ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬತ್ತಿದ ಕೊಳವೆಬಾವಿ, ತಳ ಸೇರಿದ ಕೆರೆ, ಕಟ್ಟೆಗಳು

ಕೆ.ಆರ್‌.ಪೇಟೆ ತಾಲ್ಲೂಕಿನಲ್ಲಿ ಖಾಸಗಿ ಕೊಳವೆಬಾವಿಗಳಿಂದ ಕುಡಿಯುವ ನೀರು ಪೂರೈಕೆ
Last Updated 27 ಏಪ್ರಿಲ್ 2019, 19:02 IST
ಅಕ್ಷರ ಗಾತ್ರ

ಕೆ.ಆರ್.ಪೇಟೆ: ಬಹುಗ್ರಾಮ ನೀರಾವರಿ ಯೋಜನೆಗಳು ಸಮರ್ಪಕವಾಗಿ ಜಾರಿಗೊಳ್ಳದ ಕಾರಣ ಹೇಮಾವತಿ ನದಿಯಂಚಿನ ಗ್ರಾಮಗಳು ಸೇರಿ ತಾಲ್ಲೂಕಿನ ಬಹುತೇಕ ಹಳ್ಳಿಗಳು ಕುಡಿಯುವ ನೀರಿಗಾಗಿ ಕೊಳವೆಬಾವಿಗಳನ್ನೇ ಅವಲಂಬಿಸಿವೆ. ಆದರೆ, ಕೊಳವೆಬಾವಿಗಳು ಕೂಡ ಬತ್ತಿ ಹೋಗುತ್ತಿದ್ದು, ತಾಲ್ಲೂಕಿನಲ್ಲಿ ನೀರಿನ ಸಮಸ್ಯೆ ತೀವ್ರಗೊಳ್ಳುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

ಯುಗಾದಿ ಹಬ್ಬ ಕಳೆದು ತಿಂಗಳಾಗುತ್ತಾ ಬಂದರೂ ವರುಣ ಇನ್ನೂ ಕೃಪೆ ತೋರಿಲ್ಲ. ಗ್ರಾಮಾಂತರ ಪ್ರದೇಶಗಳಲ್ಲಿ ಕೆರೆ– ಕಟ್ಟೆಗಳಲ್ಲಿ ನೀರು ತಳ ಸೇರಿದ್ದು, ಜನ-ಜಾನುವಾರು ಹನಿ ನೀರಿಗಾಗಿ ಪರದಾಡುವ ಸ್ಥಿತಿ ತಲೆದೋರಿದೆ. ಸಂತೇಬಾಚಹಳ್ಳಿ ಹೋಬಳಿಯಲ್ಲಿ ಹೆಚ್ಚು ಸಮಸ್ಯೆ ಇದ್ದು, ಕುಡಿಯುವ ನೀರಿಗೆ ತೀವ್ರ ತತ್ವಾರ ಎದುರಾಗಿದೆ. ಬೂಕನಕೆರೆ, ಶೀಳನೆರೆ, ಕಸಬಾ, ಕಿಕ್ಕೇರಿ, ಅಕ್ಕಿಹೆಬ್ಬಾಳು ಹೋಬಳಿಗಳಲ್ಲಿ ಶೀಘ್ರ ಮಳೆ ಬಾರದಿದ್ದರೆ, ತಾಲ್ಲೂಕು ಆಡಳಿತ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಮುಂದೆ ನೀರಿಗೆ ಹಾಹಾಕಾರ ಉಂಟಾಗುವ ಸಾಧ್ಯತೆ ಇದೆ.

ತಾಲ್ಲೂಕು ಆಡಳಿತ ಹಲವು ಗ್ರಾಮಗಳಿಗೆ ಖಾಸಗಿ ಕೊಳವೆಬಾವಿಗಳಿಂದ ನೀರು ಪಡೆದು ಸರಬರಾಜು ಮಾಡುತ್ತಿದೆ. ಆದರೆ, ಅಂತರ್ಜಲ ಮಟ್ಟ ಕುಸಿದು ಕೊಳವೆಬಾವಿ ಬತ್ತಿಹೋಗಿರುವ ಕಾರಣ ಮುಂದೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುವ ಸಾಧ್ಯತೆ ಇದೆ.

ಈ ಬಾರಿ ಕಳೆದ ವರ್ಷಕ್ಕಿಂತ ಹೆಚ್ಚಾಗಿ ಮಳೆ ಬಿದ್ದಿದೆ ಎಂಬ ಕಾರಣಕ್ಕೆ ತಾಲ್ಲೂಕನ್ನು ಬರಪೀಡಿತ ಎಂದು ಸರ್ಕಾರವು ಘೋಷಿಸಿಲ್ಲ. ರೈತರು ಮಳೆ ಕೊರತೆಯಿಂದಾಗಿ ಬೆಳೆ ನಷ್ಟ ಅನುಭವಿಸಿದ್ದರೂ ಪರಿಹಾರ ದಕ್ಕದ ಸ್ಥಿತಿ ಎದುರಾಯಿತು ಎಂದು ರೈತ ಸಂಘದ ಮುಖಂಡ ಮರುವಿನಹಳ್ಳಿ ಶಂಕರ್ ಹೇಳಿದರು.

ತಾಲ್ಲೂಕಿನ ಬೂಕನಕೆರೆ ಹೋಬಳಿಯ ಬಳ್ಳೇಕೆರೆಯಲ್ಲಿ ಅಂತರ್ಜಲ ಬತ್ತಿದ್ದು, ಗ್ರಾಮದಲ್ಲಿ ಕೊರೆಸಿದ್ದ ಕೊಳವೆಬಾವಿಗಳು, ಕಿರುನೀರು ತೊಂಬೆಗಳು ಬರಿದಾಗಿವೆ. ಕೆಲವೆಡೆ ಕೊಳವೆಬಾವಿಗಳು ಒಣಗಿವೆ. ಗ್ರಾಮಕ್ಕೆ ಖಾಸಗಿ ಕೊಳವೆಬಾವಿಗಳಿಂದ ನೀರು ಪಡೆದುಕೊಳ್ಳಲಾಗುತ್ತಿದೆ. ಗ್ರಾಮದಲ್ಲಿ ದೊಡ್ಡಕೆರೆ ಇದ್ದರೂ ನೀರಿನ ಒರತೆ ಕಂಡುಬರುತ್ತಿಲ್ಲ. ಹಿರಿಕಳಲೆ ಗ್ರಾಮ ಪಂಚಾಯಿತಿಯ ಗಂಗನಹಳ್ಳಿ, ಸಾರಂಗಿಯ ಕೊಟಗಹಳ್ಳಿ, ಅಘಲಯದ ನಾಗರಘಟ್ಟ, ಬೀರುವಳ್ಳಿಯ ಹಳೇ ನಂದಿಪುರ, ವಿಠಲಾಪುರದ ಯಗಚಗುಪ್ಪೆ, ಹರಳಹಳ್ಳಿಯ ಭೈರಾಪುರ ಇದೇ ಪರಿಸ್ಥಿತಿ ಎದುರಿಸುತ್ತಿವೆ. ಇಲ್ಲೆಲ್ಲಾ ಖಾಸಗಿ ಯವರಿಂದ ನೀರನ್ನು ಪಡೆದು ವಿತರಣೆ ಮಾಡಲಾಗುತ್ತಿದೆ. ಅಘಲಯ ಗ್ರಾಮ ಪಂಚಾಯಿತಿಯ ಹೊಸಹಳ್ಳಿ ಗ್ರಾಮಕ್ಕೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.

ಕೆ.ಆರ್.ಪೇಟೆ ಪಟ್ಟಣದಲ್ಲಿ 30 ಸಾವಿರ ಜನಸಂಖ್ಯೆ ಇದೆ. ಇಲ್ಲಿ ಮೂರು ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. 130ಕ್ಕೂ ಹೆಚ್ಚು ದೊಡ್ಡ ಮತ್ತು ಮಧ್ಯಮ ಗಾತ್ರದ ಕೆರೆಗಳಿವೆ. 428 ಕೊಳವೆಬಾವಿಗಳಿವೆ. ಅವುಗಳಲ್ಲಿ 316 ಉತ್ತಮ ಸ್ಥಿತಿಯಲ್ಲಿದ್ದರೆ, 112 ಕೆಟ್ಟಿವೆ. ಕುಡಿಯುವ ನೀರಿನ ತೊಂಬೆಗಳು 682 ಇದ್ದು, ಇವುಗಳಲ್ಲಿ 472 ಉತ್ತಮ ಸ್ಥಿತಿಯಲ್ಲಿವೆ. 210 ತೊಂಬೆಗಳು ಹಾಳಾಗಿವೆ.

ಕುಡಿಯುವ ನೀರಿಗೆ ಆಗ್ರಹಿಸಿ ಪ್ರತಿಭಟನೆ

ತಾಲ್ಲೂಕಿನಲ್ಲಿ ಬಹುಗ್ರಾಮ ಕುಡಿಯುವ ನೀರಿನ ಘಟಕಗಳು ಹಾಳಾಗಿರುವುದರಿಂದ ಜನರು ಕೊಳವೆಬಾವಿಗಳನ್ನು ಅವಲಂಬಿಸುವಂತಾಗಿದೆ. ಕೆ.ಆರ್.ಪೇಟೆ ಪಟ್ಟಣ ಹಾಗೂ ಹೊಸಹೊಳಲು ಗ್ರಾಮದ ಹಲವು ವಾರ್ಡ್‌ಗಳಲ್ಲಿ ಕುಡಿಯವ ನೀರಿನ ಸಮಸ್ಯೆ ಉಂಟಾಗಿದ್ದು, ಸ್ಥಳೀಯರು ಅನೇಕ ಬಾರಿ ಪ್ರತಿಭಟನೆ ನಡೆಸಿದ್ದಾರೆ.

ಹೇಮಾವತಿ ನದಿಯಲ್ಲಿ ನೀರಿನ ಹರಿವು ಕಡಿಮೆ ಆಗಿರುವುದರಿಂದ ಪಟ್ಟಣಕ್ಕೆ ಸರಬರಾಜಾಗುವ ನೀರಿನಲ್ಲಿ ವ್ಯತ್ಯಯ ಉಂಟಾಗಿದೆ. ಜೊತೆ ಶುದ್ಧ ನೀರಿನ ಕೊರತೆ ಉಂಟಾಗಿದ್ದು, ಕೊಳೆ, ಬಗ್ಗಡ ಬರುತ್ತಿದೆ. ಈ ಬಗ್ಗೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ದೂರು ನೀಡಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ದೂರುತ್ತಾರೆ.

ಕೊಳವೆಬಾವಿ ಕೊರೆಸಲು ಟೆಂಡರ್‌

ತಾಲ್ಲೂಕಿನಾದ್ಯಂತ ಸುಡು ಬಿಸಿಲು ಇರುವುದರಿಂದ ಜಲಮೂಲ ಬತ್ತಿವೆ. ಆದರೂ ಇರುವ ನೀರನ್ನು ಸಮರ್ಪಕವಾಗಿ ವಿತರಿಸಲು ಪಂಚಾಯಿತಿ ಮಟ್ಟದಲ್ಲಿ ಪಿಡಿಒಗಳು ಕ್ರಮ ಕೈಗೊಂಡಿದ್ದಾರೆ. ಕುಡಿಯುವ ನೀರಿನ ತೊಂದರೆ ಇರುವ ಗ್ರಾಮಗಳಲ್ಲಿ ಸಮಸ್ಯೆ ನಿವಾರಣೆಗೆ ಈಗ ಟೆಂಡರ್ ಕರೆಯಲಾಗುತ್ತಿದೆ. ಕೊಳವೆಬಾವಿ ಕೊರೆಯುವ, ಇರುವ ಬಾವಿಗಳನ್ನು ಸುಸ್ಥಿತಿಯಲ್ಲಿಡುವ ಹಾಗೂ ರೀಬೋರ್ ಮಾಡುವ ಕಾರ್ಯ ಇಷ್ಟರಲ್ಲೇ ಆರಂಭವಾಗಲಿದೆ. ಸದ್ಯ ಕುಡಿಯುವ ನೀರಿನ ಸಮಸ್ಯೆ ಅಷ್ಟಾಗಿ ಇಲ್ಲ ಎಂದು ತಾಲ್ಲೂಕು ಪಂಚಾಯಿತಿ ಇಒ ವೈ.ಎನ್.ಚಂದ್ರಮೌಳಿ ಹೇಳಿದರು.

ಅಂಕಿ ಅಂಶ

405:ಕೆ.ಆರ್‌.ಪೇಟೆ ತಾಲ್ಲೂಕಿನ ಗ್ರಾಮಗಳು

2.70 ಲಕ್ಷ:ಜನಸಂಖ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT