ಬುಧವಾರ, ಆಗಸ್ಟ್ 17, 2022
25 °C
ಲಾಕ್‌ಡೌನ್‌ ಅವಧಿಯಲ್ಲಿ ಗ್ರಾಮ ಪ್ರವೇಶಿಸಲು ನಿಷೇಧ, ಈಗ ರತ್ನಗಂಬಳಿ ಹಾಸಿ ಸ್ವಾಗತ

ಮತದಾನ: ವಲಸಿಗರಿಗೆ ಕುದುರಿದ ಬೇಡಿಕೆ

ಎಂ.ಎನ್‌.ಯೋಗೇಶ್‌‌ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ನಾಲ್ಕೈದು ತಿಂಗಳ ಹಿಂದಷ್ಟೇ ಗ್ರಾಮೀಣ ಪ್ರದೇಶದ ಜನರು ವಲಸಿಗರನ್ನು ಕಂಡರೆ ಭಯಪಡುತ್ತಿದ್ದರು, ಆದರೆ ಗ್ರಾಮ ಪಂಚಾಯಿತಿ ಚುನಾವಣೆ ದಿನಾಂಕ ಸಮೀಪವಾಗುತ್ತಿದ್ದಂತೆ ವಲಸಿಗರಿಗೆ ರತ್ನಗಂಬಳಿ ಹಾಸಿ ಸ್ವಾಗತ ಕೋರುತ್ತಿದ್ದಾರೆ.

ನಾಗಮಂಗಲ, ಕೆ.ಆರ್‌.ಪೇಟೆ, ಪಾಂಡವಪುರ ತಾಲ್ಲೂಕುಗಳಲ್ಲಿ ಹೆಚ್ಚಿನ ಸಂಖ್ಯೆಯ ಯುವಜನರು ಮುಂಬೈ, ಬೆಂಗಳೂರು, ಊಟಿ ಮುಂತಾದ ನಗರಗಳಲ್ಲಿ ಕುಟುಂಬ ಸಮೇತ ನೆಲೆಸಿದ್ದಾರೆ. ಕೋವಿಡ್‌ ಲಾಕ್‌ಡೌನ್‌ ಅವಧಿಯಲ್ಲಿ ಅಪಾರ ಸಂಖ್ಯೆಯ ವಲಸಿಗರು ಊರಿಗೆ ಮರಳಿದರು. ಈ ಸಂದರ್ಭದಲ್ಲಿ ಸ್ಥಳೀಯರು ಇವರಿಗೆ ಭಯಪಡುತ್ತಿದ್ದರು. ಸೋಂಕು ಹರಡಿಸುತ್ತಾರೆ ಎಂಬ ಭಯದಿಂದ ಅವರನ್ನು ಮಾತನಾಡಿಸುತ್ತಲೇ ಇರಲಿಲ್ಲ. ಅನುಮಾನದಿಂದ ನೋಡುತ್ತಿದ್ದರು.

ಕೆಲವು ಗ್ರಾಮಗಳಲ್ಲಿ ವಲಸಿಗರು ಊರಿನೊಳಗೆ ಬರುವುದನ್ನು ನಿಷೇಧಿಸಿದ್ದರು. ಗ್ರಾಮದ ಹೆಬ್ಬಾಗಿಲಲ್ಲಿ ಮುಳ್ಳು ಗಿಡಗಳ ಬೇಲಿ ಹಾಕಿದ್ದರು, ಕೆಲವೆಡೆ ಕಂದಕ ನಿರ್ಮಾಣ ಮಾಡಿ ಗ್ರಾಮ ಪ್ರವೇಶ ಮಾಡುವುದನ್ನು ತಡೆದಿದ್ದರು. ತಮಟೆ ಘೋಷಣೆ ಮೂಲಕ ಯಾರನ್ನೂ ಗ್ರಾಮದೊಳಗೆ ಸೇರಿಸದಂತೆ ಎಚ್ಚರಿಕೆ ನೀಡಿದ್ದರು. ಯಾರಾದರು ಬಂದರೆ ದಂಡವಿಧಿಸಲಾಗುವುದು ಎಂದು ಬೆದರಿಕೆ ಹಾಕಿದ್ದರು.

ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಮತದಾನದ ದಿನಾಂಕ ಹತ್ತಿರವಾಗುತ್ತಿದ್ದಂತೆ ವಲಸಿಗರಿಗೆ ಕರೆ ಮಾಡಿ ತಪ್ಪದೇ ಊರಿಗೆ ಬರುವಂತೆ ಆಹ್ವಾನ ನೀಡುತ್ತಿದ್ದಾರೆ. ಊರಿಗೆ ಬಂದು ಮತ ಹಾಕುವಂತೆ ಒತ್ತಾಯ ಮಾಡುತ್ತಿದ್ದಾರೆ. ಬಂದು ಹೋಗುವ ಖರ್ಚು ನೋಡಿಕೊಳ್ಳುವುದಾಗಿ ಭರವಸೆ ನೀಡುತ್ತಿದ್ದಾರೆ. ಈಗಲೂ ಕೊರೊನಾ ಸೋಂಕಿನ ಭಯ ಇದ್ದೇ ಇದೆ. ಆದರೆ ಚುನಾವಣೆ ಎಲ್ಲಾ ಭಯವನ್ನು ತೊರೆಯುವಂತೆ ಮಾಡಿದೆ. ವಲಸಿಗರನ್ನು ಕಂಡರೆ ಭಯಪಡುತ್ತಿದ್ದ ಜನರು ಈಗ ಅವರಿಗಾಗಿ ಕಾಯುತ್ತಿದ್ದಾರೆ.

‘ಚುನಾವಣೆ ಬಂದಾಗ ವಲಸಿಗರನ್ನು ಕರೆಸುವುದು ಸಾಮಾನ್ಯ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಒಂದು ಮತವೂ ಮಹತ್ವಪೂರ್ಣವಾದ್ದರಿಂದ ಬೇರೆ ನಗರಗಳಲ್ಲಿ ನೆಲೆಸಿರುವವರನ್ನು ಕರೆಸಲಾಗುತ್ತಿದೆ. ಮತದಾನದ ಹಿಂದಿನ ದಿನ ಕೆ.ಆರ್‌.ಪೇಟೆ ಹಾಗೂ ನಾಗಮಂಗಲಕ್ಕೆ 10ಕ್ಕೂ ಹೆಚ್ಚು ಖಾಸಗಿ ಬಸ್‌ಗಳು ಬರುತ್ತವೆ’ ಎಂದು ನಾಗಮಂಗಲದ ಕುಮಾರ್‌ ಹೇಳಿದರು.

ಹಳ್ಳಿಗಳಲ್ಲೇ ನೆಲೆಸಿದ ಯುವಕರು: ಕೋವಿಡ್‌ ಲಾಕ್‌ಡೌನ್‌ ಅವಧಿಯಲ್ಲಿ ತವರಿಗೆ ಮುಳುಗಿದ ಬಹುತೇಕ ಯುವಕರು ವಾಪಸ್ ನಗರಗಳಿಗೆ ಕೆಲಸ ಅರಸಿ ತೆರಳಿಲ್ಲ. ತವರಿನಲ್ಲೇ ಕೃಷಿ, ಸಣ್ಣಪುಟ್ಟ ವ್ಯಾಪಾರ ಮಾಡುತ್ತಾ ಜೀವನ ಕಂಡುಕೊಂಡಿದ್ದಾರೆ.

ಮುಂಬೈನಲ್ಲಿ ನೆಲೆಸಿದ್ದ  ಹಲವು ಯುವಕರು ವಾಪಸ್‌ ತೆರಳಿಲ್ಲ. ಬೆಂಗಳೂರು, ಊಟಿ ಮುಂತಾದೆಡೆ ನೆಲೆಸಿದ್ದವರು ಮಾತ್ರ ಹಿಂದಿರುಗಿದ್ದಾರೆ. ಅವರನ್ನು ಮತದಾನ ಮಾಡಲು ಕರೆತರಲು ಅಭ್ಯರ್ಥಿಗಳು ಪ್ರಯತ್ನಿಸುತ್ತಿದ್ದಾರೆ. ಕುಟುಂಬ ಸಮೇತ ಪರ ಊರುಗಳಲ್ಲಿ ನೆಲೆಸಿರುವವರನ್ನು ಕರೆಸಲು ಕಾರು, ವ್ಯಾನ್‌ ಮುಂತಾದ ವಾಹನ ಕಳುಹಿಸಲು ಸಜ್ಜಾಗಿದ್ದಾರೆ.

ಬಹುತೇಕ ಯುವಜನರು ಹಳ್ಳಿಗಳಲ್ಲೇ ನೆಲೆಸಿರುವ ಹಿನ್ನೆಲೆಯಲ್ಲಿ ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆ ರಂಗು ಪಡೆದುಕೊಂಡಿದೆ. ಪದವೀಧರರು, ಸ್ನಾತಕೋತ್ತರ ಪದವೀಧರರು, ಎಂಜಿನಿಯರಿಂಗ್‌ ಪದವೀಧರರು ಚುನಾವಣೆಯಲ್ಲ ಸ್ಪರ್ಧೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕರು ಕೆಲಸಕ್ಕೆ ರಾಜೀನಾಮೆ ಸಲ್ಲಿಸಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದಾರೆ.

‘ಇದೇ ಮೊದಲ ಬಾರಿಗೆ ಹಳ್ಳಿ ಚುನಾವಣೆ ವಿಶೇಷವಾಗಿ ನಡೆಯುತ್ತಿದೆ. ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳಲಾಗಿದೆ. ಯುವಜನರು ಗ್ರಾಮಸ್ಥರಲ್ಲಿ ಮತದಾನದ ಜಾಗೃತಿ ಮೂಡಿಸುತ್ತಿದ್ದಾರೆ. ಇದರಿಂದ ಪಂಚಾಯತ್‌ ರಾಜ್‌ ವ್ಯವಸ್ಥೆ ಬಲಗೊಳ್ಳುವ ಸಾಧ್ಯತೆ ಇದೆ’ ಎಂದು ಕೆ.ಆರ್‌.ಪೇಟೆಯ ಶಿವಕುಮಾರ್‌ ಹೇಳಿದರು.

ಎಂ.ಎಸ್ಸಿ ಪದವೀಧರೆ ಸ್ಪರ್ಧೆ
ಕುವೆಂಪು ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ ಪದವಿ ಪೂರೈಸಿರುವ ಶಿಲ್ಪಶ್ರೀ ಬೇವಿನಹಳ್ಳಿ ಗ್ರಾಮ ಪಂಚಾಯಿತಿ ಕ್ಯಾತುಂಗೆರೆ ವಾರ್ಡ್‌ನಿಂದ ಸ್ಪರ್ಧೆ ಮಾಡಿದ್ದಾರೆ. ಶಿವಮೊಗ್ಗದವರಾದ ಇವರು ಮಂಡ್ಯ, ಅನ್ನಪೂರ್ಣೇಶ್ವರಿ ನಗರದ ಸಿ.ಪ್ರಶಾಂತ್‌ ಅವರ ಪತ್ನಿ.

ಎಲೆಕ್ಟ್ರಾನಿಕ್ಸ್‌ ವಿಷಯದ ಮೇಲೆ ಎಂಎಸ್ಸಿ ಪದವಿ ಪಡೆದಿರುವ ಇವರು ವಿವಿಧ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ್ದಾರೆ.

‘ಜನಸೇವೆ ಮಾಡಬೇಕು ಎಂಬ ಉದ್ದೇಶ ಮೊದಲಿನಿಂದಲೂ ಇತ್ತು. ಈಗ ಅದಕ್ಕೊಂದು ಅವಕಾಶ ಸಿಕ್ಕಿದ್ದು ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ. ನಮ್ಮ ಕುಟುಂಬ ಸದಸ್ಯರು ಹಾಗೂ ಕ್ಯಾತುಂಗೆರೆ ಗ್ರಾಮಸ್ಥರ ಪ್ರೋತ್ಸಾಹದಿಂದ ಚುನಾವಣೆ ಎದುರಿಸುತ್ತಿದ್ದೇನೆ’ ಎಂದು ಶಿಲ್ಪಶ್ರೀ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು