ಮಂಡ್ಯ: ‘ಕೇಂದ್ರ ಸರ್ಕಾರ ನಾಲ್ಕು ವರ್ಷಗಳ ಹಿಂದೆ ಬಿಡುಗಡೆ ಮಾಡಿದ ವರದಿ ಪ್ರಕಾರ ದೇಶದಲ್ಲಿ 1947ರ ನಂತರ 254 ಭಾಷೆಗಳು ಕಣ್ಮರೆಯಾಗಿವೆ. 2011ರ ಯುನೆಸ್ಕೊ ವರದಿ ಪ್ರಕಾರ ಮುಂದಿನ 50 ವರ್ಷಗಳಲ್ಲಿ 390 ಭಾಷೆಗಳು ಕಣ್ಮರೆಯಾಗಲಿವೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕೀಲಾರದ ಕ್ಷೀರಸಾಗರ ಮಿತ್ರಕೂಟ ವತಿಯಿಂದ ನಗರದ ಗಾಂಧಿಭವನದಲ್ಲಿ ಮಂಗಳವಾರ ಆಯೋಜಿಸಿದ್ದ ‘ಶಿಕ್ಷಣ ಮತ್ತು ಭಾಷೆ’ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘1990ರ ನಂತರ ಜಾಹೀರಾತಿನ ‘ಏಕರೂಪಿ ಭಾಷೆ’ಯ ಪರಿಣಾಮವಾಗಿ ತುಳು, ಕೊಡವ, ಕನ್ನಡ, ಮರಾಠಿ, ಗುಜರಾತಿ ಮುಂತಾದ ಭಾಷೆಗಳು ಸಂಕಷ್ಟಕ್ಕೆ ಸಿಲುಕಿವೆ. 2001ರ ಜನಗಣತಿಯಲ್ಲಿ 1.66 ಲಕ್ಷವಿದ್ದ ಕೊಡವ ಭಾಷಿಕರು, 2011ರ ಜನಗಣತಿ ವೇಳೆಗೆ 1.36 ಲಕ್ಷಕ್ಕೆ ಇಳಿಕೆಯಾಗಿದ್ದಾರೆ. ಅಂದರೆ, 10 ವರ್ಷಗಳಲ್ಲಿ 30 ಸಾವಿರ ಕೊಡವ ಭಾಷಿಕರ ಸಂಖ್ಯೆ ಕಡಿಮೆಯಾಗಿದೆ. ಅದೇ ರೀತಿ ಕೊಂಕಣಿ ಭಾಷಿಕರ ಸಂಖ್ಯೆ ಶೇ 9ರಷ್ಟು ಕಡಿಮೆಯಾಗಿದೆ. 55 ಸಾವಿರದಿಂದ 5 ಸಾವಿರಕ್ಕೆ ಕೊರಗ ಭಾಷಿಕರ ಸಂಖ್ಯೆ ಕುಸಿದಿದೆ. ಮುಂದಿನ 40 ವರ್ಷಗಳಲ್ಲಿ ‘ಕೊರಗ’ ಭಾಷೆ ನಶಿಸಿಹೋಗುವ ಆತಂಕ ಕಾಡುತ್ತಿದೆ’ ಎಂದು ಹೇಳಿದರು.

ತಮಿಳುನಾಡು ‘ದ್ವಿಭಾಷಾ ನೀತಿ’ ಅಳವಡಿಸಿಕೊಂಡಿದೆ. ಆದರೆ, ಕರ್ನಾಟಕದಲ್ಲಿ ತ್ರಿಭಾಷಾ ನೀತಿ ಜಾರಿಯಲ್ಲಿದೆ. ಇದರ ಪರಿಷ್ಕರಣೆಯಾಗಿ, ದ್ವಿಭಾಷಾ ನೀತಿ ಅಳವಡಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಮೊದಲ ಅಥವಾ ಎರಡನೇ ಭಾಷೆಯಾಗಿ ಕಡ್ಡಾಯವಾಗಿ ‘ಕನ್ನಡ’ವನ್ನು ಕಲಿಯಬೇಕು ಎಂಬ ನಿಯಮ ಜಾರಿಗೆ ಬರಬೇಕು. ಆಗ ಮಾತ್ರ ಕನ್ನಡ ಉಳಿಯಲು ಸಾಧ್ಯವಾಗುತ್ತದೆ ಎಂದರು.

7800 ಸರ್ಕಾರಿ ಶಾಲೆಗಳಿಗೆ ಖಾತೆ ಇರಲಿಲ್ಲ. ಹಕ್ಕುಪತ್ರ ಇಲ್ಲದಿದ್ದರೆ ಜಾಗವನ್ನು ದಾನ ಕೊಟ್ಟವರು ‘ಶಾಲೆ ಮುಚ್ಚಿದೆ’ ಎಂಬ ನೆಪವೊಡ್ಡಿ ಖಾಸಗಿಯವರಿಗೆ ಮಾರಾಟ ಮಾಡಲು ಮುಂದಾಗುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಗಮನಸೆಳೆದ ಪರಿಣಾಮ ಈಗ ಬಹುತೇಕ ಶಾಲೆಗಳಿಗೆ ಹಕ್ಕುಪತ್ರ ಸಿಕ್ಕಿದೆ ಎಂದರು.

‘ನಾಡಗೀತೆಯ 100ರ ಸಂಭ್ರಮದ ಅಂಗವಾಗಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸಹಸ್ರ ಕಂಠದಲ್ಲಿ ನಾಡಗೀತೆ ಹಾಡಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲು ಸಿದ್ಧತೆ ನಡೆಸಿದ್ದೇವೆ’ ಎಂದು ಸದಸ್ಯ ಟಿ.ತಿಮ್ಮೇಶ್ ಹೇಳಿದರು.

ಕಾರ್ಯಕ್ರಮದಲ್ಲಿ ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ವತಿಯಿಂದ ಕನ್ನಡ ಭಾವಗೀತೆಗಳ ಗಾಯನ ಪ್ರಸ್ತುತಪಡಿಸಲಾಯಿತು. ಕನ್ನಡ ಉಳಿವು ಮತ್ತು ಬೆಳವಣಿಗೆ ಕುರಿತು ವಿಶ್ರಾಂತ ಕುಲಪತಿ ಪದ್ಮಾ ಶೇಖರ್ ಮತ್ತು ಶಿಕ್ಷಣ ಮತ್ತು ಭಾಷೆ ಕುರಿತು ಎಸ್.ಬಿ.ಶಂಕರಗೌಡ ವಿಷಯ ಮಂಡಿಸಿದರು.

ಆನಂತರ ಭಾಷಾ ಸಮಸ್ಯೆಯ ಸುತ್ತ ಮುತ್ತ ವಿಷಯ ಕುರಿತು ಕನ್ನಡಪರ ಸಂಘಟನೆಗಳ ಮುಖಂಡರು ವಿಷಯ ಮಂಡಿಸಿ, ಸಂವಾದ ನಡೆಸಿದರು. ಪ್ರೊ.ಜಿ.ಉಷಾರಾಣಿ ನಿರೂಪಿಸಿದರು. ಅತಿಥಿಗಳಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್, ಎಚ್.ಆರ್. ಕನ್ನಿಕಾ ಪಾಲ್ಗೊಂಡಿದ್ದರು. ಕೆ.ಎಂ.ಕೃಷ್ಣೇಗೌಡ ಕೀಲಾರ, ಪ್ರತಿಭಾಂಜಲಿ ಪ್ರೊ.ಡೇವಿಡ್, ಮಂಜು ಚಾಮನಹಳ್ಳಿ, ಸಿ.ಎನ್.ಮಂಜೇಶ್ ಚನ್ನಾಪುರ ಪಾಲ್ಗೊಂಡಿದ್ದರು.

‘ಅನ್ಯ ಭಾಷಿಕರನ್ನು ಮೆಚ್ಚಿಸಲು ಕನ್ನಡ ಕೊಲ್ಲಬೇಡಿ’

‘ಭಾಷೆಯನ್ನು ಕೊಲ್ಲುವುದು ಜನಾಂಗ ಹತ್ಯೆಗೆ ಸಮ. ಒಂದು ಭಾಷೆ ಸತ್ತರೆ ಒಂದು ಸಮುದಾಯವೇ ಸತ್ತಂತೆ. ಅನ್ಯ ಭಾಷಿಕರನ್ನು ಮೆಚ್ಚಿಸಲು ಅವರ ಭಾಷೆಯಲ್ಲೇ ಮಾತನಾಡಿ, ಕನ್ನಡವನ್ನು ಕೊಲ್ಲಬೇಡಿ. ಭಾರತೀಯ ಭಾಷೆಗಳಲ್ಲೇ ಕನ್ನಡ (ಶೇ 3.73) ಅತ್ಯಂತ ಕಡಿಮೆ ಬೆಳವಣಿಗೆ ವೇಗವನ್ನು ಹೊಂದಿದೆ. ಭಾಷೆಯ ಅಧಃಪತನ ತಡೆಯದೇ ಹೋದರೆ, ಮುಂದಿನ 100 ವರ್ಷಗಳಲ್ಲಿ ಕನ್ನಡವು ಬರೀ ಆಡುಭಾಷೆಯಾಗಿ ಉಳಿದು, ಬರವಣಿಗೆ ಭಾಷೆ ನಶಿಸಿ ಹೋಗುತ್ತದೆ’ ಎಂದು ಪುರುಷೋತ್ತಮ ಬಿಳಿಮಲೆ ಕಳವಳ ವ್ಯಕ್ತಪಡಿಸಿದರು.

‘ನಾಮಫಲಕಗಳಲ್ಲಿ ಶೇ 60ರಷ್ಟು ರಾಜ್ಯ ಭಾಷೆ ಕನ್ನಡ ಇರಬೇಕು ಎಂದು ರಾಜ್ಯ ಸರ್ಕಾರ ನಿಯಮ ರೂಪಿಸಿರುವುದು ಶ್ಲಾಘನೀಯ. ನಾಮಫಲಕಗಳಲ್ಲಿ ಕಡ್ಡಾಯವಾಗಿ ಊರಿನ ಹೆಸರುಗಳನ್ನು ನಮೂದಿಸಬೇಕು’ ಎಂದರು.

‘ಮನೆ ದೇವರಂತೆ ಕನ್ನಡವನ್ನು ಆರಾಧಿಸಿ’

ಜಿಲ್ಲಾಧಿಕಾರಿ ಕುಮಾರ ಮಾತನಾಡಿ, ‘ಪ್ರಸ್ತುತ ದಿನಗಳಲ್ಲಿ ಕನ್ನಡದ ಬಗ್ಗೆ ಕೀಳರಿಮೆ ಹೆಚ್ಚಾಗುತ್ತಿದೆ. ಪ್ರತಿ ಮನೆಯಲ್ಲೂ ಮಕ್ಕಳಿಗೆ ಭಾಷೆ ಬಗ್ಗೆ ಅಭಿಮಾನ ಬೆಳೆಸಬೇಕು. ಪುಸ್ತಕ ಪ್ರೀತಿ ಬೆಳೆಸಬೇಕು. ಮನೆ ದೇವರಂತೆ ಕನ್ನಡವನ್ನು ಆರಾಧಿಸಿ’ ಎಂದು ಹೇಳಿದರು.

ಅಪ್ಪಟ ಕನ್ನಡ ಜಿಲ್ಲೆಯಾದ ಮಂಡ್ಯದಲ್ಲಿ 3200 ವಿದ್ಯಾರ್ಥಿಗಳು ಕನ್ನಡ ಭಾಷಾ ಪರೀಕ್ಷೆಯಲ್ಲಿ ನಪಾಸಾಗಿದ್ದಾರೆ. ಸರ್ಕಾರಿ ಶಾಲೆ ಮುಚ್ಚಲು ಯಾರು ಕಾರಣ? ಸರ್ಕಾರಿ ಉಳಿಸಿಕೊಳ್ಳಲು ಎಲ್ಲರ ಸಹಕಾರ ಅಗತ್ಯ. ವಿಶೇಷವಾಗಿ ಕನ್ನಡ ಭಾಷಾ ಶಿಕ್ಷಕರ ಮೇಲೆ ಗುರುತರವಾದ ಜವಾಬ್ದಾರಿ ಹೆಚ್ಚಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.