ಶನಿವಾರ, ಏಪ್ರಿಲ್ 17, 2021
27 °C

ಕಬ್ಬಿನ ತಳಿಯ ದೋಷದಿಂದ ಕಳಪೆ ಬೆಲ್ಲ ತಯಾರಿಕೆ:

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯದ ಜಿಲ್ಲಾ ಪಂಚಾಯತಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಬೆಲ್ಲ ಉತ್ಪಾದಕರು ಹಾಗೂ ಖರೀದಿದಾರರ ಸಮಾವೇಶದಲ್ಲಿ ರಾಸಾಯನಿಕ ಮುಕ್ತ ಬೆಲ್ಲವನ್ನು ಪ್ರದರ್ಶನಕ್ಕೆ ಇಡಲಾಗಿತ್ತು

ಮಂಡ್ಯ: ‘ಜಿಲ್ಲೆಯಲ್ಲಿ ರೈತರು ಬೆಳೆಯುತ್ತಿದ್ದ ಕಬ್ಬಿನ ತಳಿಯಲ್ಲಿ ಸಿಹಿಯ ಅಂಶ ಕಡಿಮೆ ಇತ್ತು. ತಳಿಯ ದೋಷದಿಂದ ಗಾಣದ ಮಾಲೀಕರು ಸಕ್ಕರೆ ಹಾಗೂ ರಾಸಾಯನಿಕ ಬಳಸಿ ಬೆಲ್ಲ ತಯಾರಿಸುವ ಅನಿವಾರ್ಯತೆ ನಿರ್ಮಾಣವಾಗಿತ್ತು’ ಎಂದು ಕಬ್ಬಿನ ಗಾಣದ ಮಾಲೀಕರ ಸಂಘದ ಅಧ್ಯಕ್ಷ ಸೋಮಶಂಕರೇಗೌಡ ಗುರುವಾರ ತಿಳಿಸಿದರು.

‘ರೈತರು ಮೊದಲು ಸಿಒ–419 ಕಬ್ಬಿನ ತಳಿ ಬೆಳೆಯುತ್ತಿದ್ದರು.ಈ ಕಬ್ಬಿನಲ್ಲಿ ಸಕ್ಕರೆ ಅಂಶ ಹೆಚ್ಚಾಗಿತ್ತು. ಆದರೆ ಬಹಳ ಬೇಗ ರೋಗಕ್ಕೆ ತುತ್ತಾದ ಕಾರಣ ತಳಿ ಬದಲಾವಣೆ ಮಾಡಬೇಕಾಯಿತು’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘90ರ ದಶಕದಲ್ಲಿ ರೈತರು 62/175 ಕಬ್ಬಿನ ತಳಿ ಬೆಳೆಯಲು ಆರಂಭಿಸಿದರು. ಈ ತಳಿಯಲ್ಲಿ ಸಿಹಿ ಅಂಶ ವಿಪರೀತ ಕಡಿಮೆ ಇದ್ದ ಕಾರಣ ಇಳುವರಿ ಕುಂಠಿತವಾಯಿತು. ಇದರಿಂದಾಗಿ ಕಬ್ಬಿನ ಗಾಣಗಳು, ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಬಾಗಿಲು ಮುಚ್ಚಿದವು. ನಷ್ಟದಲ್ಲಿದ್ದ ನಮ್ಮ ಆಲೆಮನೆಗಳನ್ನು ಹೊರರಾಜ್ಯಗಳ ಗುತ್ತಿಗೆದಾರರು ಗುತ್ತಿಗೆ ಪಡೆದರು. ಸಕ್ಕರೆ,  ರಾಸಾಯನಿಕ ಬಳಸಿ ಬೆಲ್ಲ ತಯಾರಿಸಿದರು. ಮಂಡ್ಯ ಬೆಲ್ಲದ ಗುಣಮಟ್ಟ ಹಾಳುಗೆಡವಿದರು’ ಎಂದರು.

‘ಈಚೆಗೆ ಹೊಸದಾಗಿ ವಿಸಿಎಫ್‌– 517 ಕಬ್ಬಿನ ತಳಿ ಬೆಳೆಯಲಾಗುತ್ತಿದ್ದು  ಉತ್ತಮ ಇಳುವರಿ ಬರುತ್ತಿದೆ, ಸಕ್ಕರೆ ಅಂಶವೂ ಚೆನ್ನಾಗಿದೆ. ಈಗಲೂ ಸ್ಥಳೀಯ ಆಲೆಮನೆ ಮಾಲೀಕರು ಶುದ್ಧ ಬೆಲ್ಲವನ್ನೇ ತಯಾರಿಸುತ್ತಿದ್ದಾರೆ. ಆದರೆ ಹೊರರಾಜ್ಯಗಳ ಗುತ್ತಿಗೆದಾರರು ಹೊಳಪಿಗಾಗಿ ರಾಸಾಯನಿಕ ಬಳಕೆ ಮುಂದುವರಿಸಿದ್ದಾರೆ. ಅವರ ಬಿಳಿ ಬೆಲ್ಲದ ಮುಂದೆ ಸ್ಥಳೀಯ ಗಾಣದ ಮಾಲೀಕರ ಬೆಲ್ಲ ಮಂಕಾಗಿದೆ. ಇದರಿಂದ ನಮಗೆ ಮಾರುಕಟ್ಟೆ ಸಿಗದಂತಾಗಿದೆ’ ಎಂದರು.

‘ಹೊರರಾಜ್ಯಗಳ ಗುತ್ತಿಗೆದಾರರ ಹಾವಳಿ ತಡೆಯುವಂತೆ ಹಲವು ಬಾರಿ ದೂರುಕೊಟ್ಟಿದ್ದೆವು. ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಆದರೆ ಈಗ ದೂರುಗಳು ಹೆಚ್ಚಾದ ಕಾರಣ ಆಹಾರ ಸುರಕ್ಷತಾ ಅಧಿಕಾರಿಗಳು ಕಳಪೆ ಬೆಲ್ಲ ಜಪ್ತಿ ಮಾಡುತ್ತಿದ್ದಾರೆ. ಮೊದಲೇ ಈ ಕೆಲಸ ಮಾಡಿದ್ದರೆ ಕಳಪೆ ಬೆಲ್ಲಕ್ಕೆ ಕಡಿವಾಣ ಹಾಕಬಹುದಾಗಿತ್ತು’ ಎಂದರು.

‘ಶುದ್ಧ ಮಂಡ್ಯ ಬೆಲ್ಲಕ್ಕೆ ಈಗಲೂ ಕೇರಳದಲ್ಲಿ ಬೇಡಿಕೆ ಇದೆ. ಆದರೆ ಮಹಾರಾಷ್ಟ್ರ, ಮಧ್ಯಪ್ರದೇಶದಿಂದ ಕಳಪೆ ಬೆಲ್ಲ ತಂದು ಪುನರ್‌ ತಯಾರಿಸಿ ಕಳುಹಿಸಿದ ಪರಿಣಾಮ ತಿರಸ್ಕಾರಕ್ಕೆ ಒಳಗಾಗಿದೆ. ಹೊರರಾಜ್ಯಗಳ ಗುತ್ತಿಗೆದಾರರ ಹಾವಳಿಗೆ ಕಡಿವಾಣಿ ಹಾಕಿದರೆ ನಾವು ಈಗಲೂ ಶುದ್ಧ, ರಾಸಾಯನಿಕ ಮುಕ್ತ ಬೆಲ್ಲ ತಯಾರಿಸುತ್ತೇವೆ’ ಎಂದರು.

‘ಬೆಲ್ಲ ಕಳಪೆಯಾಗಲು ಸರ್ಕಾರದ ನೀತಿಗಳೂ ಕಾರಣವಾಗಿದೆ. ಸರಿಯಾದ ಸಮಯಕ್ಕೆ ನಾಲೆಗೆ ನೀರು ಹರಿಸದಿರುವುದು, ಸಮರ್ಪಕವಾಗಿ ವಿದ್ಯುತ್‌ ಸರಬರಾಜು ಮಾಡದಿರುವುದೂ ಕಾರಣವಾಗಿವೆ. ಆತ್ಮನಿರ್ಭರ ಭಾರತ ಯೋಜನೆಯಡಿ ಆಲೆಮನೆಗಳಿಗೆ ಪುನಶ್ಚೇತನ ನೀಡಬೇಕು. ಸ್ಥಳೀಯವಾಗಿ ಬೆಲ್ಲದ ಗುಣಮಟ್ಟ ಪರೀಕ್ಷಿಸುವ ವ್ಯವಸ್ಥೆ ರೂಪಿಸಬೇಕು’ ಎಂದು ಒತ್ತಾಯಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು