ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸಾಪ ಚುನಾವಣೆ: ಅಧ್ಯಕ್ಷರ ನಿರ್ಧಾರದ ನಂತರ ಪರ್ಯಾಯ ಆಯ್ಕೆ

ಕಸಾಪ ಚುನಾವಣೆ; ಹೊಸಬರಿಗೆ ಅವಕಾಶ ನೀಡಲು ಆಗ್ರಹ, ರವಿಕುಮಾರ್‌ ಹಿಂದೆ ಸರಿಯುವರೇ?
Last Updated 14 ಫೆಬ್ರುವರಿ 2021, 13:24 IST
ಅಕ್ಷರ ಗಾತ್ರ

ಮಂಡ್ಯ: ‘ಸ್ನೇಹಿತರು, ಕಸಾಪ ಪದಾಧಿಕಾರಿಗಳು, ಸಾಹಿತ್ಯಾಸಕ್ತರ ಅಭಿಪ್ರಾಯ ಪಡೆದು ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ನಿರ್ಧರಿಸುತ್ತೇನೆ’ ಎಂದು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಕೆ.ರವಿಕುಮಾರ್‌ ಹೇಳಿದ ಕಾರಣ ಇಲ್ಲಿನ ಕರ್ನಾಟಕ ಸಂಘದ ಆವರಣದಲ್ಲಿ ಭಾನುವಾರ ನಡೆದ ಸಾಹಿತ್ಯಾಸಕ್ತರ ಸಮಾಲೋಚನಾ ಸಭೆಯಲ್ಲಿ ಪರ್ಯಾಯ ಅಭ್ಯರ್ಥಿ ಆಯ್ಕೆ ನಡೆಯಲಿಲ್ಲ.

ಸಿ.ಕೆ.ರವಿಕುಮಾರ್‌ ಚಾಮಲಾಪುರ ಅವರು ಎರಡನೇ ಬಾರಿ ಆಯ್ಕೆ ಬಯಸಿದ್ದ ಹಿನ್ನೆಲೆಯಲ್ಲಿ ಪರ್ಯಾಯ, ಒಮ್ಮತದ, ಸಹಮತ ಅಭ್ಯರ್ಥಿ ಆಯ್ಕೆ ಸಂಬಂಧ ಭಾನುವಾರ ಸಾಹಿತ್ಯಾಸಕ್ತರ ಸಮಾಲೋಚನಾ ಸಭೆ ಹಮ್ಮಿಕೊಳ್ಳಲಾಗಿತ್ತು.

ಸಿ.ಕೆ.ರವಿಕುಮಾರ್‌ ಚಾಮಲಾಪುರ ಅವರೂ ಸಭೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಸಭೆಯಲ್ಲಿ ಮಾತನಾಡಿದ ಅವರು, ಅಧ್ಯಕ್ಷ ಸ್ಥಾನಕ್ಕೆ ಎರಡನೇ ಬಾರಿ ಸ್ಪರ್ಧಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪರ–ವಿರೋಧ ಮಾತುಗಳು ಕೇಳಿಬಂದಿವೆ. ಏಕ ವ್ಯಕ್ತಿಯಾಗಿ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ. ಚುನಾವಣೆಗೆ ಸ್ಪರ್ಧಿಸಬೇಕೋ ಬೇಡವೋ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಕಸಾಪ ಸದಸ್ಯರು, ಸ್ನೇಹಿತರು, ಸಾಹಿತ್ಯಾಸಕ್ತರು, ಬೋಧಕರು ಸೇರಿದಂತೆ ಎಲ್ಲರ ಅಭಿಪ್ರಾಯ ಪಡೆದು ತೀರ್ಮಾನಿಸುತ್ತೇನೆ ಎಂದರು.

‘ ಫೆ.19ರಿಂದ ಕಸಾಪ ಜಿಲ್ಲಾ ಸಮ್ಮೇಳನ ಇದ್ದು, ಮುಗಿದ ನಂತರ ಸ್ನೇಹಿತರು, ಬಂಧುಗಳು, ಪರಿಷತ್‌ ಸದಸ್ಯರಿಂದ ಅಭಿಪ್ರಾಯ ಪಡೆದು, ಅವರು ಬೇಡ ಎಂದರೆ ಚುನಾವಣೆಗೆ ನಿಲ್ಲುವುದಿಲ್ಲ’ ಎಂದರು.

ಕಸಾಪ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಪ್ರೊ.ಜಯಪ್ರಕಾಶ ಗೌಡ ಮಾತನಾಡಿ ‘ಒಮ್ಮೆ ಅಧ್ಯಕ್ಷರಾದವರು ಮತ್ತೆ ಸ್ಪರ್ಧೆ ಮಾಡಬಾರದು ಎಂಬುದು ಅಲಿಖಿತ ನಿಯಮ. ಇದಕ್ಕೆ ಬೆಲೆ ನೀಡಬೇಕು. ಸಾಹಿತ್ಯ ಪರಿಷತ್‌ ಅಧ್ಯಕ್ಷರಾಗಿ ಮುನ್ನಡೆಯಲು ಸಾಕಷ್ಟು ಮಂದಿ ಆಕಾಂಕ್ಷಿತರಿದ್ದು, ಹೊಸಬರಿಗೆ ಅವಕಾಶ ನೀಡಬೇಕು. ಹಿಂದೆಯೂ ಎರಡನೇ ಬಾರಿ ಸ್ಪರ್ಧಿಸಿದ್ದಾಗ ಒಮ್ಮತದ ಪರ್ಯಾಯ ಅಭ್ಯರ್ಥಿ ಹಾಕಿ ಸೋಲಿಸಿದ ನಿದರ್ಶನಗಳಿವೆ ’ ಎಂದರು.

ಮಳವಳ್ಳಿ ದೇವರಾಜು, ಪರಿಷತ್‌ನಲ್ಲಿ ಅಲಿಖಿತ ನಿಯಮ ಸರಿಯಲ್ಲ. ಬೇರೆಯವರಿಗೆ ಅವಕಾಶ ನೀಡಬೇಕು ಎಂಬ ಕಾರಣಕ್ಕೆ ಅರ್ಹತೆ, ಯೋಗ್ಯತೆ ಇದ್ದವರು ಚುನಾವಣೆಯಿಂದ ಹಿಂದೆ ಸರಿಯುವುದು ಸರಿಯಲ್ಲ. ಹೆಚ್ಚು ಕನ್ನಡ ಪರ ಕೆಲಸ ಮಾಡಿರುವ ರವಿಕುಮಾರ್‌ ಸ್ಪರ್ಧೆ ತಡೆಗೆ ಪರಂಪರೆ, ಅಲಿಖಿತ ನಿಯಮವನ್ನು ಮುಂದೆ ತರಬೇಡಿ ಎಂದರು.

ಸತೀಶ್‌ ಜವರೇಗೌಡ, ಕೀಲಾರಕೃಷ್ಣೇಗೌಡ, ಲೋಕೇಶ್‌ ಚಂದಗಾಲು, ಗೊರವಾಲೆ ಚಂದ್ರಶೇಖರ್‌, ಚಿಕ್ಕಹಾರೋಹಳ್ಳಿ ಪುಟ್ಟಸ್ವಾಮಿ ಇನ್ನಿತರರು ಆಕಾಂಕ್ಷಿಗಳೆಂದು ತಿಳಿಸಿ, ಬೆಂಬಲ ಕೇಳಿದರು.

ಶಾಸಕ ಎಂ.ಶ್ರೀನಿವಾಸ್‌, ವಿಧಾನ ಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಸಾಹಿತಿ ಜಿ.ವಿ.ನಾಗರಾಜು,ಡಿ.ಪಿ.ಸ್ವಾಮಿ ಪಾಂಡವಪುರ ಚಲುವೇಗೌಡ, ಡಾ.ಬಿ.ಕೆ.ರವಿಶಂಕರ್‌ ಇದ್ದರು.

ಅಧ್ಯಕ್ಷ ಸ್ಥಾನ ತಿರಸ್ಕಾರ

ಕಸಾಪ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಸಾಹಿತಿ ಡಾ.ಎಚ್‌.ಎಸ್‌.ಮುದ್ದೇಗೌಡ ಮಾತನಾಡಿ ‘ರವಿಕುಮಾರ್‌ ಎರಡನೇ ಬಾರಿ ಸ್ಪರ್ಧಿಸುತ್ತಾರೆ ಎಂಬ ಕಾರಣಕ್ಕೆ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದ ಆಹ್ವಾನವನ್ನು ತಿರಸ್ಕರಿಸಿದ್ದೇನೆ’ ಎಂದರು.

‘ನಾನೂ ಎರಡನೇ ಬಾರಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾಗ ಯಾರೂ ಸಹಕಾರ ನೀಡಿರಲಿಲ್ಲ, ಸೋತಿದ್ದೆ. ಪರಿಷತ್‌ನಲ್ಲಿನ ಅಲಿಖಿತ ನಿಯಮ ಇದ್ದು, ಎರಡನೇ ಬಾರಿ ಸ್ಪರ್ಧಿಸಬಾರದು. ಎಲ್ಲರ ನಿಷ್ಟುರ ಕಟ್ಟಿಕೊಂಡು ಸ್ಪರ್ಧಿಸುವ ಬದಲು ಬೇರೆಯವರಿಗೆ ನೀಡಬೇಕು’ ಎಂದರು.

ಗೆಲ್ಲುವುದೇ ಪರಂಪರೆ?

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಲಿಂಗಣ್ಣ ಮಾತನಾಡಿ ‘ಒಪ್ಪದೆ ಇರುವವರನ್ನು ಒಪ್ಪಿಸುವುದೇ ಪ್ರಜಾಪ್ರಭುತ್ವ ವ್ಯವಸ್ಥೆಯ ವಿಶೇಷ. 2ನೇ ಬಾರಿ ಸ್ಪರ್ಧೆಗೆ ಸಂಬಂಧಿಸಿದಂತೆ ಸಂವಿಧಾನದ ವಿರುದ್ಧ ಪರಂಪರೆ ವಿಷಯ ಮುನ್ನೆಲೆಗೆ ಬಂದಿದೆ. ಯಾರೂ ಬೇಕಾದರೂ ಸ್ಪರ್ಧಿಸಬಹುದು ಎಂದು ಸಂವಿಧಾನ ಹೇಳಿದರೆ, ನೀನು ಕೆಲಸ ಮಾಡಿದ್ದೀಯ ಇತರರಿಗೂ ಅವಕಾಶ ನೀಡು ಎಂದು ಪರಂಪರೆ ಹೇಳುತ್ತದೆ. ಇದಕ್ಕೆ ಒಂದು ತಾತ್ವಿಕ ಸ್ಪರ್ಶ ನೀಡುವ ಜವಾಬ್ದಾರಿ ರವಿಕುಮಾರ್‌ ಅವರ ಮೇಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT