ಶನಿವಾರ, 10 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಿಗರಿಗೆ ಉದ್ಯೋಗ: ಮೀಸಲಾತಿ ಅಗತ್ಯ: ಶಿ.ಕುಮಾರಸ್ವಾಮಿ ಆಗ್ರಹ

ಕೆ.ಆರ್.ಪೇಟೆ ತಾಲ್ಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನ
Last Updated 15 ಮಾರ್ಚ್ 2023, 4:05 IST
ಅಕ್ಷರ ಗಾತ್ರ

ಕೆ.ಆರ್.ಪೇಟೆ: ‘ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಉದ್ಯೋಗಾವಕಾಶದಲ್ಲಿ ಹೆಚ್ಚಿನ ಮೀಸಲಾತಿ ನೀಡಬೇಕು. ಕನ್ನಡ ಅನ್ನದ ಭಾಷೆಯಾಗಬೇಕು’ ಎಂದು ತಾಲ್ಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಶಿ.ಕುಮಾರಸ್ವಾಮಿ ಅಭಿಪ್ರಾಯ ಪಟ್ಟರು.

ಪಟ್ಟಣದ ಹೊರವಲಯದಲ್ಲಿರುವ ಜಯಮ್ಮ ರಾಮಸ್ವಾಮಿ ಸಮುದಾಯ ಭವನದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಮಂಗಳವಾರ ಆಯೋಜಿಸಿದ್ದ ತಾಲ್ಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದರು.

‘ಕನ್ನಡ ಭಾಷೆಗೆ ನಮ್ಮವರಿಂದ ಆತಂಕ ಎದುರಾಗುತ್ತಿದೆಯೇ ವಿನಃ ಪರಭಾಷೆಗಳಿಂದಲ್ಲ. ಕನ್ನಡ ಭಾಷೆಯನ್ನು ಬಳಸಿದರೆ ಅದರು ವಿಜೃಂಭಿಸುತ್ತದೆ. ಆದರೆ, ಪೋಷಕರು ತಮ್ಮ ಮಕ್ಕಳನ್ನು ಇಂಗ್ಲಿಷ್‌ ಮಾಧ್ಯಮ ಶಾಲೆಗೆ ಸೇರಿಸುತ್ತಿದ್ದಾರೆ. ಕನ್ನಡ ಮಾಧ್ಯಮವಾದರೆ ಭವಿಷ್ಯದಲ್ಲಿ ಕನ್ನಡಿಗರಿಗೆ ಉದ್ಯೋಗ ಹಾಗೂ ಭದ್ರತೆ ಸಿದ್ಧಿಸುತ್ತದೆ’ ಎಂದರು.

‘ಜನರ ಭಾಷೆಯಲ್ಲೇ ಜಗತ್ತಿನ ಜ್ಞಾನದ ಕೊಡಿ ಬರಬೇಕೇ ವಿನಃ ಪರದೇಶಿ ಭಾಷೆಗಳಿಂದಲ್ಲ ಎಂಬುದನ್ನು ಆಳುವವರು ಅರ್ಥ ಮಾಡಿಕೊಳ್ಳಬೇಕು. ಮಂಡ್ಯ ಜಿಲ್ಲೆ ಮತ್ತು ಕೆ.ಆರ್‌.ಪೇಟೆ ತಾಲ್ಲೂಕು ಅಪ್ಪಟ ಕನ್ನಡ ನುಡಿದಾಣಗಳಾಗಿವೆ. ಇಲ್ಲಿನ ಸಾಮಾಜಿಕ, ಸಾಹಿತ್ಯಿಕ, ಕಲಾ, ಸಂಸ್ಕೃತಿ ವೈವಿಧ್ಯಮಯವಾಗಿವೆ. ಇವುಗಳ ಮಹತ್ವಗಳನ್ನು ಪ್ರತಿಬಿಂಬಿಸುವುದಕ್ಕಾಗಿಯೇ ಸಾಹಿತ್ಯ ಸಮ್ಮೇಳನ ನಡೆಯಬೇಕಿದೆ. ಅಖಿಲ ಭಾರತ 87ನೇ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ನಡೆಯುವುದು ಹೆಮ್ಮೆಯ ವಿಚಾರವಾಗಿದೆ. ನಾವೆಲ್ಲರೂ ಒಂದಾಗಿ ನುಡಿ ಸಮ್ಮೇಳನಗಳನ್ನು ಅರ್ಥಪೂರ್ಣಗೊಳಿಸಬೇಕು’ ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ. ನಾರಾಯಣಗೌಡ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಾಮಲಾಪುರ ರವಿಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗಳ ಹೇಮಗಿರಿ ಶಾಖಾ ಮಠದ ಆಡಳಿತಾಧಿಕಾರಿ ಜಿ.ಎನ್. ರಾಮಕೃಷ್ಣೇಗೌಡ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಸಮಾಜ ಸೇವಕ ವಿಜಯರಾಮೇಗೌಡ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಕೃಷ್ಣರಾಜ ನುಡಿ ಸಂಚಿಕೆಯನ್ನು ಸಮಾಜ ಸೇವಕ ಆರ್.ಟಿ.ಒ ಮಲ್ಲಿಕಾರ್ಜುನ್ ಬಿಡುಗಡೆ ಮಾಡಿದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಜೈನಹಳ್ಳಿ ಸತ್ಯನಾರಾಯಣಗೌಡ ಕನ್ನಡ ಬಾವುಟ ಹಸ್ತಾಂತರಿಸಿ ಶುಭ ಹಾರೈಸಿದರು. ಸಾಹಿತಿ ಬಲ್ಲೇನಹಳ್ಳಿ ಮಂಜುನಾಥ್ ಸಮ್ಮೇಳನಾಧ್ಯಕ್ಷ ಶಿ.ಕುಮಾರಸ್ವಾಮಿ ಅವರನ್ನು ಪರಿಚಯ ಮಾಡಿಕೊಟ್ಟರು.

ನಂತರ ಶಿಕ್ಷಣ ಮತ್ತು ಸಂಸ್ಕೃತಿ ಗೋಷ್ಠಿ ರಂಗಕರ್ಮಿ ಕೆ.ಜೆ.ನಾರಾಯಣ ಅಧ್ಯಕ್ಷತೆಯಲ್ಲಿ ನಡೆಯಿತು. ಸಾಹಿತಿ ಎನ್.ಎಂ.ತಿಮ್ಮೇಗೌಡ ಉದ್ಘಾಟಿಸಿದರು. ಶಿಕ್ಷಕಿ ಎಂ.ವೇದಾವತಿ ವಿಷಯ ಮಂಡಿಸಿದರು. ಕವಿಗೋಷ್ಠಿಯು ಸಾಹಿತಿ ಡಾ.ಸಂತೇಬಾಚಹಳ್ಳಿ ನಂಜುಂಡಸ್ವಾಮಿ ಅಧ್ಯಕ್ಷತೆಯಲ್ಲಿ ನಡೆಯಿತು. ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದವು ಸಾಹಿತಿ ಮಾರೇನಹಳ್ಳಿ ಲೋಕೇಶ್ ನಿರೂಪಣೆಯಲ್ಲಿ ನಡೆಯಿತು. ಎಸ್.ಎಸ್.ಎಲ್.ಸಿ ಪರಿಕ್ಷೆಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ 125 ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಸಮ್ಮೇಳನದ ವೇದಿಕೆಗೆ ಪ್ರೇಮಕವಿ ಕೆ.ಎಸ್.ನರಸಿಂಹಸ್ವಾಮಿ, ಮಂಟಪಕ್ಕೆ ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ, ಮಹಾದ್ವಾರಕ್ಕೆ ಕಲಾವಿದ ಎ.ಎಸ್.ಮೂರ್ತಿ ಅವರ ಹೆಸರಿಡಲಾಗಿತ್ತು.

ಕಾಲದಿಂದ ಕಾಲಕ್ಕೆ ಅರಳುತ್ತಿರುವ ಭಾಷೆ

ಸಮ್ಮೇಳನವನ್ನು ಉದ್ಘಾಟಿಸಿದ ವಿಶ್ರಾಂತ ಕುಲಪತಿ ಪ್ರೊ.ಕೆ.ಚಿದಾನಂದ ಗೌಡ ಮಾತನಾಡಿ, ‘2,500 ವರ್ಷಗಳ ಇತಿಹಾಸವಿರುವ ಕನ್ನಡ ಮೃತ ಭಾಷೆಯಲ್ಲ. ಕಾಲದಿಂದ ಕಾಲಕ್ಕೆ ಅರಳುತ್ತಿರುವ ಭಾಷೆಯಾಗಿದೆ. ಪ್ರಪಂಚದ ವಿವಿಧ ಭಾಷೆಗಳಲ್ಲಿ ಕನ್ನಡ ಲಿಪಿಗೆ ವಿಶೇಷ ಗೌರವ ಸ್ಥಾನವಿದೆ. ಪ್ರತಿಯೊಬ್ಬರು ಈ ಭಾಷೆಯ ಲಿಪಿ, ಭಾಷೆಯ ಸೊಗಡನ್ನು ಗೌರವಿಸುತ್ತಾರೆ. ಎಲ್ಲಾದರೂ ಇರು, ಎಂತಾದರೂ ಇರು ಎಂದೆಂದಿಗೂ ಕನ್ನಡಿಗನಾಗಿರು ಎಂಬಂತೆ ನಾವು ನಮ್ಮ ಭಾಷೆಯ ಉಳಿವಿಗಾಗಿ ಶ್ರಮಿಸಬೇಕು’ ಎಂದು ಸಲಹೆ ನೀಡಿದರು.

ಸಮ್ಮೇಳನಾಧ್ಯಕ್ಷರ ಮೆರವಣಿಗೆ

ಇದಕ್ಕೂ ಮುನ್ನ ಪಟ್ಟಣದ ಪ್ರವಾಸಿ ಮಂದಿರ ವೃತ್ತದಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ. ಶ್ರೀನಿವಾಸ್ ಚಾಲನೆ ನೀಡಿದರು. ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ ಮತ್ತು ಮಹಿಳಾ ಘಟಕದ ಅಧ್ಯಕ್ಷೆ ಸವಿತಾ ರಮೇಶ್ ಮಾತನಾಡಿದರು.

ಸಮ್ಮೇಳನಾಧ್ಯಕ್ಷ ಶಿ.ಕುಮಾರಸ್ವಾಮಿ ಅವರನ್ನು ಬೆಳ್ಳಿಯ ಸಾರೋಟ್‌ನಲ್ಲಿ ಕೂರಿಸಿ ಮೆರವಣಿಗೆ ಮಾಡಲಾಯಿತು. ಅವರೊಂದಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಾಮಲಾಪುರ ರವಿಕುಮಾರ್, ತಾಲ್ಲೂಕು ಘಟಕದ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ ಸಾಥ್ ನೀಡಿದರು. ಮೆರವಣಿಗೆ ದಕ್ಷಿಣ ಶಾಲೆಯ ಬಳಿ ಮುಕ್ತಾಯಗೊಂಡಿತು. ಮೆರವಣಿಗೆಗೆ ಜನಪದ ಕಲಾತಂಡಗಳು ಮೆರುಗು ನೀಡಿದವು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘದ ಸದಸ್ಯರು ಕಳಸ ಹೊತ್ತಿದ್ದರು. ಆಶಾ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಶಿಕ್ಷಕರು ಕನ್ನಡ ಧ್ವಜ ಹಿಡಿದು ಸಾಗಿದರು.

ಕಾರ್ಯಕ್ರಮ ಆರಂಭ 3 ಗಂಟೆ ತಡ

ಸಚಿವ ನಾರಾಯಣಗೌಡ ತಡವಾಗಿ ಬಂದಿದ್ದರಿಂದ ಬೆಳಿಗ್ಗೆ 10.30ಕ್ಕೆ ನಿಗದಿಯಾಗಿದ್ದ ಕಾರ್ಯಕ್ರಮ ಮಧ್ಯಾಹ್ನ 1.15ಕ್ಕೆ ಉದ್ಘಾಟನೆಗೊಂಡಿತು. ಅತಿಥಿಗಳು, ಸಭಿಕರು ಸಚಿವರ ಆಗಮನಕ್ಕಾಗಿ ಕಾದು ಸುಸ್ತಾದರು. ಸಮ್ಮೇಳನ ಆರಂಭವಾಗಿ ಸ್ವಾಗತ ಭಾಷಣ ಮುಗಿಯುತ್ತಿದ್ದಂತೆ ಸಭಿಕರು ಊಟದ ಮನೆಯತ್ತ ಹೆಜ್ಜೆ ಹಾಕಿದ್ದರಿಂದ ಸಭಾಂಗಣ ಭಣಗುಡುತ್ತಿತ್ತು.

ಸಮ್ಮೇಳನದ ಸರ್ವಾಧ್ಯಕ್ಷರ ಭಾಷಣದ ನಂತರ ಅಧ್ಯಕ್ಷೀಯ ಭಾಷಣ ಮಾಡಬೇಕಿದ್ದ ಸಚಿವ ನಾರಾಯಣಗೌಡ ತುರ್ತು ಕಾರ್ಯ ನಿಮಿತ್ತ ನಿರ್ಗಮಿಸಿದ್ದರಿಂದ, ಬೆರಳೆಣಿಕೆಯಷ್ಟು ಮಂದಿ ಭಾಷಣ ಆಲಿಸಿದರು.

ಊಟದ ಪ್ರಾಯೋಜಕತ್ವವನ್ನು ಆರ್.ಟಿ.ಒ ಮಲ್ಲಿಕಾರ್ಜುನ ವಹಿಸಿಕೊಂಡಿದ್ದರು. ಹೋಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT