ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿನಾಯಿ ಹಾವಳಿಗೆ ಮದ್ದೂರು ಜನ ಹೈರಾಣ

ಕೆಲಸ ಮುಗಿಸಿ ಮನೆಗೆ ಬರುವ ನೌಕರರಿಗೆ, ಶಾಲಾ ಮಕ್ಕಳಿಗೆ ಪ್ರಾಣ ಸಂಕಟ
Last Updated 22 ಡಿಸೆಂಬರ್ 2019, 19:31 IST
ಅಕ್ಷರ ಗಾತ್ರ

ಮದ್ದೂರು: ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದ್ದು, ಬೆಳಿಗ್ಗೆ ಹಾಗೂ ರಾತ್ರಿ ವೇಳೆಯಲ್ಲಿ ಓಡಾಡಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಎಲ್ಲೆಂದರಲ್ಲಿ ಹಿಂಡು ಹಿಂಡುಡಾಗಿ ಬರುವ ಬೀದಿನಾಯಿಗಳಿಂದ ರಕ್ಷಿಸಿಕೊಳ್ಳುವುದು ಸಾಹಸದ ಕೆಲಸವಾಗಿದೆ.

ಪಟ್ಟಣದ ಲೀಲಾವತಿ ಬಡಾವಣೆ, ವಿಶ್ವೇಶ್ವರಯ್ಯ ನಗರ, ಚನ್ನೇಗೌಡನದೊಡ್ಡಿ, ಸೋಮೇಗೌಡರ ಬೀದಿ, ರಾಮ್ ರಹೀಂ ನಗರ, ಸಿದ್ಧಾರ್ಥನಗರ, ಟೀಚರ್ಸ್ ಕಾಲೊನಿ, ಹೊಳೇಬೀದಿ, ಕೊಪ್ಪ ಸರ್ಕಲ್, ಶಿವಪುರ ಸೇರಿದಂತೆ ಬಹುತೇಕ ಕಡೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಮಹಿಳೆಯರು ಹಾಗೂ ಮಕ್ಕಳು ರಸ್ತೆಯಲ್ಲಿ ನಡೆದುಕೊಂಡು ಹೋಗಲು ಭಯಪಡುವ ಸನ್ನಿವೇಶ ಎದುರಾಗಿದೆ.

ಮಕ್ಕಳನ್ನು ಮನೆಯಿಂದ ಒಬ್ಬರನ್ನೇ ಹೊರಗೆ ಕಳುಹಿಸಲು ಪೋಷಕರು ಭಯಪಡುತ್ತಿದ್ದಾರೆ. ಶಾಲೆಗೆ ತೆರಳುವ ಮಕ್ಕಳು ಬೀದಿ ನಾಯಿಗಳ ಉಪಟಳಕ್ಕೆ ಒಳಗಾಗುತ್ತಿದ್ದಾರೆ. ಮಕ್ಕಳು ಮನೆಗೆ ಬರುವವರೆಗೂ ಪೋಷಕರು ಕೈಯಲ್ಲಿ ಜೀವ ಹಿಡಿದು ಕಾಯುವಂತಾಗಿದೆ. ಬೆಳ್ಳಂಬೆಳಿಗ್ಗೆಯೇ ನಾಯಿಗಳು ಸಾಲುಸಾಲಾಗಿ ರಸ್ತೆಗೆ ಇಳಿಯುತ್ತವೆ. ರಾತ್ರಿ ಸಂದರ್ಭದಲ್ಲಿ ಒಬ್ಬರೇ ಸಂಚರಿಸುವಾಗ ಒಮ್ಮೆಲೇ ದಾಳಿ ಮಾಡುತ್ತವೆ. ಬೈಕ್‌ನಲ್ಲಿ ಹೋಗುತ್ತಿದ್ದರೂ ಮೇಲೆ ಹಾರಿ ಬಂದು ದಾಳಿ ಮಾಡುತ್ತವೆ. ಹಲವರು ಈಗಾಗಲೇ ಕಚ್ಚಿಸಿಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಯಿಗಳ ಹಾವಳಿ ವಿರುದ್ಧ ಕ್ರಮ ಕೈಗೊಳ್ಳದ ಪುರಸಭೆ ಅಧಿಕಾರಿಗಳ ವಿರುದ್ಧ ಜನರು ಹಿಡಿಶಾಪ ಹಾಕುತ್ತಿದ್ದಾರೆ.

ಬೈಕ್‌ನಲ್ಲಿ ಹೋಗುವ ವೇಳೆಯಲ್ಲಿ ಅಟ್ಟಿಸಿಕೊಂಡು ಬರುವ ನಾಯಿಗಳಿಂದ ತಪ್ಪಿಸಿಕೊಳ್ಳಲು ಹೋಗಿ ಆಯ ತಪ್ಪಿ ಬಿದ್ದು ಪೆಟ್ಟು ಮಾಡಿಕೊಂಡ ಘಟನೆಗಳು ಸಾಕಷ್ಟು ನಡೆದಿವೆ. ಸಾಕಷ್ಟು ಜನರು ಬೆಂಗಳೂರು, ಮೈಸೂರಿಗೆ ನಿತ್ಯ ಕೆಲಸಕ್ಕೆ ಹೋಗಿ ಬರುತ್ತಾರೆ. ಅವರು ಮನೆಗೆ ತಲುಪುವಷ್ಟರಲ್ಲಿ ರಾತ್ರಿ ಆಗಿರುತ್ತದೆ. ಬೀದಿನಾಯಿಗಳ ಉಪಟಳದಿಂದಾಗಿ ಅವರು ರಸ್ತೆಯಲ್ಲಿ ಓಡಾಡಲು ಭಯಪಡುತ್ತಾರೆ.

‘ಬೀದಿನಾಯಿಗಳ ಭಯ ನನ್ನನ್ನು ಸದಾ ಕಾಡುತ್ತದೆ. ರಕ್ಷಣೆಗಾಗಿ ಕೈಯಲ್ಲಿ ಕಲ್ಲು ಹಿಡಿದು ಹೋಗುತ್ತೇನೆ. ಮನೆ ಸೇರುವಷ್ಟರಲ್ಲಿ ಸಾಕಾಗುತ್ತದೆ’ ಎಂದು ಬೆಂಗಳೂರಿನಿಂದ ಕೆಲಸ ಮುಗಿಸಿ ರಾತ್ರಿ 11ಕ್ಕೆ ಮದ್ದೂರಿಗೆ ಬರುವ ಶಿವರಾಜ್ ಹೇಳಿದರು.

ಬೀದಿನಾಯಿಗಳ ಹಾವಳಿ ಹೆಚ್ಚಾಗಲೂ ಜನರೂ ಒಂದು ರೀತಿಯಲ್ಲಿ ಕಾರಣಕರ್ತರಾಗಿದ್ದಾರೆ. ಮನೆಯ ಕಸವನ್ನು ರಸ್ತೆ ಬದಿ ಬಿಸಾಡಿ ಹೋಗುತ್ತಾರೆ. ರಸ್ತೆಗಳ ಬಳಿ ಚೆಲ್ಲಾಡಿರುವ ಕಸದ ರಾಶಿ, ಖಾಲಿಯಾಗದ ಪುರಸಭೆ ತೊಟ್ಟಿ ಇರುವ ಕಡೆ ನಾಯಿಗಳ ಗುಂಪು ಇರುವುದು ಸಾಮಾನ್ಯವಾಗಿದೆ. ಈ ಬಗ್ಗೆ ಸಾಕಷ್ಟು ಬಾರಿ ಪುರಸಭೆಗೆ ದೂರು ನೀಡಿದರೂ, ಅಧಿಕಾರಿಗಳು ನಿರ್ಲಕ್ಷ್ಯವಹಿಸುತ್ತಿದ್ದಾರೆ ಎಂದು ಜನರು ಆಕ್ರೋಶವ್ಯಕ್ತಪಡಿಸುತ್ತಾರೆ.

ಪಟ್ಟಣದ ವೈದ್ಯನಾಥಪುರ ರಸ್ತೆಯಲ್ಲಿರುವ ಸಿದ್ಧಾರ್ಥನಗರದ ಬಳಿ ಪುರಸಭೆಯ ಪೌರ ಕಾರ್ಮಿಕರು ವಾಸಿಸುವ ಸ್ಥಳಗಳಲ್ಲಿ, ರಾಮ್ ರಹೀಂ ನಗರದ ಬೀದಿಗಳಲ್ಲಿ, ಚೆಸ್ಕಾಂ ಕಚೇರಿ ಎದುರು ಇರುವ ತಮಿಳು ಕಾಲೊನಿಯಲ್ಲಿ, ಸೋಮೇಗೌಡರ ಬೀದಿ, ಹೊಳೆಬೀದಿಗಳಲ್ಲಿ ಹಿಂಡು ಹಿಂಡಾಗಿ ನಾಯಿಗಳು ಹೆಚ್ಚಾಗಿ ಕಾಣ ಸಿಗುತ್ತಿವೆ. ಈಭಾಗದ ಒಂದಲ್ಲಾ ಒಂದು ಕಡೆ ನಾಯಿಯಿಂದ ಕಚ್ಚಿಕೊಳ್ಳುವವರು ಇದ್ದೇ ಇರುತ್ತಾರೆ. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ, ಮಂಡ್ಯದ ಮಿಮ್ಸ್‌ ಆಸ್ಪತ್ರೆಯಲ್ಲಿ ನಾಯಿ ಕಚ್ಚಿಸಿಕೊಂಡವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ.

ಇದಲ್ಲದೆ ಬೆಳಗಿನ ವೇಳೆ ದಿನಪತ್ರಿಕೆ ಹಂಚುವ ವಿತರಕರಿಗೂ ನಾಯಿ ಕಾಟ ತಪ್ಪಿಲ್ಲ. ಬೆಳಕು ಮೂಡದ ಹೊತ್ತಿನಲ್ಲಿ ದಿನಪತ್ರಿಕೆ ವಿತರಿಸಲು ಪಟ್ಟಣದ ಬೀದಿಗಳಲ್ಲಿ ಸೈಕಲ್ ಏರಿ ಹೋಗುವಾಗ ನಾಯಿಗಳು ಅಟ್ಟಾಡಿಸಿಕೊಂಡು ಬರುತ್ತವೆ. ಈ ವೇಳೆ ಹಲವರು ಸೈಕಲ್‌ನಿಂದ ಬಿದ್ದು ಗಾಯಗೊಂಡಿದ್ದಾರೆ.

ಪಟ್ಟಣದಲ್ಲಿರುವ ಕಲ್ಯಾಣ ಮಂಟಪಗಳ ಬಳಿಯೂ ಬೀದಿ ನಾಯಿ ಹಾವಳಿ ವಿಪರೀತವಾಗಿದೆ. ಉಳಿದ ಆಹಾರ ಪದಾರ್ಥಗಳನ್ನು ಸರಿಯಾಗಿ ವಿಲೇವಾರಿ ಮಾಡದೆ ರಸ್ತೆ ಬದಿಯಲ್ಲೇ ಬಿಸಾಡುತ್ತಿದ್ದು, ಇದು ನಾಯಿಗಳ ಹಾವಳಿಗೆ ಕಾರಣವಾಗಿದೆ.

ನಾಯಿಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗಳನ್ನು ಮಾಡಿಸುವುದು ಸೇರಿದಂತೆ ಹಲವು ಮಾರ್ಗೋಪಾಯಗಳನ್ನು ಸಂಬಂಧಪಟ್ಟ ಪುರಸಭೆಯ ಅಧಿಕಾರಿಗಳು ಕೈಗೊಂಡು ನಾಯಿಗಳ ಹಾವಳಿ ನಿಯಂತ್ರಿಸಬೇಕು ಎಂಬುದು ಸಾರ್ವಜನಿಕರು ಒತ್ತಾಯಿಸುತ್ತಾರೆ.

ಕೋಳಿ, ಮಾಂಸದಂಗಡಿ ಬಳಿಯೇ ಹೆಚ್ಚು
ಪಟ್ಟಣದಲ್ಲಿನ ಕೋಳಿ ಅಂಗಡಿ, ಮಾಂಸದ ಅಂಗಡಿಗಳ ಬಳಿ ತ್ಯಾಜ್ಯದ ನಿರ್ವಹಣೆ ಸರಿಯಾಗಿ ಆಗದ ಕಾರಣ ಬೀದಿನಾಯಿಗಳ ಹಾವಳಿ ಹೆಚ್ಚುತ್ತಿದೆ. ಕೋಳಿ, ಮಾಂಸದಂಗಡಿಗಳ ಸುತ್ತ ಮುತ್ತಲೇ ನಾಯಿಗಳು ಬೀಡು ಬಿಟ್ಟಿವೆ. ಪುರಸಭೆ ವೈಜ್ಞಾನಿಕ ರೀತಿಯಲ್ಲಿ ಕಸ ನಿರ್ವಹಣೆ ಮಾಡದ ಕಾರಣದಿಂದಲೂ ನಾಯಿ ಸಂತತಿ ಹೆಚ್ಚಳವಾಗುತ್ತಿದೆ.

ಪುರಸಭೆಯು ಸಂಬಂಧಪಟ್ಟ ಮಾಂಸದ ಅಂಗಡಿಗಳ ತ್ಯಾಜ್ಯ ವಿಲೇವಾರಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಕೋಳಿ, ಮಾಂಸದಂಗಡಿ ತ್ಯಾಜ್ಯವನ್ನು ರಸ್ತೆಗೆ ಹಾಕದಂತೆ ಮಾಲೀಕರಿಗೆ ಸೂಚನೆ ನೀಡಬೇಕು. ಎಲ್ಲೆಂದರಲ್ಲಿ ತ್ಯಾಜ್ಯ ಬಿಸಾಡುವ ಅಂಗಡಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಾರೆ.

ವಿಹಾರಕ್ಕೆ ಬರಲೂ ಭಯ
ಪಟ್ಟಣ ವಿವಿಧೆಡೆ ಇರುವ ಉದ್ಯಾನಗಳ ಬಳಿಯೂ ಬೀದಿನಾಯಿ ಉಪಟಳ ವಿಪರೀತವಾಗಿದೆ. ಉದ್ಯಾನಗಳ ಬಳಿ ಪುರಸಭೆ ಕಸದ ತೊಟ್ಟಿಗಳು ಸದಾ ತುಂಬಿ ತುಳುಕುತ್ತಿರುತ್ತವೆ. ಇದರಿಂದಾಗಿ ನಾಯಿಗಳ ಹಿಂಡು ಅಲ್ಲಿ ಸದಾ ಇರುತ್ತದೆ.

ಉದ್ಯಾನಗಳಿಗೆ ವಿಹಾರಕ್ಕೆ ಬರುವ ಹಿರಿಯ ನಾಗರಿಕರು ಬೀದಿನಾಯಿಗಳಿಂದ ಕಿರಿಕಿರಿ ಅನುಭವಿಸುತ್ತಿದ್ದಾರೆ. ಕೆಲವರು ವಾಕಿಂಗ್‌ ಮಾಡುವುದನ್ನೇ ಸ್ಥಗಿತಗೊಳಿಸಿದ್ದಾರೆ. ‘ಹಿರಿಯ ನಾಗರಿಕರು ನಿಧಾನವಾಗಿ ನಡೆದುಕೊಂಡು ಬರುತ್ತಿದ್ದರೂ ನಾಯಿಗಳು ಬೊಗಳುತ್ತವೆ. ನಾಯಿ ಹಿಂಡು ನೋಡಿದರೆ ಭಯವಾಗುತ್ತದೆ. ಎಲ್ಲಿ ಕಚ್ಚಿಬಿಡುತ್ತವೋ ಎಂಬ ಭಯಕ್ಕೆ ವಾಕಿಂಗ್‌ ಬರುವುದನ್ನೇ ನಿಲ್ಲಿಸಿದ್ದೇನೆ’ ಎಂದು ವಿವೇಕಾನಂದನಗರದ ಶಿವೇಗೌಡ ಹೇಳಿದರು.

*
ಬೀದಿನಾಯಿಗಳನ್ನು ಸಾಯಿಸಲು ಹಾಗೂ ಬೇರೆಡೆಗೆ ಬಿಡಲು ಅವಕಾಶವಿಲ್ಲ. ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಯೇ ಇದಕ್ಕೆ ಪರಿಹಾರ. ಶಸ್ತ್ರಚಿಕಿತ್ಸೆ ಮೂಲಕ ಬೀದಿನಾಯಿಗಳ ಸಂತತಿ ಹೆಚ್ಚಾಗದಂತೆ ನೋಡಿಕೊಳ್ಳಲಾಗುವುದು.
– ಮುರುಗೇಶ್, ಮುಖ್ಯಾಧಿಕಾರಿ, ಪುರಸಭೆ, ಮದ್ದೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT