ಭಾನುವಾರ, ಜೂನ್ 13, 2021
22 °C
ಪಿಒಪಿ, ರಾಸಾಯನಿಕ ಬಣ್ಣದ ಮೂರ್ತಿ ಸ್ಥಾಪನೆಗೆ ನಿಷೇಧ, ಮನೆಯಲ್ಲೇ ಆಚರಿಸುವಂತೆ ಸಲಹೆ

ಮಂಡ್ಯ: ಸಾರ್ವಜನಿಕ ಗಣೇಶೋತ್ಸವ ನಡೆಸಿದರೆ ಕ್ರಿಮಿನಲ್‌ ಕೇಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ‘ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಗಣೇಶ ಪ್ರತಿಷ್ಠಾಪಿಸುವುದನ್ನು ನಿಷೇಧಿಸಲಾಗಿದೆ. ಸರ್ಕಾರದ ಆದೇಶ ಉಲ್ಲಂಘಿಸಿ ಸಾರ್ವಜನಿಕವಾಗಿ ಗಣೇಶೋತ್ಸವ ನಡೆಸಿದರೆ ಕ್ರಿಮಿನಲ್‌ ಪ್ರಕರಣ ದಾಖಲು ಮಾಡಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಸೋಮವಾರ ಎಚ್ಚರಿಕೆ ನೀಡಿದರು.

‘ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ (ಪಿಒಪಿ), ರಾಸಾಯನಿಕ ಬಣ್ಣಗಳಿಂದ ತಯಾರಿಸಲಾದ ಗೌರಿ–ಗಣೇಶ ಮೂರ್ತಿಗಳ ಮಾರಾಟ ಮತ್ತು ಪ್ರತಿಷ್ಠಾಪನೆಯನ್ನು ನಿಷೇಧಿಸಲಾಗಿದೆ. ಹೊರರಾಜ್ಯಗಳಿಂದ ಪಿಒ‍ಪಿ ಗಣಪತಿ ಮೂರ್ತಿಗಳು ಬರುವ ಸಾಧ್ಯತೆ ಇದ್ದು ಅದನ್ನು ಪರಿಶೀಲನೆ ನಡೆಸಿ ಚೆಕ್‌ಪೋಸ್ಟ್‌ಗಳಲ್ಲೇ ತಡೆಯುವಂತೆ ಪೊಲೀಸ್‌, ಅರಣ್ಯ ಇಲಾಖೆ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಮಣ್ಣು ಹಾಗೂ ಅರಿಶಿಣದಿಂದ ನೈಸರ್ಗಿಕವಾಗಿ ಸಣ್ಣ ಗಣಪತಿ ಮೂರ್ತಿಗಳನ್ನು ಮನೆಯಲ್ಲೇ ತಯಾರಿಸಿ, ಪೂಜಿಸಬಹುದು. ಆದರೆ ಸಾರ್ವಜನಿಕವಾಗಿ ಅವುಗಳನ್ನು ವಿಸರ್ಜನೆ ಮಾಡಲು ಅವಕಾಶವಿಲ್ಲ. ಮನೆಯ ಬಕೆಟ್‌ನಲ್ಲೇ ಮೂರ್ತಿಗಳನ್ನು ವಿಸರ್ಜನೆ ಮಾಡಬಹುದು. ರಸ್ತೆ, ಕೆರೆ, ಕಟ್ಟೆಗಳಲ್ಲಿ ಮೂರ್ತಿಗಳನ್ನು ವಿಸರ್ಜನೆ ಮಾಡಲು ಅವಕಾಶವಿಲ್ಲ. ಜನರು ತಮ್ಮ ಮನೆಯಲ್ಲಿ ಹಾಗೂ ಸಮೀಪದ ದೇವಾಲಯಗಳಲ್ಲಿ ವಿಸರ್ಜನೆ ಮಾಡಬೇಕು’ ಎಂದರು.

‘ಆ.21, 22 ರಂದು ನಡೆಯಲಿರುವ ಗೌರಿ–ಗಣೇಶ ಹಬ್ಬವನ್ನು ಅತ್ಯಂತ ಸರಳ ರೀತಿಯಲ್ಲಿ ಆಚರಣೆ ಮಾಡಬೇಕು. ಹಬ್ಬದ ಆಚರಣೆ ಸಂದರ್ಭದಲ್ಲಿ ಮಾಸ್ಕ್‌, ಸ್ಯಾನಿಟೈಸರ್ ಕಡ್ಡಾಯವಾಗಿ ಬಳಕೆ ಮಾಡಬೇಕು. ದೇವಾಲಯಗಳಿಗೆ ಭಕ್ತರು ಬಂದರೆ ಮಾಸ್ಕ್‌ ಧರಿಸಿದವರಿಗೆ ಮಾತ್ರ ಪ್ರವೇಶ ನೀಡಬೇಕು. ಪ್ರವೇಶ ದ್ವಾರದಲ್ಲೇ ಥರ್ಮಲ್‌ ಸ್ಕ್ರೀನಿಂಗ್‌ ನಡೆಸಬೇಕು. ಹಬ್ಬದ ಸಂಭ್ರಮದಲ್ಲಿ ಆರೋಗ್ಯ ಕಾಳಜಿಯನ್ನು ಯಾವುದೇ ಕಾರಣಕ್ಕೂ ಮರೆಯಬಾರದು’ ಎಂದು ಅವರು ಸೂಚಿಸಿದರು.

‘ಗೌರಿ–ಗಣೇಶ ಮೂರ್ತಿಗಳನ್ನು ಕಲ್ಯಾಣಿ, ಮತ್ತಿತರ ಸಾರ್ವಜನಿಕ ಕೆರೆಗಳಲ್ಲಿ ವಿಸರ್ಜನೆ ಮಾಡಿದರೆ ಜಲಮೂಲಗಳ ತಡೆ ಮತ್ತು ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗುವುದು. ದಂಡ ಅಥವಾ ಜೈಲು ಶಿಕ್ಷೆ ವಿಧಿಸಲು ಅವಕಾಶ ಇದೆ. ಗಣೇಶ ಮೂರ್ತಿ ತರುವಾಗ ಹಾಗೂ ವಿಸರ್ಜನೆ ಮಾಡುವಾಗ ಯಾವುದೇ ರೀತಿಯಾದ ಮೆರಣಿಗೆಗಳನ್ನು ನಡೆಸುವುದನ್ನು ನಿಷೇಧಿಸಲಾಗಿದೆ. ಜೊತೆ ಧ್ವನಿವರ್ಧಕ, ಡಿಜೆಗಳ ಬಳಕೆಯನ್ನು ಬಳಸುವಂತಿಲ್ಲ’ ಎಂದರು.

‘ಗ್ರಾಮಿಣ ಭಾಗದ ಜನರೂ ಸರ್ಕಾರದ ನಿರ್ದೇಶನವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಆ ಬಗ್ಗೆ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಪೊಲೀಸ್‌ ಠಾಣೆಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಕೋವಿಡ್‌ ಸಂಕಷ್ಟ ಸ್ಥಿತಿಯಲ್ಲಿ ಸಾಮಾಜಿಕ ಶಾಂತಿ, ಸಾಮರಸ್ಯ ಕಂಡುಕೊಳ್ಳಲು ಪ್ರಥಮ ಆದ್ಯತೆ ನೀಡಬೇಕು. ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡುವವರಿಗೆ ಭಾರತೀಯ ದಂಡ ಸಂಹಿತೆ ಕಲಂ 188ರಡಿ ಶಿಸ್ತುಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಂ ಇದ್ದರು.

****

ಸರಳ ಮೊಹರಂ ಆಚರಣೆಗೆ ಸಲಹೆ

‘ಗೌರಿ–ಗಣೇಶ ಹಬ್ಬದ ಜೊತೆಯಲ್ಲೇ ಬಂದಿರುವ ಮುಸ್ಲಿಂ ಸಮುದಾಯದ ಮೊಹರಂ ಆಚರಣೆಯನ್ನೂ ಸರಳವಾಗಿ ಮನೆಯಲ್ಲೇ ಆಚರಣೆ ಮಾಡಬೇಕು’ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್‌ ತಿಳಿಸಿದರು.

‘ಈದ್ಗಾ ಮೈದಾನ, ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸುವುದನ್ನು ನಿಷೇಧ ಮಾಡಲಾಗಿದೆ. ಜೊತೆಗೆ ಯಾವುದೇ ಧಾರ್ಮಿಕ ಆಚರಣೆ ನಡೆಸದಂತೆ ಸರ್ಕಾರ ಆದೇಶ ನೀಡಿದೆ’ ಎಂದು ತಿಳಿಸಿದರು.

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು