ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಾದೇಶಿಕ ಪಕ್ಷ ಗಟ್ಟಿಯಾಗಿ ಉಳಿಯಲಿ’

ಜೆಡಿಎಸ್‌ ಅಭ್ಯರ್ಥಿ ಬಿ.ಎಸ್‌.ದೇವರಾಜು ಪರ ದೇವೇಗೌಡರಿಂದ ಮತಯಾಚನೆ
Last Updated 30 ನವೆಂಬರ್ 2019, 10:25 IST
ಅಕ್ಷರ ಗಾತ್ರ

ಕಿಕ್ಕೇರಿ: ‘ಪ್ರಾದೇಶಿಕ ಪಕ್ಷ ಉಳಿಯಬೇಕಿದೆ. ಜೆಡಿಎಸ್‌ನಲ್ಲಿ ನನ್ನ ಉಸಿರಿದ್ದು, ಕೆ.ಆರ್‌.ಪೇಟೆ ತಾಲ್ಲೂಕಿನಲ್ಲಿ ಗಟ್ಟಿಯಾಗಿ, ಭದ್ರವಾಗಿ ನೆಲೆಯೂರಬೇಕು’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹೇಳಿದರು.

ಹೋಬಳಿಯ ಆನೆಗೂಳ ಗ್ರಾಮದಲ್ಲಿ ಜೆಡಿ‌ಎಸ್ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

‘ನಾನು ಯಾರನ್ನೂ ದ್ವೇಷ ಮಾಡಲಾರೆ. ಪಕ್ಷಕ್ಕಾಗಿ 30 ವರ್ಷಗಳಿಂದ ದುಡಿದ ಬಿ.ಎಲ್.ದೇವರಾಜುಗೆ ಕಳೆದ ಬಾರಿ ಕೊಟ್ಟ ಟಿಕೆಟ್ ವಾಪಸ್‌ ಪಡೆದು ನಾರಾಯಣಗೌಡನಿಗೆ ಕೊಟ್ಟೆ. ತ್ಯಾಗ ಮಾಡಿದ ದೇವರಾಜು ಪಕ್ಷದಲ್ಲಿ ಉಳಿದು ನಾರಾಯಣಗೌಡನನ್ನು ಟೊಂಕಕಟ್ಟಿ ಗೆಲ್ಲಿಸಿಕೊಟ್ಟ. ಗೆದ್ದ ನಾರಾಯಣಗೌಡ ಹಾರಿಹೋದ. ಲೋಕಸಭೆಗೆ ಕೃಷ್ಣ ಸ್ಪರ್ಧಿಸಲಿ ಎಂದೇ ಆತನು ದೂರವಾದ’ ಎಂದು ಬೇಸರ ವ್ಯಕ್ತಪಡಿಸಿದರು.

‘ನಾನು ಹೆಚ್ಚು ವೇಳೆ ಮಾತನಾಡಲಾರೆ. ಬದುಕಿನುದ್ದಕ್ಕೂ ಹೋರಾಡಿರುವೆ. ನೀರಾವರಿ ಮಂತ್ರಿಯಾಗಿದ್ದಾಗ ತಾಲ್ಲೂಕಿಗೆ ನೀರಾವರಿ ಒದಗಿಸಿದೆ. ಈಗ ರೈತರ ಬಾಳು ಬಂಗಾರಮಯವಾಗಿದೆ. ಎತ್ತ ನೋಡಿದರೂ ಹಸಿರು ಕಾಣುತ್ತಿದೆ. ಸಕ್ಕರೆ ಕಾರ್ಖಾನೆ ತಂದುಕೊಟ್ಟೆ. ತುಮಕೂರಿನಲ್ಲಿ ಸೋಲಿಸಿದರೂ ಕೈ ಕಟ್ಟಿ ಮನೆಯಲ್ಲಿ ಕುಳಿತುಕೊಳ್ಳಲಾರೆ. 87ರ ವಯಸ್ಸಿನಲ್ಲಿಯೂ ರಾಜಕೀಯದಲ್ಲಿ ಸಕ್ರಿಯವಾಗಿರುವೆ’ ಎಂದರು.

‘ಬದುಕಿಗಾಗಿ ಬಾಂಬೆಗೆ ಜಟಾಕ ಹೊಡೆದೆ. ಭದ್ರಾವತಿಗೂ ಹೋದೆ. ಇದು ಹಳೆಯ ನೆನಪು. ಹೋರಾಟದಿಂದಲೇ ಬದುಕು ಕಟ್ಟಿಕೊಂಡಿದ್ದೇನೆ. ಬಿಜೆಪಿ, ಕಾಂಗ್ರೆಸ್ ಪಕ್ಷಗಳ ವಿರುದ್ಧ ಹೋರಾಡುತ್ತಿದ್ದು, ಪಕ್ಷದ ಉಳಿವಿಗಾಗಿ ಮುಂದೆಯೂ ಹೋರಾಟ ಮುಂದುವರಿಸುತ್ತೇನೆ’ ಎಂದರು.

ತುಳಸಿ, ಸಾಸಲು, ಐಕನಹಳ್ಳಿ ಮೊದಲಾದ ಗ್ರಾಮಗಳಲ್ಲಿ ರೋಡ್ ಷೋ ಮೂಲಕ ಮತ ಯಾಚನೆ ಮಾಡಿದರು. ದಾರಿಯುದ್ದಕ್ಕೂ ಮಹಿಳೆಯರು ಆರತಿ ಬೆಳಗಿದರು. ಕಾಲಿಗೆ ಎರಗಿ ನಮಸ್ಕರಿಸಿದರು. ಪಟಾಕಿ ಸಿಡಿಸಿ ಬಾವುಟ ಹಿಡಿದು ದಾರಿಯುದ್ದಕ್ಕೂ ಹೆಜ್ಜೆ ಹಾಕಿದರು.

ಜೆಡಿ‌ಎಸ್ ಅಭ್ಯರ್ಥಿ ಬಿ.ಎಲ್. ದೇವರಾಜು, ಶಾಸಕರಾದ ಸಿ.ಎಸ್. ಪುಟ್ಟರಾಜು, ಡಿ.ಸಿ. ತಮ್ಮಣ್ಣ, ಸಿ.ಎನ್. ಬಾಲಕೃಷ್ಣ, ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ, ವಿಧಾನಪರಿಷತ್ ಸದಸ್ಯ ಶ್ರೀಕಂಠೇಗೌಡ, ಜೆಡಿ‌ಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ, ಜಿಲ್ಲಾ ಘಟಕದ ಅಧ್ಯಕ್ಷ ರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT