ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಹಸಿರು ಭೂಮಿ ಮಂಜೂರಾತಿ ಅಸಂವಿಧಾನಿಕ

ತೋಟಗಾರಿಕೆ ಇಲಾಖೆ ಜಾಗ ಮಂಜೂರು ರದ್ದತಿ ಕೋರಿ ಹೋರಾಟ ಸಭೆ; ಪರಿಸರ ತಜ್ಞ ಯಲ್ಲಪ್ಪ ರೆಡ್ಡಿ ಪ್ರತಿಪಾದನೆ
Last Updated 29 ಏಪ್ರಿಲ್ 2022, 13:07 IST
ಅಕ್ಷರ ಗಾತ್ರ

ಮಂಡ್ಯ: ‘ನಗರಸಭೆ ಅನುಮತಿ, ನಿರ್ಣಯವಿಲ್ಲದೇ ತೋಟಗಾರಿಕೆ ಇಲಾಖೆಯ ಹಸಿರು ಭೂಮಿಯನ್ನು ನ್ಯಾಯಾಲಯ ನಿರ್ಮಾಣಕ್ಕೆ ಮಂಜೂರಾತಿ ಮಾಡಿರುವುದು ಅಸಂವಿಧಾನಿಕ. ಇದರ ಆಧಾರದ ಮೇಲೆ ಮಂಜೂರಾತಿ ರದ್ದತಿ ಕೋರಿ ಕಾನೂನು ಹೋರಾಟ ನಡೆಸಲು ಸಾಕಷ್ಟು ಅವಕಾಶಗಳಿವೆ’ ಎಂದು ಪರಿಸರ ತಜ್ಞ ಯಲ್ಲಪ್ಪರೆಡ್ಡಿ ಪ್ರತಿಪಾದಿಸಿದರು.

ತೋಟಗಾರಿಕೆ ಇಲಾಖೆ ಜಾಗವನ್ನು ಕೋರ್ಟ್‌ ನಿರ್ಮಾಣಕ್ಕೆ ಮಂಜೂರು ಮಾಡಿರುವ ಆದೇಶ ರದ್ದತಿ ಕೋರಿ ಜಿಲ್ಲಾ ಹಿತರಕ್ಷಣಾ ಸಮಿತಿ ಹಾಗೂ ಇತರ ಪ್ರಗತಿಪರ ಸಂಘಟನೆಗಳು ಶುಕ್ರವಾರ ತೋಟಗಾರಿಕೆ ಇಲಾಖೆ ಆವರಣದಲ್ಲಿ ಆಯೋಜಿಸಿದ್ದ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಪ್ರಧಾನಿ, ಮುಖ್ಯಮಂತ್ರಿಗೆ ಇರುವ ಅಧಿಕಾರ ನಗರಸಭೆ ಅಧ್ಯಕ್ಷರಿಗೂ ಇದೆ. ಹಸಿರು ಭೂಮಿಯನ್ನು ಸರ್ಕಾರ ಅನ್ಯ ಉದ್ದೇಶಗಳಿಗೆ ಮಂಜೂರು ಮಾಡುವ ಮೊದಲು ಆಯಾ ಪಾಲಿಕೆ, ನಗರಸಭೆ ಅಥವಾ ಪಂಚಾಯಿತಿಗಳ ಅನುಮತಿ ಪಡೆಯಬೇಕು. ಇದನ್ನು ಭಾರತೀಯ ಸಂವಿಧಾನದ 74ನೇ ತಿದ್ದುಪಡಿ, 243ನೇ ವಿಧಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಮಂಡ್ಯ ನಗರಸಭೆಯ ಅನುಮತಿ, ನಿರ್ಣಯವಿಲ್ಲದೆ ತೋಟಗಾರಿಕೆ ಇಲಾಖೆ ಜಾಗದ ಮಂಜೂರಾತಿ ಸಂವಿಧಾನದ ಸ್ಪಷ್ಟ ಉಲ್ಲಂಘನೆಯಾಗಿದೆ’ ಎಂದರು.

‘ಮಂಜೂರಾತಿ ವಿರೋಧಿಸಿ ನಗರಸಭೆಯಲ್ಲಿ ಒಂದು ನಿರ್ಣಯ ಮಾಡಿದರೆ ಅದರ ಆಧಾರದ ಮೇಲೆ ಕಾನೂನು ಹೋರಾಟ ನಡೆಸಬಹುದು, ಕಾಮಗಾರಿ ವಿರುದ್ಧ ಯಾವುದೇ ಕೋರ್ಟ್‌ನಲ್ಲಿ ತಡೆಯಾಜ್ಞೆ ತರಬಹುದು. ಹೋರಾಟಗಾರರು ಈ ನಿಟ್ಟಿನಲ್ಲಿ ಕ್ರಮವಹಿಸಬೇಕು’ ಎಂದು ಸೂಚಿಸಿದರು.

‘ತೋಟಗಾರಿಕೆ ಇಲಾಖೆಯ ಹಸಿರು ಪರಿಸರವನ್ನು ನುಂಗಿ ಕಾಂಕ್ರೀಟ್‌ ಕಟ್ಟಡ ನಿರ್ಮಿಸಿದರೆ ಇದರಿಂದ ಸುತ್ತಮುತ್ತಲಿನ 20 ಸಾವಿರ ಜನರಿಗೆ ತೊಂದರೆಯಾಗಲಿದೆ. ಸುತ್ತಲೂ ಸರ್ಕಾರಿ ಕಚೇರಿಗಳಿವೆ, ಶಾಲಾ ಕಾಲೇಜುಗಳಿವೆ. ಈಗಾಗಲೇ ಮಂಡ್ಯದಲ್ಲಿ ಹಸಿರು ಪರಿಸರ ಕಡಿಮೆಯಾಗುತ್ತಿದೆ. ಇರುವ ಸಣ್ಣ ಹಸಿರು ಜಾಗವನ್ನೂ ನಾಶಪಡಿಸಿದರೆ ಆಮ್ಲಜನಕ ಕೊರತೆಯಾಗಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ’ ಎಂದರು.

‘ಆಮ್ಲಜನಕವನ್ನು ಯಾವುದೇ ಯಂತ್ರ ಉತ್ಪಾದನೆ ಮಾಡಲು ಸಾಧ್ಯವಿಲ್ಲ. ಕೋವಿಡ್‌ ಸಂದರ್ಭದಲ್ಲಿ ಇದು ಎಲ್ಲರ ಅನುಭವಕ್ಕೂ ಬಂದಿದೆ. ಒಂದು ಹಸಿರೆಲೆ 1 ದಿನದ ಪ್ರಾಣವಾಯು ನೀಡುತ್ತದೆ. ಮರಗಳನ್ನು ನಾಶ ಮಾಡಿದರೆ ಮುಂದೆ ಮನೆಯಲ್ಲಿ ಆಮ್ಲಜನಕ ಸಿಲಿಂಡರ್‌ ಇಟ್ಟುಕೊಳ್ಳುವ ಪರಿಸ್ಥಿತಿ ಬರಬಹುದು. ಈ ನಿಟ್ಟಿನಲ್ಲಿ ಮರಗಳ ನಾಶದಿಂದ ಉಂಟಾಗುವ ಆರೋಗ್ಯ ಪರಿಣಾಮಗಳ ಕುರಿತು ಒಂದು ವರದಿಯನ್ನು ಸಿದ್ಧಪಡಿಸಿ ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಬಹುದು’ ಎಂದು ಸಲಹೆ ನೀಡಿದರು.

‘ತೋಟಗಾರಿಕೆ ಜಾಗದ ಸುತ್ತಮುತ್ತಲೂ ಸಾವಿರಾರು ವಾಹನ ಓಡಾಡುತ್ತವೆ, ಸಮೀಪದಲ್ಲೇ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ ಇದೆ, ಟ್ರಾಫಿಕ್‌ ಸಿಗ್ನಲ್‌ಗಳಿವೆ. ವಾಹನ ಓಡಾಟ ಹೆಚ್ಚಾದಂತೆಲ್ಲ, ಹೆಚ್ಚು ಇಂಧನ ಉರಿಸಿದಂತೆಲ್ಲಾ ಉಷ್ಣಾಂಶ, ಕಾರ್ಬನ್‌ ಡೈಆಕ್ಸೈಡ್‌ ಹೆಚ್ಚುತ್ತದೆ. ಅದನ್ನು ಹೀರಿಕೊಳ್ಳಲು ಮರಗಿಡಗಳೇ ಇಲ್ಲದಿದ್ದರೆ ಉಷ್ಣಾಂಶ ಇನ್ನಷ್ಟು ಹೆಚ್ಚಾಗುತ್ತದೆ. ಈ ಬಗ್ಗೆಯೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ವರದಿ ಪಡೆದರೆ ಕಾನೂನು ಹೋರಾಟಕ್ಕೆ ಅನುಕೂಲವಾಗುತ್ತದೆ’ ಎಂದರು.

ಸಭೆಯಲ್ಲಿ ಮಾಜಿ ಶಾಸಕ ಜಿ.ಬಿ.ಶಿವಕುಮಾರ್‌, ಸಾಹಿತಿ ಜಿ.ಟಿ.ವೀರಪ್ಪ, ಮರೀಗೌಡ ಪ್ರತಿಷ್ಠಾನದ ಸದಸ್ಯ ಎಲ್.ಹನುಮಯ್ಯ, ಮುಖಂಡರಾದ ತಗ್ಗಹಳ್ಳಿ ವೆಂಕಟೇಶ್‌, ಶಂಭೂನಹಳ್ಳಿ ಕೃಷ್ಣ, ಮಂಜುನಾಥ್‌, ಹುರುಗಲವಾಡಿ ರಾಮಯ್ಯ ಇದ್ದರು.

ಸರ್ಕಾರಕ್ಕೆ 500ಕ್ಕೂ ಹೆಚ್ಚು ಪತ್ರ
‘ಪರಿಸರ ನಾಶದ ಕ್ರಮಗಳ ವಿರುದ್ಧ ನಾನು ಸರ್ಕಾರಕ್ಕೆ ಇಲ್ಲಿಯವರೆಗೆ 500ಕ್ಕೂ ಹೆಚ್ಚು ಪತ್ರ ಬರೆದಿದ್ದೇನೆ, ಆದರೆ ಸರ್ಕಾರ ಯಾವ ಪತ್ರಕ್ಕೂ ಉತ್ತರ ನೀಡಿಲ್ಲ’ ಎಂದು ಯಲ್ಲಪ್ಪರೆಡ್ಡಿ ವಿಷಾದಿಸಿದರು.

‘ಸಿಮೆಂಟ್‌ಗೆ, ಸ್ಟೀಲ್‌ಗೆ, ಸಿಲಿಂಗಡರ್‌ಗಳಿಗೆ ಇರುವ ಮನ್ನಣೆ ಮರಗಳಿಗೆ ಇಲ್ಲವಾಗಿದೆ. ಜನರು ಹೊಸ ಕಾರುಗಳ ಬಗ್ಗೆ ಮಾತನಾಡುತ್ತಾರೆ. ಆದರೆ ಮರಗಳ ಬಗ್ಗೆ ಯಾರು ಮಾತನಾಡುತ್ತಾರೆ? ಪ್ರಸ್ತುತ ಸಂದರ್ಭದಲ್ಲಿ ಹವಾಗುಣ ತೀವ್ರವಾಗಿ ಬದಲಾಗುತ್ತಿದೆ. ಪ್ರಾಣವಾಯು ಕೊಡುವ ಮರಗಳನ್ನು ನಾಶ ಮಾಡಿ ಜೀವನಕ್ಕೆ ಸಂಚಾಕಾರ ತರಲಾಗುತ್ತಿದೆ’ ಎಂದರು.

ಮದ್ದೂರು ರೇಷ್ಮೆ ಇಲಾಖೆ ಜಾಗ ರಕ್ಷಿಸಿ
ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಮಾತನಾಡಿ ‘ಮಂಡ್ಯ ತೋಟಗಾರಿಕೆ ಇಲಾಖೆ ಜಾಗ ಮಾತ್ರವಲ್ಲದೇ ಮದ್ದೂರಿನ ರೇಷ್ಮೆ ಇಲಾಖೆ ಜಾಗವನ್ನೂ ಅಲ್ಲಿಯ ತಾಲ್ಲೂಕು ನ್ಯಾಯಾಲಯ ನಿರ್ಮಾಣಕ್ಕೆ ಮಂಜೂರು ಮಾಡಲಾಗಿದೆ. ಆ ಜಾಗ ರಕ್ಷಣೆಗೂ ಹೋರಾಟ ನಡೆಸಲಾಗುತ್ತಿದೆ’ ಎಂದರು.

‘ಹಸಿರು ಪರಿಸರ ರಕ್ಷಣೆಯಲ್ಲಿ ಜನಪ್ರತಿನಿಧಿಗಳ ನಿಲುವು ಸ್ಪಷ್ಟವಾಗಿಲ್ಲ. ಆದರೂ ವಿವಿಧ ಸಂಘಟನೆಗಳ ಮುಖಂಡರು ಒಂದಾಗಿ ಅಹಿಂಸಾ ಮಾರ್ಗದ ಮೂಲಕ ಹೋರಾಟ ನಡೆಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT