ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಗಣಿಗಾರಿಕೆ: ನನೆಗುದಿಗೆ ಬಿದ್ದ ಡ್ರೋಣ್‌ ಕ್ಯಾಮೆರಾ ಸರ್ವೆ

ಅಕ್ರಮ ಗಣಿಗಾರಿಕೆಯಿಂದ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ನಷ್ಟ, ಸಿಗದ ಅಂದಾಜು
Last Updated 8 ಜುಲೈ 2021, 19:30 IST
ಅಕ್ಷರ ಗಾತ್ರ

ಮಂಡ್ಯ: ಕೆಆರ್‌ಎಸ್‌ ಜಲಾಶಯದ ಆಸುಪಾಸಿನಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಿಂದ ರಾಜ್ಯದ ಬೊಕ್ಕಸಕ್ಕೆ ಉಂಟಾದ ನಷ್ಟದ ಅಂದಾಜು ನಡೆಸಲು ಗಣಿ ಮತ್ತು ಭೂವಿಜ್ಞಾನ ಇಲಾಖೆ ನಡೆಸಲು ಉದ್ದೇಶಿಸಿದ್ದ ‘ಡ್ರೋಣ್‌ ಸರ್ವೆ’ ನನೆಗುದಿಗೆ ಬಿದ್ದಿದೆ.

ಬೇಬಿಬೆಟ್ಟದ ವ್ಯಾಪ್ತಿಯಲ್ಲಿ ಅಕ್ರಮವಾಗಿ ಚಟುವಟಿಕೆ ನಡೆಸುತ್ತಿದ್ದ 35ಕ್ಕೂ ಹೆಚ್ಚು ಕಂಪನಿಗಳಿಗೆ ವರ್ಷದಿಂದೀಚೆಗೆ ದಂಡ ವಿಧಿಸಲಾಗಿದೆ. ಆ ಗಣಿಗಳ ಯಂತ್ರೋಪಕರಣಗಳನ್ನು ಈಗಾಗಲೇ ಜಪ್ತಿ ಮಾಡಲಾಗಿದೆ. ಅನುಮತಿ ಪಡೆದ ಕಂಪನಿಗಳು ಕೂಡ ನಿಗದಿತ ಗಣಿ ಗುತ್ತಿಗೆ ವಿಸ್ತೀರ್ಣಕ್ಕೆ 5 ಪಟ್ಟು ಹೆಚ್ಚಿನ ಪ್ರದೇಶದಲ್ಲಿ ಚಟುವಟಿಕೆ ನಡೆಸಿವೆ. ಅಂತಹ ಕಂಪನಿಗಳಿಗೆ ₹ 500 ಕೋಟಿಗೂ ಹೆಚ್ಚು ದಂಡ ವಿಧಿಸಲಾಗಿದೆ.

ಅತ್ಯಾಧುನಿಕ ಸ್ಫೋಟಕ ಬಳಸಿ ಅತೀ ಆಳವಾಗಿ, ವಿಸ್ತಾರವಾಗಿ ಗಣಿಗಾರಿಕೆ ನಡೆಸಿರುವುದು ಕಂಡುಬಂದಿದೆ. ಹೆಚ್ಚುವರಿಯಾಗಿ ಗಣಿಗಾರಿಕೆ ನಡೆಸಿದ ಪ್ರದೇಶಕ್ಕೆ ಯಾವುದೇ ರಾಜಧನ ಪಾವತಿಸಿಲ್ಲ. ಹೀಗಾಗಿ ಸರ್ಕಾರದ ಬೊಕ್ಕಸಕ್ಕೆ ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ. ವೈಜ್ಞಾನಿಕ ರೀತಿಯಲ್ಲಿ ಡ್ರೋಣ್‌ ಕ್ಯಾಮೆರಾ ಬಳಿಸಿ ನಷ್ಟದ ಸಮೀಕ್ಷೆ ನಡೆಸಲು ಗಣಿ ಮತ್ತು ಭೂವಿಜ್ಞಾನ ಇಲಾಖೆ ಮುಂದಾಗಿತ್ತು. ಇದಕ್ಕೆ ರಾಜ್ಯ ಸರ್ಕಾರದಿಂದ ಅನುಮತಿಯೂ ದೊರಕಿತ್ತು.

ಹಿರಿಯ ಭೂವಿಜ್ಞಾನಿ ಟಿ.ವಿ.ಪುಷ್ಪಾ ಅವರು ವರ್ಗಾವಣೆಯಾಗುವುದಕ್ಕೂ ಮೊದಲು ಡ್ರೋಣ್‌ ಸಮೀಕ್ಷೆ ನಡೆಸಲು ಸಕಲ ಸಿದ್ಧತೆ ನಡೆಸಿದ್ದರು. ಗಣಿ ಪ್ರದೇಶಕ್ಕೆ ಭೇಟಿ ನೀಡಿದ್ದ ಹಿಂದಿನ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಸಿ.ಸಿ ಪಾಟೀಲ ಶೀಘ್ರದಲ್ಲೇ ಡ್ರೋಣ್‌ ಸರ್ವೆಗೆ ಹರಿರು ನಿಶಾನೆ ತೋರಿದ್ದರು. ಈ ಬೆಳವಣಿಗೆ ನಡೆದು ವರ್ಷ ಕಳೆಯುತ್ತಿದ್ದರೂ ಈಗಲೂ ಸರ್ವೆ ಕಾರ್ಯ ಸಾಕಾರಗೊಂಡಿಲ್ಲ. ಭೂವಿಜ್ಞಾನಿ ಪುಷ್ಪಾ ಅವರನ್ನೂ ವರ್ಗಾವಣೆ ಮಾಡಿದ ಕಾರಣ ಡ್ರೋಣ್‌ ಸರ್ವೆಗೆ ತಡೆ ಬಿದ್ದಿದೆ.

‘ಸ್ಥಳೀಯ ಜನಪ್ರತಿನಿಧಿಯೊಬ್ಬರು 3 ಎಕರೆ ಪ್ರದೇಶಕ್ಕೆ ಗಣಿ ಗುತ್ತಿಗೆ ಪಡೆದಿದ್ದಾರೆ. ಆದರೆ ಅವರು 60 ಎಕರೆಯಲ್ಲಿ ಚಟುವಟಿಕೆ ನಡೆಸುತ್ತಿದ್ದಾರೆ. ಸಾವಿರ ಅಡಿ ಆಳದವರೆಗೆ ಬಂಡೆ ಕೊರೆದಿದ್ದಾರೆ. ಡ್ರೋಣ್‌ ಸರ್ವೆ ನಡೆದರೆ ಅವರಿಗೆ ₹ 300 ಕೋಟಿ ದಂಡ ಬೀಳುತ್ತಿದೆ. ಇಂತಹ ನೂರಾರು ಗಣಿ ಮಾಲೀಕರು ಇದ್ದಾರೆ. ಅವರೆಲ್ಲರೂ ಡ್ರೋಣ್‌ ಸರ್ವೆ ನಡೆಸದಂತೆ ಅಧಿಕಾರಿಗಳ ಮೇಲೆ ಒತ್ತಡ ತರುತ್ತಿದ್ದಾರೆ’ ಆರ್‌ಟಿಐ ಕಾರ್ಯಕರ್ತ ರವೀಂದ್ರ ಆರೋಪಿಸಿದರು.

ಯಂತ್ರೋಪಕರಣ ಬಿಡುಗಡೆ: ಹಿಂದಿನ ಭೂವಿಜ್ಙಾನಿ ಪುಷ್ಪಾ ಅವರು ಜಪ್ತಿ ಮಾಡಿದ್ದ ಗಣಿ ಯಂತ್ರೋಪಕರಣಗಳನ್ನು ವಿವಿಧ ಪೊಲೀಸ್‌ ಠಾಣೆ ಆವರಣದಲ್ಲಿ ಇರಿಸಲಾಗಿತ್ತು. ಡ್ರೋಣ್‌ ಮೂಲಕ ಗಣಿ ಸರ್ವೆ ಮಾಡಿಸಿ ದಂಡ ವಸೂಲಿ ಮಾಡಿದ ನಂತರ ಯಂತ್ರೋಪಕರಣ ಬಿಡುಗಡೆ ಮಾಡಲಾಗುವುದು ಎಂದು ಅವರು ತಿಳಿಸಿದ್ದರು. ಆದರೆ ಈಗಿನ ಭೂವಿಜ್ಞಾನಿ ಗಣಿ ಮಾಲೀಕರಿಂದ ಲತಾ ₹ 50 ಸಾವಿರ ದಂಡ ಕಟ್ಟಿಸಿಕೊಂಡು ಯಂತ್ರೋಪಕರಣ ಬಿಡುಗಡೆ ಮಾಡುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ.

‘ಯಂತ್ರೋಪಕರಣಗಳ ಬಿಡುಗಡೆ ಮಾಡಲು ಇರುವ ಮಾನದಂಡಗಳನ್ನು ಪರಿಶೀಲಿಸುತ್ತೇನೆ. ಈ ಕುರಿತು ಭೂವಿಜ್ಞಾನಿಯೊಂದಿಗೆ ಮಾತನಾಡುತ್ತೇನೆ’ ಎಂದು ಜಿಲ್ಲಾಧಿಕಾರಿ ಎಸ್‌.ಅಶ್ವತಿ ತಿಳಿಸಿದರು.

********

ಡ್ರೋಣ್‌ ಸರ್ವೆಗೆ ಮರು ಟೆಂಡರ್‌

‘ಡ್ರೋಣ್‌ ಸರ್ವೆ ನಡೆಸಿ ವರದಿ ನೀಡಲು ಕಳೆದ ವರ್ಷ ಕರೆದಿದ್ದ ಟೆಂಡರ್‌ನಲ್ಲಿ ಕೇಲವ 1 ಕಂಪನಿ ಮಾತ್ರ ಟೆಂಡರ್‌ ಸಲ್ಲಿಸಿತ್ತು. ಹೀಗಾಗಿ ಜೂನ್‌ 28ರಂದು ಮರು ಟೆಂಡರ್‌ ಆಹ್ವಾನಿಸಲಾಗಿದೆ. ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸರ್ವೆ ನಡೆಯಲಿದೆ’ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಪದ್ಮಜಾ ಹೇಳಿದರು.

‘ಗಣಿ ಮಾಲೀಕರಿಂದ ದಂಡ ಕಟ್ಟಿಸಿಕೊಂಡು ವಾಹನಗಳನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಯಂತ್ರೋಪಕರಣಗಳನ್ನು ಬಿಡುಗಡೆ ಮಾಡಿಲ್ಲ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT