ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಆರ್‌ಎಸ್‌ಗೆ ಸಮರೋಪಾದಿಯಲ್ಲಿ ಗೇಟ್‌ ಅಳವಡಿಕೆ: ಸಿಎಂ ಬೊಮ್ಮಾಯಿ

ಜಲಾಶಯಕ್ಕೆ ಬಾಗಿನ ಅರ್ಪಣೆ; ವೇದಿಕೆಯಿಂದಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚನೆ
Last Updated 2 ನವೆಂಬರ್ 2021, 13:39 IST
ಅಕ್ಷರ ಗಾತ್ರ

ಮಂಡ್ಯ: ‘ಕೆಆರ್‌ಎಸ್‌ ಜಲಾಶಯದ ಸುರಕ್ಷತೆ ಹಾಗೂ ನೀರು ಪೋಲಾಗುವುದನ್ನು ತಡೆಯಲು ಸಮರೋಪಾದಿಯಲ್ಲಿ ಗೇಟ್‌ ಅಳವಡಿಸುವ ಕಾಮಗಾರಿ ನಡೆಯಬೇಕು. ನಿಗದಿತ ಅವಧಿಗೂ ಮುನ್ನವೇ 2ನೇ ಹಂತದ ಕಾಮಗಾರಿ ಪೂರ್ಣಗೊಳ್ಳಬೇಕು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಸೂಚಿಸಿದರು.

ಮಂಗಳವಾರ ಕೆಆರ್‌ಎಸ್‌ ಜಲಾಶಯಕ್ಕೆ ಬಾಗಿನ ಅರ್ಪಿಸಿ ಮಾತನಾಡಿದ ಅವರು ‘ಜಲಾಶಯದ 100 ಅಡಿ ಎತ್ತರದಿಂದ 136 ಗೇಟ್‌ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ. ನಿಗಮ ರೂಪಿಸಿರುವ ಯೋಜನೆಯಂತೆ 2030ಕ್ಕೆ ಕಾಮಗಾರಿ ಪೂರ್ಣಗೊಳ್ಳಲಿದೆ. ಆದರೆ ಅದು ಬಹಳ ತಡವಾಗಿಯಿತು. ಜಲಾಶಯದ ರಕ್ಷಣೆ ದೃಷ್ಟಿಯಿಂದ ಅದಕ್ಕೂ ಮೊದಲೇ ಕಾಮಗಾರಿ ಪೂರ್ಣಗೊಳಿಸಬೇಕು’ ಎಂದು ವೇದಿಕೆಯಿಂದಲೇ ಸೂಚಿಸಿದರು.

‘ಜಲಾಶಯ ಮುಂದಿನ 100 ವರ್ಷಗಳವರೆಗೆ ಸುರಕ್ಷಿತವಾಗಿಸಲು ಆಧುನೀಕರಣ ಕಾಮಗಾರಿ ಮಾಡಬೇಕು. 2008ರಲ್ಲಿ ನಾನು ನೀರಾವರಿ ಸಚಿವನಾಗಿ ಬಂದಾಗ ಗೇಟ್‌ಗಳನ್ನು ನೋಡಿ ಆಶ್ಚರ್ಯವಾಗಿತ್ತು. ಗೇಟ್‌ಗಳ ಅವಧಿ 35 ವರ್ಷ ಮಾತ್ರ, ಆದರೆ ಜಲಾಶಯ ಕಟ್ಟಿ 75 ವರ್ಷವಾದರೂ ಗೇಟ್‌ ಬದಲಾವಣೆ ಮಾಡದಿರುವುದನ್ನು ನೋಡಿ ಆಘಾತವಾಗಿತ್ತು. ಗೇಟ್‌ಗಳಲ್ಲಿ ರಂಧ್ರವಾಗಿ 300 ಕ್ಯುಸೆಕ್‌ಗೂ ಹೆಚ್ಚು ನೀರು ಹರಿದು ಹೋಗುತ್ತಿತ್ತು, ಗೋಣಿಚೀಲ, ಮರಳು ಮೂಟೆ ಇಟ್ಟು ನೀರು ಹರಿಯುವುದನ್ನು ತಡೆಯಲಾಗಿತ್ತು’ ಎಂದರು.

‘ಗೇಟ್‌ಗಳ ಸ್ಥಿತಿಯನ್ನು ನೋಡಿ ನಾನು 2 ದಿನ ನಿದ್ದೆ ಮಾಡಲಿಲ್ಲ. ಒಂದು ದಿನ ನಸುಕಿನ 4 ಗಂಟೆಗೆ ಎದ್ದು ಎಂಜಿನಿಯರ್‌ ವಿಜಯ್‌ಕುಮಾರ್‌ಗೆ ಕರೆ ಮಾಡಿದೆ. 7 ಗಂಟೆ ವೇಳೆಗೆ ಕೆಆರ್‌ಎಸ್‌ಗೆ ಬರುತ್ತೇನೆ. ಗೇಟ್‌ ಕುರಿತಾದ ಎಲ್ಲಾ ದಾಖಲಾತಿ, ಮಾಹಿತಿ ಬೇಕು ಎಂದು ತಿಳಿಸಿದೆ. ಅಂದೇ ಕೆಆರ್‌ಎಸ್‌ನಲ್ಲಿ ಸಭೆ ನಡೆಸಿ ಗೇಟ್‌ ಆಧುನೀಕರಣಗೊಳಿಸಲು ನಿರ್ಧರಿಸಿದೆ. ಗೇಟ್‌ ಅಳವಡಿಕೆಯಲ್ಲಿ ಆಧುನಿಕ ಕಾಮಗಾರಿ ನಡೆಸುವ ಕಂಪನಿಗಳ ಹುಡುಕಾಟ ನಡೆಸಿ ಕಾಮಗಾರಿ ಆದೇಶ ನೀಡಲಾಯಿತು’ ಎಂದರು.

‘ಮೈಸೂರು ಮಹಾರಾಜರು ಜಿಲ್ಲೆಯಲ್ಲಿ ಕಟ್ಟಿದ್ದ 14 ಸಣ್ಣಪುಟ್ಟ ಅಣೆಕಟ್ಟೆ, ನಾಲಾ ಯೋಜನೆ ನೆಲಸಮವಾಗಿದ್ದವು. ನಮ್ಮ ಕಾಲದಲ್ಲಿ 11 ಯೋಜನೆಗಳಿಗೆ ಪುನಶ್ಚೇತನ ನೀಡಲಾಯಿತು. ನಾಲಾ ಯೋಜನೆಗಳನ್ನು ಆಧುನೀಕರಣಗೊಳಿಸಿದರೆ ಮಾತ್ರ ಜಿಲ್ಲೆಯ ಜನರಿಗೆ ಸಮರ್ಪಕ ಜನರಿಗೆ ನೀರು ದೊರೆಯುತ್ತದೆ. ಯೋಜನೆಗಳ ಹಿಂದೆ ಯೋಚನೆ ಇರಬೇಕು. ವಿತರಣಾ ನಾಲೆ, ವಿ.ಸಿ ನಾಲೆಗಳು ಆಧುನೀಕರಣಗೊಳ್ಳಬೇಕು. ಕಾವೇರಿ ನೀರಾವರಿ ಅಚ್ಚುಕಟ್ಟು ಪ್ರದೇಶದ ಪ್ರಮುಖ ಯೋಜನೆಗಳಿಗೆ ಅನುಮೋದನೆ ನೀಡಲಾಗುವುದು’ ಎಂದರು.

‘ನವೆಂಬರ್‌ನಲ್ಲಿ ಜಲಾಶಯ ತುಂಬಿರುವುದು ಅಪರೂಪದ ಸನ್ನಿವೇಶವಾಗಿದೆ. 2012ರಲ್ಲಿ ಮಳೆ ಕೊರತೆಯಿಂದ ಗಂಭೀರ ಪರಿಸ್ಥಿತಿ ಎದುರಾಗಿತ್ತು. ಸುಪ್ರೀಂ ಕೋರ್ಟ್‌ ಆಗ ತಮಿಳುನಾಡಿಗೆ 14 ಟಿಎಂಸಿ ಅಡಿ ನೀರು ಹರಿಸುವಂತೆ ಆದೇಶ ನೀಡಿತ್ತು. ಆದರೆ ಜಲಾಶಯದಲ್ಲಿ ಅಷ್ಟು ನೀರು ಇರಲೇ ಇಲ್ಲ. ಆದರೆ ನಂತರ ಮಳೆ ಸುರಿದು ನವೆಂಬರ್‌ ವೇಳೆಗೆ ಜಲಾಶಯ ತುಂಬಿದ ಕಾರಣ ಪರಿಸ್ಥಿತಿಯನ್ನು ನಿಭಾಯಿಸಿ ರೈತರಿಗೆ ಬೇಸಿಗೆಯಲ್ಲೂ ನೀರು ಹರಿಸಲು ಸಾಧ್ಯವಾಯಿತು’ ಎಂದರು.

ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾತನಾಡಿ ‘ಪ್ರಸ್ತುತ ಸನ್ನಿವೇಶದಲ್ಲಿ ನೀರಿನ ಅವಶ್ಯಕತೆ ಬಹಳಷ್ಟಿದೆ. ಅಂತರ್ಜಲ ಹೆಚ್ಚಾಗಿ ಬಳಸುತ್ತಿರುವ ಕಾರಣ ನೀರು ಆಳಕ್ಕೆ ಇಳಿದಿದೆ. 280 ಪಟ್ಟು ಹೆಚ್ಚಿನ ಅಂತರ್ಜಲವನ್ನು ನಾವು ಬಳಸುತ್ತಿದ್ದೇವೆ. ನೀರಿಗಾಗಿ ರಾಜ್ಯ ರಾಜ್ಯಗಳ ನಡುವೆ, ದೇಶದೇಶಗಳ ನಡುವೆ ಜಲವಿವಾದಗಳು ಹುಟ್ಟಿಕೊಂಡಿವೆ. ಮುಂದಿನ ದಿನಗಳಲ್ಲಿ ಆಕಾಶದ ನೀರಿಗೂ ವಿವಾದ ಆರಂಭವಾದರೂ ಆಶ್ಚರ್ಯವೇನಿಲ್ಲ’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಮಾತನಾಡಿ ‘ಮುಖ್ಯಮಂತ್ರಿಗಳು ದಂಪತಿ ಸಮೇತರಾಗಿ ಪೂಜೆ ಸಲ್ಲಿಸಿದ ನಂತರ ಕೆಆರ್‌ಎಸ್‌ ಭರ್ತಿಯಾಗಿದೆ. ಅವರ ಪೂಜೆ ಸಲ್ಲಿಸಿದ ದಿನವೇ ಧಾರಾಕಾರ ಮಳೆ ಬಂದು ಜಲಾಶಯಕ್ಕೆ ಅರ್ಧ ಅಡಿ ನೀರು ಬಂದಿತ್ತು. ಮುಖ್ಯಮಂತ್ರಿಗಳು ಜಿಲ್ಲೆಯ ಮೇಲೆ ವಿಶೇಷ ಪ್ರೀತಿ ಹೊಂದಿದ್ದು ನಮ್ಮ ಯೋಜನೆಗಳಿಗೆ ಅನುಮೋದನೆ ನೀಡಲಿದ್ದಾರೆ ಎಂಬ ವಿಶ್ವಾಸವಿದೆ’ ಎಂದರು.

ಸಚಿವರಾದ ಎಸ್‌.ಟಿ.ಸೋಮಶೇಖರ್‌, ಮುನಿರತ್ನ, ಸಂಸದರಾದ ಸುಮಲತಾ, ಪ್ರತಾಪ್‌ ಸಿಂಹ, ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಡಿ.ಸಿ.ತಮ್ಮಣ್ಣ, ಸಿ.ಎಸ್‌.ಪುಟ್ಟರಾಜು, ಕೆ.ಸುರೇಶ್‌ಗೌಡ, ಅನ್ನದಾನಿ, ಎಂ.ಶ್ರೀನಿವಾಸ್‌, ತನ್ವೀರ್‌ ಶೇಠ್‌, ಜಿ.ಟಿ.ದೇವೇಗೌಡ, ಎಲ್‌.ನಾಗೇಂದ್ರ, ಅಶ್ವನ್‌ ಕುಮಾರ್‌, ಮರಿತಿಬ್ಬೇಗೌಡ ಹಾಜರಿದ್ದರು.

ಕುಡಿಯುವ ನೀರು ಏಕೆ ಸಿಕ್ಕಿಲ್ಲ?

ಮುಖ್ಯಮಂತ್ರಿಗಳು ಮಾತನಾಡುವ ಸಂದರ್ಭದಲ್ಲಿ ಕೆಲ ಸಾರ್ವಜನಿಕರು, ಸಮೀಪದಲ್ಲೇ ಕೆಆರ್‌ಎಸ್‌ ಜಲಾಶಯವಿದ್ದರೂ ಅಕ್ಕಪಕ್ಕದ ಹಳ್ಳಿಗಳಿಗೆ ಸಮರ್ಪಕವಾಗಿ ಕುಡಿಯುವ ನೀರು ಸಿಕ್ಕಿಲ್ಲ ಎಂದು ಪ್ರಶ್ನಿಸಿದರು. ‘ಇಲ್ಲಿಯವರೆಗೂ ನೀರು ಕೊಡಲು ಏಕೆ ಸಾಧ್ಯವಾಗಿಲ್ಲ. ಅದನ್ನು ತಿಳಿದುಕೊಂಡಿದ್ದೀರಾ’ ಎಂದು ಮುಖ್ಯಮಂತ್ರಿಗಳು ಜನರಿಗೆ ಮರು ಪ್ರಶ್ನೆ ಹಾಕಿದರು. ಆ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ಜೆಡಿಎಸ್‌ ಶಾಸಕರೆಲ್ಲರೂ ಮಾತನಾಡದಂತೆ ಜನರನ್ನು ಸುಮ್ಮನಾಗಿಸಿದರು.

ಶ್ರುತಿ ತಪ್ಪಿದ ನಾಡಗೀತೆ

ಮುಖ್ಯಮಂತ್ರಿಗಳ ಕಾರ್ಯಕ್ರಮ ಆಯೋಜನೆಯಲ್ಲಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದರು. ಸಾರ್ವಜನಿಕರಿಗೆ ಗಣ್ಯರು ಕಾಣಸದ ರೀತಿಯಲ್ಲಿ ವೇದಿಕೆ ರೂಪಿಸಲಾಗಿತ್ತು. ಜನರು ಸ್ಥಳದಲ್ಲೇ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಘೋಷಣೆ ಕೂಗಿದರು.

ಕಲಾವಿದರು ನಾಡಗೀತೆ ಹಾಡುವಾಗ ತೊದಲಿಸಿದರು. ವಾದ್ಯಗಳಿಗೆ, ಶ್ರುತಿಗೆ ಹಾಡಲು ವಿಫಲರಾದರು. ಅಭ್ಯಾಸದ ಕೊರತೆ ಎದ್ದು ಕಾಣುತ್ತಿತ್ತು. ಮೊಬೈಲ್‌ ನೋಡಿ ಹಾಡುತ್ತಿದ್ದರು. ನಿರೂಪಕಿ ಸೇರಿ ಕಲಾವಿದರನ್ನು ಮೈಸೂರಿನಿಂದ ಕರೆತರಲಾಗಿತ್ತು. ‘ಮಂಡ್ಯದಲ್ಲಿ ನಿರೂಪಕರು, ಕಲಾವಿದರು ಇರಲಿಲ್ಲವೇ’ ಎಂಬ ಪ್ರಶ್ನೆ ಬಂತು.

ಕ್ಷಮೆ ಕೋರಿದ ಮುಖ್ಯಮಂತ್ರಿ

ಬಾಗಿನ ಅರ್ಪಿಸುವ ಚಿತ್ರ, ವಿಡಿಯೊ ತೆಗೆಯಲು ಮಾಧ್ಯಮದವರಿಗೆ ಅವಕಾಶ ಇರಲಿಲ್ಲ. ನಿಗಮದ ವತಿಯಿಂದಲೇ ವಿಡಿಯೊ, ಚಿತ್ರ ನೀಡುವುದಾಗಿ, ನೇರ ಪ್ರಸಾರದ ವಿಡಿಯೊ ಕೊಡುವುದಾಗಿ ತಿಳಿಸಿದ್ದರು. ಆದರೆ ಸಮರ್ಪಕವಾದ ಚಿತ್ರ, ವಿಡಿಯೊ ನೀಡುವಲ್ಲಿ ಸಿಬ್ಬಂದಿ ವಿಫಲರಾದರು.

ಕಾವೇರಿ ನೀರಾವರಿ ನಿಗದಮ ಸಿಬ್ಬಂದಿ ವಿರುದ್ಧ ಮಾಧ್ಯಮ ಪ್ರತಿನಿಧಿಗಳು ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ವೇದಿಕೆಗೆ ಬಂದ ಸಂದರ್ಭದಲ್ಲೇ ಗೊಂದಲ ನಿರ್ಮಾಣವಾಯಿತು. ನಿಗಮದ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಪರಿಸ್ಥಿತಿ ಗೊಂದಲದ ಗೂಡಾಯಿತು. ನಂತರ ಮುಖ್ಯಮಂತ್ರಿಗಳು ಮಾಧ್ಯಮದವರ ಕ್ಷಮೆ ಕೋರಿ ಪರಿಸ್ಥಿತಿ ತಿಳಿಗೊಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT