ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತೆಕಸಲಗೆರೆ: ಅಟ್ಟುಣ್ಣುವ ಜಾತ್ರೆಗೆ ಭಕ್ತಸಾಗರ

ದೇವಾಲಯದ ಆವರಣದಲ್ಲಿ ಅಡುಗೆ ತಯಾರಿಸಿ ಸವಿದ ಜನರು, 2 ವರ್ಷಗಳ ನಂತರ ವೈಭವದ ಆಚರಣೆ
Last Updated 4 ಏಪ್ರಿಲ್ 2022, 12:16 IST
ಅಕ್ಷರ ಗಾತ್ರ

ಮಂಡ್ಯ: ತಾಲ್ಲೂಕಿನ ಸಂತೆಕಸಲಗೆರೆ ಗ್ರಾಮದ ಹೊರವಲಯದಲ್ಲಿವ ಐತಿಹಾಸಿಕ ಭೂಮಿಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವ (ಅಟ್ಟುಣ್ಣುವ ಜಾತ್ರೆ) ಸೋಮವಾರ ಭಕ್ತ ಸಾಗರದ ನಡುವೆ ವೈಭವದಿಂದ ನೆರವೇರಿತು.

ಕೋವಿಡ್‌ನಿಂದಾಗಿ ಕಳೆದ 2 ವರ್ಷಗಳಿಂದ ಜಾತ್ರೆ ನಡೆದಿರಲಿಲ್ಲ, ಆದರೆ ಈ ಬಾರಿ ಹಲವು ಗ್ರಾಮಸ್ಥರು ಸೇರಿ ವೈಭವಯುತವಾಗಿ ಆಚರಿಸಿದರು. ಯುಗಾದಿ ಹಬ್ಬದ ನಂತರ ನಡೆಯುವ ಈ ಜಾತ್ರೆಯಲ್ಲಿ ಸುತ್ತಮುತ್ತಲಿನ 30 ಸಾವಿರಕ್ಕೂ ಹೆಚ್ಚು ಜನರು ಬಂದು ಸೇರಿದ್ದರು. ಭಾನುವಾರ ಸಂಜೆಯೇ ಬಾಯಿ ಬೀಗ ಆಚರಣೆ ನಡೆಯಿತು. ಸೋಮವಾರ ಬೆಳಿಗ್ಗೆಯಿಂದ ದೇವಾಲಯ ಆವರಣದಲ್ಲಿ ಸಾವಿರಾರು ಜನರು ದೇವರ ದರ್ಶನ ಪಡೆದರು.

ನೂತನ ದೇವಾಲಯ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿರುವ ಕಾರಣ ದೇವಾಲಯದ ಹಿಂಭಾಗದಲ್ಲಿ ಸಣ್ಣದಾಗಿ ಶೆಡ್‌ ಮಾದರಿಯಲ್ಲಿ ಗುಡಿ ಕಟ್ಟಿ, ದೇವರ ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸಲಾಗುತ್ತಿದೆ. ದೇವರ ದರ್ಶನಕ್ಕೆ ಸೂಕ್ತ ವ್ಯವಸ್ಥೆ ಮಾಡಲಾಗಿತ್ತು. ಭಕ್ತಾರು ಪಾನಕ, ಮಜ್ಜಿಗೆ ಹಾಗೂ ರಸಾಯನ ವಿತರಣೆ ಮಾಡಿ ಸಂಭ್ರಮದಿಂದ ಜಾತ್ರೆ ಆಚರಿಸಿದರು.

ಜಾತ್ರೆಗೆ ಬಂದ ಮಹಿಳೆಯರು ಅಡುಗೆ ಸಾಮಗ್ರಿಗಳನ್ನು ಬುಟ್ಟಿಯಲ್ಲಿ ತಂದು ದೇವರ ಮುಂದಿಟ್ಟು ಪೂಜೆ ಸಲ್ಲಿಸಿದರು. ನಂತರ ದೇವಾಲಯದ ಆವರಣಕ್ಕೆ ತೆರಳಿ ಅಡುಗೆ ಮಾಡಿದರು. ಸಂತೆಕಸಲಗೆರೆ, ಕೊತ್ತತ್ತಿ, ಬೇವಿನಹಳ್ಳಿ, ಮೊತ್ತಹಳ್ಳಿ, ಮಂಗಲ, ಹನಿಯಂಬಾಡಿ, ಕಾರಸವಾಡಿ, ಹುಲ್ಕೆರೆ ಸೇರಿ ಸುಮಾರು 30 ಗ್ರಾಮಗಳ ಸಾವಿರಾರು ಹೆಚ್ಚು ಜನರು ಜಾತ್ರೆಯಲ್ಲಿ ಭಾಗವಹಿಸಿದ್ದರು.

ಸಸ್ಯಹಾರದ ಜೊತೆಗೆ ಮಾಂಸಹಾರವನ್ನೂ ಮಾಡಲಾಗಿತ್ತು. ಮಾಂಸಹಾರವನ್ನು ದೇವರಿಗೆ ಅರ್ಪಿಸದೇ ದೇವಾಲಯದ ಆವರಣದಲ್ಲಿಯೇ ಪೂಜೆ ಮಾಡಿ ಸಂಪ್ರದಾಯ ಆಚರಣೆ ಮಾಡಿದರು. ಈ ಜಾತ್ರೆಗೆ ಐತಿಹಾಸಿಕ ಹಿನ್ನೆಲೆ ಇದ್ದು ಮೈಸೂರು ಸಂಸ್ಥಾನದ ಮೇಲೆ ಮರಾಠರು ದಾಳಿ ಮಾಡಿದಾಗ ಜನರು ಭೂಮಿ ಸಿದ್ದೇಶ್ವರನ ಆವರಣದಲ್ಲಿ ಬಂದು ಬೀಡು ಬಿಡುತ್ತಾರೆ. ಇದನ್ನು ತಿಳಿದ ಕುಮಾರಯ್ಯ ಗ್ರಾಮದ ಜನರ ಸಹಾಯದಿಂದ ಬೀಡು ಬಿಟ್ಟಿದ್ದ ಮರಾಠರನ್ನು ಉಪಾಯದಿಂದ ಹಿಮ್ಮೆಟ್ಟಿಸುತ್ತಾರೆ. ಹೀಗಾಗಿ ಹುತಾತ್ಮವೀರ ಮಕ್ಕಳ ಆತ್ಮಕ್ಕೆ ಶಾಂತಿ ಕೋರುವ ದ್ಯೋತಕವಾಗಿ ಜಾತ್ರೆ ನಡೆಯುತ್ತದೆ ಎಂದು ಗ್ರಾಮದ ಹಿರಿಯರು ಹೇಳುತ್ತಾರೆ.

‘ಸುತ್ತಮುತ್ತಲಿನ ಗ್ರಾಮಸ್ಥರು ಸೇರಿ ವಿಜೃಂಭಣೆಯಿಂದ ಜಾತ್ರೆ ಆಚರಣೆ ಮಾಡುತ್ತೇವೆ. ಜಾತ್ರೆಗೆ ಬಂದಂತಹ ಜನರಿಗೆ ಮೂಲ ಸೌಲಭ್ಯ ಒದಗಿಸಲಾಗುತ್ತದೆ. ಭೂಮಿ ಸಿದ್ದೇಶ್ವರನ ದೇವರ ಅಭಿವೃದ್ಧಿ ಸಮಿತಿಯಿಂದ ಎರಡು ಸಮುದಾಯ ಭವನ, ಆಡಳಿತ ಕಚೇರಿ ಇದ್ದು ಸುತ್ತಲಿನ ಬಡ ಕುಟುಂಬಗಳ ಮದುವೆ ಕಾರ್ಯಕ್ರಮಗಳಿಗೆ ಸಮುದಾಯ ಭವನ ಸಹಾಯಕವಾಗಿವೆ’ ಎಂದು ಎಂದು ಭೂಮಿಸಿದ್ಧೇಶ್ವರ ಅಭಿವೃದ್ಧಿ ಸಮಿತಿ ಅಧ್ಯಕ್ಷ ತಮ್ಮಣ್ಣ ಹೇಳಿದರು.

‘₹ 5 ಕೋಟಿ ವೆಚ್ಚದಲ್ಲಿ ನೂತನ ದೇವಾಲಯ ನಿರ್ಮಾಣ ಮಾಡಲಾಗುತ್ತಿದೆ. ಇಲ್ಲಿಯವರೆಗೂ ಸರ್ಕಾರದಿಂದ ಒಂದು ರೂಪಾಯಿ ಅನುದಾನ ಪಡೆದಿಲ್ಲ. ದೇವಾಲಯಕ್ಕೆ ಇನ್ನೂ ಹೆಚ್ಚಿನ ಹಣಕಾಸಿನ ಅಗತ್ಯತೆ ಇದೆ. ಭಕ್ತರು, ಸರ್ಕಾರ ಸಹಾಯ ಮಾಡಬೇಕು’ ಎಂದು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT