ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಆರ್.ಪೇಟೆ: ಲಕ್ಷ್ಮೀನಾರಾಯಣಸ್ವಾಮಿ ಬ್ರಹ್ಮರಥೋತ್ಸವ ಇಂದು

ಕೆರೆ ತುಂಬಿದಾಗ ತಿಲಕದಂತೆ ಕಂಗೊಳಿಸುವ ಹೊಯ್ಸಳರ ಕಾಲದ ಸಿಂಧುಘಟ್ಟ ದೇವಾಲಯ
Published 29 ಏಪ್ರಿಲ್ 2024, 5:49 IST
Last Updated 29 ಏಪ್ರಿಲ್ 2024, 5:49 IST
ಅಕ್ಷರ ಗಾತ್ರ

ಕೆ.ಆರ್.ಪೇಟೆ: ತಾಲ್ಲೂಕಿನ ಪ್ರಸಿದ್ಧ ಪ್ರಾಚೀನ ಗ್ರಾಮಗಳಲ್ಲಿ ಒಂದಾದ ಸಿಂಧುಘಟ್ಟದಲ್ಲಿ ಏ. 29ರಂದು  ಲಕ್ಷ್ಮೀನಾರಾಯಣ ಸ್ವಾಮಿ ಬ್ರಹ್ಮರಥೋತ್ಸವ ನಡೆಯಲಿದೆ.

ದೇವಾಲಯದ ಇತಿಹಾಸ: ಹೊಯ್ಸಳರ ಕಾಲದಲ್ಲಿ ಗ್ರಾಮದ ಪ್ರಧಾನ ಸ್ಥಳದಲ್ಲಿ ಲಕ್ಷ್ಮೀನಾರಾಯಣ ಸ್ವಾಮಿ ದೇವಾಲಯವು ನಿರ್ಮಾಣವಾಗಿದ್ದು ಅದ್ಭುತ ಕಲಾಸಿರಿಯಿಂದ ಕಣ್ಮನಸೆಳೆಯುತ್ತದೆ. ಇತಿಹಾಸ ಪುಟಗಳಲ್ಲಿ ಸಿಂಧುಘಟ್ಟ ದೇವರು ತಿರುಗ ಮುರುಗ ಎಂಬ ನಾಣ್ಣುಡಿಗೆ ಹೆಸರಾದ ಈ ಗ್ರಾಮದ ಆಡಳಿತ ವ್ವವಸ್ಥೆಯಲ್ಲಿ ಸಿಂಧುಘಟ್ಟ ಸೀಮೆ ಎಂದೇ ಹೆಸರಾಗಿದ್ದು ಧರ್ಮ, ಕಲೆ, ಸಾಹಿತ್ಯ ಸಾಮರಸ್ಯಕ್ಕೆ ಹೆಸರಾಗಿದ್ದು ಕೆ.ಆರ್.ಪೇಟೆಯಿಂದ 8 ಕಿ.ಮೀ. ದೂರದಲ್ಲಿದೆ.

ಗ್ರಾಮದ ಪಕ್ಕ ಪ್ರಸಿದ್ಧವಾದ ನಾರಾಯಣದುರ್ಗ ಬೆಟ್ಟವಿದ್ದು ಈ ಗ್ರಾಮದಿಂದ ಆಳ್ವಿಕೆ ನಡೆಸಿದ ಪಾಳೆಗಾರ ದೇವರಸನು ನಿರ್ಮಿಸಿದ ಏಳುಸುತ್ತಿನ ಕೋಟೆ ಇದೆ. ಗ್ರಾಮದಲ್ಲಿ ವಿಶಾಲವಾದ ಕೆರೆ ಇದ್ದು ಕೆರೆ ತುಂಬಿದಾಗ ಬೆಟ್ಟವು ತಿಲಕದಂತೆ ಕಂಗೊಳಿಸುತ್ತದೆ. ಸಿಂಧುಘಟ್ಟ ಎಂಬ ಹೆಸರು ಬರಲು ಸಮೀಪದ ನಾಲ್ಕೈದು ಬೆಟ್ಟಗಳ ಸಮೂಹದ ನಾರಾಯಣದುರ್ಗ ಬೆಟ್ಟದಲ್ಲಿ ಗುಹೆಗಳಲ್ಲಿ ಸಿದ್ಧರು ತಪಸ್ಸು ಮಾಡಿದ ಕುರುಹುಗಳಿವೆ. ಹಾಗಾಗಿ ಸಿದ್ಧರು ನೆಲೆಸಿದ್ದ ಊರು, ಸಿದ್ಧರ ಘಟ್ಟವಾಗಿ ಮುಂದೆ ಘಟ್ಟದ ಮುಂದಿನ ಕೆರೆ ಸಿಂಧುವಿನಂತೆ ಕಂಗೊಳಿಸುತ್ತುದ್ದರಿಂದ ಸಿಂಧುಘಟ್ಟ ಎಂಬ ಹೆಸರು ಬಂದಿದೆ ಎಂದು ಇತಿಹಾಸಕಾರರು ಹೇಳುತ್ತಾರೆ.

ಸಿಂಧುಘಟ್ಟದ ಲಕ್ಷ್ಮೀನಾರಾಯಣ
ಸಿಂಧುಘಟ್ಟದ ಲಕ್ಷ್ಮೀನಾರಾಯಣ

ವಿಶಾಲ ಜಗುತಿಯ ಮೇಲೆ ಲಕ್ಷ್ಮೀನಾರಾಯಣ: ಗ್ರಾಮ ಮಧ್ಯದಲ್ಲಿ ನಕ್ಷತ್ರಾಕಾರದ ಜಗುತಿಯ ಮೇಲೆ ನಿರ್ಮಾಣವಾಗಿರುವ ಲಕ್ಷ್ಮೀನಾರಾಯಣ ದೇವಾಲಯವಿದ್ದು,  ದೇವಸ್ಥಾನಕ್ಕೆ ನವರಂಗ, ಗರ್ಭಗೃಹ ಅಂತರಾಳ, ಮುಖ ಮಂಟಪಗಳಿವೆ.

ಇಲ್ಲಿರುವ ಕ್ರಿ ಶ. 1179ರ ಶಾಸನದ ಪ್ರಕಾರ ದೇವಾಲಯದ ಎರಡು ವೃತ್ತಿಗಳನ್ನು 46 ಗದ್ಯಾಣ ವರಹಗಳಿಗೆ ಮಾರಿದ ಅಪರೂಪದ ದಾಖಲೆ ಸಿಗುತ್ತದೆ. ದೇವಾಲಯದಲ್ಲಿ ಕೇವಲ ನಾರಾಯಣ (ನಂಬಿನಾರಾಯಣ) ಮೂರ್ತಿಯೊಂದೇ ಇರದೆ ಲಕ್ಷ್ಮಿಯೊಂದಿಗೆ ನಾರಾಯಣನ ಮೂರ್ತಿಯನ್ನು ಕೆತ್ತಿರುವುದು ವಿಶೇಷವಾಗಿದೆ. ಗರ್ಭಗುಡಿಯಲ್ಲಿರುವ ಲಕ್ಷ್ಮೀನಾರಾಯಣಸ್ವಾಮಿಯ ಶಿಲ್ಪವು ಸುಂದರ ಶಿಲ್ಪವಾಗಿದ್ದು ನಯನಮನೋಹರವಾಗಿದೆ. ಇಲ್ಲಿನ ಪಾಳೇಗಾರ ದೇವರಸ ಎಂಬುವವನು ಕ್ರಿ.ಶ. 1660 ರಲ್ಲಿ ಸುಮಾರು 100 ಅಡಿ ಎತ್ತರದ ಗರುಡಗಂಬವನ್ನು ಸ್ಥಾಪಿಸಿದನೆಂದು ಇದರ ಮೇಲಿರುವ ಶಾಸನದಿಂದ ತಿಳಿಯಬಹುದು.

ಕೈ ಬೀಸಿ ಕರೆಯುವ ಸಂಗಮೇಶ್ವರ ದೇವಾಲಯ: ಗ್ರಾಮದಲ್ಲಿ ಕೆರೆಗೆ ಹೋಗುವ ದಾರಿಯಲ್ಲಿ ನಾರಾಯಣದುರ್ಗದ ಎದುರಾಗಿ ಸಂಗಮೇಶ್ವರ ದೇವಾಲಯವಿದ್ದು  ಕ್ರಿ.ಶ.1170 ರ ಅವಧಿಯಲ್ಲಿ ನಿರ್ಮಾಣವಾಗಿದೆ ಎಂದು ಇಲ್ಲಿನ ಶಾಸನ ತಿಳಿಸುತ್ತದೆ. ಈ ದ್ವಿಕೂಟಾಚಲ ದೇವಾಲಯದಲ್ಲಿ ಸಂಗಮೇಶ್ವರ ಮತ್ತು ಜನ್ನೇ(ಪ್ಪೇ)ಶ್ವರ ಎಂಬ ಹೆಸರಿನ ಪ್ರತ್ಯೇಕ ಲಿಂಗಗಳಿವೆ. ಈ ದೇವಾಲಯವು ಭಕ್ತರನ್ನು ಕೈ ಬೀಸಿ ಕರೆಯುತ್ತದೆ.

ಸಂಗಮೇಶ್ವರ
ಸಂಗಮೇಶ್ವರ

ಇನ್ನೂ ಪರಿಪೂರ್ಣಗೊಳ್ಳದ ದೇವಾಲಯ ಜೀರ್ಣೋದ್ಧಾರ: ಸಂಗಮೇಶ್ವರ ಮತ್ತು ಲಕ್ಷ್ಮೀನಾರಾಯಣ ದೇವಾಲಯಗಳು ಪುರಾತತ್ವ ಹಾಗೂ ಸರ್ವೇಕ್ಷಣಾ ಇಲಾಖೆಯ ಅಧೀನದಲ್ಲಿದ್ದು ದಶಕಗಳ ಹಿಂದೆ ಜೀರ್ಣೋದ್ಧಾರಗೊಳಿಸಲಾಗಿದ್ದರೂ ಪರಿ ಪೂರ್ಣಗೊಂಡಿಲ್ಲ. ಸಂಗಮೇಶ್ವರ ದೇವಸ್ಥಾನದ ಸನಿಹ ಕೆರೆಯ ಎದುರು ಗ್ರಾಮದೇವತೆ ಲಕ್ಷ್ಮೀದೇವಮ್ಮ ದೇವಾಲಯವಿದ್ದು ಶಿಥಿಲಗೊಂಡಿದ್ದರಿಂದ ಹಿಂದೆ ಇದ್ದಂತೆ ಗ್ರಾನೈಟ್ ಕಲ್ಲಿನಿಂದ ಮರು ನಿರ್ಮಾಣ ಮಾಡುವ ಮೂಲಕ ಗ್ರಾಮಸ್ಥರು ಮಾದರಿಯಾಗಿದ್ದಾರೆ.

ಸಿಂಧುಘಟ್ಟದ ಕೆರೆಯ ನೋಟ
ಸಿಂಧುಘಟ್ಟದ ಕೆರೆಯ ನೋಟ

ಬ್ರ‌ಹ್ಮರಥೋತ್ಸವ ಇಂದು: ಏ. 29ರಂದು ಬೆಳಿಗ್ಗೆ 9.56 ರಿಂದ 10.12 ಗಂಟೆಯ ವರೆಗಿನ ಶುಭ ಮಿಥುನ ಲಗ್ನದಲ್ಲಿ ಸ್ವಾಮಿ ಬ್ರಹ್ಮರಥೋತ್ಸವ ಜರುಗಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಬೇಕು ಎಂದು ಅರ್ಚಕ ಎಸ್.ವಿ ರಂಗನಾಥ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT