ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಕೋವಿಡ್‌ ಹಿನ್ನೆಲೆ, ಊರ ತುಂಬೆಲ್ಲಾ ‘ಶ್ರದ್ಧಾಂಜಲಿ’ ಚಿತ್ರ

ಅನ್ಯ ರೋಗಗಳಿಂದಲೂ ಸಾವಿನ ಸಂಖ್ಯೆ ಹೆಚ್ಚಳ, ಬೀದಿಬೀದಿಯಲ್ಲಿ ಕಂಬನಿ ಮಿಡಿದು ಫ್ಲೆಕ್ಸ್‌ ಅಳವಡಿಕೆ
Last Updated 13 ಅಕ್ಟೋಬರ್ 2020, 2:05 IST
ಅಕ್ಷರ ಗಾತ್ರ

ಮಂಡ್ಯ: ಮನೆಯಿಂದ ಹೊರ ಬಂದರೆ ಸಾಕು, ರಸ್ತೆಯುದ್ದಕ್ಕೂ ‘ಶ್ರದ್ಧಾಂಜಲಿ’ ಚಿತ್ರಗಳೇ ಕಣ್ಣಿಗೆ ಕಾಣುತ್ತವೆ. ಈ ಕೋವಿಡ್‌ ಸಂಕಷ್ಟ ಕಾಲದಲ್ಲಿ ಸಾವುಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು ಜನರ ನೆಮ್ಮದಿ ಕದಡಿದೆ.

ಜಿಲ್ಲೆಯಲ್ಲಿ ಇಲ್ಲಿಯವರೆಗೆ ಕೋವಿಡ್‌ನಿಂದ 120 ಮಂದಿ ಸಾವಿಗೀಡಾಗಿದ್ದಾರೆ. ಇತರ ಜಿಲ್ಲೆಗಳಿಗೆ ಹೋಲಿಸಿದರೆ ಮಂಡ್ಯ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ನಿಯಂತ್ರಣದಲ್ಲಿದೆ. ಆದರೆ, ಬಹುತೇಕ ಕೊರೊನಾ ಸೋಂಕಿತರು ಮೈಸೂರು ಆಸ್ಪತ್ರೆಗಳಿಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ಅಲ್ಲಿಯ ಸಾವುಗಳು ಮಂಡ್ಯ ಜಿಲ್ಲೆಯ ಸಂಖ್ಯೆಗೆ ಸೇರಿಕೊಳ್ಳುತ್ತಿಲ್ಲ. ಹೀಗಾಗಿ ಜಿಲ್ಲೆಯಲ್ಲಾದ ನಿಖರ ಸಾವಿನ ಸಂಖ್ಯೆ ತಿಳಿದುಬರುತ್ತಿಲ್ಲ.

ಇದರ ಜೊತೆಗೆ ಅನ್ಯಕಾರಣಕ್ಕೆ ಸಾವಿಗೀಡಾಗುತ್ತಿರುವವರ ಸಂಖ್ಯೆಯೂ ಹೆಚ್ಚಳವಾಗುತ್ತಿದೆ. ಜನರು ಕಳೆದ ಏಳೆಂಟು ತಿಂಗಳುಗಳಿಂದ ಮನೆಯಲ್ಲೇ ಇರುವ ಕಾರಣ ಒತ್ತಡದಲ್ಲಿ ಬೇಯುತ್ತಿದ್ದಾರೆ. ಕೋವಿಡ್‌ ಅಲ್ಲದ ಇನ್ನಿತರ ಆರೋಗ್ಯ ಸಮಸ್ಯೆಗಳಿಂದಲೂ ಜನರು ಸಾವಿಗೀಡಾಗುತ್ತಿದ್ದಾರೆ. ಅನ್ಯರೋಗಗಳಿಗೆ ಜಿಲ್ಲಾಸ್ಪತ್ರೆ ಸೇರಿ ಸರ್ಕಾರಿ ಆಸ್ಪತ್ರೆಯಲ್ಲಿ ಸಮರ್ಪಕ ಚಿಕಿತ್ಸೆ ದೊರೆಯುತ್ತಿಲ್ಲ. ಈ ಕಾರಣದಿಂದಲೂ ಹೆಚ್ಚಿನ ಸಾವು ಸಂಭವಿಸುತ್ತಿವೆ.

ನಗರದ ಮೈಸೂರು– ಬೆಂಗಳೂರು ರಾಷ್ಟ್ರೀಯ ಹೆದ್ದಾರಿ, ವಿ.ವಿ ರಸ್ತೆ, ಆರ್‌.ಪಿ ರಸ್ತೆ, ನೂರು ಅಡಿ ರಸ್ತೆ, ಗುತ್ತಲು ಮುಖ್ಯ ರಸ್ತೆಗಳ ಉದ್ದಕ್ಕೂ ಶ್ರದ್ಧಾಂಜಲಿ ಭಾವಚಿತ್ರಗಳು ರಾರಾಜಿಸುತ್ತಿವೆ. ಜನರು ತಮ್ಮ ಪ್ರೀತಿ ಪಾತ್ರರ ಸಾವಿಗೆ ರಸ್ತೆಗಳಲ್ಲಿ ಭಾವಚಿತ್ರ ಅಳವಡಿಸುವ ಮೂಲಕ ಗೌರವ ಸೂಚಿಸುತ್ತಿದ್ದಾರೆ. ಇದು ಗೌರವ ಸೂಚನೆ ಪ್ರಕ್ರಿಯೆ ಮೊದಲೂ ಇತ್ತು, ಆದರೆ ಕೋವಿಡ್‌ ಸಂಕಷ್ಟ ಕಾಲ ಆರಂಭವಾದ ನಂತರ ಎಲ್ಲೆಲ್ಲೂ ಬರೀ ಶ್ರದ್ಧಾಂಜಲಿ ಭಾವಚಿತ್ರಗಳೇ ರಾರಾಜಿಸುತ್ತಿವೆ.

ಹೊಸಹಳ್ಳಿ ವೃತ್ತದ ವಿದ್ಯುತ್‌ ಕಂಬವೊಂದಕ್ಕೆ 10ಕ್ಕೂ ಹೆಚ್ಚು ಶ್ರದ್ಧಾಂಜಲಿ ಗೌರವ ಚಿತ್ರ ಅಳವಡಿಸಲಾಗಿದೆ. ನಗರದಲ್ಲಿ ಮಾತ್ರವಲ್ಲದೇ ಹಳ್ಳಿಹಳ್ಳಿಗಳಲ್ಲೂ ಇದೇ ಪರಿಸ್ಥಿತಿ ಇದೆ. ಗ್ರಾಮೀಣ ಭಾಗದ ಪ್ರತಿ ಬಸ್‌ ನಿಲ್ದಾಣಗಳಲ್ಲಿ ಸಾವಿಗಾಗಿ ಕಂಬನಿ ಮಿಡಿಯವ ಫ್ಲೆಕ್ಸ್‌, ಫಲಕಗಳೇ ಕಾಣುತ್ತಿವೆ.

‘ಕೋವಿಡ್‌ ಸಾವುಗಳ ಸಂಖ್ಯೆ ಹೆಚ್ಚಳವಾಗುತ್ತಿದೆ ಎನ್ನಲು ರಸ್ತೆಯಲ್ಲಿ ಅಳವಡಿಸಿರುವ ಫ್ಲೆಕ್ಸ್‌, ಫಲಕಗಳೇ ಸಾಕ್ಷಿ. ಇದು ಅತ್ಯಂತ ಕೆಟ್ಟ ಪರಿಸ್ಥಿತಿ, ಜನರು ಈ ವರ್ಷ ಜೀವ ಉಳಿಸಿಕೊಳ್ಳುವತ್ತ ಚಿಂತಿಸಬೇಕು. ಪರಸ್ಪರ ಅಂತರಕ್ಕೆ ಆದ್ಯತೆ ನೀಡಬೇಕು’ ಎಂದು ವೈದ್ಯರಾದ ಡಾ.ಶಶಿಕುಮಾರ್‌ ಹೇಳಿದರು.

ಹೃದಯ ಸಮಸ್ಯೆ ಹೆಚ್ಚಳ: ಕೋವಿಡ್‌ ಸಂದರ್ಭದಲ್ಲಿ ಸೃಷ್ಟಿಯಾಗಿರುವ ಒತ್ತಡ, ಭಯ ಹೃದಯ ಸಮಸ್ಯೆಗಳ ಹೆಚ್ಚಳಕ್ಕೆ ಕಾರಣವಾಗಿದೆ. ಮೊದಲೇ ಹೃದಯ ರೋಗದಿಂದ ಬಳಲುವವರು ಅಪಾಯದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಹೃದ್ರೋಗ ಸೇರಿ ಇತರ ಆರೋಗ್ಯ ಸಮಸ್ಯೆಗಳಿಂದ ಸಾವಿಗೀಡಾದ ಬಹುತೇಕ ಮಂದಿಯಲ್ಲಿ ಕೋವಿಡ್‌–19 ಪತ್ತೆಯಾಗುತ್ತಿದೆ. ಆದರೆ ಇಂತಹ ಸಾವನ್ನು ವೈದ್ಯರು ಕೋವಿಡ್‌ ಸಾವು ಎಂದು ಪರಿಗಣಿಸುತ್ತಿಲ್ಲ. ಇದು ಕೋವಿಡ್‌ ಸಾವಿನ ಪಟ್ಟಿಯಲ್ಲಿ ಸೇರ್ಪಡೆಯಾಗುತ್ತಿಲ್ಲ.

‘ಶೇ 7ರಷ್ಟು ಕೋವಿಡ್‌ ರೋಗಿಗಳು ಹೃದಯಾಘಾತದಿಂದ ಸಾವಿಗೀಡಾಗುತ್ತಿದ್ದಾರೆ. ಕೋವಿಡ್‌ ಪಾಸಿಟಿವ್‌ ಇದ್ದಾಗ ಅವರಿಗೆ ಶಸ್ತ್ರಚಿಕಿತ್ಸೆ ಮಾಡುವುದಿಲ್ಲ. ಹೀಗಾಗಿ ಹೃದಯಾಘಾತವನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಜ್ವರ, ರಕ್ತದೊತ್ತಡ ಸಮಸ್ಯೆ, ಸೋಂಕು ಇದ್ದಾಗ ದೇಹಕ್ಕೆ ಆಮ್ಲಜನರ ಪೂರೈಕೆ ಕಡಿಮೆಯಾಗುತ್ತದೆ. ಭಯ, ಒತ್ತಡದಿಂದ ಹೃದಯ ಬಡಿತ ನಿಮಿಷಕ್ಕೆ 150 ದಾಟುವ ಸಾಧ್ಯತೆ ಇರುತ್ತದೆ. ಹೀಗಾಗಿ ಹೃದಯಾಘಾತ ಉಂಟಾಗುತ್ತದೆ’ ಎಂದು ಮಂಡ್ಯದ ಪ್ರಿಯದರ್ಶಿನಿ ಹಾರ್ಟ್‌ ಕೇರ್‌ ಮುಖ್ಯಸ್ಥ, ಹೃದ್ರೋಗ ತಜ್ಞ ಡಾ.ಎಸ್‌.ಪ್ರಶಾಂತ್‌ ತಿಳಿಸಿದರು.

ಮಿಮ್ಸ್‌ನಲ್ಲಿ ಹೃದ್ರೋಗ ತಜ್ಞರಿಲ್ಲ

ಮಿಮ್ಸ್‌ ಆಸ್ಪತ್ರೆಯಲ್ಲಿ ಕ್ಯಾತ್‌ಲ್ಯಾಬ್‌ ಹಾಗೂ ಹೃದಯ ತಜ್ಞರು ಇಲ್ಲದ ಕಾರಣ ಜಿಲ್ಲೆಯ ಜನರು ಹೃದಯ ಸಮಸ್ಯೆಗಳಿಗೆ ಮೈಸೂರು, ಬೆಂಗಳೂರು ನಗರಗಳಿಗೆ ತೆರಳಬೇಕಾದ ಅನಿವಾರ್ಯತೆ ಇದೆ. ಹೃದಯಾಘಾತ ಸಂಭವಿಸಿದಾಗ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೇ ಮೃತಪಟ್ಟವರ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚಿದೆ.

ಪ್ರಿಯದರ್ಶಿನಿ ಹಾರ್ಟ್‌ ಕೇರ್‌ ಕೇಂದ್ರ ಹೊರತುಪಡಿಸಿ ಯಾವ ಖಾಸಗಿ ಸಸಿಂಗ್‌ ಹೋಮ್‌ನಲ್ಲಿ ಹೃದಯ ಸಮಸ್ಯೆಗೆ ಚಿಕಿತ್ಸೆ ದೊರೆಯುವುದಿಲ್ಲ.

‘ಹೃದಯ ರೋಗ ತಜ್ಞರು ದೊರೆಯದ ಕಾರಣ ಜಿಲ್ಲಾಸ್ಪತ್ರೆಯಲ್ಲಿ ಕಾತ್‌ಲ್ಯಾಬ್‌ ವ್ಯವಸ್ಥೆ ಮಾಡಲು ಸಾಧ್ಯವಾಗಿಲ್ಲ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್‌.ಪಿ.ಮಂಚೇಗೌಡ ಹೇಳಿದರು.

*************

ವ್ಯಕ್ತಿ ಮೃತಪಟ್ಟು 11 ದಿನ ಮುಗಿದ ನಂತರ ಫ್ಲೆಕ್ಸ್‌ಗಳನ್ನು ಉಳಿಸುವಂತಿಲ್ಲ. 11 ದಿನ ಮೀರಿದ ಫಲಕ, ಫ್ಲೆಕ್ಸ್‌ಗಳನ್ನು ನಗರಸಭೆ ವತಿಯಿಂದಲೇ ತೆರವುಗೊಳಿಸಲಾಗುವುದು

– ಎಸ್‌.ಲೋಕೇಶ್‌, ನಗರಸಭೆ ಪೌರಾಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT