ಸೋಮವಾರ, ಜುಲೈ 4, 2022
22 °C
ವಿ.ಸಿ.ಫಾರಂನಲ್ಲಿ ಯಂತ್ರೋಪಕರಣ ಮೇಳ

ಕೃಷಿ ಯಂತ್ರ ಬಳಕೆಯಿಂದ ರೈತರ ಆದಾಯ ವೃದ್ಧಿ- ; ಕುಲಪತಿ ಡಾ.ಎಸ್ ರಾಜೇಂದ್ರ ಪ್ರಸಾದ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ‘ರೈತರು ಉತ್ಪಾದನಾ ಹಂತದಲ್ಲಿ ವೆಚ್ಚಗಳಿಗೆ ಕಡಿವಾಣ ಹಾಕಬೇಕು, ಕೃಷಿಯಲ್ಲಿ ಯಂತ್ರೋಪಕರಣ ಬಳಸುವುದರಿಂದ ಕೂಲಿ ಕಾರ್ಮಿಕರ ವೆಚ್ಚವನ್ನು ಉಳಿಸಬಹುಹುದು. ಇದರಿಂದ ರೈತರ ಆದಾಯವೂ ದ್ವಿಗುಣಗೊಳ್ಳುತ್ತದೆ’ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ರಾಜೇಂದ್ರ ಪ್ರಸಾದ್ ಹೇಳಿದರು.

ನಗರದ ವಿ.ಸಿ ಫಾರಂ ವಲಯ ಕೃಷಿ ಸಂಶೋಧನಾ ಕೇಂದ್ರದಲ್ಲಿ ಬುಧವಾರ ನಡೆದ ಒಂದು ದಿನದ ಕೃಷಿ ಯಂತ್ರೋಪಕರಣಗಳ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

‘1930ರಿಂದಲೇ ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆ ಆರಂಭವಾಯಿತು. ಆದರೂ ರೈತರಿಗೆ ಕೃಷಿ ಯಂತ್ರೋಪಕರಣಗಳು ಶೇ 30ರಷ್ಟು ಕೂಡ ತಲುಪಿಲ್ಲ ಎಂಬುದು ವಿಷಾದನೀಯ ಸಂಗತಿ. ಇಂತಹ ಕೃಷಿ ಯಂತ್ರೋಪಕರಣಗಳ ಮೇಳವು ರೈತರಲ್ಲಿ ಕೃಷಿಯಂತ್ರೋಪಕರಣಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸುತ್ತದೆ’ ಎಂದರು.

‘ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕೃಷಿಯಲ್ಲಿ ಯಂತ್ರಗಳನ್ನು ಬಳಸುವುದು ನಮ್ಮಲ್ಲಿ ತುಂಬಾ ಕಡಿಮೆ. ದೇಶದಲ್ಲಿ ಶೇ 84ರಷ್ಟು ರೈತರು ಸಣ್ಣ ಭೂಮಿ ಹೊಂದಿರುವುದರಿಂದ ಅವರಿಗೆ ಕೃಷಿ ಯಂತ್ರೋಪಕರಣಗಳು ತಲುಪದೇ ಇರಬಹುದು. ತಲೆಮಾರಿನಿಂದ ತಲೆಮಾರಿಗೆ ಭೂಮಿ ಹಂಚಿಕೆಯಾಗುತ್ತಿದ್ದು ಕೃಷಿ ಯಂತ್ರೋಪಕರಣಗಳನ್ನು ಬಳಸುವುದು ಕಷ್ಟವಾಗುತ್ತಿದೆ’ ಎಂದರು.

ಕೃಷಿ ವಿಶ್ವವಿದ್ಯಾನಿಲಯದ ಸಂಶೋಧನಾ ನಿರ್ದೇಶಕ ಡಾ. ವೈ.ಜಿ ಷಡಕ್ಷರಿ ಮಾತನಾಡಿ ‘ನೀರಿನ ಸದ್ಭಳಕೆಯಲ್ಲಿ, ಕೃಷಿ ಪರಿಕರಗಳು, ಉತ್ಪನ್ನಗಳ ಸುಲಭ ಸಾಗಾಣಿಕೆಯಲ್ಲಿಯೂ ಕೃಷಿಯಂತ್ರೋಪಕರಣಗಳು ಸಹಾಯಕಾರಿ. ಕೃಷಿಯಲ್ಲಿ ಭೂಮಿ ಸಿದ್ಧತೆ, ಬಿತ್ತನೆ ಮಾಡಲು, ನಾಟಿ ಮಾಡಲು, ಕಳೆ ಕೀಳಲು, ಅಂತರ ಬೇಸಾಯ, ಸಸ್ಯ ಸಂರಕ್ಷಣೆ ಮಾಡಲು, ಬೆಳೆ ಕಟಾವು ಮಾಡಲು, ಹುಲ್ಲಿನ ಕಂತೆಗಳನ್ನು ಕಟ್ಟಲು, ಸಂಸ್ಕರಣೆ, ಮೌಲ್ಯವರ್ಧನೆ ಮಾಡುವ ಯಂತ್ರಗಳನ್ನು ಈಗಾಗಲೆ ಬಳಕೆ ಮಾಡಲಾಗುತ್ತಿದೆ’ ಎಂದರು.

ಕೃಷಿ ವಿಶ್ವವಿದ್ಯಾನಿಲಯದ ವಿಸ್ತರಣಾ ನಿರ್ದೇಶಕ ಡಾ. ಎನ್ ದೇವಕುಮಾರ್, ಡೀನ್ ಡಾ.ಎಸ್.ಎಸ್ ಪ್ರಕಾಶ್, ವಿ.ಸಿ ಫಾರಂ ವಲಯ ಕೃಷಿ ಸಂಶೋಧನಾ ಕೇಂದ್ರದ ಕೃಷಿ ಯಂತ್ರೋಪಕರಣಗಳ ಪ್ರಾಯೋಜನಾ ಮುಖ್ಯಸ್ಥರಾದ ಡಾ. ಎಂ.ಎಸ್ ಶ್ರೀದೇವಿ, ರೈತ ನಾಯಕಿ ಸುನಂದಾ ಜಯರಾಂ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು