವರು ಮುಂದುವರಿಸುತ್ತಾರೆ’ ಎಂದರು.

‘ಉದ್ಯೋಗ ಮೇಳದ ಮೂಲಕ 5 ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗ ನೀಡಲಾಗಿದೆ. ಶ್ರೀರಂಗಪಟ್ಟಣ ದಸರಾ, ಗಗನಚುಕ್ಕಿ ಜಲಪಾತೋತ್ಸವವನ್ನು ಯಶಸ್ವಿಯಾಗಿ ಮಾಡಿದ್ದೇವೆ. ತಮಿಳು ಕಾಲೊನಿ ಸ್ಥಳಾಂತರ ಪ್ರಕ್ರಿಯೆ ಪ್ರಾರಂಭವಾಗಿದ್ದು, ಏಪ್ರಿಲ್‌ನಲ್ಲಿ 650 ಮನೆಗಳ ನಿರ್ಮಾಣ ಪೂರ್ಣಗೊಂಡು ಅಲ್ಲಿಗೆ ಸ್ಥಳಾಂತರಿಸಲಾಗುವುದು. ಮೆಡಿಕಲ್‌ ಕಾಲೇಜಿಗೆ 50 ಎಕರೆ ಜಮೀನು ನೀಡಲು, ಜಿಲ್ಲೆಗೆ ಐಐಟಿ ತರಲು ಯೋಜಿಸಲಾಗಿದೆ. ಇದಕ್ಕಾಗಿ 350 ಎಕರೆ ಜಾಗ ಗುರುತಿಸಲಾಗಿದೆ’ ಎಂದರು.

‘ಪ್ರಕೃತಿ ಸಂರಕ್ಷಣೆ ಮಾಡುತ್ತಿದ್ದ ಕಲ್ಮನೆ ಕಾಮೇಗೌಡರ ಸಾಧನೆಗಳನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿತ್ತು. ಪ್ರಧಾನಮಂತ್ರಿ ಅವರು ತಮ್ಮ ಮನದ ಮಾತು ಸರಣಿಯಲ್ಲಿ ಕಾಮೇಗೌಡರ ಸಾಧನೆ ಬಣ್ಣಿಸಿದರು, ಇದು ಅತ್ಯಂತ ಖುಷಿಯ ವಿಚಾರ. ಕಾರ್ಖಾನೆಗಳ ನಿರ್ಮಾಣಕ್ಕೆ ಸಾಕಷ್ಟು ಪ್ರೋತ್ಸಾಹ ನೀಡಲಾಗಿತ್ತು. ಪ್ರತಿ ತಿಂಗಳು ಉದ್ಯಮಿಗಳ ಕುಂದು ಕೊರತೆ ಸಭೆ ನಡೆಸಿ, ವಿದ್ಯುತ್‌, ರಸ್ತೆ ಸಮಸ್ಯೆ ಪರಿಹರಿಸಲು ಶ್ರಮಿಸಿದ್ದೇನೆ’ ಎಂದು ಅವರು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ವಿ.ಆರ್‌.ಶೈಲಜಾ, ಕಲ್ಮನೆ ಕಾಮೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT