ಗುರುವಾರ , ಜೂನ್ 17, 2021
21 °C
ಇಂದಿರಾ ಕ್ಯಾಂಟೀನ್‌ನಲ್ಲಿ ಮುಷ್ಠಿ ಗಾತ್ರ ಅನ್ನ: ಹಲವರ ಆರೋಪ

ಸರ್ಕಾರ ನಂಬಿ ಅರೆ ಹೊಟ್ಟೆಯಲ್ಲಿ ನಿರಾಶ್ರಿತರು!

ಗಣಂಗೂರು ನಂಜೇಗೌಡ Updated:

ಅಕ್ಷರ ಗಾತ್ರ : | |

Prajavani

ಶ್ರೀರಂಗಪಟ್ಟಣ: ಲಾಕ್‌ಡೌನ್‌ ಘೋಷಣೆಯಿಂದಾಗಿ ಕೂಲಿ ಕಳೆದುಕೊಂಡು, ಬೀದಿ ಪಾಲಾಗಿರುವ ನಿರಾಶ್ರಿತರಿಗಾಗಿ ಸರ್ಕಾರ ಇಂದಿರಾ ಕ್ಯಾಂಟೀನ್‌ ಮೂಲಕ ಮೇ 11ರಿಂದ ಉಚಿತ ಆಹಾರ ನೀಡುತ್ತಿದ್ದು, ಅಲ್ಲಿ ಕೊಡುವ ಮುಷ್ಠಿ ಗಾತ್ರದ ಅನ್ನ ಸಾಲದೆ ನಿರಾಶ್ರಿತರು ಅರೆ ಹೊಟ್ಟೆಯಲ್ಲಿ ಬಳಲುತ್ತಿದ್ದಾರೆ.

ಪಟ್ಟಣದ ಖಾಸಗಿ ಬಸ್‌ ನಿಲ್ದಾಣ ದಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ನಿರಾಶ್ರಿತರಿಗೆ ಬೆಳಗಿನ ತಿಂಡಿ, ಮಧ್ಯಾಹ್ನದ ಊಟ ಹಾಗೂ ರಾತ್ರಿ ಊಟ ನೀಡಲಾಗುತ್ತಿದೆ. ಪ್ರತಿ ದಿನ 80ರಿಂದ 100 ಮಂದಿ ಇಂದಿರಾ ಕ್ಯಾಂಟೀನ್‌ ಊಟ ತಿಂದೇ ಬದುಕುತ್ತಿದ್ದಾರೆ. ಆದರೆ, ಇಲ್ಲಿ ಗ್ರಾಂ ಲೆಕ್ಕದಲ್ಲಿ ಕೊಡುವ ಅನ್ನ ಸಣ್ಣ ಕರುಳಿಗೂ ಸಾಲುತ್ತಿಲ್ಲ. ಬೆಳಗಿನ ತಿಂಡಿಗೆ 225 ಗ್ರಾಂ ಹಾಗೂ ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ 300 ಗ್ರಾಂ ಅನ್ನವನ್ನು ಕೊಡುತ್ತಿದ್ದು ಅರೆ ಹೊಟ್ಟೆಯ ಸಂಕಟ ಅನುಭವಿಸುತ್ತಿದ್ದಾರೆ.

ಕಟ್ಟಡ ನಿರ್ಮಾಣ, ಹೋಟೆಲ್‌ ಇತರ ಕಡೆ ಕೆಲಸ ಮಾಡಿ ಹೊಟ್ಟೆ ತುಂಬ ಉನ್ನುತ್ತಿದ್ದ ಜೀವಗಳಿಗೆ ನೂರಿನ್ನೂರು ಗ್ರಾಂ ಲೆಕ್ಕದಲ್ಲಿ ಕೊಡುತ್ತಿರುವ ಅನ್ನ ಸಾಲುತ್ತಿಲ್ಲ. ಹಾಲುಣ್ಣುವ ಮಕ್ಕಳಿಗೆ ಕೊಡುವಂತೆ ಎರಡು ತುತ್ತು ಅನ್ನವನ್ನು ಪೊಟ್ಟಣಕ್ಕೆ ಹಾಕಿ ಕೊಡುತ್ತಿದ್ದಾರೆ. ಇಲ್ಲಿ ಕೊಡುವ ಮುಷ್ಠಿಯಷ್ಟು ಅನ್ನಕ್ಕೂ ಬೇಕಾ ಬಿಟ್ಟಿ ಉಪ್ಪು, ಖಾರ ಹಾಕಲಾಗುತ್ತಿದೆ. ಮೂರೂ ಹೊತ್ತು ಬಾತ್‌ ಹೆಸರಿನಲ್ಲಿ ಅನ್ನ ಕೊಡುತ್ತಿದ್ದು, ತಿನ್ನಲು ಆಗುತ್ತಿಲ್ಲ ಎಂದು ನಿರಾಶ್ರಿತರು ದೂರಿದ್ದಾರೆ.

‘ಕಳಪೆ ಮತ್ತು ಕಡಿಮೆ ಆಹಾರ ಏಕೆ ಕೊಡುತ್ತೀರಿ ಎಂದು ಅನ್ನ ಕೊಡುವವರನ್ನು ಕೇಳಿದರೆ ಬೇಕಾದರೆ ತಿನ್ನಿ ಇಲ್ಲ ಬಿಸಾಡಿ ಎಂದು ಗಟ್ಟಿ ದನಿಯಲ್ಲಿ ಬೆದರಿಸುತ್ತಾರೆ. ಹಾಗಾಗಿ ಮೂರು ದಿನಗಳಿಂದ ಕೆಲವರು ಇಂದಿರಾ ಕ್ಯಾಂಟೀನ್‌ಗೆ ಹೋಗುತ್ತಿಲ್ಲ. ಭಿಕ್ಷೆ ಬೇಡಿಕೊಂಡು ಸಿಕ್ಕಿದ್ದು ತಿಂದು ದಿನ ದೂಡುತ್ತಿದ್ದೇವೆ’ ಎಂದು ಇಲ್ಲಿನ ಖಾಸಗಿ ಬಸ್‌ ನಿಲ್ದಾಣದಲ್ಲಿ ಬೀಡು ಬಿಟ್ಟಿರುವ ಚಂದ್ರ, ಚಿಕ್ಕಣ್ಣ, ಗಂಗಾಧರ್‌ ಇತರರು ತಮ್ಮ ಹಸಿದೊಡಲ ವ್ಯಥೆ ಹೇಳುತ್ತಾರೆ.

‘ಬೆಳಗಿನ ತಿಂಡಿಗೆ ಸರ್ಕಾರ ₹ 15.30 ಹಾಗೂ ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ₹ 20.05 ನೀಡುತ್ತದೆ. ಇಷ್ಟು ಹಣದಲ್ಲೇ ಆಹಾರ ಕೊಡಬೇಕು. ಇಲ್ಲದಿದ್ದರೆ ಕ್ಯಾಂಟೀನ್‌ ನಡೆಸುವವರಿಗೆ ನಷ್ಟ ಉಂಟಾಗುತ್ತದೆ’ ಎಂದು ಪುರಸಭೆ ಆರೋಗ್ಯ ನಿರೀಕ್ಷಕ ಶಿವಶಂಕರ್‌ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.