ಮಂಡ್ಯ: ‘ಮೈಷುಗರ್ ಕಾರ್ಖಾನೆ ವ್ಯಾಪ್ತಿಯ ತಾಲ್ಲೂಕಿನ ಕೊತ್ತತ್ತಿ ಹೋಬಳಿ ಗ್ರಾಮಗಳಲ್ಲಿ ಕಟಾವಿಗೆ ಬಂದಿರುವ ಕಬ್ಬನ್ನು ಕೇವಲ ಕಾಂಗ್ರೆಸ್ ಕಾರ್ಯಕರ್ತರ ಆಣತಿಯಂತೆ ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ ಅವರು ಕಟಾವು ಮಾಡಿಸುತ್ತಿದ್ದಾರೆ’ ಎಂದು ಆರೋಪಿಸಿ ಅವರಿಗೆ ದಿಗ್ಬಂಧನ ಹಾಕಿದ ಘಟನೆ ಮಂಗಲ ಗ್ರಾಮದಲ್ಲಿ ಮಂಗಳವಾರ ನಡೆಯಿತು.
ರೈತರನ್ನು ಭೇಟಿ ಮಾಡಲು ಮಂಗಲ ಗ್ರಾಮಕ್ಕೆ ಕಾರಿನಲ್ಲಿ ತೆರಳಿದ ಅಧ್ಯಕ್ಷರು ಮತ್ತು ಅಧಿಕಾರಿಗಳ ತಂಡಕ್ಕೆ ತೀವ್ರ ತರಾಟೆ ತೆಗೆದುಕೊಂಡ ರೈತರು ಮುತ್ತಿಗೆ ಹಾಕಿದರು. ಕಾಂಗ್ರೆಸ್ ಕಾರ್ಯಕರ್ತರು ಹೇಳಿದ ಕಾರ್ಯಕರ್ತರ ಕಬ್ಬಿನ ಗದ್ದೆಗಳಿಗೆ ಕಟಾವಿಗೆ ಕಳುಹಿಸುತ್ತಿರುವುದು ಏಕೆ, ಇನ್ನುಳಿದ ರೈತರು ಹಾಗೂ ಅವಧಿ ಮೀರಿದ ಕಬ್ಬನ್ನು ಕಟಾವು ಮಾಡಲು ರಾಜಕೀಯ ಮಾಡುತ್ತಿರುವುದು ಸರಿಯೇ? ಎಂಬ ಪ್ರಶ್ನೆಗಳನ್ನು ರೈತರು ಕೇಳಿದರು.
ಸಿ.ಡಿ.ಗಂಗಾಧರ ಮಾತನಾಡಿ, ‘ಎಲ್ಲ ರೈತರನ್ನು ಸಮನಾಗಿ ಕಾಣುತ್ತಿದ್ದೇವೆ, ಬುಧವಾರದಿಂದಲೇ ಎಲ್ಲ ರೈತರ ಕಬ್ಬಿನ ಗದ್ದೆಗಳಿಗೆ ಆಳುಗಳನ್ನು ಕಳುಹಿಸಿ ಕಬ್ಬು ಕಟಾವು ಮಾಡಿಸುವ ಭರವಸೆ ನೀಡಿದರು. ಇದಕ್ಕೆ ಒಪ್ಪದ ಕೆಲವು ರೈತರು ವಿರೋಧ ವ್ಯಕ್ತಪಡಿಸಿ, ನೀವು ಇದನ್ನೇ ಕಳೆದ ಒಂದು ತಿಂಗಳಿಂದಲೂ ಹೇಳಿಕೊಂಡು ಬರುತ್ತಿದ್ದೀರಾ ಎಂದು ಕೆಂಡಾಮಂಡಲವಾದರು. ಅವರನ್ನು ಸುತ್ತುವರಿದು ಸ್ಥಳದಿಂದ ಹೋಗದಂತೆ ತಡೆದರು.
ನಂತರ ಗಂಗಾಧರ ಅವರು ಪೊಲೀಸರನ್ನು ಕರೆಸಿಕೊಂಡು ರೈತರನ್ನು ಸಮಾಧಾನ ಪಡಿಸುವ ಕೆಲಸ ಮಾಡಿದರು. ಇದಕ್ಕೆ ಭಾರಿ ವಿರೋಧ ವ್ಯಕ್ತಪಡಿಸಿದ ರೈತರು ಗ್ರಾಮಕ್ಕೆ ಪೊಲೀಸರು ಆಗಮಿಸಿರುವುದನ್ನು ಖಂಡಿಸಿ, ರೈತರನ್ನು ಹತ್ತಿಕ್ಕಲು ಅವರ ದನಿ ಅಡಗಿಸಲು ನೀವು ನಡೆದುಕೊಂಡ ಕ್ರಮಕ್ಕೆ ಎಂದಿಗೂ ನಾವು ಭಯ ಪಡುವುದಿಲ್ಲ ಎಂದು ಪೊಲೀಸರು ಮತ್ತು ರೈತರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.
ಸರ್ಕಾರಿ ಕಾರಿನಲ್ಲಿ ಅಧ್ಯಕ್ಷರ ಪತ್ನಿ: ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ ಅವರ ಜೊತೆ ಕಾರಿನಲ್ಲಿ ಬಂದಿದ್ದ ಪತ್ನಿ, ರೈತರೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ‘ಕಟಾವಿಗೆ ಬಂದಿರುವ ಕಬ್ಬನ್ನು ನೀವೇ ಕಟಾವು ಮಾಡಿದರೆ ಆಗಲ್ಲವೇ? ಈ ಹಿಂದೆ ಬಿಜೆಪಿ ಸರ್ಕಾರದವರನ್ನು ಪ್ರಶ್ನೆ ಮಾಡಲಿಲ್ಲವೇಕೇ? ನಮ್ಮನ್ನು ಏಕೆ ಪ್ರಶ್ನೆ ಮಾಡುತ್ತೀರಾ?’ ಇತ್ಯಾದಿ ಪ್ರಶ್ನೆಗಳನ್ನು ಕೇಳಿದರು. ಇದಕ್ಕೆ ವಿರೋಧಿಸಿದ ರೈತರು ಅವರು ಸರ್ಕಾರಿ ಕಾರಿನಲ್ಲಿ ಬಂದಿದ್ದ ಅವರನ್ನು ಸುತ್ತುವರಿದು ಆಕ್ರೋಶ ವ್ಯಕ್ತಪಡಿಸಿದರು.
ರೈತರ ಮೂಗಿಗೆ ತುಪ್ಪ: ಪ್ರತಿಬಾರಿಯೂ ಅಧ್ಯಕ್ಷರು ಮತ್ತು ಅಧಿಕಾರಿಗಳು ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ. ಕಬ್ಬು ಕಟಾವು ಮಾಡುವುದರಲ್ಲಿ ರಾಜಕೀಯ ಹಸ್ತಕ್ಷೇಪ ಮಾಡಬಾರದು. ಕೇವಲ ಕಾಂಗ್ರೆಸ್ ಕಾರ್ಯಕರ್ತರು ಹೇಳುವ ಗದ್ದೆಗಳಿಗೆ ಆಳುಗಳನ್ನು ಕಟಾವಿಗೆ ಕಳುಹಿಸಿದರೆ ಉಳಿದ ರೈತರ ಗತಿಯೇನು ಎಂದು ರೈತರಾದ ಯೋಗೇಶ್, ಮಾದೇಗೌಡ, ಕೆಂಪೇಗೌಡ, ರವೀಂದ್ರ, ಜವರೇಗೌಡ, ಪ್ರಕಾಶ್, ಮೋಹನ್, ಜಯಶಂಕರ್ ಮುಂತಾದವರು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.