ಮಂಗಳವಾರ, ಆಗಸ್ಟ್ 16, 2022
29 °C
ಸಾಧಕರಿಗೆ ಅರ್ಜುನಪುರಿ ಅಪ್ಪಾಜಿಗೌಡ, ಡಾ. ಪಾ.ಶ. ಶ್ರೀನಿವಾಸ ಸ್ಮಾರಕ ದತ್ತಿ ಪ್ರಶಸ್ತಿ ಪ್ರದಾನ

ಜ್ಞಾನಭಂಡಾರಕ್ಕೆ ಜಾನಪದವೇ ಜೀವಾಳ: ಜಾನಪದ ವಿದ್ವಾಂಸ ಕ್ಯಾತನಹಳ್ಳಿ ರಾಮಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ‘ನಮ್ಮ ಹಿರೀಕರು ಕೊಟ್ಟಿರುವ ಗಾದೆ, ಗಧ್ಯ, ಪದ್ಯ, ಒಗಟುಗಳಲ್ಲಿ ಜ್ಞಾನಭಂಡಾರವೇ ಇದೆ. ಎಲ್ಲಾ ಜ್ಞಾನಭಂಡಾರಕ್ಕೆ ಜಾನಪದವೇ ಜೀವಾಳವಾಗಿದೆ, ಅದು ಗುರುವಿನ ಸ್ಥಾನದಲ್ಲಿದೆ’ ಎಂದು ಜಾನಪದ ವಿದ್ವಾಂಸ ಕ್ಯಾತನಹಳ್ಳಿ ರಾಮಣ್ಣ ಹೇಳಿದರು.

ಗಾಂಧಿ ಸ್ಮಾರಕ ಟ್ರಸ್ಟ್‌ ವತಿಯಿಂದ ಗಾಂಧಿಭವನದಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಡಾ.ಅರ್ಜುನಪುರಿ ಅಪ್ಪಾಜಿಗೌಡ 4ನೇ ದತ್ತಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

‘ನಮ್ಮ ಹಿರಿಯ ತಲೆಮಾರಿನ ಜನರನ್ನು ಅನಕ್ಷರಸ್ಥರು ಎಂದು ಉಡಾಫೆಯಾಗಿ ಹೇಳುವುದು ಸರಿಯಲ್ಲ. ಅವರು ಬದುಕಿದ ರೀತಿಯಲ್ಲಿ ಪ್ರೌಢಿಮೆ ಇತ್ತು. ಅವರು ಬಳಸಿದ ವಸ್ತುಗಳ ಹಿಂದೆ ತಂತ್ರಜ್ಞಾನವಿತ್ತು. ಜ್ಞಾನವನ್ನು ಗೂಢ ರೀತಿಯಲ್ಲಿ ಅನಾವರಣಗೊಳಿಸುತ್ತಿದ್ದರು. ಅಜ್ಞಾತ ವ್ಯಕ್ತಿಗಳು ಕೊಟ್ಟಿರುವ ಸಾಹಿತ್ಯವು ಜ್ಞಾನ ಪರಂಪರೆಗೆ ಮೌಲಿಕ ಅಡಿಪಾಯ ಹಾಕಿಕೊಟ್ಟಿದೆ’ ಎಂದರು.

‘ಬೆಳಗಾಗಿ ನಾನೆದ್ದು ಯಾರ‍್ಯಾರ ನೆನೆಯಾಲಿ, ಎಳ್ಳು ಜೀರಿಗೆ ಬೆಳೆಯೋಳ ಭೂಮ್ತಾಯ, ಎದ್ದೊಂದು ಗಳಿಗೆ ನೆನೆದೇನೋ. ಈ ತ್ರಿಪದಿ ಜನಮಾನಸದಲ್ಲಿ ಹಚ್ಚಹಸಿರಾಗಿದೆ. ಅಜ್ಞಾತ ಕವಿಯೊಬ್ಬ ಭೂಮಿತಾಯಿಯನ್ನು ನೆನೆದಿದ್ದಾನೆ. ಅದರ ಜೊತೆಗೆ ಎಳ್ಳು ಮತ್ತು ಜೀರಿಗೆ ಧಾನ್ಯಗಳ ಬಗ್ಗೆ ಮಾತ್ರ ಉಲ್ಲೇಖಿಸಿದ್ದಾನೆ. ಇದರ ಹಿಂದೆ ಮನುಷ್ಯನ ಜೀವನಕ್ಕೆ ಅವಶ್ಯವಾಗಿರುವ ವಿದ್ಯೆ ಹಾಗೂ ಆರೋಗ್ಯದ ಉಪಮೆ ಇದೆ’ ಎಂದರು.

‘ಎಳ್ಳಿನಿಂದ ಎಣ್ಣೆ ತಯಾರಾಗುತ್ತದೆ, ಎಣ್ಣೆಯಿಂದ ದೀಪ ಬೆಳಗುತ್ತದೆ, ದೀಪ ಜ್ಞಾನದ ಸಂಕೇತವಾಗಿದೆ. ಈಗಲೂ ಜೀರಿಗೆ ಉತ್ತಮ ಆರೋಗ್ಯದ ಸಂಕೇತವಾಗಿದೆ. ಈಗಿನ ರೀತಿಯಲ್ಲಿ ಹಿಂದೆ ಆಸ್ಪತ್ರೆ, ವೈದ್ಯರು ಇರಲಿಲ್ಲ. ಜೀರಿಗೆ ಕಾಫಿ ಸರ್ವ ರೋಗಕ್ಕೂ ಮದ್ದಾಗಿತ್ತು. ವಿದ್ಯೆ, ಆರೋಗ್ಯದ ಮಹತ್ವವನ್ನು ಸಾರುವ ಈ ತ್ರಿಪದಿ ನಮ್ಮ ಜನಪದರ ಕೊಡುಗೆಯಾಗಿದೆ. ಹಿರೀಕರು ಪಶುಗಳ ಜೊತೆಯಲ್ಲೇ ಬದುಕುತ್ತಿದ್ದರು, ಮನೆ ಕಟ್ಟಿದರೆ ಕೊಟ್ಟಿಗೆಯೂ ಜೊತೆಯಲ್ಲೇ ಇರುತ್ತಿತ್ತು. ಇದರ ಹಿಂದೆ ದೊಡ್ಡ ಪಾಠವೇ ಇದೆ’ ಎಂದರು.

ಸಾಹಿತಿ ಡಾ.ನಂಜಯ್ಯ ಹೊಂಗನೂರು ಮಾತನಾಡಿ ‘ಮೈಸೂರು ವಿಶ್ವವಿದ್ಯಾಲಯದಲ್ಲಿ ಜಾನಪದ ಭಂಡಾರವನ್ನು ಶ್ರೀಮಂತಗೊಳಿಸಿದ ಕೀರ್ತಿ ಕ್ಯಾತನಹಳ್ಳಿ ರಾಮಣ್ಣ ಅವರಿಗೆ ಸಲ್ಲಬೇಕು. ಅವರ ಕ್ಷೇತ್ರ ಕಾರ್ಯ, ಸರಳ ಜೀವನ ಮಾದರಿಯಾದುದು. ಮೌಖಿಕ ಪರಂಪರೆಯ ಶಬ್ದಗಳು ಮರೆಯಾಗುತ್ತಿರುವ ಕಾಲದಲ್ಲಿ ರಾಮಣ್ಣ ಅವರು ಜಾನಪದ ನಿಘಂಟು ಹೊರತಂದು ಶಬ್ದಗಳ ಅರ್ಥ ವಿವರಣೆ ಮಾಡಿದರು. ಈ ಕಾರಣಕ್ಕೆ ಅವರನ್ನು ಜಾನಪದ ಕ್ಷೇತ್ರದ ಕಿಟಲ್‌ ಎಂದೇ ಕರೆಯಬೇಕು’ ಎಂದರು.

ಪ್ರಾಧ್ಯಾಪಕ ಮ.ರಾಮಕೃಷ್ಣ ಮಾತನಾಡಿ ‘ರಾಮಣ್ಣ ಅವರಿಗೆ ಜಾನಪದವೇ ಜೀವಾಳವಾಗಿದೆ, ಅವರ ಉಸಿರಲ್ಲೂ ಜಾನಪದ ತುಂಬಿಕೊಂಡಿದೆ. ಮೌನಸಾಧಕನನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಪ್ರಶಂಸನೀಯ’ ಎಂದರು. ಗಾಂಧಿಭವನ ಟ್ರಸ್ಟ್‌ ಕಾರ್ಯರ್ಶಿ ಎನ್‌.ರಾಜು, ಪ್ರೊ.ಎಂ.ರಾಜಣ್ಣ ಇದ್ದರು.

ಕನ್ನಡ– ತಮಿಳು ಬಾಂಧವ್ಯದ ಬೆಸುಗೆ

ಸುಶೀಲಾ ಡಾ.ಪಾ.ಶ. ಶ್ರೀನಿವಾಸ ಅಭಿಮಾನಿ ಬಳಗ, ಮಧುರೈ ಕರ್ನಾಟಕ ಸಂಘದ ವತಿಯಿಂದ ಸಾಹಿತಿ ಡಾ.ಪ್ರದೀಪ್‌ಕುಮಾರ್‌ ಹೆಬ್ರಿ ಅವರಿಗೆ ಸುಶೀಲಾ ಡಾ.ಪಾ.ಶ.ಶ್ರೀ ಸ್ಮಾರಕ ದತ್ತಿ ಪ್ರಶಸ್ತಿ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರದೀಪ್‌ ಕುಮಾರ್‌ ಹೆಬ್ರಿ ‘ಪಾಶಾಶ್ರೀ ಅವರು ಕನ್ನಡ ಹಾಗೂ ತಮಿಳು ಭಾಷೆಗಳ ಬಾಂಧವ್ಯಕ್ಕಾಗಿ ತಮ್ಮ ಬದುಕನ್ನು ಮೀಸಲಿಟ್ಟಿದ್ದರು. ಆದರೂ ಅವರ ಅರ್ಹತೆಗೆ ತಕ್ಕ ಸ್ಥಾನ ಅವರಿಗೆ ದೊರೆಯಲಿಲ್ಲ ಎಂಬ ನೋವು ನನ್ನನ್ನು ಕಾಡುತ್ತಿದೆ’ ಎಂದರು.

‘ತಮಿಳಿನ ತಿರುಕ್ಕುರಳ್‌ ಕೃತಿಯನ್ನು ಕನ್ನಡಕ್ಕೆ ತಂದಿದ್ದ ಕನ್ನಡದ ತಿರುವಳ್ಳವರ್‌ ಎಂದೇ ಖ್ಯಾತಿ ಪಡೆದಿದ್ದರು. ತಿರುಕ್ಕುರುಳ್‌ ಕೃತಿ ಆಧರಿಸಿ ಪ್ರಜ್ಯೋತಿ ಎಂಬ ಕಾವ್ಯವನ್ನು ನಾನು ಚೌಪದಿಯಲ್ಲಿ ರಚಿಸಿದ್ದೇನೆ. ಅವರ ಕಥಾ ಸಂಕಲನವೊಂದಕ್ಕೆ ಮುನ್ನುಡಿ ಬರೆಯುವ ಅವಕಾಶ ನನಗೆ ದೊರೆತಿತ್ತು. ಈಚೆಗೆ ನಡೆದ ಅವರ ಅಭಿನಂದನಾ ಸಮಾರಂಭದಲ್ಲಿ ನಾನು ಭಾಗವಹಿಸಿದ್ದು ಧನ್ಯತೆ ಎಂದು ಭಾವಿಸಿದ್ದೇನೆ’ ಎಂದರು.

‘ಪಾ.ಶ.ಶ್ರೀನಿವಾಸ ಕನ್ನಡ-ತಮಿಳು ಸಾಂಸ್ಕೃತಿಕ ಸೇತು’ ಕೃತಿ ಬಿಡುಗಡೆ ಮಾಡಲಾಯಿತು. ಡಾ.ಮೋಹನ ಕುಂಟಾರ್, ಡಾ. ಎಸ್. ಶ್ರೀನಿವಾಸ ಶೆಟ್ಟಿ,  ಡಾ.ಆನಂದರಾಮ ಉಪಾಧ್ಯ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು