ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲಹಳ್ಳಿ: ಸೊಳ್ಳೆ ಕಾಟ, ಚೆಲ್ಲಾಡುತ್ತಿದೆ ತ್ಯಾಜ್ಯ

ವಾರ್ಡ್‌ 6; ಮೂಲಸೌಲಭ್ಯಗಳಿಂದ ವಂಚಿತವಾಗಿರುವ ಬಡಾವಣೆ, ತೆರೆದ ಚರಂಡಿಗಳು, ಸದಾ ಕತ್ತಲು
Last Updated 23 ಜುಲೈ 2018, 11:23 IST
ಅಕ್ಷರ ಗಾತ್ರ

ಮಂಡ್ಯ: ಕಲ್ಲಹಳ್ಳಿ ಸರ್ಕಾರಿ ಶಾಲೆ ರಸ್ತೆಯಲ್ಲಿ ತೆರೆದ ಚರಂಡಿಗಳು, ಮಹದೇಶ್ವರ ಸರ್ಕಲ್‌ನಲ್ಲಿ ಉರಿಯದ ಬೀದಿ ದೀಪಗಳು, ಹಳೇ ಪೋಸ್ಟ್‌ ಆಫೀಸ್‌ ರಸ್ತೆ ಬದಿಯಲ್ಲಿ ಚೆಲ್ಲಾಡುತ್ತಿರುವ ತ್ಯಾಜ್ಯ, ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳಗದ ಹೈಮಾಸ್ಟ್‌ ದೀಪ, 2ನೇ ಕ್ರಾಸ್‌ನಲ್ಲಿ ಕಿತ್ತು ಹೋಗಿರುವ ರಸ್ತೆ, ಎಲ್ಲೆಲ್ಲೂ ಸೊಳ್ಳೆ ಕಾಟ. ಇವು ‘6ನೇ ವಾರ್ಡ್‌ ಬೀಟ್‌’ಸಂದರ್ಭದಲ್ಲಿ ಕಂಡು ಬಂದ ದೃಶ್ಯಗಳು.

ಮಂಡ್ಯದ ಮೂಲ ಕಲ್ಲಹಳ್ಳಿ ನಗರದೊಳಗೆ ಸೇರ್ಪಡೆಯಾಗಿದ್ದರೂ ಹೆಸರಿಗೆ ತಕ್ಕಂತೆ ಹಳ್ಳಿಯಂತೆಯೇ ಉಳಿದಿದೆ. ನಾಡಹೆಂಚಿನ ಮನೆಗಳು ಈ ಬಡಾವಣೆಯಲ್ಲಿ ಕಾಣ ಸಿಗುತ್ತವೆ. ರೈತರು, ಕೃಷಿ ಕಾರ್ಮಿಕರು ಇಲ್ಲಿ ವಾಸಿಸುತ್ತಿದ್ದಾರೆ. ರಾಷ್ಟೀಯ ಹೆದ್ದಾರಿಯ ಬಲಭಾಗದಲ್ಲಿ ಮೂಲ ಸೌಲಭ್ಯಗಳಿವೆ. ಆದರೆ ಎಡಭಾಗದಲ್ಲಿರುವ ಮೂಲ ಕಲ್ಲಹಳ್ಳಿ ಮೂಲಸೌಲಭ್ಯಗಳಿಂದ ವಂಚಿತವಾಗಿದೆ.

ಕೆಆರ್‌ಎಸ್‌ ಜಲಾಶಯ ತುಂಬು ತುಳುಕುತ್ತಿದ್ದರೂ ಈ ಜನರು ವಾರಕ್ಕೊಮ್ಮೆ ಕುಡಿಯುವ ನೀರು ಪಡೆಯುತ್ತಾರೆ. ಅದೂ ಒಂದು ಗಂಟೆ ಮಾತ್ರ ನೀರು ಬಿಡಲಾಗುತ್ತದೆ. ಹಳೇ ಕಲ್ಲಹಳ್ಳಿ ತಗ್ಗು ಪ್ರದೇಶದಲ್ಲಿರುವ ಕಾರಣ ಚರಂಡಿ ನೀರು ಈ ಭಾಗಕ್ಕೆ ಬಂದು ಶೇಖರಣೆಯಾಗುತ್ತಿದೆ. ಚರಂಡಿ ಸ್ವಚ್ಛತೆಗೆ ನಗರಸಭೆ ಸಿಬ್ಬಂದಿ ಗಮನ ಹರಿಸದ ಹಿನ್ನೆಲೆಯಲ್ಲಿ ಚರಂಡಿ ಕಟ್ಟಿಕೊಂಡು ಕೊಳಚೆ ನೀರು ನಿಂತಿದೆ. ಮಳೆ ಹೆಚ್ಚಿರುವ ಸಂದರ್ಭದಲ್ಲಿ ಕೊಳಚೆ ನೀರು ರಸ್ತೆಯಲ್ಲಿ ಹರಿದು ನಿವಾಸಿಗಳಿಗೆ ರೋಗಭೀತಿ ಸೃಷ್ಟಿಸುತ್ತದೆ. 10 ದಿನವಾದರೂ ನಗರಸಭೆ ಟಿಪ್ಪರ್‌ ಕಸ ಸಂಗ್ರಹಕ್ಕೆ ಬಾರದ ಕಾರಣ ನಿವಾಸಿಗಳು ಎಲ್ಲೆಂದರಲ್ಲಿ ಕಸ ಚೆಲ್ಲಾಡಿದ್ದಾರೆ. ಅಲ್ಲದೆ, ಎಲ್ಲರೂ ಹೊರಗೆ ಹೋಗಿರುವ ಸಂದರ್ಭದಲ್ಲಿ ಮಧ್ಯಾಹ್ನ 12 ಗಂಟೆಯ ನಂತರ ವಾಹನ ಬರುತ್ತಿದ್ದು ನಿವಾಸಿಗಳು ಕಸವನ್ನು ವಾಹನಕ್ಕೆ ನೀಡಲು ಸಾಧ್ಯವಾಗುತ್ತಿಲ್ಲ.

ಬಾರದ ಕಸ ಸಂಗ್ರಹಣ ವಾಹನ: ಹಳೇ ಕಲ್ಲಹಳ್ಳಿಯ ಕೊನೆಯ ಭಾಗದಲ್ಲಿರುವ ಹಳೇ ಪೋಸ್ಟ್‌ ಆಫೀಸ್‌ ರಸ್ತೆಯ ಭಾಗಕ್ಕೆ ಕಸ ಸಂಗ್ರಹಿಸುವ ವಾಹನ ಬರುವುದಿಲ್ಲ ಎಂದು ನಿವಾಸಿಗಳು ಆರೋಪಿಸುತ್ತಾರೆ. ಹೆದ್ದಾರಿ ಪಕ್ಕದಲ್ಲಿರುವ ರಸ್ತೆಯಲ್ಲಿ ಮಾತ್ರ ಕಸ ಸಂಗ್ರಹಿಸಿ ಕೊನೆಯ ಭಾಗದ ರಸ್ತೆಗಳಿಗೆ ಬರುತ್ತಿಲ್ಲ, ಇದರಿಂದ ಬಡಾವಣೆಯಲ್ಲಿ ಸ್ವಚ್ಛತೆಯ ಕೊರತೆ ಇದೆ.

‘ನಾವು ಕಂದಾಯ ಕಟ್ಟುತ್ತೇವೆ. ವಿದ್ಯುತ್‌, ನೀರು ಬಿಲ್‌ ಕಟ್ಟುತ್ತೇವೆ. ಆದರೂ ನಮ್ಮ ರಸ್ತೆಯ ಭಾಗಕ್ಕೆ ನಗರಸಭೆ ಸಿಬ್ಬಂದಿ ಬರುವುದಿಲ್ಲ. ಈ ಬಗ್ಗೆ ಕೇಳಿದರೆ ಉತ್ತರ ಕೊಡದೆ ತೆರಳುತ್ತಾರೆ’ ಎಂದು ಹಳೇ ಪೋಸ್ಟ್‌ ಆಫೀಸ್‌ ರಸ್ತೆಯ ನಿವಾಸಿ ತಾಯಮ್ಮ ಹೇಳಿದರು.

ಸೊಳ್ಳೆಗಳ ಆವಾಸ ಸ್ಥಾನ: ಕಲ್ಲಹಳ್ಳಿ ಕೆರೆಗೆ ಚರಂಡಿ ನೀರು ಹರಿದು ಹೋಗುತ್ತಿರುವ ಕಾರಣ ಕೆರೆಯಿಂದ ಬರುವ ಸೊಳ್ಳೆಗಳು ಬಡಾವಣೆಯ ಜನರಿಗೆ ನರಕ ಸೃಷ್ಟಿಸಿವೆ. ಸಂಜೆಯ ವೇಳೆ ಜನರು ವಿಪರೀತ ಸೊಳ್ಳೆ ಕಾಟ ಅನುಭವಿಸುತ್ತಿದ್ದಾರೆ. ಚರಂಡಿ ಸ್ವಚ್ಛಗೊಳಿಸುವಂತೆ ನಗರಸಭೆ ಸಿಬ್ಬಂದಿಗೆ ಹಲವು ಬಾರಿ ದೂರು ನೀಡಿದ್ದರೂ ಸಮಸ್ಯೆ ಬಗೆಹರಿದಿಲ್ಲ ಎಂದು ನಿವಾಸಿಗಳು ಆರೋಪಿಸುತ್ತಾರೆ.

‘ಸೊಳ್ಳೆ ಕಾಟದಿಂದ ಮಕ್ಕಳಿಗೆ ತೀವ್ರ ತೊಂದರೆಯಾಗಿದೆ. ಸೊಳ್ಳೆ ಪರದೆ ಕಟ್ಟಿಕೊಳ್ಳದೆ, ಫ್ಯಾನ್‌ ಹಾಕಿಕೊಳ್ಳದೆ ಮಲಗಲು ಸಾಧ್ಯವಿಲ್ಲ. ನಮ್ಮ ಬಡಾವಣೆಯ ಹಲವರಿಗೆ ಡೆಂಗಿ, ಮಲೇರಿಯಾ ರೋಗ ಕಾಡಿದೆ. ಮೇಲಿನಿಂದ ಹರಿದು ಬರುವ ಚರಂಡಿ ನೀರು ಮನೆಯ ಮುಂದೆಯೇ ನಿಲ್ಲುತ್ತದೆ. ಇದರಿಂದ ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ’ ಎಂದು ನಿವಾಸಿ ಅರುಣ್‌ ಕುಮಾರ್‌ ಹೇಳಿದರು.

ಬೆಳಗದ ಹೈಮಾಸ್ಟ್‌ ದೀಪ: ಕಲ್ಲಹಳ್ಳಿ ಸರ್ಕಲ್‌, ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಳವಡಿಸಲಾಗಿರುವ ಹೆಮಾಸ್ಟ್‌ ದೀಪ ಕೆಟ್ಟು ಹಲವು ತಿಂಗಳುಗಳೇ ಆಗಿವೆ. ಇಲ್ಲಿಯವರೆಗೂ ರಿಪೇರಿಯಾಗಿಲ್ಲ. ಇಲ್ಲಿ ನಾಲ್ಕು ರಸ್ತೆಗಳಿದ್ದ ರಾತ್ರಿಯ ವೇಳೆಯಲ್ಲಿ ಹೆದ್ದಾರಿ ದಾಟಲು ವಾಹನಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಹಲವು ಸಣ್ಣಪುಟ್ಟ ಅಪಘಾತಗಳು ನಡೆದು ಜನರು ಗಾಯಗೊಂಡಿದ್ದಾರೆ.

‘ಕಲ್ಲಹಳ್ಳಿ ಬಡಾವಣೆಯಲ್ಲಿ ಬೀದಿದೀಪಗಳಿಲ್ಲ. ನಮ್ಮದು ಗ್ರಾಮೀಣ ಭಾಗವಾಗಿರುವ ಕಾರಣ ಹಲವು ಬಾರಿ ವಿದ್ಯುತ್‌ ಸ್ಥಗಿತಗೊಳಿಸುತ್ತಾರೆ. ಆಗ ಇಡೀ ಬಡಾವಣೆ ಕಗ್ಗತ್ತಲಲ್ಲಿ ಮುಳುಗಿರುತ್ತದೆ. ರಾತ್ರಿಯ ವೇಳೆ ಮಕ್ಕಳು ಓಡಾಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಆಟೊ ಚಾಲಕ ಬೀರೇಶ್‌ ಹೇಳಿದರು.

ಕಣ್ಣಿಗೆ ಹಾರಿಬರುವ ಭತ್ತದ ಹೊಟ್ಟು!

ಹಳೇ ಕಲ್ಲಹಳ್ಳಿಯಲ್ಲಿರುವ ರೈಸ್‌ಮಿಲ್‌ಗಳಿಂದಾಗಿ ಭತ್ತದ ಹೊಟ್ಟು ನಿವಾಸಿಗಳ ಕಣ್ಣಿಗೆ ಹಾರಿ ಬಂದು ಬೀಳುತ್ತಿದೆ. ಇದರಿಂದ ಜನರು ಈ ಭಾಗದಲ್ಲಿ ಕಣ್ಣಿಗೆ ಮರೆಯಾಗಿ ಕೈ ಹಿಡಿದುಕೊಂಡು ಓಡಾಡುತ್ತಿದ್ದಾರೆ. ಭತ್ತದ ಒಟ್ಟು ನಿರ್ವಹಣೆಗೆ ರೈಸ್‌ಮಿಲ್‌ ಮಾಲೀಕರು ಸೂಕ್ತ ವ್ಯವಸ್ಥೆ ಮಾಡದ ಕಾರಣ ಮಿಲ್‌ನ ಚಿಮಣಿಯಿಂದ ಹೊರಹೊಮ್ಮುವ ಹೊಟ್ಟು ನೇರವಾಗಿ ಮನೆಯೊಳಗೆ ಬರುತ್ತಿದೆ. ಮನೆಯಲ್ಲಿ ತಯಾರಾಗುವ ಊಟದ ಮೇಲೂ ಹೊಟ್ಟು ಕೂರುತ್ತಿದೆ. ಇದರಿಂದ ನಿವಾಸಿಗಳು ಹಗಲಿನ ವೇಳೆಯಲ್ಲಿ ಕಿಟಕಿ, ಬಾಗಿಲು ಹಾಕಿಕೊಂಡಿರುತ್ತಾರೆ.

ಈ ಕುರಿತು ಹಲವು ಬಾರಿ ಮಿಲ್‌ ಮಾಲೀಕರಿಗೆ ದೂರು ನೀಡಿದ್ದಾರೆ. ಮನೆಯೊಳಗೆ ಹೊಟ್ಟು ಬಾರದಂತೆ ತಡೆಗೋಡೆ ನಿರ್ಮಿಸುವಂತೆ ಮನವಿ ಮಾಡಿದ್ದಾರೆ. ಆದರೆ ಮಾಲೀಕರು ಈ ಬಡ ನಿವಾಸಿಗಳ ಮನವಿಗೆ ಸ್ಪಂದಿಸಿಲ್ಲ. ನಗರಸಭೆ ಅದಿಕಾರಿಗಳಿಗೆ ಈ ಕುರಿತು ದೂರು ನೀಡಿದರೂ ಯಾವುದೇ ಪ್ರಯೋಜನ ಆಗಿಲ್ಲ.

ರಸ್ತೆ ಕಾಮಗಾರಿ ನಡೆದಿದೆ

‘ನಗರೋತ್ಥಾನ ಯೋಜನೆ ಅಡಿ ನಮ್ಮ ವಾರ್ಡ್‌ನ ಹಲವು ರಸ್ತೆಗಳ ದುರಸ್ತಿ ಕಾಮಗಾರಿಗಳು ಭರದಿಂದ ನಡೆಯುತ್ತಿವೆ. ವಾರ್ಡ್‌ನ ಜನರಿಗೆ ಮೂಲ ಸೌಲಭ್ಯಗಳನ್ನು ಒದಗಿಸಲು ಪ್ರಥಮ ಆದ್ಯತೆ ನೀಡಿದ್ದೇನೆ. ಇಲ್ಲಿಯವರೆಗೂ ಕುಡಿಯುವ ನೀರಿನ ತೊಂದರೆ ಆಗಿಲ್ಲ. ನಗರಸಭೆ ಕಸದ ಟಿಪ್ಪರ್‌ ಕೆಲವೆಡೆ ಹೋಗುತ್ತಿಲ್ಲ ಎಂಬ ದೂರಿದೆ, ಅದನ್ನು ಶೀಘ್ರ ಬಗೆಹರಿಸುತ್ತೇನೆ’ ಎಂದು 6ನೇ ವಾರ್ಡ್‌ ನಗರಸಭೆ ಸದಸ್ಯ ಬಿ.ಎನ್‌.ರಾಜೇಶ್‌ ಹೇಳಿದರು.

‘ಹಳೆಯ ಕಲ್ಲಹಳ್ಳಿ ತಗ್ಗು ಪ್ರದೇಶದಲ್ಲಿ ಇರುವ ಕಾರಣ ಕೆಲವೆಡೆ ಚರಂಡಿ ಕಟ್ಟಿಕೊಂಡಿರಬಹುದು. ಅದನ್ನು ಶೀಘ್ರ ಸ್ವಚ್ಛಗೊಳಿಸಲು ನಗರಸಭೆ ಸಿಬ್ಬಂದಿಗೆ ಸೂಚನೆ ನೀಡುತ್ತೇನೆ. ರಾಷ್ಟ್ರೀಯ ಹೆದ್ದಾರಿಯ ಮೇಲ್ಭಾಗದಲ್ಲಿ ಚರಂಡಿ ಸಮಸ್ಯೆ ಇಲ್ಲ’ ಎಂದು ಅವರು ತಿಳಿಸಿದರು.

ವಾರ್ಡ್‌–6
ವ್ಯಾಪ್ತಿ: ಸರ್ಕಾರಿ ಶಾಲೆಯಿಂದ 5ನೇ ಕ್ರಾಸ್‌
ಪ್ರಮುಖ ಸ್ಥಳಗಳು: ಮಾರಮ್ಮ ದೇವಾಲಯ, ಮಸಣಮ್ಮ ದೇವಾಲಯ, ರಾಷ್ಟ್ರೀಯ ಹೆದ್ದಾರಿ, ಎಪಿಎಂಸಿ ಬೆಲ್ಲದ ಮಾರುಕಟ್ಟೆ, ಧರ್ಮಶ್ರೀ ಕಲ್ಯಾಣ ಮಂಟಪ ಸರ್ಕಾರಿ ಪ್ರಾಥಮಿಕ ಶಾಲೆ
ಜನಸಂಖ್ಯೆ: 4,000
ವಾರ್ಡ್‌ ಸದಸ್ಯರು: ಬಿ.ಎನ್‌.ರಾಜೇಶ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT