ಶುಕ್ರವಾರ, ಏಪ್ರಿಲ್ 23, 2021
30 °C
ಯುವಸಂಜೆ ಕಾರ್ಯಕ್ರಮಕ್ಕೆ ಚಾಲನೆ; ನಟ, ನಿರ್ದೇಶಕ ಮಂಡ್ಯರಮೇಶ್‌ ಅಭಿಮತ

ಎಡಪಂಥೀಯ ವಿಚಾರದಲ್ಲಿ ಶಿಸ್ತು, ಬದ್ಧತೆ: ಮಂಡ್ಯ ರಮೇಶ್‌ ಅಭಿಮತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ‘ಎಡಪಂಥೀಯ ವಿಚಾರಧಾರೆಗಳನ್ನು ಅಳವಡಿಸಿಕೊಂಡರೆ ಶಿಸ್ತು, ಕ್ರಮ ಹಾಗೂ ಬದ್ಧತೆ ನಮ್ಮದಾಗುತ್ತದೆ. ಆ ವಿಚಾರಗಳನ್ನು ಇಷ್ಟಪಟ್ಟರೆ, ಮಾತನಾಡಿದರೆ, ಬೋಧಿಸಿದರೆ ಅದೇ ಉಸಿರಾಗುತ್ತದೆ’ ಎಂದು ನಟ, ನಿರ್ದೇಶಕ ಮಂಡ್ಯ ರಮೇಶ್‌ ಹೇಳಿದರು.

ಎಂಪ್ಟಿ ಪಾಕೆಟ್ ಡ್ರೀಮ್ಸ್ ಸಂಸ್ಥೆ ವತಿಯಿಂದ ಭಾನುವಾರ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ನಡೆದ ‘ಯುವ ಸಂಜೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಎಡಪಂಥೀಯ ವಿಚಾರಗಳು ಇಷ್ಟವಾಗುತ್ತವೆ ಎಂದರೆ ನಾವು ಯಾವುದೇ ಎಡಪಕ್ಷಕ್ಕೆ ಸೇರಿದವರು ಎಂಬ ಅರ್ಥವಲ್ಲ. ಕಲಾವಿದರಿಗೆ ಯಾವುದೇ ಪಕ್ಷಗಳಿರುವುದಿಲ್ಲ. ರಾಜಕಾರಣಿಗಳು, ಸ್ವಾಮೀಜಿಗಳು ನಮ್ಮ ನಾಟಕದಲ್ಲಿ ತಮಾಷೆಯ ವಸ್ತುವಾಗುತ್ತಾರೆ, ರಂಗಭೂಮಿಯಲ್ಲಿ ಅದು ಸಾಧ್ಯವಿದೆ. ಉತ್ತಮ ವಿಚಾರಗಳನ್ನು ಮುಂದಿನ ಪೀಳಿಗೆಗೆ ಕಲಿಸುವ ಕೆಲಸವಾಗಬೇಕು. ಶಿಕ್ಷಣ ಸಂಸ್ಥೆಗಳಲ್ಲಿ ಒಂದು ಶಿಸ್ತು, ಕ್ರಮ ಪಾಲಿಸಿದರೆ ಮಕ್ಕಳಲ್ಲಿ ಹೊಸ ಹೊಳವುಗಳು ಹುಟ್ಟುತ್ತವೆ’ ಎಂದರು.

‘ಎಂಪ್ಟಿ ಪಾಕೆಟ್ ಡ್ರೀಮ್ಸ್ ಸಂಸ್ಥೆ ಕಟ್ಟಿರುವ ವಿನಯ್‌ಕುಮಾರ್‌ ಬಗ್ಗೆ ಬಹಳ ಸಂತೋಷವಿದೆ. ಮಂಡ್ಯದಲ್ಲಿ ಚಲಚಿತ್ರ, ಕಿರುಚಿತ್ರ ನಿರ್ಮಾಣ, ರಂಗತರಬೇತಿ ಚಟುವಟಿಕೆಗಳು ಈ ಸಂಸ್ಥೆಯಿಂದ ಹೆಚ್ಚಾಗಲಿ. ಹಿರಿಯ ತಲೆಮಾರಿನವರು ಮಾಡಿದ ರಂಗ ಕಾರ್ಯಗಳಿಂದ ನಾವು ರಂಗಭೂಮಿಯಲ್ಲಿ ಬದುಕು ಕಟ್ಟಿಕೊಳ್ಳುವಂತಾಯಿತು. ವಿನಯ್‌ ಕುಮಾರ್‌ ಅವರ ಸಂಸ್ಥೆ ಹಾಗೂ ಮಂಡ್ಯದ ಹೆಸರು ಮತ್ತಷ್ಟು ಎತ್ತರಕ್ಕೇರಲಿ’ ಎಂದು ಹಾರೈಸಿದರು.

ಕಾಂಗ್ರೆಸ್‌ ಮುಖಂಡ ಎನ್‌.ಚಲುವರಾಯಸ್ವಾಮಿ ಮಾತನಾಡಿ ‘ಶಿಕ್ಷಣ ಇಲ್ಲದ ಕಾಲದಲ್ಲಿ ದೇಶ ಬಹಳ ಚೆನ್ನಾಗಿತ್ತು. ಶಿಕ್ಷಣವಂತರು ಬಡವರಿಗೆ ಸಾಮಾಜಿಕ ನ್ಯಾಯ ನೀಡುವ ಕೆಲಸ ಮಾಡಬೇಕು. ಹಿಂದಿನ ಕಾಲದಲ್ಲಿ ಜನರಿಗೆ ಕಡಿಮೆ ಶಿಕ್ಷಣವಿತ್ತು, ಆದರೆ ಹೆಚ್ಚು ಜನೋಪಯೋಗಿ ಕೆಲಸಗಳು ನಡೆಯುತ್ತಿದ್ದವು. ಜ್ಞಾನ ಕಡಿಮೆ ಇದ್ದರೂ ಸಾಮಾನ್ಯ ಜ್ಞಾನ, ಸಾಮಾಜಿಕ ಕಳಕಳಿಗೆ ಕೊರತೆ ಇರಲಿಲ್ಲ’ ಎಂದರು.

‘ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಹಂಬಲ ಯುವಜನರಲ್ಲಿ ಇರಬೇಕು. ಆದರೆ ಇಂದು ಹೆಚ್ಚು ಶಿಕ್ಷಣ ಪಡೆದವರು ಅಪಾರ ಮಂದಿ ಇದ್ದಾರೆ. ಆದರೆ ಅವರಿಗೆ ಸಾಮಾಜಿಕ ಕಳಕಳಿ, ಬದ್ಧತೆ ಇಲ್ಲವಾಗಿರುವುದು ದುರದೃಷ್ಟಕರ’ ಎಂದು ಹೇಳಿದರು.

‘ಶಿಕ್ಷಣ ಸಂಸ್ಥೆಗಳು ಮಕ್ಕಳಲ್ಲಿ ಸಂಸ್ಕಾರ ಬೆಳೆಸಬೇಕು. ಶಿಕ್ಷಣವಂತರು ಹೆಚ್ಚಾದಂತೆಲ್ಲಾ ಕಾನೂನು ಪರಿಪಾಲನೆ ಚೆನ್ನಾಗಿ ಆಗಬೇಕಾಗಿತ್ತು. ಆದರೆ ಶಿಕ್ಷಣವಂತರೇ ಕಾನೂನು ಪಾಲನೆ ಮಾಡುತ್ತಿಲ್ಲ. ಶಿಕ್ಷಣವೊಂದಿದ್ದರೆ ಸಾಲದು, ಅದರ ಜೊತೆ ಸಾಮಾನ್ಯ ಜ್ಞಾನವೂ ಬೆಳೆಯಬೇಕು. ಹಾಗಿದ್ದರೆ ಮಾತ್ರ ಸಮಾಜದ ಬಗ್ಗೆ ಕಳಕಳಿ ಬೆಳೆಯಲು ಸಾಧ್ಯ’ ಎಂದರು.

ಕಾರ್ಯಕ್ರಮದಲ್ಲಿ ಮಂಡ್ಯ ವಿವಿ ಕುಲಪತಿ ಡಾ.ಪುಟ್ಟರಾಜು, ಕಾಂಗ್ರೆಸ್‌ ಮುಖಂಡ ಗಣಿಗ ರವಿ, ರಂಗಕರ್ಮಿ ಯೋಗೇಶ್‌ ಮೇಷ್ಟ್ರು ಇದ್ದರು.

ಸಂಗೀತ ಪ್ರಸ್ತುತಿ, ಕಾವ್ಯ ಒಂದು-ನಾಲಿಗೆ ನುಲಿ, ಮಂಡ್ಯ ಫಿಲಂ ಸೊಸೈಟಿಗೆ ಮರುಚಾಲನೆ, ಫುಟ್ಬಾಲ್ ಕುರಿತು ಕಿರುಚಿತ್ರ ಪ್ರದರ್ಶನ, ಗುಡಿಸಲ ಜ್ಯೋತಿ ಕಿರುಚಿತ್ರದ ಪೋಸ್ಟರ್ ಬಿಡುಗಡೆ ಮುಂತಾದ ಕಾರ್ಯಕ್ರಮಗಳು ನಡೆದವು. ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನಿಸಲಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು