ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿತ್ಯ ಬಿಸಿನೀರು ಸೇವಿಸಿದರೂ ಕೋವಿಡ್‌ನಿಂದ ಮುಕ್ತಿ

ಪ್ರತ್ಯೇಕವಾಗಿದ್ದರೆ ಮನೆಯಲ್ಲೇ ಗುಣವಾಗಲು ಸಾಧ್ಯ; ರೋಗಮುಕ್ತರಾದ ಹೆಡ್‌ಕಾನ್‌ಸ್ಟೆಬಲ್‌ ವಿಶ್ವಾಸ
Last Updated 5 ಜೂನ್ 2020, 20:06 IST
ಅಕ್ಷರ ಗಾತ್ರ

ಮಂಡ್ಯ: ‘ಪೌಷ್ಟಿಕ ಆಹಾರದ ಜೊತೆಗೆ ನಿತ್ಯ ಬಿಸಿನೀರು ಸೇವನೆ ಮಾಡಿದರೆ ಕೋವಿಡ್‌–19ನಿಂದ ಮುಕ್ತರಾಗಬಹುದು. ಅಂತರ ಕಾಪಾಡಿಕೊಂಡು ಮನೆಯಲ್ಲೇ ಇದ್ದರೂ ರೋಗ ಗೆಲ್ಲಬಹುದು’ ಎಂದು ಕೋವಿಡ್‌ ಮುಕ್ತರಾಗಿ ಮನೆಗೆ ತೆರಳಿದ ಹೆಡ್‌ಕಾನ್‌ಸ್ಟೆಬಲ್‌ ನಾಗರಾಜ್‌ ಹೇಳಿದರು.

ಜಿಲ್ಲೆಯಲ್ಲಿ ಮೊದಲ ಬಾರಿಗೆ ಪೊಲೀಸ್‌ ಸಿಬ್ಬಂದಿಗೆ ಕೋವಿಡ್‌ ಪತ್ತೆಯಾದಾಗ ಜನರು ಬಹಳ ಆತಂಕಗೊಂಡಿದ್ದರು. ನಾಗರಾಜ್‌ ಕೆಲಸ ಮಾಡುತ್ತಿದ್ದ ಕೆ.ಆರ್‌.ಪೇಟೆ ಪಟ್ಟಣ ಠಾಣೆಯನ್ನೇ ಬಂದ್‌ ಮಾಡಲಾಗಿತ್ತು. 14 ದಿನಗಳ ನಂತರ ರೋಗ ಮುಕ್ತರಾದ ಅವರನ್ನು ಬಹಳ ವಿಶೇಷವಾಗಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಪೊಲೀಸ್‌ ಬ್ಯಾಂಡ್‌ನೊಂದಿಗೆ ಸ್ವತಃ ದಕ್ಷಿಣ ವಲಯದ ಪೊಲೀಸ್‌ ಮಹಾನಿರ್ದೇಶಕ ವಿಫುಲ್‌ ಕುಮಾರ್‌ ಬೀಳ್ಕೊಡುಗೆ ನೀಡಿದರು.

ಜೀವನ ಶೈಲಿ ಬದಲಾವಣೆಯ ಬಗ್ಗೆ ಮಾತನಾಡಿದ ನಾಗರಾಜ್‌ ‘ಕೊರೊನಾ ಸೋಂಕಿಗೆ ಜೀವನ ಶೈಲಿ ಬದಲಾವಣೆ ಮಾಡಿಕೊಳ್ಳಬೇಕು. ಇನ್ನು ಮುಂದೆ ಪ್ರತಿಯೊಬ್ಬರೂ ತಮ್ಮ ವೈಯಕ್ತಿಯ ಎಚ್ಚರಿಕೆಯಿಂದ ಜೀವನ ನಡೆಸಬೇಕಾಗಿದೆ. ಕೋವಿಡ್‌ ಸೋಂಕು ಹರಡಿದರೂ ಭಯಪಡುವ ಅವಶ್ಯಕತೆ ಇಲ್ಲ. ಇತರ ಸೋಂಕುಗಳ ರೀತಿಯಲ್ಲಿ ಕೊರೊನಾ ಕೂಡ ಒಂದು. ಆತ್ಮವಿಶ್ವಾಸದಿಂದ ಎದುರಿಸಬೇಕು. ಮೊದಲು ಚಿಂತೆ ತ್ಯಜಿಸಬೇಕು, ಹೊಟ್ಟೆ ತುಂಬಾ ಊಟ, ಹಣ್ಣುಹಂಪಲು ತಿನ್ನಬೇಕು’ ಎಂದರು.

‘ವೈದ್ಯರು, ಶುಶ್ರೂಷಕರು, ಅಧಿಕಾರಿಗಳು ಹಾಗೂ ಇತರ ಸಿಬ್ಬಂದಿ ನಮ್ಮನ್ನು ಪ್ರೀತಿಯಿಂದ ಕಾಳಜಿ ಮಾಡಿದರು. ಸರ್ಕಾರ ನಮ್ಮ ಮೇಲೆ ಎಷ್ಟೆಲ್ಲಾ ಖರ್ಚು ಮಾಡುತ್ತಿದೆ ಎಂದೆನಿಸಿ ಮನಸ್ಸಿಗೆ ಬಹಳ ನೋವಾಯಿತು. ಕೋವಿಡ್‌ನಿಂದಾಗಿ ಸರ್ಕಾರಕ್ಕೆ ಹೊರೆಯಾಗುತ್ತಿದೆ. ರೋಗಿಗಳನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ, ಊಟಕ್ಕಾಗಿ ಅಪಾರ ಹಣ ವೆಚ್ಚ ಮಾಡುವ ಬದಲು ಮನೆಯಲ್ಲೇ ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಬೇಕಾಗಿತ್ತು ಎನಿಸಿತು. ಮುಂದೆ ಇದೇ ಪರಿಸ್ಥಿತಿ ಬರುತ್ತದೆ’ ಎಂದು ಹೇಳಿದರು.

ತಮಗೆ ಸೋಂಕು ತಗುಲಿದ ವಿಚಾರ ಹಂಚಿಕೊಂಡ ಅವರು ‘ಕೆ.ಆರ್‌.ಪೇಟೆ ಪಟ್ಟಣ ಪ್ರವೇಶಿಸುತ್ತಿದ್ದ ವಲಸಿಗರ ಪ್ರಯಾಣದ ಇತಿಹಾಸ ಬರೆದುಕೊಳ್ಳುವ ಕರ್ತವ್ಯ ನಿರ್ವಹಿಸುತ್ತಿದ್ದೆ. ಚೆಕ್‌ಪೋಸ್ಟ್‌ಗೆ ತೆರಳದೇ ತಪ್ಪಿಸಿಕೊಂಡು ಬರುತ್ತಿದ್ದ ಹಲವರನ್ನು ಗುರುತಿಸುತ್ತಿದ್ದೆ. ಅವರನ್ನು ಊರುಗಳಿಗೆ ಬಿಟ್ಟರೆ ಸಾಮುದಾಯಿಕವಾಗಿ ಸೋಂಕು ಹರಡಬಹುದು ಎಂಬ ಭೀತಿ ಇತ್ತು. ಹೀಗಾಗಿ ವಲಸಿಗರನ್ನು ಗುರುತಿಸುವ ಕೆಲಸಕ್ಕೆ ನಿಯೋಜನೆ ಮಾಡಲಾಗಿತ್ತು. ಈ ವೇಳೆಯಲ್ಲಿ ಸೋಂಕು ಬಂದಿರಬಹುದು’ ಎಂದರು.

‘ನಮ್ಮ ಇಲಾಖೆಯ ಸಿಬ್ಬಂದಿ ನನಗೆ ವಿಶ್ವಾಸ ತುಂಬಿದರು. ಹಿರಿಯ ಅಧಿಕಾರಿಗಳು ನಿತ್ಯ ಕರೆ ಮಾಡಿ ಆರೋಗ್ಯ ವಿಚಾರಿಸುತ್ತಿದ್ದರು. ಅವರ ವಿಶ್ವಾಸದಿಂದಲೇ ಗುಣಮುಖನಾಗಿ ಬಂದಿದ್ದೇನೆ’ ಎಂದರು.

5 ದಿನದ ಒಂದು ಕೋರ್ಸ್‌ ಚಿಕಿತ್ಸೆ

ಮಳವಳ್ಳಿಯ ನಿಷೇಧಿತ ಬಡಾವಣೆಯಲ್ಲಿ ಕೆಲಸ ಮಾಡುತ್ತಿದ್ದ ಜಿಲ್ಲಾ ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ) ಕುಮಾರ್‌ ಕೂಡ ಕೋವಿಡ್‌ ಮುಕ್ತರಾಗಿ ಮನೆಗೆ ತೆರಳಿದರು.

‘ಖಾಸಗಿ ಆಸ್ಪತ್ರೆಯಲ್ಲಿ ಸಿಗದ ಚಿಕಿತ್ಸೆ ಕೋವಿಡ್‌ ಆಸ್ಪತ್ರೆಯಲ್ಲಿ ದೊರೆಯಿತು. 5 ದಿನಗಳವರೆಗೆ ಒಂದು ಕೋರ್ಸ್‌ ಚಿಕಿತ್ಸೆ ಇತ್ತು. ದಿನಕ್ಕೆ ಮೂರು ಹೊತ್ತು ವಿಟಮಿನ್‌ ಮಾತ್ರೆ ಸೇವಿನೆ, ನಿತ್ಯ ಸ್ಕ್ರೀನಿಂಗ್‌, ಬಿಪಿ ಪರೀಕ್ಷೆ ಕಡ್ಡಾಯವಾಗಿತ್ತು. ಪೌಷ್ಟಿಕಾಂಶದ ಊಟ ಕೊಟ್ಟರು. ಕೋವಿಡ್‌ ಪೀಡಿತ ಎಂಬುದನ್ನು ಲೆಕ್ಕಿಸದೆ ಪ್ರೀತಿಯಿಂದ ನೋಡಿಕೊಂಡರು’ ಎಂದು ಕುಮಾರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT