ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಕ್ಕಲಿಗ ಸಮುದಾಯಕ್ಕೆ ಮಸಿ ಬಳಿಯುವ ಯತ್ನ: ಡಿ.ಕೆ.ಶಿವಕುಮಾರ್‌

ಆದಿಚುಂಚನಗಿರಿಯಲ್ಲಿ ಅಮಾವಾಸ್ಯೆ ಪೂಜೆ, ಡಾ.ನಿರ್ಮಲಾನಂದ ಸ್ವಾಮೀಜಿ ಜೊತೆ ಮಾತುಕತೆ
Last Updated 21 ಮಾರ್ಚ್ 2023, 10:49 IST
ಅಕ್ಷರ ಗಾತ್ರ

ಮಂಡ್ಯ: ‘ಉರಿಗೌಡ, ದೊಡ್ಡನಂಜೇಗೌಡ ವಿಚಾರದಲ್ಲಿ ಬಿಜೆಪಿ ಮುಖಂಡರು ಒಕ್ಕಲಿಗ ಸಮುದಾಯಕ್ಕೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ನಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾದರೆ ಬಿಡುವುದಿಲ್ಲ, ಇದರ ವಿರುದ್ಧ ಹೋರಾಟ ನಡೆಸುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮಂಗಳವಾರ ಹೇಳಿದರು.

ಅಮಾವಾಸ್ಯೆ ಪೂಜೆ ಅಂಗವಾಗಿ ನಾಗಮಂಗಲ ತಾಲ್ಲೂಕು ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ್ದ ಅವರು ಡಾ.ನಿರ್ಮಲಾನಂದನಾಥ ಸ್ವಾಮೀಜಿ ಜೊತೆ ಮಾತುಕತೆ ನಡೆಸಿ ನಂತರ ಸುದ್ದಿಗಾರರ ಜೊತೆ ಮಾತನಾಡಿದರು.

‘ಬಿಜೆಪಿ ಮುಖಂಡರೇ ಉರಿಗೌಡ, ನಂಜೇಗೌಡರಾಗಿದ್ದಾರೆ. ಈ ವಿಚಾರದಲ್ಲಿ ಸ್ವಾಭಿಮಾನಕ್ಕೆ ಧಕ್ಕೆಯಾದರೆ ನಾವು ಸುಮ್ಮನೆ ಕೂರುವುದಿಲ್ಲ, ನಾವ್ಯಾರೂ ಹೇಡಿಗಳಲ್ಲ. ಹೋರಾಟದ ನೇತೃತ್ವ ವಹಿಸಿಕೊಳ್ಳುವಂತೆ ಸ್ವಾಮೀಜಿಯಲ್ಲಿ ಮನವಿ ಮಾಡಿದ್ದೇನೆ. ಒಂದು ಪಕ್ಷದ ಅಧ್ಯಕ್ಷನಾಗಿ ನಾನೂ ಹೋರಾಟದಲ್ಲಿ ಪಾಲ್ಗೊಳ್ಳುತ್ತೇನೆ’ ಎಂದರು.

‘ಸಿ.ಟಿ.ರವಿ, ಆರ್‌.ಅಶೋಕ್‌, ಅಶ್ವತ್ಥ ನಾರಾಯಣ ಹೊಸದಾಗಿ ಕತೆ ಬರೆಯುತ್ತಾರಂತೆ. ಇನ್ಯಾವನೋ ಒಬ್ಬ ಸಿನಿಮಾ ತೆಗೆಯುತ್ತಾನಂತೆ. ಸ್ವಾಮೀಜಿಗಳು ಅವನನ್ನು ಕರೆದು, ಕೂರಿಸಿ ಮಾತನಾಡಿದ್ದೇ ತಪ್ಪು. ಮುನಿರತ್ನ ಒಬ್ಬ ವ್ಯಾಪಾರಿ, ನಮ್ಮ ಒಕ್ಕಲುತನಗಳ ಬಗ್ಗೆ ನೂರು ಸಿನಿಮಾ ಮಾಡಲಿ. ಆದರೆ ನಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ನಾವು ಸುಮ್ಮನಿರಲು ಸಾಧ್ಯವಿಲ್ಲ’ ಎಂದರು.

‘ಬಿಜೆಪಿ ಮುಖಂಡರಿಗೆ ನಮ್ಮ ಸ್ವಾಮೀಜಿ ಬುದ್ಧಿ ಹೇಳುವ ಅಗತ್ಯವಿಲ್ಲ. ನಮ್ಮ ಸಮಾಜ ಯಾರ ಬಳಿಯೂ ಭಿಕ್ಷೆ ಬೇಡುವ ಅವಶ್ಯಕತೆ ಇಲ್ಲ, ನಮಗೆ ಛಲವಿದೆ, ಸ್ವಾಭಿಮಾನ ಇದೆ. ಎಲ್ಲವನ್ನೂ ಅರಗಿಸಿಕೊಳ್ಳುವ ಶಕ್ತಿ ಈ ಸಮಾಜಕ್ಕಿದೆ. ಸರ್ಕಾರದ ಭ್ರಷ್ಟಾಚಾರವನ್ನು ಮರೆ ಮಾಚಲು ಹೊಸ ಕತೆ ಕಟ್ಟಿದ್ದಾರೆ’ ಎಂದರು.

‘ಬಿಜೆಪಿ ಮುಖಂಡರು ಮೊದಲು ‘40 % ಫೈಲ್‌’ ಸಿನಿಮಾ ತೆಗೆಯಲಿ, ಕೋವಿಡ್‌ ಸಂದರ್ಭದಲ್ಲಿ ಮಾಡಿದ ಭ್ರಷ್ಟಾಚಾರದ ಬಗ್ಗೆ ಸಿನಿಮಾ ಮಾಡಲಿ. ಉರಿಗೌಡ, ನಂಜೇಗೌಡ ವಿಷಯವನ್ನು ಪಠ್ಯಕ್ಕೆ ಬೇರೆ ಸೇರಿಸುತ್ತಾರಂತೆ. ಈ ಕಟ್ಟು ಕತೆಯನ್ನು ಸಿ.ಟಿ.ರವಿಗೆ, ಅಶ್ವತ್ಥ ನಾರಾಯಣ್‌ಗೆ ಅವರ ಮೇಷ್ಟ್ರು ಹೇಳಿಕೊಟ್ಟರಾ’ ಎಂದು ಕೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT