ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಂಗಪಟ್ಟಣ: ರಸ್ತೆಯಲ್ಲಿ ಸಂತೆ– ಆತಂಕದಲ್ಲೇ ವ್ಯಾಪಾರ, ವಹಿವಾಟು!

Published 10 ಜುಲೈ 2023, 14:39 IST
Last Updated 10 ಜುಲೈ 2023, 14:39 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ತಾಲ್ಲೂಕಿನ ಪಾಲಹಳ್ಳಿ ಗ್ರಾಮದಲ್ಲಿ ಮುಖ್ಯ ರಸ್ತೆಯಲ್ಲೇ ಸಂತೆ ನಡೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಶ್ರೀರಂಗಪಟ್ಟಣದಿಂದ ಮಡಿಕೇರಿ ಮತ್ತು ಶ್ರೀರಂಗಪಟ್ಟಣದಿಂದ ಪಂಪ್‌ಹೌಸ್‌ ಮೂಲಕ ಮೈಸೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ವ್ಯಾಪಾರ ನಡೆಯುತ್ತದೆ. ವಾಹನ ದಟ್ಟಣೆಯ ರಸ್ತೆಯಲ್ಲೇ ವ್ಯಾಪಾರಿಗಳು ವಹಿವಾಟು ನಡೆಸುತ್ತಾರೆ. ಮೈಸೂರು, ಪಾಂಡವಪುರ ಇತರ ಕಡೆಗಳಿಂದ ಬರುವ ವ್ಯಾಪಾರಿಗಳು ಹಣ್ಣು, ತರಕಾರಿ, ಹೂ, ಕಾಳು ಕಡಿಗಳನ್ನು ವಾಹನ ದಟ್ಟಣೆಯ ಡಾಂಬರು ರಸ್ತೆಯಲ್ಲಿ ಕುಳಿತು ವ್ಯಾಪಾರ ಮಾಡುತ್ತಾರೆ. ವಾಹನಗಳು ಸಂಚರಿಸುವ ಮಾರ್ಗದಲ್ಲಿ, ಮೂರ್ನಾಲ್ಕು ಅಡಿಗಳ ಅಂತರದಲ್ಲಿ ಇಲ್ಲಿ ವ್ಯಾಪಾರ ವಹಿವಾಟು ನಡೆಯುತ್ತದೆ. ಕೆಲವು ವ್ಯಾಪಾರಿಗಳು ಕಾಸು ಸಂಪಾದನೆಯ ಆಸೆಯಿಂದ ರಸ್ತೆಯ ಮಧ್ಯೆ ಕುಳಿತು, ಜೀವ ಕೈಯಲ್ಲಿಡಿದು ಸರಕು, ಸರಂಜಾಮು ಮಾರಾಟ ಮಾಡುತ್ತಾರೆ.

ಪಾಲಹಳ್ಳಿಯ ಅರಳಿ ಮರ ವೃತ್ತದಲ್ಲಿ ನಡೆಯುವ ಈ ಸಂತೆಗೆ ತಾಲ್ಲೂಕಿನ ಹೊಸಹಳ್ಳಿ ಮತ್ತು ಕಾರೆಕುರ ಗ್ರಾಮಗಳ ಗ್ರಾಹಕರು ಕೂಡ ಅಗತ್ಯ ವಸ್ತುಗಳ ಖರೀದಿಗೆ ಬರುತ್ತಾರೆ. ಬೆಳಿಗ್ಗೆಯಿಂದ ಸಂಜೆ ವರೆಗೂ ಇಲ್ಲಿ ವ್ಯಾಪಾರ ನಡೆಯುತ್ತದೆ. ಸಂತೆಯ ದಿನ ಮಾತ್ರವಲ್ಲದೆ ವಾರದ ಎಲ್ಲ ದಿನಗಳಲ್ಲೂ ರಸ್ತೆಯಲ್ಲೇ ಮಾರಾಟ ಮತ್ತು ಖರೀದಿ ಪ್ರಕ್ರಿಯೆ ನಡೆಯುತ್ತದೆ. ಹಲವು ದಶಕಗಳಿಂದ ಪಾಲಹಳ್ಳಿಯಲ್ಲಿ ಸಂತೆ ನಡೆಯುತ್ತಿದ್ದರೂ ಸಂತೆಗೆ ಸೂಕ್ತವಾದ ಸ್ಥಳ ಗುರುತಿಸುವ ಪ್ರಯತ್ನ ಇದುವರೆಗೆ ಆಗಿಲ್ಲದೇ ಇರುವುದಕ್ಕೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಪಾಲಹಳ್ಳಿಯಲ್ಲಿ ಕಳೆದ 30 ವರ್ಷಗಳಿಂದ ಪ್ರತಿ ಶುಕ್ರವಾರ ಸಂತೆ ನಡೆಯುತ್ತದೆ. ಈಚಿನ ದಿನಗಳಲ್ಲಿ ಪ್ರತಿದಿನವೂ ವ್ಯಾಪಾರ ಶುರುವಾಗಿದೆ. ಕೊರೊನಾ ಸೋಂಕು ಕಾಣಿಸಿಕೊಳ್ಳುವ ಮುನ್ನ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿ ಆವರಣದಲ್ಲಿ ಸಂತೆ ನಡೆಯುತ್ತಿತ್ತು. ಮೂರು ವರ್ಷಗಳ ಈಚೆಗೆ ದೊಡ್ಡ ದೊಡ್ಡ ವಾಹನಗಳು ಓಡಾಡುವ ರಸ್ತೆಯಲ್ಲೇ ಸಂತೆ ಕಟ್ಟುತ್ತಿದೆ. ಗ್ರಾಮ ಪಂಚಾಯಿತಿ ಸೇರಿದಂತೆ ಯಾರೂ ಇತ್ತ ಗಮನ ಹರಿಸುತ್ತಿಲ್ಲ. ತುಸು ಎಚ್ಚರ ತಪ್ಪಿದರೂ ದೊಡ್ಡ ಅನಾಹುತ ಸಂಭವಿಸಲಿದೆ’ ಎಂದು ಗ್ರಾಮದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಮಾಜಿ ಅಧ್ಯಕ್ಷ ಶಂಕರೇಗೌಡ ಆತಂಕ ವ್ಯಕ್ತಪಡಿಸಿದ್ದಾರೆ.

‘ಪಾಲಹಳ್ಳಿಯಲ್ಲಿ ಸಂತೆಗೆ ಪ್ರತ್ಯೇಕ ಜಾಗ ಗುರುತಿಸಿಲ್ಲ. ರಸ್ತೆಯಲ್ಲಿ ನಡೆಯುತ್ತಿರುವ ಸಂತೆಯನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸುವ ಸಂಬಂಧ ಗ್ರಾ.ಪಂ ಸಭೆಯಲ್ಲಿ ಚರ್ಚಿಸಿ ಕ್ರಮ ವಹಿಸಲಾಗುವುದು’ ಎಂದು ಪಾಲಹಳ್ಳಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ರವಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT