ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಕೆರೆ ಕೆರೆಯಲ್ಲಿ ಮಣ್ಣು ಅಕ್ರಮ ಎತ್ತುವಳಿ: ಸ್ಥಳೀಯರ ದೂರು

Published 1 ಮೇ 2024, 12:48 IST
Last Updated 1 ಮೇ 2024, 12:48 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ತಾಲ್ಲೂಕಿನ ಅರಕೆರೆಯ ಕೆರೆಯಲ್ಲಿ ನೀರಿನ ಮಟ್ಟ ಕಡಿಮೆಯಾಗಿದ್ದು, ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಮಣ್ಣು ಎತ್ತುವಳಿ ಮಾಡುತ್ತಿದ್ದಾರೆ.

ಗ್ರಾಮಕ್ಕೆ ಹೊಂದಿಕೊಂಡಿರುವ ಕೆರೆಯ ದಕ್ಷಿಣ ಭಾಗದಲ್ಲಿ ಕಳೆದ ಮೂರು ದಿನಗಳಿಂದ ಮಣ್ಣನ್ನು ತೆಗೆಯಲಾಗುತ್ತಿದೆ. ಮಣ್ಣು ತೆಗೆಯುತ್ತಿರುವವರು 10ರಿಂದ 12 ಅಡಿ ಆಳದ ಗುಂಡಿಗಳನ್ನು ತೋಡುತ್ತಿದ್ದಾರೆ. ಮಳೆಗಾಲದಲ್ಲಿ ಈ ಗುಂಡಿಗಳಲ್ಲಿ ನೀರು ತುಂಬಿಕೊಳ್ಳುತ್ತದೆ. ಬಟ್ಟೆ ತೊಳೆಯಲು, ದನ, ಕರುಗಳನ್ನು ತೊಳೆಯಲು ಅಥವಾ ನೀರು ಕುಡಿಸಲು ಕೆರೆಗೆ ಇಳಿದರೆ ಮುಳುಗುವ ಅಪಾಯ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕೆರೆಯಿಂದ ಈಗಾಗಲೇ ನೂರಾರು ಟ್ರಾಕ್ಟರ್‌ಗಳಷ್ಟು ಮಣ್ಣು ತೆಗೆಯಲಾಗಿದೆ. ಕೆರೆಯ ಒಳಗೆ ಹತ್ತಾರು ಕಡೆ ಗುಂಡಿಗಳು ನಿರ್ಮಾಣವಾಗಿವೆ. ಮೂರ್ನಾಲ್ಕು ದಿನಗಳಿಂದ ಮಣ್ಣು ತೆಗೆಯುವ ಕೆಲಸ ನಡೆಯುತ್ತಿದ್ದರೂ ಅಧಿಕಾರಿಗಳು ಇತ್ತ ಗಮನಹರಿಸಿಲ್ಲ. ಕಂದಾಯ ಮತ್ತು ಗ್ರಾ.ಪಂ. ಅಧಿಕಾರಿಗಳು ಕಂಡೂ ಕಾಣದಂತಿದ್ದಾರೆ ಎಂದು ಗ್ರಾಮದ ಮುಖಂಡ ರಾಜು ಇತರರು ದೂರಿದ್ದಾರೆ.

‘ಅರಕೆರೆ ಗ್ರಾಮದ ಕೆರೆಯಲ್ಲಿ ಖಾಸಗಿ ವ್ಯಕ್ತಿಗಳು ಮಣ್ಣು ತೆಗೆಯುತ್ತಿರುವ ವಿಷಯ ಗೊತ್ತಿಲ್ಲ. ಪಿಡಿಒ ಜತೆ ಸ್ಥಳ ಪರಿಶೀಲನೆ ನಡೆಸಿ ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಸ್ಥಳೀಯ ಗ್ರಾ.ಪಂ. ಅಧ್ಯಕ್ಷ ಎಂ.ಕೆ. ಮಂಜುನಾಥ್‌ ಹೇಳಿದ್ದಾರೆ.

‘ಅರಕೆರೆ ಗ್ರಾಮದ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ಎತ್ತುವಳಿ ಮಾಡುತ್ತಿರುವ ವಿಷಯ ಬುಧವಾರವಷ್ಟೇ ಗೊತ್ತಾಗಿದೆ. ಕೆರೆ ಅಭಿವೃದ್ಧಿ ಕಾರ್ಯ ಹೊರತುಪಡಿಸಿ ಇತರ ಉದ್ದೇಶಗಳಿಗೆ ಕೆರೆಯಲ್ಲಿ ಮಣ್ಣು ತೆಗೆಯುವಂತಿಲ್ಲ. ಮಣ್ಣು ಎತ್ತುವಳಿ ಮಾಡುವುದನ್ನು ತಡೆಯುವಂತೆ ಪೊಲೀಸರು ಹಾಗೂ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗೆ ಸೂಚಿಸುತ್ತೇನೆ’ ಎಂದು ತಹಶೀಲ್ದಾರ್‌ ಪರಶುರಾಮ ಸತ್ತಿಗೇರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT