ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ ಬೇಟೆ: ರಾತ್ರಿಯಾದರೆ ಚಿತ್ರಣವೇ ಭಿನ್ನ

Last Updated 20 ಡಿಸೆಂಬರ್ 2020, 3:36 IST
ಅಕ್ಷರ ಗಾತ್ರ

ಮಳವಳ್ಳಿ: ಗ್ರಾಮ ಪಂಚಾಯಿತಿ ಚುನಾವಣೆಗೆ ಇನ್ನೆರಡು ದಿನ ಬಾಕಿ ಇದ್ದು, ಮತ ಬೇಟೆ ಬಿರುಸುಗೊಂಡಿದೆ. ಅಭ್ಯರ್ಥಿಗಳು ಮತದಾರರ ಮನೆಗೆ ತೆರಳಿ ಓಲೈಸುತ್ತಿದ್ದಾರೆ.

ಈ ಹಿಂದೆ ವಾರ್ಡ್‌ಗಳಲ್ಲಿ ಗೆದ್ದವರೂ ಮತಯಾಚನೆ ಕಾರ್ಯಕ್ಕೆ ಅಭ್ಯರ್ಥಿಗಳ ಜತೆ ಕೈಜೋಡಿಸುತ್ತಿದ್ದಾರೆ. ತಾಲ್ಲೂಕಿನ ಹೊಸ ಬೆಳವಣಿಗೆ ಎಂದರೆ ಬಹುತೇಕ ಗ್ರಾಮಗಳಲ್ಲಿ ಹಲವಾರು ಸಮಾನ ಮನಸ್ಕರು ಪ್ರಮುಖ ವೃತ್ತಗಳಲ್ಲಿ ಗುಂಪಾಗಿ ಬಂದು ಅಭ್ಯರ್ಥಿಗಳ, ಮುಖಂಡರ ಮತ್ತು ಮತದಾರರ ಜತೆ ಚರ್ಚೆ ನಡೆಸುತ್ತಿದ್ದಾರೆ. ಗೆಲುವಿನ ದಡ ಸೇರುವ ಕಾರ್ಯತಂತ್ರ ರೂಪಿಸಿಕೊಳ್ಳುತ್ತಿದ್ದಾರೆ.

ರಾತ್ರಿ 8ರವರೆಗೆ ಗುಂಪುಗಳಲ್ಲಿ ಪ್ರಚಾರ ನಡೆಸುವ ಅಭ್ಯರ್ಥಿಗಳು ನಂತರ ಮನೆ-ಮನೆಗೆ ತೆರಳಿ ಮತದಾರರ ಮನವೊಲಿಸುತ್ತಿದ್ದಾರೆ. ನಗರ ಪ್ರದೇಶಗಳಲ್ಲಿ ವಾಸ ಇರುವವರನ್ನು ಸಂಬಂಧಿಕರು ಹಾಗೂ ಸ್ನೇಹಿತರ ಮೂಲಕ ಒಲಿಸಿಕೊಳ್ಳಲಾಗುತ್ತಿದೆ. ಜತೆಗೆ ಮತದಾನಕ್ಕೆ ಬಂದು ಹೋಗಲು ವಾಹನ ಮತ್ತು ಇಂತಿಷ್ಟು ಹಣದ ವ್ಯವಸ್ಥೆಯನ್ನೂ ಮಾಡುವ ಭರವಸೆ ನೀಡುತ್ತಿದ್ದಾರೆ. ಮತಗಟ್ಟೆಗೆ ಕರತರುವ ಯತ್ನಗಳೂ ತೆರೆಮರೆಯಲ್ಲಿ ನಡೆಯುತ್ತಿದೆ.

ತಾಲ್ಲೂಕಿನ 38 ಗ್ರಾಮ ಪಂಚಾಯಿತಿಗಳಲ್ಲಿ ಬಹುತೇಕ ಕಡೆ ಇದೇ ವಾತಾವರಣ ಇದೆ. ನೀತಿ ಸಂಹಿತೆ ಸರ್ಕಾರ ಮತ್ತು ಜನಪ್ರತಿನಿಧಿಗಳಿಗೆ ಸೀಮಿತವಾಗಿದ್ದರೆ, ಅವರ ಹಿಂಬಾಲಕರ ಮೂಲಕ ಚುನಾವಣೆಯ ಸ್ಥಿತಿಗತಿಗಳನ್ನು ನಿಯಂತ್ರಿಸುವ ತಂತ್ರಗಾರಿಕೆ ಎಲ್ಲೆಡೆ ಕಾಣುತ್ತಿದೆ.

ಕಲ್ಕುಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಮಾನ್ಯ ಕ್ಷೇತ್ರದಿಂದ ಮಾವ- ಅಳಿಯ (ಅಣ್ಣನ ಮಗಳ ಗಂಡ) ಪರಸ್ಪರ ಎದುರಾಳಿಗಳು. ಶೆಟ್ಟಹಳ್ಳಿ ಗ್ರಾ.ಪಂ.ಯಲ್ಲಿ ಸಾಮಾನ್ಯ ವರ್ಗಕ್ಕೆ ಮೀಸಲಿರುವ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಯ ನಾಲ್ವರು ಪೈಪೋಟಿ ನೀಡುತ್ತಿದ್ದು, ವಡ್ಡರಹಳ್ಳಿಯಲ್ಲಿ ಸಾಮಾನ್ಯ ಮಹಿಳೆ ಸ್ಥಾನಕ್ಕೆ ಪರಿಶಿಷ್ಟ ಜಾತಿ ಮಹಿಳೆಯೊಬ್ಬರು ಸ್ಪರ್ಧಿಸಿದ್ದಾರೆ.

ರಾಜಕೀಯ ಪಕ್ಷಗಳು ಕಾರ್ಯಕರ್ತರ ಬದಲಾಗಿ ಸಂಬಂಧಿಕರು, ಸ್ನೇಹಿತರು ತಮಗೆ ಬೇಕಾದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ತಂತ್ರಗಾರಿಕೆ ನಡೆಸುತ್ತಿದ್ದಾರೆ. ಚುನಾವಣೆ ಹತ್ತಿರವಾದಂತೆ ಹಣ ಮತ್ತು ಜಾತಿ ಬಲವೂ ತೀವ್ರ ಪರಿಣಾಮ ಉಂಟು ಮಾಡಲಿದೆ ಎನ್ನುತ್ತಾರೆ ಮತದಾರರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT