ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಮನೆ ಕಾಮೇಗೌಡರಿಗೆ ಸನ್ಮಾನ

‘ಪದ್ಮಶ್ರೀ’ ನೀಡಿ ಗೌರವಿಸಲು ಮುಖ್ಯಮಂತ್ರಿಗಳಿಗೆ ಶಿಫಾರಸು; ಜಿಲ್ಲಾಧಿಕಾರಿ ಡಾ.ವೆಂಕಟೇಶ್‌
Last Updated 3 ಜುಲೈ 2020, 13:58 IST
ಅಕ್ಷರ ಗಾತ್ರ

ಮಂಡ್ಯ: ‘ಜಲಮೂಲಗಳ ಸಂರಕ್ಷಣೆಯಲ್ಲಿ ಅತ್ಯಂತ ಶ್ರೇಷ್ಠ ಕೆಲಸ ಮಾಡಿರುವ ಕಲ್ಮನೆ ಕಾಮೇಗೌಡರು ವಿಶ್ವಕ್ಕೆ ಮಾದರಿಯಾಗಿದ್ದಾರೆ’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಹೇಳಿದರು.

‘ಮನದ ಮಾತು’ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಮೇಗೌಡರ ಸಾಧನೆ ಪ್ರಸ್ತಾಪ ಮಾಡಿದ ಹಿನ್ನೆಲೆಯಲ್ಲಿ ಶುಕ್ರವಾರ ಜಿಲ್ಲಾಡಳಿತ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಂಡ್ಯ ಜಿಲ್ಲೆಯ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಸಾಧನೆಯನ್ನು 83 ವರ್ಷ ವಯಸ್ಸಿನ ಕಾಮೇಗೌಡರು ಮಾಡಿದ್ದಾರೆ. ಸ್ವಂತ ದುಡಿಮೆಯಿಂದ, ಕುರಿಗಳನ್ನು ಮಾರಾಟ ಮಾಡಿ ಬಂದಂತಹ ಹಣವನ್ನು ಕಟ್ಟೆಗೆ ಬಳಸಿದ್ದಾರೆ. ಪಕೃತಿ ಸಂರಕ್ಷಣೆಗೆ ಬಲವಾದ ಅಡಿಪಾಯ ಹಾಕಿಕೊಟ್ಟಿದ್ದಾರೆ. ಮೂಕ ಪ್ರಾಣಿಗಳಿಗೆ ಕುಡಿಯುವ ನೀರು ಒದಗಿಸಿರುವ ಅವರ ಸೇವೆ ಅನನ್ಯವಾದುದು’ ಎಂದರು.

‘ಕಾಮೇಗೌಡರು ತಮ್ಮ ಇಡೀ ಜೀವನವನ್ನು ಪರಿಸರ ಸಂರಕ್ಷಣೆಗೆ ಮೀಸಲಿಟ್ಟಿದ್ದಾರೆ. ಬೆಟ್ಟದ ಸುತ್ತಲೂ 14 ಕಟ್ಟೆಗಳನ್ನು ಕಟ್ಟುವ ಮೂಲಕ ಜಲಮೂಲ ಪುನಶ್ಚೇತನಕ್ಕೆ ಅಪಾರ ಶ್ರಮಿಸಿದ್ದಾರೆ. ಕೆರೆ, ಕಟ್ಟೆ ತೋಡಿಸುವುದು ಅತ್ಯಂತ ಶ್ರೇಷ್ಠವಾದ ಸೇವೆ ಎಂದು ಶಾಸನಗಳಲ್ಲಿ ಉಲ್ಲೇಖ ಮಾಡಲಾಗಿದೆ. ನಾನು ಜಿಲ್ಲಾಧಿಕಾರಿಯಾಗಿ ಬಂದ ನಂತರ ಕಾಮೇಗೌಡರು ಕಟ್ಟಿಸಿರುವ ಕಟ್ಟೆಗಳನ್ನು ನೋಡಲೇಬೇಕು ಎಂದು ಅಲ್ಲಿಗೆ ತೆರಳಿದ್ದೆ. ಅರಣ್ಯದಲ್ಲಿ ಅವರು ನೆಟ್ಟು ಬೆಳೆಸಿರುವ ಸಸ್ಯಗಳನ್ನೂ ನೋಡಿದ್ದೇನೆ. ಅವರ ಬಗ್ಗೆ ನನಗೆ ಅಪಾರ ಗೌರವವಿದೆ’ ಎಂದರು.

‘ಕಾಮೇಗೌಡರಿಗೆ ಪ್ರಶಸ್ತಿಗಳ ಜೊತೆ ಬಂದ ಹಣವನ್ನೂ ಕಟ್ಟೆಗಳ ನಿರ್ಮಾಣಕ್ಕೆ ಬಳಸಿಕೊಂಡಿದ್ಧಾರೆ. ಅವರ ನಿಸ್ವಾರ್ಥ ಸೇವೆ ಕಂಡು ಬೆಕ್ಕಸ ಬೆರಗಾಗಿದ್ದೇನೆ. ಅವರು ಕೇವಲ ನಮ್ಮ ರಾಜ್ಯಕ್ಕೆ ಮಾತ್ರ ಸೀಮಿತವಾಗಬಾರದು ಎಂದು ನಿರ್ಧರಿಸಿ ಅವರ ಕುರಿತಾದ ವಿವರವಾದ ಮಾದರಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಈ ವರದಿ ಪ್ರಧಾನಮಂತ್ರಿ ಕಚೇರಿಗೂ ತಲುಪಿದ್ದು ನರೇಂದ್ರ ಮೋದಿಯವರು ತಮ್ಮಮನದ ಮಾತು ಕಾರ್ಯಕ್ರಮದಲ್ಲಿ ಪ್ರಸ್ತಾಪ ಮಾಡಿದರು’ ಎಂದರು.

‘ಇವರ ಸೇವೆಯನ್ನು ಕರ್ನಾಟಕ ಸರ್ಕಾರವೂ ಗುರುತಿಸಿದ್ದು ಮುಖ್ಯಮಂತ್ರಿಗಳು ಗುರುವಾರ ಕಾಮೇಗೌಡರ ಜೊತೆ ಮಾತನಾಡಿದ್ದಾರೆ. ಮನುಷ್ಯನಾಗಿ ಹುಟ್ಟಿದ ಮೇಲೆ ಯಾವುದಾದರೂ ಸಾಧನೆ ಮಾಡಿ ಬದುಕನ್ನು ಸಾರ್ಥಕ ಮಾಡಿಕೊಳ್ಳಬೇಕು. ಕಾಮೇಗೌಡರು ಅದ್ಭುತವಾದ ಸಾರ್ಥಕ ಜೀವನ ಮಾಡಿದ್ದು ತಲೆಮಾರುಗಳಿಗೆ ಮಾದರಿಯಾಗಿದ್ದಾರೆ’ ಎಂದರು.

ಕಾರ್ಯಕ್ರಮದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್‌.ಶಿವರಾಜ್‌, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಡಾ.ಎಂ.ಎಸ್‌.ರಾಜು, ಜಿಲ್ಲಾ ವಾರ್ತಾಧಿಕಾರಿ ಹರೀಶ್‌ ಇದ್ದರು.

ಕಟ್ಟೆಗಳ ಸಂರಕ್ಷಣೆಗೆ ₹ 50 ಲಕ್ಷ

‘ಕಾಮೇಗೌಡರು ನಿರ್ಮಿಸಿರುವ ಕಟ್ಟೆಗಳ ಸಂರಕ್ಷಣೆ, ಅಲ್ಲಿಯ ಜಲಮೂಲಗಳ ಪುನಶ್ಚೇತನಕ್ಕೆ ₹ 50 ಹಣ ಬಿಡುಗಡೆ ಮಾಡಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಶಿಥಿಲಾವಸ್ಥೆಯಲ್ಲಿರುವ ಅವರ ಮನೆಯ ಪುನಶ್ಚೇತನಕ್ಕೆ ₹ 10 ಲಕ್ಷ ಬಿಡುಗಡೆಗೆ ಶಿಫಾರಸು ಮಾಡಲಾಗಿದೆ’ ಎಂದು ಜಿಲ್ಲಾಧಿಕಾರಿ ಹೇಳಿದರು.

‘ಇವರ ಸೇವೆ ಗುರುತಿಸಿ ಅನುಗ್ರಹ ಯೋಜನೆ ಅಡಿ ತಕ್ಷಣ ₹ 1 ಲಕ್ಷ ಹಣ ಬಿಡುಗಡೆ ಮಾಡಲಾಗುವುದು. ಸಾರಿಗೆ ಸಂಸ್ಥೆ ವತಿಯಿಂದ ಈಗಾಗಲೇ ಉಚಿತ ಬಸ್‌ಪಾಸ್‌ ನೀಡಲಾಗಿದೆ. ಮಾಸಿಕ ₹ 4 ಸಾವಿರ ಪಿಂಚಣಿ ನೀಡಲು ಕೋರಿಕೆ ಸಲ್ಲಿಸಲಾಗಿದೆ. ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲು ಮುಖ್ಯಮಂತ್ರಿಗಳಿಗೆ ಶಿಫಾರಸು ಮಾಡಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT