ಶುಕ್ರವಾರ, ಮಾರ್ಚ್ 31, 2023
26 °C
ಸರ್ಕಾರದ ನಿರ್ಧಾರದಿಂದ ವ್ಯಾಪಾರಿ, ಮೂರ್ತಿ ಪ್ರತಿಷ್ಠಾಪಿಸುವವರಿಗೆ ತೊಂದರೆ; ಕಾಣದ ಸಂಭ್ರಮ

ಮಂಡ್ಯ: ಬಾಗಿನ ನೀಡಿ ‘ಸ್ವರ್ಣಗೌರಿ ವ್ರತ’ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಕೋವಿಡ್‌ನಿಂದ ಜನ ಸಂಕಷ್ಟಕ್ಕೆ ಸಿಲುಕಿರುವ ಸಮಯದಲ್ಲಿ ಹಬ್ಬದ ಸಂಪ್ರದಾಯ ಮುಂದುವರಿಸಬೇಕು ಎಂಬ ಮಹದಾಸೆಯಿಂದ ಜಿಲ್ಲೆಯಲ್ಲಿ ಮಹಿಳೆಯರು ಗುರುವಾರ ಸರಳವಾಗಿ ‘ಸ್ವರ್ಣಗೌರಿ ವ್ರತ’ ಹಬ್ಬ ಆಚರಿಸಿ ಬಾಗಿನ ನೀಡಿದರು.

ಗಣೇಶ ಹಬ್ಬದ ಮುನ್ನಾ ದಿನವಾದ ಗೌರಿ ಹಬ್ಬದಂದು ಮನೆಯನ್ನು ಶೃಂಗರಿಸಿ ಭಕ್ತಿಯಿಂದಲೇ ಹಬ್ಬವನ್ನು ಸ್ವಾಗತಿಸಿದರು. ಗೌರಿ ಮೂರ್ತಿ ತಂದು ಮನೆಯಲ್ಲಿ ಪ್ರತಿಷ್ಠಾಪಿಸಿ ಪೂಜಿಸಿದರು. ಒಂಬತ್ತು ಬಗೆಯ ಹಣ್ಣುಗಳನ್ನು ಮೂರ್ತಿ ಮುಂದೆ ಇರಿಸಿ ಪ್ರಾರ್ಥಿಸಿದರು.

ಹೂವು, ಬಾಳೆಹಣ್ಣು, ತೆಂಗಿನ ಕಾಯಿ, ಅರಿಶಿಣ ಕುಂಕುಮ, ಗೌರಿ ಬಳೆ, ಬೆಲ್ಲ, ಅಕ್ಕಿ, ಎಲೆ ಅಡಿಕೆ, ತೊಗರಿ ಬೇಳೆ, ಹೆಸರು ಬೇಳೆ ಸೇರಿದಂತೆ ವಿವಿಧ ಮಂಗಳ ದ್ರವ್ಯಗಳನ್ನು ಒಂದು ಮೊರದಲ್ಲಿ ಇರಿಸಿ ಹೆಣ್ಣುಮಕ್ಕಳಿಗೆ ಸೀರೆ ಸಮೇತ ಬಾಗಿನ ಕೊಟ್ಟು ಸಂತೋಷ ಹಂಚಿಕೊಂಡರು. 

ನಗರದ ವಿದ್ಯಾಗಣಪತಿ ದೇವಾಲಯ, ಕಲ್ಲಹಳ್ಳಿ ಆಂಜನೇಯ ಸ್ವಾಮಿ ದೇವಸ್ಥಾನ, ಕುವೆಂಪು ನಗರದ ಬಲಮುರಿ ದೇವಾಲಯ, ಬನ್ನೂರು ರಸ್ತೆಯ ಬಳಿಯಿರುವ ಗಣೇಶ ದೇವಾಲಯ, ಕಾಳಿಕಾಂಬ ಆವರಣದಲ್ಲಿರುವ ಗಣೇಶ ಮೂರ್ತಿ ದೇವಾಲಯ ಸೇರಿದಂತೆ ಪ್ರಮುಖ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದರು.

‘ಕೋವಿಡ್‌ ಬಂದಿದೆ ಎಂದು ಸುಮ್ಮನೆ ಕೂರಲು ಸಾಧ್ಯವಿಲ್ಲ. ವಿಜೃಂಭಣೆ ಯಿಂದ ಹಬ್ಬ ಆಚರಣೆ ಮಾಡದಿದ್ದರೂ ಸರಳವಾಗಿ ಆದರೂ ಹಬ್ಬ ಆಚರಿಸಿ ಸಂಪ್ರದಾಯ ಮುಂದುವರಿಸಬೇಕು. ಅಂತರ ಪಾಲಿಸುವುದು, ಮಾಸ್ಕ್‌ ಧರಿಸುವುದು ಸೇರಿದಂತೆ ಕೋವಿಡ್‌ ಮಾರ್ಗಸೂಚಿಗಳನ್ನು ಅನುಸರಿಸಿ ಗೌರಿ ಗಣೇಶ ಹಬ್ಬದ ಅಂಗವಾಗಿ ಗಣಪತಿ ದೇವಾಲಯಗಳಿಗೆ ಹೋಗಿ ಪೂಜೆ ಮಾಡಿಸುತ್ತಿದ್ದೇವೆ’ ಎಂದು ನಗರದ ಮಧುರಾ ಶ್ರೀನಿವಾಸ್‌ ಹೇಳಿದರು.

ಕುಸಿದ ವ್ಯಾಪಾರ: ಗೌರಿ, ಗಣೇಶ ಮೂರ್ತಿಗಳನ್ನು ಲಾರಿ ಮೂಲಕ ಹತ್ತು ಲೋಡ್‌ ತರಿಸುತ್ತಿದ್ದೇವೆ. ಈಗ ಬಂದಿರುವ ಎರಡು ಲೋಡ್‌ಗಳು ಖಾಲಿಯಾಗುತ್ತವೆ ಎಂಬ ನಂಬಿಕೆ ಇಲ್ಲ. ಕೊರೊನಾದ ಜತೆಗೆ ವ್ಯಾಪಾರಸ್ಥರಿಗೆ ಹಾಗೂ ಗಣೇಶ ಮೂರ್ತಿ ಕೂರಿಸುವವರ ವಿರುದ್ಧವಾಗಿ ಸರ್ಕಾರ ಕೈಗೊಂಡ ನಿರ್ಧಾರದಿಂದ ತೊಂದರೆ ಆಗಿದೆ. ಗೌರಿ, ಗಣೇಶ ಮೂರ್ತಿ ಖರೀದಿಸಲು ಜನ ಬರುತ್ತಿಲ್ಲ. ಹಾಗಾಗಿ ವ್ಯಾಪಾರಕ್ಕೆ ಕುಂಠಿತವಾಗಿದೆ ಎಂದು ಗೌರಿ ಗಣೇಶ ಮೂರ್ತಿ ವ್ಯಾಪಾರಿ, ನಗರದ ಪ್ರಶಾಂತ ಬೇಸರ ವ್ಯಕ್ತಪಡಿಸಿದರು.

ನಮ್ಮೂರಿನಲ್ಲಿ ಹತ್ತು ವರ್ಷದಿಂದ ಗಣೇಶ ಮೂರ್ತಿ ಕೂರಿಸಿ ಉತ್ಸವ ಮಾಡುತ್ತಾ ಬಂದಿದ್ದೇವೆ. ಆದರೆ, ಕೋವಿಡ್‌ನಿಂದ ಯಾರೂ ಗಣೇಶ ಮೂರ್ತಿ ಖರೀದಿಸಲು, ಪ್ರತಿಷ್ಠಾಪಿಸಲು ಮುಂದಾಗುತ್ತಿಲ್ಲ. ವಿಜೃಂಭಣೆಯಿಂದ ನಡೆಸುತ್ತಿದ್ದ ಗಣೇಶ ಉತ್ಸವವನ್ನು ಸರಳವಾಗಿ ಮಾಡಲು ತೀರ್ಮಾನಿಸಿದ್ದೇವೆ ಎಂದು ಬಿಳಗೂಲಿ ಮಹೇಶ್‌ ಹೇಳುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.