ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಲಭ್ಯ ಕೊಡಿ, ಇಲ್ಲದಿದ್ದರೆ ಕಾಮಗಾರಿ ನಿಲ್ಲಿಸಿ: ಕರವೇ ಕಾರ್ಯಕರ್ತರ ಪ್ರತಿಭಟನೆ

ಬೆಂಗಳೂರು– ಮೈಸೂರು ದಶಪಥ ಕಾಮಗಾರಿ ಕಳಪೆ; ಕರವೇ ಕಾರ್ಯಕರ್ತರ ಪ್ರತಿಭಟನೆ
Last Updated 12 ಸೆಪ್ಟೆಂಬರ್ 2022, 13:46 IST
ಅಕ್ಷರ ಗಾತ್ರ

ಮಂಡ್ಯ: ಮೈಸೂರು– ಬೆಂಗಳೂರು ದಶಪಥ ಕಾಮಗಾರಿ ಕಳಪೆಯಾಗಿದ್ದು ಮೂಲ ನಕ್ಷೆ ಉಲ್ಲಂಘಿಸಿ ಕೆಲಸ ಮಾಡಲಾಗುತ್ತಿದೆ. ಹಳ್ಳಿಗಳ ಜನರಿಗೆ ಸೌಲಭ್ಯ ನೀಡದೇ ಕಾಮಗಾರಿ ನಡೆಸಲಾಗುತ್ತಿದೆ. ಸ್ಥಳೀಯರಿಗೆ ಸೌಲಭ್ಯ ನೀಡಬೇಕು, ಇಲ್ಲದಿದ್ದರೆ ಕಾಮಗಾರಿ ನಿಲ್ಲಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಸರ್ವೀಸ್‌ ರಸ್ತೆ ಇಲ್ಲದೇ ದಿಲೀಪ್‌ ಬಿಲ್ಡ್‌ಕಾನ್‌ ಕಂಪನಿ ಕಾಮಗಾರಿ ನಡೆಸುತ್ತಿದೆ. ಬೆಂಗಳೂರು– ಮೈಸೂರು ನಡುವಿನ ಗ್ರಾಮಗಳ ಜನರು ಯೋಜನೆಗೆ ಜಮೀನು ಕೊಟ್ಟಿದ್ದಾರೆ, ಅವರ ಬೇಡಿಕೆಗಳನ್ನು ನಿರ್ಲಕ್ಷ್ಯ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯು ಅವೈಜ್ಞಾನಿಕವಾಗಿದ್ದು ಉಮ್ಮಡಹಳ್ಳಿ ಗೇಟ್‌ಬಳಿ ಬೈಪಾಸ್‌ ಬಳಿ ಸರ್ವೀಸ್‌ ರಸ್ತೆ ನಿರ್ಮಿಸುವಂತೆ ಒತ್ತಾಯವಿದೆ. ಆದರೂ ಡಿಬಿಎಲ್‌ ಕಂಪನಿ ಅಧಿಕಾರಿಗಳು ಆಗ್ರಹವನ್ನು ಗಣನೆಗೆ ತೆಗೆದುಕೊಳ್ಳದೆ ಕಾಮಗಾರಿ ಮುಂದುವರಿಸಿದ್ದಾರೆ. ಕೂಡಲೇ ಸ್ಥಳೀಯ ಮುಖಂಡರ ಸಭೆ ಕರೆದು ಚರ್ಚೆ ನಡೆಸಬೇಕು ಎಂದು ಆಗ್ರಹಿಸಿದರು.

ಉಮ್ಮಡಹಳ್ಳಿ ಗೇಟ್ ಬಳಿ ಸರ್ವಿಸ್ ರಸ್ತೆ ನಿರ್ಮಿಸಬೇಕು. ಪ್ರತ್ಯೇಕವಾಗಿ ಟೋಲ್‌ ರಸ್ತೆ ನಿರ್ಮಿಸಬೇಕು. ಹೆದ್ದಾರಿಯಲ್ಲಿ ಬರುವ ಗ್ರಾಮಗಳ ಗ್ರಾಮಸ್ಥರಿಗೆ ಈ ರಸ್ತೆ ಬಳಕೆಗೆ ಯಾವುದೆ ಟೋಲ್ ವಿಧಿಸಬಾರದು. ಹೆದ್ದಾರಿ ನಿರ್ಮಾಣದ ಹೆಸರಿನಲ್ಲಿ ಇದೊಂದು ಸಾವಿರಾರು ಕೋಟಿ ಹಗರಣವಾಗಿದ್ದು ಇಡೀ ಯೋಜನೆಯ ಪ್ರಕ್ರಿಯೆಯನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.

ಯೋಜನೆಯ ಮೂಲನಕ್ಷೆ ಹಾಗೂ ಯೋಜನೆಯ ವಿವರವುಳ್ಳ ಕಾಮಗಾರಿಗಳ ನಾಮಫಲಕವನ್ನು ಕಾಮಗಾರಿ ಸ್ಥಳಗಳಲ್ಲಿ ನಿಯಮಾನುಸಾರ ಪ್ರಕಟಿಸಬೇಕು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಡಿಬಿಎಲ್ ಕಂಪನಿಯ ಜತೆಗಿನ ಒಪ್ಪಂದ ಬಹಿರಂಗಪಡಿಸಬೇಕು. ಹತ್ತುಪಥ ನಿರ್ಮಾಣ ಮಾಡುವುದಾಗಿ ಹೆದ್ದಾರಿ ಕಾಮಗಾರಿ ಪ್ರಾರಂಭಿಸಲಾಗಿದೆ. ಆದರೆ, ಕೆಲವು ಕಡೆಗಳಲ್ಲಿ ಮಾತ್ರ ದಶಪಥ ರಸ್ತೆ ನಿರ್ಮಾಣವಾಗಿದ್ದರೆ, ಮತ್ತೆ ಕೆಲವು ಕಡೆಗಳಲ್ಲಿ ಉದ್ದೇಶ ಈಡೇರಿಲ್ಲ ಎಂದರು

ಪರಿಹಾರ ವಿತರಣೆಯಲ್ಲಿ ತಾರತಮ್ಯ ಮಾಡಲಾಗಿದೆ. ಭೂಸ್ವಾಧೀನ ಪಡಿಸಿಕೊಂಡ ನಂತರ ಸಮರ್ಪಕವಾಗಿ ಪರಿಹಾರ ಸಿಕ್ಕಿಲ್ಲ. ರೈತರು ಸಾರ್ವಜನಿಕರಿಗೆ ಪರಿಹಾರ ವಿತರಣೆಯಲ್ಲಿ ತಾರತಮ್ಯ ಮಾಡಲಾಗಿದೆ. ತಾರತಮ್ಯವನ್ನು ತಕ್ಷಣ ಸರಿಪಡಿಸಿ ಎಲ್ಲರಿಗೂ ಸಮಾನವಾದ ಪರಿಹಾರ ವಿತರಣೆ ಮಾಡಬೇಕು. ಪರಿಹಾರ ವಿತರಣೆಯಲ್ಲಿ ಪ್ರಾಧಿಕಾರದ ಅಧಿಕಾರಿಗಳು ಹಣ ದುರುಪಯೋಗಪಡಿಸಿಕೊಂಡಿದ್ದು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ದಶಪಥ ರಸ್ತೆ ನಿರ್ಮಾಣ ಅವೈಜ್ಞಾನಿಕವಾಗಿದ್ದು ತರಾತುರಿಯಲ್ಲಿ ಪೂರ್ಣಗೊಳಿಸಲಾಗುತ್ತಿದೆ. ಇದರಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿರುವುದು ಕಂಡು ಬಂದಿದೆ. ಕೇಂದ್ರ ಸರ್ಕಾರ ರಸ್ತೆ ಕಾಮಗಾರಿಗಾಗಿ ಗುತ್ತಿಗೆ ನೀಡಿರುವ ದಿಲೀಫ್‌ ಬಿಲ್ಡ್‌ ಕಾನ್‌ ಕಂಪನಿಗೆ ಪ್ರಾರಂಭದಲ್ಲಿ ₹4,200 ಕೋಟಿಗೆ ನೀಡಿದ ಗುತ್ತಿಗೆ ನೀಡಲಾಗಿತ್ತು. ಆದರೆ ಅದು ಈಗ ₹8,400 ಕೋಟಿಗೆ ಏರಿಕೆಯಾಗಿದೆ. ಈ ಬಗ್ಗೆ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.

ವೇದಿಕೆಯ ಅಧ್ಯಕ್ಷ ಎಚ್‌.ಡಿ.ಜಯರಾಂ, ಮುಖಂಡರಾದ ಕುಮಾರ್‌, ಮಹೇಂದ್ರ, ಎಂ.ಎನ್‌.ಚಂದ್ರಣ್ಣ, ನಾಗರಾಜು, ವೆಂಕಟೇಶ್, ಮುದ್ದೇಗೌಡ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT